ಭ್ರಷ್ಟಾಚಾರ ಸಮಾಜದ ದೊಡ್ಡ ಪಿಡುಗು

7

ಭ್ರಷ್ಟಾಚಾರ ಸಮಾಜದ ದೊಡ್ಡ ಪಿಡುಗು

Published:
Updated:
ಭ್ರಷ್ಟಾಚಾರ ಸಮಾಜದ ದೊಡ್ಡ ಪಿಡುಗು

ಬೆಂಗಳೂರು: `ಸಮಾಜವನ್ನು ದೊಡ್ಡ ಪಿಡುಗಾಗಿ ಕಾಡುತ್ತಿರುವ ಭ್ರಷ್ಟಾಚಾರದ ವಿರುದ್ಧ ಯುವಜನತೆ ಹೋರಾಟ ನಡೆಸಲು ಮುಂದಾಗಬೇಕು~ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಕರೆ ನೀಡಿದರು.`ಅರೈಸ್ ಇಂಡಿಯಾ ಮೂವ್‌ಮೆಂಟ್~ ಸಂಸ್ಥೆಯು ನಗರದ ಜೆ.ಸಿ. ರಸ್ತೆಯಲ್ಲಿರುವ ಜೈನ್ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ `ಭ್ರಷ್ಟಾಚಾರ ತೊಡೆದು ಹಾಕುವಲ್ಲಿ ವಿದ್ಯಾರ್ಥಿಗಳ ಪಾತ್ರ~ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.`ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಆದರೆ, ಜನಪ್ರತಿನಿಧಿಗಳಿಗೆ ಇದರ ಬಗ್ಗೆ ಅರಿವಿದ್ದಂತಿಲ್ಲ. ಜನವಿರೋಧಿ ಎನಿಸುವ ಮಸೂದೆಗಳು ಕೂಡ ಚರ್ಚೆಗೆ ಬಾರದೇ ಲೋಕಸಭೆಯಲ್ಲಿ ಅನುಮೋದನೆಯಾಗುತ್ತಿರುವುದೇ ಇದಕ್ಕೆ ಸಾಕ್ಷಿ~ ಎಂದು ವಿಷಾದಿಸಿದರು.`ಲೋಕಸಭೆಯಲ್ಲಿ ಹಲವು ಗಂಭೀರ ವಿಷಯಗಳ ಕುರಿತು ಚರ್ಚೆ ನಡೆಯುವುದೇ ಇಲ್ಲ. ಎಷ್ಟೋ ಸಂದರ್ಭದಲ್ಲಿ ಲೋಕಸಭೆಯಲ್ಲಿ ಅನುಮೋದನೆ ಪಡೆದ ವಿಷಯಗಳ ಶೀರ್ಷಿಕೆಗಳನ್ನು ಹಲವು ಸಂಸದರು ಗಮನಿಸಿರುವುದಿಲ್ಲ~ ಎಂದರು.40 ದಿನ ಬಾಕಿ: `ಲೋಕಾಯುಕ್ತನಾಗಿ ಇನ್ನು 40 ದಿನಗಳ ಅಧಿಕಾರ ಬಾಕಿ ಉಳಿದಿದೆ. ಅಧಿಕಾರಾವಧಿ ಮುಗಿದ ನಂತರ ಯಾವುದೇ ಪಕ್ಷ ಇಲ್ಲವೇ ಸಂಸ್ಥೆಯನ್ನು ಸ್ಥಾಪಿಸುವುದಿಲ್ಲ. ಆದರೆ, ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸುತ್ತೇನೆ~ ಎಂದು ಹೇಳಿದರು.`ಇಂದಿನ ಪೀಳಿಗೆಯವರು ಪ್ರತಿಭಾವಂತರಾಗಿದ್ದಾರೆ. ಯುವಜನತೆ ಸಂಘಟಿತರಾಗಿ ಭ್ರಷ್ಟಾಚಾರ, ಅನ್ಯಾಯದ ವಿರುದ್ಧ ಹೋರಾಟ ನಡೆಸುವುದಾಗಿ ಪಣ ತೊಡಬೇಕು~ ಎಂದು ಕರೆ ನೀಡಿದರು.ಇದೇ ಸಂದರ್ಭದಲ್ಲಿ ಶಿಕ್ಷಣದಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಅಂಶವನ್ನು ಜನಲೋಕಪಾಲ್ ಮಸೂದೆಯಲ್ಲಿ ಸೇರ್ಪಡೆ ಮಾಡುವಂತೆ ಕೋರಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಲ್.ಎಸ್. ತೇಜಸ್ವಿ ಸೂರ್ಯ ಅವರು ಮನವಿ ಪತ್ರವನ್ನು ಸಂತೋಷ್ ಹೆಗ್ಡೆ ಅವರಿಗೆ ಸಲ್ಲಿಸಿದರು.ದುರ್ಬಲಗೊಳಿಸಲಾಗುತ್ತಿದೆ!

`ಬಹು ನಿರೀಕ್ಷಿತ ಜನಲೋಕಪಾಲ್ ಮಸೂದೆಯನ್ನು ದುರ್ಬಲಗೊಳಿಸುವ ಹುನ್ನಾರ ವ್ಯವಸ್ಥಿತವಾಗಿ ನಡೆಯುತ್ತಿದೆ~ ಎಂದು ಲೋಕಾ ಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಸಮಾಧಾನ ವ್ಯಕ್ತಪಡಿಸಿದರು.`ಯಾವುದೇ ಅಧಿಕಾರಿಯೊಬ್ಬರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಾಗ ಅವರಿಗೆ ಮೊದಲು ನೋಟಿಸ್ ನೀಡಿ ನಂತರ ತನಿಖೆ ನಡೆಸಬೇಕೆ ಎಂಬ ಅಂಶ ಕುರಿತು ಚರ್ಚೆ ನಡೆಯುತ್ತಿದೆ. ಆರೋಪ ಕೇಳಿ ಬಂದವರಿಗೆ ನೋಟಿಸ್ ನೀಡಿ ನಂತರ ತನಿಖೆ ನಡೆಸುವುದರಿಂದ ಪ್ರಯೋಜನವಿದೆಯೇ~ ಎಂದು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry