ಮಂಗಳವಾರ, ಅಕ್ಟೋಬರ್ 22, 2019
21 °C

ಭ್ರೂಣ ಪತ್ತೆ ಪ್ರಕರಣ: ಮರು ಪರೀಕ್ಷೆಗೆ ಮಹಿಳಾ ಆಯೋಗ ಶಿಫಾರಸು

Published:
Updated:

ಶಿವಮೊಗ್ಗ: ನಗರದ ಸಾರ್ವಜನಿಕ ಸ್ಥಳಗಳಲ್ಲಿ ಪತ್ತೆಯಾದ ಭ್ರೂಣಗಳ ಮರು ಪರೀಕ್ಷೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ. ಮಂಜುಳಾ ಶಿಫಾರಸು ಮಾಡಿದ್ದಾರೆ.ಭ್ರೂಣ ಪತ್ತೆ ಪ್ರಕರಣದ ಹಿನ್ನೆಲೆಯಲ್ಲಿ ಬುಧವಾರ ನಗರದ ವಿವೇಕಾನಂದ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲಿಸಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.ಶಿವಮೊಗ್ಗ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆಸಿದ ಭ್ರೂಣಗಳ ವೈದ್ಯಕೀಯ ಪರಿಶೀಲನೆಯಲ್ಲಿ ಭ್ರೂಣಗಳು ಅಂಗವಿಕಲತೆ ಸೇರಿದಂತೆ ವಿವಿಧ ರೀತಿಯ ನ್ಯೂನತೆಗಳಿಂದ ಕೂಡಿವೆ ಎಂದು ಫೊರೆನ್ಸಿಕ್ ತಜ್ಞರು ವರದಿ ನೀಡಿದ್ದಾರೆ.

 

ಈ ವರದಿ ಕುರಿತಂತೆ ಸಾರ್ವಜನಿಕರಲ್ಲಿ ಅನುಮಾನ ಇದ್ದಲ್ಲಿ ಈ ಎಲ್ಲಾ ಭ್ರೂಣಗಳನ್ನು ಎರಡನೇ ಪರೀಕ್ಷೆಗಾಗಿ ವಿಧಿ-ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವಂತೆ ಆಯೋಗ ಶಿಫಾರಸು ಮಾಡುವುದಾಗಿ ಅವರು ತಿಳಿಸಿದರು.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿರುವ ವಿವೇಕಾನಂದ ಆಸ್ಪತ್ರೆಯ ಡಾ.ಮಹೇಂದ್ರ ಸೇರಿದಂತೆ ಇತರೆ ಮೂವರು ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ ಮಂಜುಳಾ, ಅನಾಗರಿಕವಾಗಿ ಭ್ರೂಣ ಎಸೆದಿದ್ದ ವಿವೇಕಾನಂದ ಆಸ್ಪತ್ರೆಗೆ ಬುಧವಾರ ಎರಡನೇ ನೋಟಿಸ್ ನೀಡಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಈ ನೋಟಿಸ್‌ಗೆ ಮೂರು ದಿನದ ಒಳಗೆ ಸ್ಪಷ್ಟನೆ ಬರದಿದ್ದರೆ ಏಕಪಕ್ಷೀಯ ತೀರ್ಮಾನ ಕೈಗೊಂಡು ಆಸ್ಪತ್ರೆ ಮುಚ್ಚಿಸಲಾಗುವುದು ಎಂದು ಹೇಳಿದರು.ನಗರದಲ್ಲಿ ಈ ರೀತಿಯ ಘಟನೆ ನಡೆದ ಮೇಲೆ ಜಿಲ್ಲಾಡಳಿತ ಮೂರು ಪ್ರತ್ಯೇಕ ತಂಡಗಳನ್ನು ರಚಿಸಿ ನಗರದಲ್ಲಿನ 71 ಸ್ಕ್ಯಾನಿಂಗ್ ಸೆಂಟರ್ ಮತ್ತು 29 ನರ್ಸಿಂಗ್ ಹೋಂಗಳಿಗೆ ಭೇಟಿ ನೀಡಿ, ಪರಿಶೀಲಿಸಿದ್ದು, ಅದರಲ್ಲಿ ನಾಲ್ಕು ಆಸ್ಪತ್ರೆಗಳು ಸಮರ್ಪಕ ದಾಖಲೆ ನಿರ್ವಹಿಸದಿರುವುದು ಕಂಡುಬಂದಿದೆ. ಈ ನಾಲ್ಕು ಆಸ್ಪತ್ರೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಜಿಲ್ಲಾಡಳಿತ ಪರಿಶೀಲನೆ ನಡೆಸಿದೆ ಎಂದರು.ಪ್ರತಿ ಜಿಲ್ಲೆಯಲ್ಲಿ ಆಯಾ ಜಿಲ್ಲಾಧಿಕಾರಿಗಳು ತಂಡಗಳನ್ನು ರಚಿಸಿ, ಸ್ಕ್ಯಾನಿಂಗ್ ಸೆಂಟರ್ ಮತ್ತು  ನರ್ಸಿಂಗ್ ಹೋಂಗಳಿಗೆ ಅನಿರೀಕ್ಷಿತ ದಾಳಿ ನಡೆಸಲು ಸೂಚಿಸಲಾಗುವುದು ಎಂದು ಹೇಳಿದರು.ವಿವೇಕಾನಂದ ಆಸ್ಪತ್ರೆ ಪರಿಶೀಲನೆ ಸಂದರ್ಭದಲ್ಲಿ ಮಂಜುಳಾ ಅವರ ಜತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೆನ್ನಬಸಪ್ಪ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ಲಕ್ಷ್ಮೀಕಾಂತಮ್ಮ, ಜಯನಗರ ಠಾಣೆ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಚಿನ್ನಪ್ಪ ಇತರರು ಹಾಜರಿದ್ದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)