ಶುಕ್ರವಾರ, ನವೆಂಬರ್ 15, 2019
21 °C

ಭ್ರಷ್ಟಾಚಾರ ವಿರೋಧಿಸಿ ಸಂಸತ್ ಚಲೋ

Published:
Updated:

ಬೆಂಗಳೂರು: ಭ್ರಷ್ಟಾಚಾರ ವಿರೋಧಿ ಹೋರಾಟದ ಅಂಗವಾಗಿ ಬಿಜೆಪಿ ಯುವ ಮೋರ್ಚಾ ನವದೆಹಲಿಯಲ್ಲಿ ಆಗಸ್ಟ್ 9ರಂದು `ಸಂಸತ್ ಚಲೋ~ ಪ್ರತಿಭಟನಾ ಮೆರವಣಿಗೆ ಆಯೋಜಿಸಿದೆ. ಇದರಲ್ಲಿ ರಾಜ್ಯದ 3 ಸಾವಿರ ಕಾರ್ಯಕರ್ತರೂ ಸೇರಿದಂತೆ ದೇಶದ ವಿವಿಧೆಡೆಯಿಂದ 2 ಲಕ್ಷಕ್ಕೂ  ಹೆಚ್ಚು ಮಂದಿ ಸೇರಲಿದ್ದಾರೆ ಎಂದು ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷೆ ಪೂನಂ ಮಹಾಜನ್ ಹೇಳಿದರು.ಭಾನುವಾರ ಇಲ್ಲಿ ನಡೆದ ದಕ್ಷಿಣ ಭಾರತದ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, `ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸಭೆ ಸೇರಲಾಗುವುದು. ನಂತರ ಸಂಸತ್ ಭವನದೆಡೆಗೆ ಹೆಜ್ಜೆ ಹಾಕಲಾಗುವುದು~ ಎಂದು ತಿಳಿಸಿದರು.ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ವಾಮನ ಆಚಾರ್ಯ ಮಾತನಾಡಿ, ಸೈದ್ಧಾಂತಿಕ ಮತ್ತು ಸಂಘಟನಾತ್ಮಕ ನೆಲೆಯಲ್ಲಿ ಕರ್ನಾಟಕಕ್ಕಿಂತಲೂ ಪಕ್ಕದ ಆಂಧ್ರಪ್ರದೇಶ ಮತ್ತು ಕೇರಳದಲ್ಲೇ ಬಿಜೆಪಿ ಹೆಚ್ಚು ಬಲಿಷ್ಠವಾಗಿದೆ ಎಂದರು.`ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ನಾವು, ಭ್ರಷ್ಟಾಚಾರದ ಕಳಂಕದಿಂದ ದೂರವಿರೋಣ. ನೈತಿಕವಾಗಿ ಬಲಾಢ್ಯವಾದ ಬಿಜೆಪಿ ಕಟ್ಟೋಣ. ಭೂಮಿ, ಗುತ್ತಿಗೆ ಮತ್ತು ಗಣಿಗಾರಿಕೆ ವ್ಯವಹಾರದಿಂದ ದೂರವಿರೋಣ, ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರ ಅಲ್ಲಿಂದಲೇ ಆರಂಭವಾಗುತ್ತಿದೆ~ ಎಂದು ಯುವ ಮೋರ್ಚಾ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.`ರಾಜಕೀಯ ಬೆಂಬಲ ಬೇಕು~: ಕಪ್ಪುಹಣ ಮತ್ತು ಭ್ರಷ್ಟಾಚಾರದ ವಿಷಯವನ್ನು ನಾಗರಿಕ ಸಮಾಜದ ಪ್ರತಿನಿಧಿಗಳಿಂದ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಸಂಸದೀಯ ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡಿರುವ ನಮ್ಮ ದೇಶದಲ್ಲಿ ಇಂಥ ಸಮಸ್ಯೆಗಳ ಪರಿಹಾರಕ್ಕೆ ರಾಜಕೀಯ ಪಕ್ಷದ ಬೆಂಬಲವೂ ಅಗತ್ಯ ಎಂದು ಪ್ರತಿಪಾದಿಸಿದರು.`ಯುವ ಮೋರ್ಚಾ ಮೂಲಕ ಹೊಸ ರಾಜಕೀಯ ಶಕೆಯನ್ನು ಆರಂಭಿಸಬೇಕಿದೆ~ ಎಂದ ಅವರು, `ರಾಜಕೀಯಕ್ಕೆ ಬರುವ ಯುವಕರು ನ್ಯಾಯಬದ್ಧವಾಗಿ, ರಾಜಕೀಯೇತರ ಮಾರ್ಗದಲ್ಲಿ ತಮ್ಮ ಅನ್ನ ಸಂಪಾದಿಸಿಕೊಳ್ಳಲಿ. ರಾಜಕೀಯ ಅವರ ಪಾಲಿಗೆ ಹವ್ಯಾಸ ಮಾತ್ರ ಆಗಿರಲಿ~ ಎಂದರು.ರೈತ, ಉದ್ಯಮಿ, ವ್ಯಾಪಾರಿಗಳು ಆತ್ಮಹತ್ಯೆಗೆ ಶರಣಾಗುವುದನ್ನು ಕೇಳಿದ್ದೀರಿ. ಆದರೆ, ರಾಜಕಾರಣಿಯೊಬ್ಬ ಆತ್ಮಹತ್ಯೆಗೆ ಶರಣಾಗುವುದಿಲ್ಲ. ಅವರ ಮನೋಬಲ ಅಷ್ಟು ಗಟ್ಟಿಯಾಗಿರುತ್ತದೆ ಎಂದು ಚಟಾಕಿ ಹಾರಿಸಿದರು.ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪೂನಂ ಮಹಾಜನ್, `ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಡಳಿತದ ಬಗ್ಗೆ ರಾಜ್ಯದ ಜನತೆಗೆ ಸಮಾಧಾನ ಇದೆ. ಇಲ್ಲಿ ಅಭಿವೃದ್ಧಿ ಕಾರ್ಯಗಳೂ ಸಾಕಷ್ಟು ನಡೆಯುತ್ತಿವೆ~ ಎಂದು ಹೇಳಿದರು.`ಯಡಿಯೂರಪ್ಪ ರಾಜ್ಯ ಬಿಜೆಪಿಯ ಹಿರಿಯ ನಾಯಕರು. ಅವರು ಇಲ್ಲಿನ  ಜನರೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ~ ಎಂದರು. ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸುನಿಲ್ ಕುಮಾರ್, ರಾಷ್ಟ್ರೀಯ ಕಾರ್ಯದರ್ಶಿ ಮೋಹನ್ ರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)