ಶನಿವಾರ, ಮಾರ್ಚ್ 6, 2021
28 °C

ಭ್ರೂಣ ಸೃಷ್ಟಿ ಎಂಬ ಮಹಾ ಸಂದಿಗ್ಧ

ತಮರ್‌ ಲೆವಿನ್‌ ನ್ಯೂಯಾರ್ಕ್‌ ಟೈಮ್ಸ್‌ Updated:

ಅಕ್ಷರ ಗಾತ್ರ : | |

ಭ್ರೂಣ ಸೃಷ್ಟಿ ಎಂಬ ಮಹಾ ಸಂದಿಗ್ಧ

ವರ್ಷಗಳ ಕಾಲ ಬಂಜೆತನದ ನೋವು ಅನುಭವಿಸಿದ ಏಂಜೆಲ್‌ ಮತ್ತು ಜೆಫ್‌ ವಾಟ್ಸ್‌ ಅವರಿಗೆ ಅಂಡ ದಾನಿಯೊಬ್ಬರು ಕೊನೆಗೂ ಸಿಕ್ಕಿದರು. ದಾನಿಯ ಅಂಡವನ್ನು ಜೆಫ್‌ ವಾಟ್ಸ್‌ ಅವರ ವೀರ್ಯದೊಂದಿಗೆ ಫಲಿತಗೊಳಿಸಿ ಉತ್ತಮವಾದ 10 ಭ್ರೂಣಗಳನ್ನು ಪಡೆಯಲಾಯಿತು. ಈ ಪೈಕಿ ನಾಲ್ಕು ಭ್ರೂಣಗಳನ್ನು ಎರಡು ಬಾರಿ ತಲಾ ಎರಡರಂತೆ ಏಂಜೆಲ್‌ ಅವರ ಗರ್ಭಕೋಶದೊಳಗೆ ಇಡಲಾಯಿತು. ಅದರಿಂದ ಅಲೆಕ್ಸಾಂಡರ್‌ ಮತ್ತು ಶೆಲ್ಬಿ ಎಂಬ ಅವಳಿ 4 ವರ್ಷದ ಹಿಂದೆ ಜನಿಸಿದ್ದರೆ, ಏಂಜೆಲಿನಾ, ಚಾರ್ಲ್ಸ್‌ ಎಂಬ ಅವಳಿ 2 ವರ್ಷದ ಹಿಂದೆ ಜನಿಸಿದ್ದಾರೆ. ಉಳಿದ ಆರು ಭ್ರೂಣಗಳನ್ನು ಶೀತಲೀಕರಣ ವ್ಯವಸ್ಥೆಯಲ್ಲಿ ಇಡಲಾಗಿದೆ.ಏಂಜೆಲ್‌ಗೆ  ಈಗಾಗಲೇ 45 ವರ್ಷ. ಇನ್ನಷ್ಟು ಮಕ್ಕಳನ್ನು ಹೆರುವುದು ಬೇಡ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಕಳೆದ ಡಿಸೆಂಬರ್‌ನಲ್ಲಿ ಫೇಸ್‌ಬುಕ್ ಮೊರೆಹೋದ ಅವರು, ತಮ್ಮ ಬಳಿ ಭ್ರೂಣಗಳಿವೆ, ಮಕ್ಕಳಾಗದ ದಂಪತಿ ಇದನ್ನು ಪಡೆದುಕೊಳ್ಳಬಹುದೆಂದು ಕೋರಿಕೊಂಡಿದ್ದರು.

ಅಮೆರಿಕದಲ್ಲಿನ ಶೈತ್ಯಾಗಾರಗಳಲ್ಲಿ ಇಂತಹ ಲಕ್ಷಾಂತರ ಘನೀಕೃತ ಭ್ರೂಣಗಳಿವೆ. ದ್ರವೀಕೃತ ನೈಟ್ರೋಜನ್‌ನ ಬೆಳ್ಳಿಯ ಟ್ಯಾಂಕ್‌ಗಳಲ್ಲಿ ಇವುಗಳನ್ನು ಸಂರಕ್ಷಿಸಿ ಇಡಲಾಗಿದೆ. ಕೆಲವು ಭ್ರೂಣಗಳು ಕಿಮೋಥೆರಪಿಯ ಬಳಿಕ ಮಕ್ಕಳನ್ನು ಹೊಂದುವ ಬಯಕೆ ಇರುವ ಕ್ಯಾನ್ಸರ್ ರೋಗಿಗಳಿಗಾಗಿಯೇ ಮೀಸಲಾಗಿವೆ.  ಆದರೆ ಹೆಚ್ಚಿನ ಭ್ರೂಣಗಳೆಲ್ಲ ಬಾಕಿ ಉಳಿದಿರುವುದು ವಾಟ್ಸ್ ದಂಪತಿಯ ಪ್ರಕರಣದಂತೆ.ಅಂದರೆ ನೈಸರ್ಗಿಕವಾಗಿ ಗರ್ಭಧಾರಣೆ ಅಸಾಧ್ಯವಾದವರು ಮಕ್ಕಳನ್ನು ಬಯಸಿ ಭ್ರೂಣವನ್ನು ಸೃಷ್ಟಿಸಿ, ಬಳಿಕ ಅವುಗಳನ್ನು ಹಾಗೆಯೇ ಬಿಟ್ಟವುಗಳು. ಇಂತಹ ಭ್ರೂಣಗಳನ್ನು ಏನು ಮಾಡಬೇಕು ಎಂಬುದು ಸದ್ಯ ಕುಟುಂಬಗಳಿಗೆ, ಆಸ್ಪತ್ರೆಗಳಿಗೆ, ನ್ಯಾಯಾಲಯಗಳಿಗೆ ಬಿಡಿಸಲಾಗದ ಕಗ್ಗಂಟಾಗಿದೆ. ಸುಧಾರಿತ ತಾಂತ್ರಿಕ ವ್ಯವಸ್ಥೆ ಜನನ ಸಾಧ್ಯತೆಯ ವಿಚಾರದಲ್ಲಿ ಹೊಸ ಅಧ್ಯಾಯವನ್ನೇ ತೆರೆದಿದೆ. ಹೀಗಾಗಿಯೇ ಭ್ರೂಣ ಎಂಬುದನ್ನು ಜೀವನದ ಆರಂಭ ಎಂದು ಪರಿಗಣಿಸಬೇಕಾಗಿದ್ದು, ಇಂತಹ ಭ್ರೂಣಗಳನ್ನು ನಿಭಾಯಿಸುವುದು ಸಂಕೀರ್ಣ ಸಮಸ್ಯೆಯಾಗಿಬಿಟ್ಟಿದೆ.ಅಮೆರಿಕದಲ್ಲಿ 1981ರಲ್ಲಿ ಪ್ರಥಮ ಪ್ರನಾಳ ಶಿಶುವಿನ ಜನನವಾಯಿತು. ಇನ್‌ವಿಟ್ರೊ ಫರ್ಟಿಲೈಸೇಷನ್ (ಐವಿಎಫ್) ತಾಂತ್ರಿಕತೆಯ ಮೊದಲ ಪ್ರಯೋಗಕ್ಕೆ ಆಗ ಆಗಿದ್ದ ವೆಚ್ಚ 12 ಸಾವಿರ ಡಾಲರ್ (7.2 ಲಕ್ಷ). ಇಂದು ಅಮೆರಿಕದಲ್ಲಿ ಅದು ಎಷ್ಟು ಜನಪ್ರಿಯವಾಗಿದೆ ಎಂದರೆ ಶೇ 1.5ಕ್ಕಿಂತಲೂ ಅಧಿಕ ಜನನ ಇಂತಹ ತಾಂತ್ರಿಕತೆಯ ಮೂಲಕವೇ ನಡೆಯುತ್ತಿದೆ.ಆರೋಗ್ಯವಂತ ಮಗು ಪಡೆಯುವ ಸಾಧ್ಯತೆಯಿಂದಾಗಿ  ಇಂಥ ಭ್ರೂಣಗಳಿಗೆ ಮಹತ್ವ ಜಾಸ್ತಿ. ಅಮೆರಿಕದಲ್ಲಿ 10  ಲಕ್ಷಕ್ಕೂ ಅಧಿಕ ಭ್ರೂಣಗಳ ಸಂಗ್ರಹ ಇರುವುದು ಸಮೀಕ್ಷೆಗಳಿಂದ ಗೊತ್ತಾಗಿದೆ. ‘ಹೀಗೆ ಯಾರದೋ ವೀರ್ಯಾಣು, ಯಾರದೋ ಅಂಡಾಣು ಸಂಯೋಜನೆಯಿಂದ ಸೃಷ್ಟಿಯಾದ ಭ್ರೂಣ ಪಡೆಯಲು ಮಕ್ಕಳಿಲ್ಲದವರು ಮುಂದೆ ಬಂದರೂ, ಧಾರ್ಮಿಕ, ಕೌಟುಂಬಿಕ, ಮಾನಸಿಕ ಕಾರಣಗಳಿಗೆ ಅವುಗಳನ್ನು ಗರ್ಭದಲ್ಲಿ ಧರಿಸದೆ ಗಟಾರಕ್ಕೆ ಚೆಲ್ಲುವ ಸಾಧ್ಯತೆ ಹೆಚ್ಚು’ ಎಂದು ಕೊಲಂಬಿಯಾ ವಿಶ್ವವಿದ್ಯಾಲಯದ ಮಹಿಳಾ ಪುನರ್ ಉತ್ಪತ್ತಿ ಆರೈಕೆ ಕೇಂದ್ರದ ಡಾ. ಮಾರ್ಕ್ ಸೌರ್ ಹೇಳುತ್ತಾರೆ.

‘ಭ್ರೂಣವನ್ನು ಶೈತ್ಯಾಗಾರಗಳಲ್ಲಿ ಇಡುವುದಕ್ಕೆ ಬಹಳ ಖರ್ಚು ಬರುತ್ತದೆ.ಒಂದು ಭ್ರೂಣಕ್ಕೆ ವಾರ್ಷಿಕ 300 ಡಾಲರ್‌ನಿಂದ 1,200 ಡಾಲರ್‌ವರೆಗೆ ವೆಚ್ಚ ತಗಲುತ್ತದೆ. ಕೆಲವು ದಂಪತಿಗಳು ಇಂತಹ ವೆಚ್ಚ ನೀಡದೆ ಕ್ಲಿನಿಕ್‌ಗಳೇ ನೋಡಿಕೊಳ್ಳಲಿ ಎಂಬ ಧೋರಣೆ ತಳೆದು ಅತ್ತ ತಲೆ ಹಾಕಿಯೂ ಮಲಗುವುದಿಲ್ಲ. ಆದರೆ ವಾಟ್ಸ್ ದಂಪತಿಯಂತೆ  ಮುಂದೆ ಬರುವವರ ಭ್ರೂಣವನ್ನು ಪಡೆದುಕೊಳ್ಳಲು ಜನ ಹೆಚ್ಚು ಉತ್ಸುಕರಾಗಿರುತ್ತಾರೆ.“ಇಲ್ಲೂ ಒಂದು ಸಮಸ್ಯೆ ಇದೆ. ಇಂತಹ ದಂಪತಿ ತಮ್ಮ ನಿರ್ಧಾರವನ್ನು ಕೊನೆಯ ಕ್ಷಣದಲ್ಲಿ ಬದಲಿಸಿಬಿಡುತ್ತಾರೆ. ಏಕೆಂದರೆ ತಮ್ಮ ಮಗ ಅಥವಾ ಮಗಳಂತೆಯೇ ಇರುವ ಇನ್ನಷ್ಟು ಮಕ್ಕಳು ಇನ್ನೊಂದು ಕುಟುಂಬದಲ್ಲಿ ಬೆಳೆಯುವುದನ್ನು ಅವರು ಇಷ್ಟಪಡುವುದಿಲ್ಲ’ ಎನ್ನುತ್ತಾರೆ ಡಾ. ಸೌರ್.ಇದೆಲ್ಲದರ ನಡುವೆಯೂ, ಭ್ರೂಣಗಳನ್ನು ದಾನವಾಗಿ ನೀಡುವವರಿಂದ ಅದನ್ನು ಪಡೆಯುವವರ ಪ್ರಮಾಣ ಅಮೆರಿಕದಲ್ಲಿ ಹೆಚ್ಚುತ್ತಿದೆ. 2009ರಲ್ಲಿ ಇಂತಹ 596 ಪ್ರಕರಣ ನಡೆದಿದ್ದರೆ, 2013ರಲ್ಲಿ ಅದು 1,084ಕ್ಕೆ ಹೆಚ್ಚಿತ್ತು ಎಂದು ಅಮೆರಿಕನ್‌ ಸೊಸೈಟಿ ಫಾರ್‌ ರಿಪ್ರೊಡಕ್ಟಿವ್‌ ಮೆಡಿಸಿನ್‌ ಹೇಳುತ್ತದೆ. ‘ದಾನವಾಗಿ ಸಿಗುವ ಭ್ರೂಣವನ್ನು ಪಡೆಯುವುದು ಬಡ ಕುಟುಂಬಕ್ಕೆ ವರದಾನವೂ ಹೌದು’ ಎನ್ನುತ್ತಾರೆ ನ್ಯೂಯಾರ್ಕ್‌ನ ವಕೀಲರಾದ ಎಲಿಜಬೆತ್ ಫಾಲ್ಕರ್.

ದಾನ ರೂಪದಲ್ಲಿ ಸಿಗುವ ಭ್ರೂಣಕ್ಕೆ ಬೇಡಿಕೆ ಹೆಚ್ಚಿರುವಂತೆಯೇ ಕ್ಯಾಲಿಫೋರ್ನಿಯಾದ ಕ್ಲಿನಿಕ್ ಬ್ಯಾಚುಗಳಲ್ಲಿ ಭ್ರೂಣ ಸೃಷ್ಟಿಸುವ ಕಾರ್ಯಕ್ಕೆ ಮುಂದಾಗಿದೆ. ಇದು ಭಾರಿ ವಿವಾದಕ್ಕೂ ಕಾರಣವಾಗಿದೆ. ಸರ್ಕಾರಕ್ಕೂ ಇದೊಂದು ಬಿಡಿಸಲಾರದ ಕಗ್ಗಂಟಾಗಿಯೇ ಉಳಿದಿದೆ.

ಕೆಲವು ದೇಶಗಳಲ್ಲಿ ತಾಂತ್ರಿಕ ನೆರವಿನ ಜನನ ಪ್ರಯೋಗಗಳಿಗೆ ಕಟ್ಟುನಿಟ್ಟಿನ ನಿಯಮಗಳಿವೆ. ಅಮೆರಿಕದಲ್ಲಿ ಮಾತ್ರ ಇಂತಹ ಯಾವ ನಿಯಂತ್ರಣವೂ ಇಲ್ಲ. ಹೀಗಾಗಿ ಅಲ್ಲಿ ಭ್ರೂಣ ಎಂಬುದನ್ನು ಆಸ್ತಿ ಎಂದು ಪರಿಗಣಿಸಬೇಕೇ, ಬೇಡವೇ, ಮಕ್ಕಳು ಎಂದು ಪರಿಗಣಿಸಬೇಕೇ, ಬೇಡವೇ ಮುಂತಾದ ಚರ್ಚೆಗಳು ಮುಂದುವರಿದೇ ಇವೆ.ನ್ಯಾಯಾಲಯಗಳಿಗೂ ಈ ಭ್ರೂಣ ಸಮಸ್ಯೆ ದೊಡ್ಡ ತಲೆನೋವಾಗಿಬಿಟ್ಟಿದೆ. ಯಾರ ಪರ ತೀರ್ಪು ನೀಡುವುದು ಎಂಬುದೇ ಗೊತ್ತಾಗುತ್ತಿಲ್ಲ. ಇದಕ್ಕೊಂದು ನಿದರ್ಶನವಾಗಿ ಎದುರಾಗಿದೆ ಕಾರ್ಲಾ ಡಸ್ಟನ್-ಜಾಕೊಬ್ ಎಸಫ್ರಾಂನ್ಸ್ಕಿ ಪ್ರಕರಣ. ಕಾರ್ಲಾಗೆ ಕ್ಯಾನ್ಸರ್ ಇರುವುದು 2010ರಲ್ಲಿ ಪತ್ತೆಯಾಯಿತು. ಆಕೆಗೆ ಕಿಮೋಥೆರಪಿ ಅಗತ್ಯವಾಗಿತ್ತು. ಅದಕ್ಕೆ ಮೊದಲು, ಮುಂದೆ ಎಂದಾದರೂ ಬಸಿರಾಗಬೇಕೆಂದು ಬಯಸಿದಾಗ ಇರಲಿ ಎಂಬ ಕಾರಣಕ್ಕೆ ಪ್ರಿಯಕರ ಎಸಫ್ರಾಂನ್ಸ್ಕಿಯ ವೀರ್ಯಾಣುವಿನೊಂದಿಗೆ ಆಕೆಯ ಅಂಡಾಣುಸಂಯೋಜಿಸಿ ಮೂರು ಭ್ರೂಣಗಳನ್ನು ಸೃಷ್ಟಿಸಲಾಯಿತು.ಬಂಜೆ ನಿವಾರಣಾ ಕ್ಲಿನಿಕ್‌ಗೆ ಭ್ರೂಣ ಸೃಷ್ಟಿಗಾಗಿ ತೆರಳುವುದಕ್ಕೆ ಮೊದಲು ಈ ಜೋಡಿ ವಕೀಲರ ಸಲಹೆ ಪಡೆದಿತ್ತು. ಆದರೆ ಲಿಖಿತ ಒಪ್ಪಂದಕ್ಕೆ ಸಹಿ ಹಾಕಿರಲಿಲ್ಲ. ಇದಾಗಿ ಕೆಲವೇ ದಿನಗಳಲ್ಲಿ ಅವರ ಸಂಬಂಧ ಕಡಿದುಬಿತ್ತು. ಕಾರ್ಲಾಗೆ ಚಿಕಿತ್ಸೆ ನಂತರ ಗರ್ಭ ಧರಿಸಬೇಕೆಂಬ ಬಯಕೆ ಇದ್ದರೂ, ಅದಕ್ಕೆ ಎಸಫ್ರಾಂನ್ಸ್ಕಿ ಒಪ್ಪಲಿಲ್ಲ. ನಾಲ್ಕು ವರ್ಷಗಳ ಕಾನೂನು ಸಮರದ ಬಳಿಕ ಈಚೆಗೆ ನ್ಯಾಯಾಲಯವೊಂದು ಕಾರ್ಲಾ ಈ ಭ್ರೂಣವನ್ನು ಬಳಸಬಹುದೆಂದು ತೀರ್ಪು ನೀಡಿದೆ. ಭ್ರೂಣವನ್ನು ಸೃಷ್ಟಿಸುವಾಗ ಇಬ್ಬರೂ ಮೌಖಿಕವಾಗಿ ಒಪ್ಪಿಕೊಂಡ ಆಧಾರದಲ್ಲಿ ಈ ತೀರ್ಪು ನೀಡಲಾಗಿದೆ. ಆದರೆ ಎಸಫ್ರಾಂನ್ಸ್ಕಿ ಈ ತೀರ್ಪನ್ನು ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಿದ್ದಾರೆ.ಕೆಲವು ಸಂದರ್ಭದಲ್ಲಿ ಭ್ರೂಣವನ್ನು ಬಳಸುವ ಹಕ್ಕಿನ ವಿಚಾರದಲ್ಲಿ ಭಾರಿ ವಿವಾದ ಎದುರಾಗುವುದೂ ಇದೆ. ನಟಿ ಸೋಫಿಯಾ ವರ್ಗರಾ ಮತ್ತು ಆಕೆಯ ಮಾಜಿ ಪ್ರಿಯಕರ ನಿಕ್ ಲೋಯೆಬ್ ಅವರ ನಡುವೆ ಇಂತಹದ್ದೊಂದು ವಿವಾದ ಎದುರಾಗಿದೆ. ಇಂತಹ ಪ್ರಕರಣಗಳಲ್ಲಿ ನ್ಯಾಯಾಧೀಶರಿಂದಲೂ ನಿರ್ದಿಷ್ಟ ತೀರ್ಪು ನೀಡುವುದು ಸಾಧ್ಯವಾಗುತ್ತಿಲ್ಲ.ಮತ್ತೊಂದೆಡೆ, ಈ ವಿಷಯಕ್ಕೆ ಇದೀಗ ಧಾರ್ಮಿಕ ಆಯಾಮವೂ ದೊರೆತುಬಿಟ್ಟಿದೆ. ರೋಮನ್ ಕ್ಯಾಥೊಲಿಕ್ ಚರ್ಚ್ ಭ್ರೂಣವನ್ನು ಶೈತ್ಯಾಗಾರದಲ್ಲಿ ಶೇಖರಿಸಿ ಇಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ. ಗರ್ಭಧಾರಣೆಯೊಂದಿಗೇ ಜೀವನ ಎಂಬುದು ಆರಂಭವಾಗುತ್ತದೆ ಎಂದು ಚರ್ಚ್ ಹೇಳುತ್ತದೆ. ಹಾಗೆಂದು ಪ್ರನಾಳ ಶಿಶು ತಂತ್ರಜ್ಞಾನವನ್ನು ಹೆಚ್ಚಿನ ಧರ್ಮಗುರುಗಳು ಆಕ್ಷೇಪಿಸುತ್ತಿಲ್ಲ, ಬದಲಿಗೆ ಭ್ರೂಣವನ್ನು ಶೈತ್ಯಾಗಾರದಲ್ಲಿ ಇಡುವುದಕ್ಕೆ ಅವರ ಆಕ್ಷೇಪ ಇದೆ.

ಭ್ರೂಣಗಳ ವಿಚಾರದಲ್ಲಿ ಸಾಮಾಜಿಕ ಧೋರಣೆಯೂ ಬಹಳಷ್ಟು ಪ್ರಾಮುಖ್ಯ ಪಡೆಯತೊಡಗಿದೆ. ಟೆನ್ನೇಸಿಯಲ್ಲಿರುವ ನ್ಯಾಷನಲ್ ಎಂಬ್ರಿಯೊ ಡೊನೇಷನ್ ಸೆಂಟರ್ ಮುನ್ನಡೆಯುತ್ತಿರುವುದು ಕ್ರಿಶ್ಚಿಯನ್ ಮೆಡಿಕಲ್ ಅಸೋಸಿಯೇಶನ್‌ನಿಂದ. ಭ್ರೂಣವನ್ನು ಪಡೆಯುವುದೆಂದರೆ ಮಗುವನ್ನು ದತ್ತು ಪಡೆದಂತೆ ಎಂದೇ ಅದು ಭಾವಿಸುತ್ತಿದೆ. ‘ಮಕ್ಕಳಿಗೆ ನೀಡುವ ರಕ್ಷಣೆಯನ್ನು ಭ್ರೂಣಕ್ಕೂ ನೀಡಬೇಕು’ ಎನ್ನುತ್ತಾರೆ ಸೆಂಟರ್‌ನ ಮಾರುಕಟ್ಟೆ ನಿರ್ದೇಶಕರಾದ ಸ್ಟಿಫಾನಿ ವುಡ್ ಮೇಯರ್ಸ್. ಮೊದಲಿಗೆ ಹೇಳಿದ ವಾಟ್ಸ್ ಅವರ ಭ್ರೂಣವನ್ನು ಸಂಗ್ರಹಿಸಿ ಇಟ್ಟಿರುವುದು ಇಲ್ಲೇ.ಆದರೆ ಅಮೆರಿಕದ ಹೆಚ್ಚಿನ ವೈದ್ಯರು, ಗರ್ಭಪಾತ ಪರ ಹೋರಾಟಗಾರರು, ಅಮೆರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್‌ ಮೆಡಿಸಿನ್‌ನಂತಹ ಸಂಸ್ಥೆಗಳು ಇದಕ್ಕೆ ಧಾರ್ಮಿಕ, ಸಾಮಾಜಿಕ ಬಣ್ಣ ಬಳಿಯದೆ, ಕೇವಲ “‘ಭ್ರೂಣ ದಾನ' ಎಂದಷ್ಟೇ ಕರೆಯಬೇಕೆಂದು ಹೇಳುತ್ತಿದ್ದಾರೆ. ‘ನಾವಿಲ್ಲಿ ಇರುವುದು ಭ್ರೂಣವನ್ನು ಬಚಾವು ಮಾಡುವುದಕ್ಕಲ್ಲ, ಬದಲಿಗೆ ಕುಟುಂಬವನ್ನು ಕಟ್ಟಿ ಬೆಳೆಸುವುದಕ್ಕೆ. ಹೀಗಾಗಿ ಇದನ್ನು ಭ್ರೂಣ ದಾನ ಎಂದಷ್ಟೇ ಕರೆದರೆ ಸಾಕು’ ಎನ್ನುತ್ತಾರೆ ಫ್ಲಾರಿಡಾದಲ್ಲಿರುವ ಎಂಬ್ರಿಯೊ ಡೊನೇಷನ್ ಇಂಟರ್‌ನ್ಯಾಷನಲ್‌ನ ವೈದ್ಯಕೀಯ ನಿರ್ದೇಶಕರಾದ ಡಾ. ಕ್ರೆಗ್ ಸ್ವೀಟ್.ಕ್ಯಾಲಿಫೋರ್ನಿಯಾದ ಡೇವಿಸ್‌ನಲ್ಲಿರುವ ಐವಿಎಫ್ ಕ್ಲಿನಿಕ್‌ನಲ್ಲಿ ಡಾ. ಅರ್ನೆಸ್ಟ್ ಝೆರಿಂಗ್ ಎಂಬುವವರು ಭ್ರೂಣ ದಾನಕ್ಕಿಂತಲೂ ಮುಂದೆ ಹೋಗಿ ಭ್ರೂಣ ನಿರ್ಮಾಣಕ್ಕೆ ತೊಡಗಿದ್ದಾರೆ. ಅಂದರೆ ಉತ್ತಮ ಕೌಟುಂಬಿಕ, ದೈಹಿಕ ಕ್ಷಮತೆ ಹೊಂದಿರುವ ವ್ಯಕ್ತಿಗಳ ವೀರ್ಯ, ಅಂಡವನ್ನು ಪಡೆದು ಭ್ರೂಣ ಸೃಷ್ಟಿಸಿ, ಬೇಕಿದ್ದವರಿಗೆ ನೀಡುವುದು. ಇಲ್ಲಿ 12,500 ಡಾಲರ್‌ಗೆ (7.5 ಲಕ್ಷ) ವಿವಿಧ ಮೂರು ಬ್ಯಾಚ್‌ಗಳ 3 ಭ್ರೂಣಗಳನ್ನು ಹೊಂದುವುದಕ್ಕೆ ಅವಕಾಶ ನೀಡಲಾಗುತ್ತದೆ. 12 ವಾರಗಳಲ್ಲಿ ಗರ್ಭ ಧರಿಸದೆ ಇದ್ದರೆ ಹಣ ವಾಪಸ್ ನೀಡುವ ಕೊಡುಗೆಯೂ ಇದೆ. ಭ್ರೂಣ ದಾನಿಗಳ ಸಂಖ್ಯೆ ತೀರಾ ಕಡಿಮೆಯಾದುದೇ ತಾವು ಇಂತಹ ಭ್ರೂಣ ಸೃಷ್ಟಿಗೆ ಮುಂದಾಗಲು ಕಾರಣ ಎನ್ನುತ್ತಾರೆ ಡಾ. ಅರ್ನೆಸ್ಟ್. ಆದರೆ ಇದೂ ಇಂದು ವಿವಾದಕ್ಕೆ ಸಿಲುಕಿದೆ. ಹೀಗೆ ಸಂತಾನ ಪಡೆದ ಮಕ್ಕಳೇ ಮುಂದೊಂದು ದಿನ ತಮ್ಮ ಅಣ್ಣಂದಿರು, ಅಕ್ಕಂದಿರನ್ನು ಮದುವೆಯಾಗುವ ಪ್ರಸಂಗ ಒದಗುವ ಅಪಾಯ ಇದೆ ಎಂಬ ಆತಂಕ ಕೇಳಿಬಂದಿದೆ.ಇಷ್ಟೆಲ್ಲ ಹೇಳಿದ ನಂತರ ಮತ್ತೆ ಮೊದಲು ಹೇಳಿದ ವಿಚಾರಕ್ಕೇ ಬಂದುಬಿಡೋಣ. ತಮ್ಮ ಆರೋಗ್ಯವಂತ ಭ್ರೂಣಗಳನ್ನು ಪಡೆಯುವವರಿಗಾಗಿ ಹುಡುಕಾಟ ನಡೆಸುತ್ತಿದ್ದರಲ್ಲ ಏಂಜೆಲ್ ವಾಟ್ಸ್‌? ಅವರಿಗೆ ಕೊನೆಗೂ ಆನ್‌ಲೈನ್‌ನಲ್ಲಿ ಅನಾಮಿಕರಾದ ರೇಯನ್‌ ಮತ್ತು ರಿಚರ್ಡ್‌ ಗ್ಯಾಲೊವೇ ದಂಪತಿ ದೊರೆತಿದ್ದಾರೆ. ಎರಡೂ ಕುಟುಂಬಗಳು ಎಷ್ಟು ಆತ್ಮೀಯವಾದವು ಎಂದರೆ ಅದನ್ನು ವರ್ಣಿಸಲೂ ಸಾಧ್ಯವಿಲ್ಲ. ಒಟ್ಟಿಗೆ ಹಬ್ಬ ಆಚರಿಸುವುದು, ಪಿಕ್‌ನಿಕ್‌ ಹೋಗುವುದು ಎಲ್ಲ ನಡೆಯುತ್ತಿದೆ. ಎರಡು ಭ್ರೂಣಗಳನ್ನು ಕಳೆದ ಮೇ 12ರಂದು ಗರ್ಭದಲ್ಲಿ ಧರಿಸಿಕೊಂಡಿರುವ ಗ್ಯಾಲೊವೇ ಇಬ್ಬರು ಮಕ್ಕಳನ್ನು ಹೆರುವ ದಿನವನ್ನು ಎದುರು ನೋಡುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.