ಸೋಮವಾರ, ಡಿಸೆಂಬರ್ 16, 2019
18 °C

ಮಂಕಾಯಿತು ಮಲ್ಲೇಶ್ವರ

- ರಮೇಶ ಕೆ. Updated:

ಅಕ್ಷರ ಗಾತ್ರ : | |

ಮಂಕಾಯಿತು ಮಲ್ಲೇಶ್ವರ

ಪ್ರತಿದಿನ ಸಂಜೆ ಏಳು ಗಂಟೆ ಹೊತ್ತಿಗೆ ಕಾಲು ಇಡಲೂ ಸ್ಥಳವಿಲ್ಲದಂತೆ ಜನಜಂಗುಳಿಯಿಂದ ಕೂಡಿರುತ್ತಿದ್ದ ಆ ರಸ್ತೆಯಲ್ಲಿ ಬುಧವಾರ (ಏ.17) ಸಂಜೆ ಬೆರಳೆಣಿಕೆಯಷ್ಟು ಮಂದಿಯಷ್ಟೇ ಕಣ್ಣಿಗೆ ಕಂಡರು. ಫುಟ್‌ಪಾತ್ ವ್ಯಾಪಾರಿಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು. ಅಲ್ಲೇ ಇದ್ದ ಕಡಲೆಬೀಜದ ವ್ಯಾಪಾರಿಯ ಕಣ್ಣುಗಳು ಗುರುವಾರವೂ ಗ್ರಾಹಕರನ್ನು ಹುಡುಕುತ್ತಿದ್ದವು.ಮಲ್ಲೇಶ್ವರದ 13ನೇ ಅಡ್ಡರಸ್ತೆಯಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಬಳಿ ಬುಧವಾರ ಬೆಳಿಗ್ಗೆ ಬಾಂಬ್ ಸ್ಫೋಟಗೊಂಡ ಪರಿಣಾಮ ಸಂಪಿಗೆ ರಸ್ತೆಯುದ್ದಕ್ಕೂ ಗುರುವಾರ ಮಧ್ಯಾಹ್ನ 12 ಗಂಟೆವರೆಗೂ ಕಂಡುಬಂದದ್ದು ಇಂತಹುದೇ ದೃಶ್ಯಗಳು.ಘಟನೆಯಿಂದಾಗಿ ಮಲ್ಲೇಶ್ವರ ಮಾರುಕಟ್ಟೆ ಸೇರಿದಂತೆ ಮಂತ್ರಿಮಾಲ್‌ಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ. `ಮಂಗಳವಾರ ಬಂದ ಗ್ರಾಹಕರಷ್ಟು ಬುಧವಾರ ಇಲ್ಲ. ಬೆಳಿಗ್ಗೆ ಸ್ವಲ್ಪ ಜನದಟ್ಟಣೆ ಇತ್ತು. ಆದರೆ ಸುದ್ದಿ ತಿಳಿದ ಕ್ಷಣದಿಂದ ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟಾಯಿತು' ಎಂದು ಹೇಳುತ್ತಾರೆ ಮಂತ್ರಿಮಾಲ್‌ನಲ್ಲಿ ಕೆಲಸ ಮಾಡುವ ಸೆಕ್ಯೂರಿಟಿ ಗಾರ್ಡ್ ಲಿಂಗರಾಜು.`ಬಾಂಬ್ ಸ್ಫೋಟ ಸುದ್ದಿ ಹರಡುತ್ತಿದ್ದಂತೆ ಬುಧವಾರ ಬೆಳಿಗ್ಗೆ ಸಂಚಾರ ದಟ್ಟಣೆಯೂ ಹೆಚ್ಚಾಗಿತ್ತು. ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಬೇರೆ ರಾಜ್ಯಗಳ ಗ್ರಾಹಕರು ಕಡಿಮೆಯಾದರು. ಇಲ್ಲಿನ ಅಪಾರ್ಟ್‌ಮೆಂಟ್‌ನ ನಿವಾಸಿಗಳಷ್ಟೇ ಬರುತ್ತಿದ್ದಾರೆ. ಬುಧವಾರ ಶೇಕಡಾ 50ರಷ್ಟು ವ್ಯಾಪಾರ ಕಡಿಮೆಯಾಗಿದೆ' ಎಂದು ಮಾಹಿತಿ ನೀಡುತ್ತಾರೆ `ಶೋ ಆಫ್' ವಸ್ತ್ರ ಮಳಿಗೆಯ ಕ್ಯಾಷಿಯರ್ ಎಂ. ರಾಮ್.`ಬಾಂಬ್ ಸ್ಫೋಟಗೊಂಡ ಕ್ಷಣದಿಂದ ಫುಟ್‌ಪಾತ್ ವ್ಯಾಪಾರಿಗಳಿಗೂ ಪೊಲೀಸರು ಕಡಿವಾಣ ಹಾಕುತ್ತಿದ್ದಾರೆ. ಪ್ರತಿದಿನ ಒಂದು ಸಾವಿರ ರೂಪಾಯಿ ವ್ಯಾಪಾರ ಮಾಡುತ್ತಿದ್ದೆ. ಆದರೆ ಇಂದು (ಬುಧವಾರ ರಾತ್ರಿ 8ರ ಹೊತ್ತು) ಐನೂರು ರೂಪಾಯಿಯೂ ಆಗಿಲ್ಲ' ಎಂದು ಅಳಲು ತೋಡಿಕೊಂಡರು ಮಂತ್ರಿಮಾಲ್ ಎದುರು ಬೇಯಿಸಿದ ಕಡಲೆಬೀಜ ಮಾರುವ ವ್ಯಾಪಾರಿ, ಶ್ರೀರಾಂಪುರದ ಓಂಶಕ್ತಿವೇಲು.`ಸಂಚಾರ ದಟ್ಟಣೆ ಯಥಾಸ್ಥಿತಿಯಲ್ಲಿದೆ. ಆದರೆ ಪಾದಚಾರಿಗಳ ಸಂಖ್ಯೆ ತೀರಾ ವಿರಳವಾಗಿದೆ. ಸ್ಫೋಟದ ಸುದ್ದಿ ತಿಳಿದಿದ್ದರಿಂದ ಬಹಳಷ್ಟು ಜನರು ಮನೆ ಬಿಟ್ಟು ಹೊರಬಂದಿಲ್ಲ' ಎನ್ನುತ್ತಾರೆ ಮಲ್ಲೇಶ್ವರ ಸಂಚಾರ ಠಾಣೆಯ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಶಿವಲಿಂಗಯ್ಯ.`ಇಲ್ಲಿ 247 ವ್ಯಾಪಾರ ಮಳಿಗೆಗಳಿವೆ. ರಾಮನವಮಿಗಾಗಿ ಹೆಚ್ಚು ಬಂಡವಾಳ ಹಾಕಿದ್ದೆವು. ಬುಧವಾರದ ಘಟನೆ ನಡೆದಾಗಿನಿಂದ ಗ್ರಾಹಕರ ಸಂಖ್ಯೆ ದಿಢೀರನೆ ಕಡಿಮೆಯಾಯಿತು. ಪ್ರತಿ ದಿನ ಹತ್ತು ಸಾವಿರ ವ್ಯಾಪಾರವಾಗುತ್ತಿತ್ತು. ಆದರೆ ಬುಧವಾರ ಐದು ಸಾವಿರ ವ್ಯಾಪಾರವಾಗಿದೆ. ರಾಮನವಮಿ ಪ್ರಯುಕ್ತವಾದರೂ ವ್ಯಾಪಾರ ಆಗಬಹುದೆಂದು ಕಾಯುತ್ತಿದ್ದೇವೆ' ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮಲ್ಲೇಶ್ವರ ಮಾರುಕಟ್ಟೆಯ ಹಣ್ಣಿನ ವ್ಯಾಪಾರಿ ಯಲ್ಲಪ್ಪ. ಮತ್ತೊಂದೆಡೆ ತರಕಾರಿ, ದಿನಬಳಕೆ ವಸ್ತುಗಳನ್ನು ಕೊಳ್ಳುವ ಗ್ರಾಹಕರು ಅಲ್ಲಲ್ಲಿ ಅಂಗಡಿಗಳಲ್ಲಿ ಕಂಡು ಬಂದರು. ಬಂಗಾರದ ಬೆಲೆ ಕಡಿಮೆಯಾಗಿರುವ ಕಾರಣ ಬಾಂಬ್ ಸ್ಫೋಟ ಘಟನೆ ಲೆಕ್ಕಿಸದ ಹಳದಿ ಲೋಹದ ವ್ಯಾಮೋಹಿಗಳು ಬಂಗಾರದ ಅಂಗಡಿಗಳಲ್ಲಿ ಮುಗಿಬೀಳುತ್ತಿದ್ದ ದೃಶ್ಯ ಗಮನ ಸೆಳೆಯಿತು. ಆದರೆ ರಾತ್ರಿ 9.30ರವರೆಗೂ ಜನರಿಂದ ತುಂಬಿರುತ್ತಿದ್ದ ಸಂಪಿಗೆ ರಸ್ತೆ ಹಾಗೂ ಮಲ್ಲೇಶ್ವರ 8ನೇ ಕ್ರಾಸ್ ಬುಧವಾರ ಸಂಜೆ 7.30ಕ್ಕೆ ಬಿಕೋ ಎನ್ನುತ್ತಿದ್ದವು.`ದೂರದ ಹೈದರಾಬಾದ್‌ನಲ್ಲೋ, ಮುಂಬೈನಲ್ಲೋ ಬಾಂಬ್ ಸ್ಫೋಟದ ಸುದ್ದಿಗಳನ್ನು ಟೀವಿಗಳಲ್ಲಿ ನೋಡುತ್ತಿದ್ದೆವು. ಆದರೆ ನಮ್ಮ ಬಡಾವಣೆಯಲ್ಲೇ ಸಂಭವಿಸಿದ್ದು ನಿಜಕ್ಕೂ ಆತಂಕಕ್ಕೆ ಕಾರಣವಾಗಿದೆ. ಮಲ್ಲೇಶ್ವರ ಜನನಿಬಿಡ ಪ್ರದೇಶವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಭದ್ರತೆ ಒದಗಿಸಬೇಕು. ಸಾರ್ವಜನಿಕರಲ್ಲಿ ಭಯದ ವಾತಾವರಣ ಹೋಗಲಾಡಿಸಬೇಕು' ಎಂದು ಸರ್ಕಾರಕ್ಕೆ ಮನವಿ ಮಾಡಿದರು ಮಲ್ಲೇಶ್ವರ 15ನೇ ಕ್ರಾಸ್ ನಿವಾಸಿ ಸೋಮಶೇಖರ್.`ಮಲ್ಲೇಶ್ವರದ ನಿವಾಸಿಗಳೇ ಕಡಿಮೆಯಾಗಿದ್ದಾರೆ. ಬುಧವಾರಕ್ಕೂ ಹಿಂದಿನ ದಿನಗಳಲ್ಲಿ ವ್ಯಾಪಾರ ಚೆನ್ನಾಗಿತ್ತು. ಈ ಅಹಿತಕರ ಘಟನೆ ನಡೆದ ಕ್ಷಣದಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಯಿತು. ಇದರಿಂದ ಬುಧವಾರ ರೂ.2ಸಾವಿರದಿಂದ 3 ಸಾವಿರದಷ್ಟು ವ್ಯಾಪಾರ ಕಡಿಮೆಯಾಗಿದೆ' ಎಂದು ತೆಂಗಿನಕಾಯಿ ವ್ಯಾಪಾರದ ಏರಿಳಿತವನ್ನು ವಿವರಿಸಿದರು ವ್ಯಾಪಾರಿ ಕುಮಾರ್.ಈ ಬಾಂಬ್ ಸ್ಫೋಟ ಘಟನೆಯಲ್ಲಿ 19 ಮಂದಿ ಗಾಯಗೊಂಡಿದ್ದಾರೆ. ಅದರ ಜೊತೆಗೆ ಸ್ಫೋಟದ ಪರಿಣಾಮ ಸಮೀಪದ ಮಾರುಕಟ್ಟೆ ಹಾಗೂ ಮಂತ್ರಿ ಮಾಲ್‌ನ ವ್ಯಾಪಾರ ವಹಿವಾಟಿಗೂ ಬಿಸಿ ತಟ್ಟಿರುವುದು ವಿಪರ್ಯಾಸ.ಭಕ್ತರ ಸಂಖ್ಯೆ ಕ್ಷೀಣ

ಬಾಂಬ್ ಸ್ಫೋಟ ಸಂಭವಿಸಿದ ಸ್ಥಳದ ಸುತ್ತಮುತ್ತ ಕಾಡು ಮಲ್ಲೇಶ್ವರ, ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ, ಶ್ರೀ ಸಾಯಿ ಮಂದಿರ, ಈಶ್ವರ ಮತ್ತು ಗಂಗಮ್ಮ ದೇವಸ್ಥಾನಗಳಿವೆ. ಸಾಮಾನ್ಯವಾಗಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ದೇವಾಲಯಗಳಿಗೆ ಬೇರೆ ಬೇರೆ ಬಡಾವಣೆಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಾರೆ. ಆದರೆ ಬುಧವಾರ ಬೆಳಿಗ್ಗೆ ನಡೆದ ಘಟನೆಯಿಂದ ಗುರುವಾರವೂ ದೇವಾಲಯಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು.`ಬಾಂಬ್ ಸ್ಫೋಟದಿಂದಾಗಿ ಬುಧವಾರ ಸಂಜೆ 7.30ಕ್ಕೆ ದೇವಸ್ಥಾನದ ಬಾಗಿಲು ಮುಚ್ಚಿಸಿದರು. ಗುರುವಾರ ದಕ್ಷಿಣಮೂರ್ತಿಗೆ ಅಭಿಷೇಕ ಮಾಡುತ್ತೇವೆ. ಪ್ರತಿ ವಾರ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಆದರೆ ಘಟನೆಯಿಂದ ಅರ್ಧದಷ್ಟು ಭಕ್ತರ ಸಂಖ್ಯೆ ಕಡಿಮೆಯಾಗಿದೆ. ಆಷಾಢದಲ್ಲಿ ಮಾತ್ರ ಸಂಖ್ಯೆ ಕಡಿಮೆ ಇರುತ್ತಿತ್ತು. ಇಂಥ ಘಟನೆ ಮಲ್ಲೇಶ್ವರದಲ್ಲಿ ಮೊದಲ ಬಾರಿ ಸಂಭವಿಸಿದೆ. ಇದು ಬೇಸರದ ಸಂಗತಿ' ಎಂದು ಹೇಳುತ್ತಾರೆ ಶ್ರೀ ಕಾಡು ಮಲ್ಲೇಶ್ವರ ದೇವಾಲಯದ ಅರ್ಚಕ ರವಿಶಂಕರ.

ಪ್ರತಿಕ್ರಿಯಿಸಿ (+)