ಶುಕ್ರವಾರ, ಡಿಸೆಂಬರ್ 13, 2019
26 °C

ಮಂಕುತಿಮ್ಮನ ತಮ್ಮ ರಂಗನಾಥ ಶರ್ಮಾ

ರವೀಂದ್ರ ಭಟ್ಟ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 'ಚಪ್ಪಲಿಯೂ ಇರಲಿಲ್ಲ. ರೊಕ್ಕ ಮೊದಲೇ ಇಲ್ಲ. ಇಪ್ಪತ್ತು ಮನೆಗಳಲ್ಲಿ ಭಿಕ್ಷೆಯನು ಬೇಡಿ ಸೊಪ್ಪು ಸಿಪ್ಪೆಗಳನ್ನು ಚಪ್ಪರಿಸಿ ತಿಂದೆಯಲೊ ಮುಪ್ಪಿನಲಿ ತೆಪ್ಪಗಿರು ಬೊಪ್ಪ ಮೇಲಿಹನು’ ಎಂದು ತಮ್ಮನ್ನು ತಾವೇ ವ್ಯಂಗ್ಯ ಮಾಡಿಕೊಳ್ಳುತ್ತಿದ್ದ ಹಿರಿಯ ವಿದ್ವಾಂಸ ಎನ್.ರಂಗನಾಥ ಶರ್ಮಾ ನಿಜವಾದ ಅರ್ಥದಲ್ಲಿ ಈಗ ಬೊಪ್ಪನ ಬಳಿಗೇ ಸಾಗಿದ್ದಾರೆ.‘ಮಹಾ ಮಹೋಪಾಧ್ಯಾಯ’, ‘ವಿದ್ಯಾವಾರಿಧಿ’ ಎಂಬೆಲ್ಲಾ ಬಿರುದಿಗೆ ಪಾತ್ರರಾಗಿದ್ದ ರಂಗನಾಥ ಶರ್ಮಾ ಭಾರತ ಮಟ್ಟದಲ್ಲಿಯೇ ಅತಿ ಹಿರಿಯ ವ್ಯಾಕರಣ ಪಂಡಿತರಾಗಿದ್ದರು. ನಮ್ಮ ದೇಶದ ಅಗ್ರಮಾನ್ಯ ಸಂಸ್ಕೃತ ಪಂಡಿತರಲ್ಲಿ ಒಬ್ಬರಾಗಿದ್ದರು. ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ಅವರ ವಿದ್ವತ್‌ಗೆ ಅವರೇ ಸಾಟಿ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರು ಸಂಸ್ಕೃತದಲ್ಲಿ ೧೧, ಕನ್ನಡದಲ್ಲಿ ೨೨ ಕೃತಿಗಳನ್ನು ರಚಿಸಿದ್ದಾರೆ. ೧೭ಕ್ಕೂ ಹೆಚ್ಚು ಕೃತಿಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.ಹಲವಾರು ಹಳೆಗನ್ನಡ ಕೃತಿಗಳನ್ನು ಆಧುನಿಕ ಕನ್ನಡಕ್ಕೆ ತಂದಿರುವ ಅವರ ಶ್ರೀಮದ್ವಾಲ್ಮೀಕಿ ರಾಮಾಯಣ, ವಿಷ್ಣು ಪುರಾಣ, ಶ್ರೀಮದ್ಭಾಗವತ ಮುಂತಾದ ಕೃತಿಗಳೂ ಅತ್ಯಂತ ಜನಪ್ರಿಯವಾದವು. ಸಂಪೂರ್ಣ ರಾಮಾಯಣದ ೨೪ ಸಾವಿರ ಶ್ಲೋಕಗಳನ್ನು ಕನ್ನಡಕ್ಕೆ ಅನುವಾದಿಸಿ ಕೊಟ್ಟವರು ಅವರು. ವ್ಯಾಕರಣ ಶಾಸ್ತ್ರದ ಪರಿವಾರ ಮತ್ತು ಹೊಸಗನ್ನಡ ವ್ಯಾಕರಣ ಪುಸ್ತಕಗಳನ್ನು ಅವರು ರಚಿಸಿದ್ದಾರೆ.ಕನ್ನಡದ ಶ್ರೇಷ್ಠ ವಿದ್ವಾಂಸರಾಗಿದ್ದ ಡಿ.ವಿ.ಗುಂಡಪ್ಪ, ವಿ.ಸೀ, ಸೇಡಿಯಾಪು, ಕೆ.ಕೃಷ್ಣಮೂರ್ತಿ ಮುಂತಾದವರ ಒಡನಾಡಿಯಾಗಿದ್ದ ಅವರು ಡಿವಿಜಿ ಅವರೊಂದಿಗೆ ಅತ್ಯಂತ ಸ್ನೇಹದಿಂದ ಇದ್ದರು. ೧೯೪೮ರಿಂದ ಆರಂಭವಾಧ ಡಿವಿಜಿ ಮತ್ತು ರಂಗನಾಥ ಶರ್ಮಾ ಅವರ ಸ್ನೇಹ ಡಿವಿಜಿ ಅವರ ಬದುಕಿರುವ ತನಕವೂ ಹಾಗೆಯೇ ಇತ್ತು.ಡಿವಿಜಿ ಅವರ ಮೇಲಿನ ಗೌರವದಿಂದಾಗಿಯೇ ಶರ್ಮಾ ಅವರು ಬೆಂಗಳೂರಿನ ನರಸಿಂಹರಾಜ ಕಾಲೋನಿಯ ರಾಮಾಯಣ ಪ್ರಕಾಶನ ಸಮಿತಿಯವರಿಗೆ ವಾಲ್ಮೀಕಿ ಸಮಗ್ರ ರಾಮಾಯಣದ ಕನ್ನಡಾನುವಾದ ಮಾಡಿಕೊಟ್ಟರು. ಡಿವಿಜಿ ಅವರಿಂದಾಗಿಯೇ ಶರ್ಮಾ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ­ಯಲ್ಲಿಯೂ ಸಕ್ರಿಯರಾಗಿದ್ದರು. ವಿ.ಸೀ ಅವರ ಸ್ನೇಹದಿಂದಾಗಿ ಐಬಿಎಚ್ ಪ್ರಕಾಶನದ ಕವಿ ಕಾವ್ಯ ಪರಂಪರೆಯ ಗ್ರಂಥಮಾಲಿಕೆಗೆ ಶರ್ಮಾ ಅವರು ತೊಡಗಿ­ಕೊಂಡಿದ್ದರು. ಜಿ.ನಾರಾಯಣ ಅವರ ಒತ್ತಾಸೆಯ ಫಲವಾಗಿ ಹಳೆಗನ್ನಡ ಮತ್ತು ನಡುಗನ್ನಡದ ಕಾವ್ಯಗಳನ್ನು ಹೊಸಗನ್ನಡಕ್ಕೆ ತಂದರು.೧೯೩೫ರಿಂದ ಬೆಂಗಳೂರಿನಲ್ಲಿಯೇ ಇದ್ದ ಅವರು ಈಗ ಸುಮಾರು ಒಂದೂವರೆ ವರ್ಷದಿಂದ ಮೈಸೂರಿನಲ್ಲಿ ಮಗನ ಮನೆಯಲ್ಲಿ ಇದ್ದರು.

ಶಿವಮೊಗ್ಗದಲ್ಲಿ ಜನನ: ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ನಡಹಳ್ಳಿಯಲ್ಲಿ ೧೯೧೬ರಲ್ಲಿ ಅವರು ಜನಿಸಿದರು. ತಂದೆ ತಿಮ್ಮಪ್ಪ, ತಾಯಿ ಜಾನಕಮ್ಮ. ನಡಹಳ್ಳಿ ಮತ್ತು ಸೊರಬದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಪ್ರೌಢ ಶಿಕ್ಷಣಕ್ಕೆ ಅಲ್ಲಿ ಅವಕಾಶವಿರಲಿಲ್ಲ. ಆದರೆ ಓದಿನ ಹಸಿವಿದ್ದ ಶರ್ಮಾ ಕೆಳದಿಯ ಸಂಸ್ಕೃತ ಪಾಠಶಾಲೆಯನ್ನು ಸೇರಿ ಮೂರು ವರ್ಷಗಳ ಕಾಲ ಸಂಸ್ಕೃತವನ್ನು ಕಲಿತರು. ಅಲ್ಲಿಯೇ ಬಾಲಕ ರಂಗನಾಥ, ರಂಗನಾಥ ಶರ್ಮಾ ಆಗಿ ಬದಲಾದರು.ಪ್ರಥಮ ಹಾಗೂ ಕಾವ್ಯ ಪರೀಕ್ಷೆಗಳನ್ನು ಕೆಳದಿಯಲ್ಲಿ ಪೂರೈಸಿದ ಅವರು ಸಾಹಿತ್ಯ ಪರೀಕ್ಷೆಗಾಗಿ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠ ಶಾಲೆಗೆ ಬಂದರು. ಸೊರಬ, ಕೆಳದಿ, ಸಾಗರದಂತಹ ಊರುಗಳನ್ನು ಬಿಟ್ಟು ಬೇರೆ ಯಾವುದೇ ಮಹಾನಗರಗಳನ್ನು ನೋಡದೇ ಇದ್ದ ಅವರು ಬೆಂಗಳೂರು ಸೇರಿದಾಗ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ವಾರಾನ್ನ, ಭಿಕ್ಷಾನ್ನ, ಸ್ವಯಂ ಪಾಕಗಳ ಮೂಲಕ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಅವರು ಓದಿನಲ್ಲಿ ಮಾತ್ರ ಬಹಳ ಮುಂದು. ಊಟಕ್ಕೆ ತಟ್ಟೆ ಇಲ್ಲದೆ ಎಲೆ ಕೊಳ್ಳಲು ಕಾಸಿಲ್ಲದೆ ನೆಲದ ಮೇಲೆಯೇ ಅನ್ನವನ್ನು ಹಾಕಿಕೊಂಡು ತಿನ್ನುವ ದಿನಗಳೂ ಇದ್ದವು.ಬೆಂಗಳೂರಿಗೆ ಬಂದ ಮೂರನೇ ವರ್ಷ ಅವರಿಗೆ ಇಸಬು ರೋಗ ಕಾಣಿಸಿಕೊಂಡಿತು. ಮುಖ, ಕೈಕಾಲು, ಕಣ್ಣು ರೆಪ್ಪೆಗಳನ್ನೂ ವ್ಯಾಪಿಸಿದ್ದ ಇಸಬು ರೋಗದಿಂದ ಅವರ ವಾರಾನ್ನಕ್ಕೂ ಕುತ್ತು ಬಂತು. ಪಾಠಶಾಲೆಯಲ್ಲಿಯೂ ಪ್ರವೇಶ ನಿರಾಕರಿಸಲಾಯಿತು. ಅದಕ್ಕೆಲ್ಲಾ ಹೆದರದ ಶರ್ಮಾ ತಾವು ಉಳಿದುಕೊಂಡಿದ್ದ ವ್ಯಾಸ ಮಂದಿರದಲ್ಲಿ ಸ್ವಯಂ ಪಾಕ ಮಾಡಿಕೊಂಡು ಶಾಸ್ತ್ರಾಭ್ಯಾಸವನ್ನು ಮುಂದುವರಿಸಿದರು. ವ್ಯಾಕರಣ, ಅಲಂಕಾರ, ವೇದಾಂತ ಶಾಸ್ತ್ರಗಳಲ್ಲಿ ವಿದ್ವತ್ ಪದವಿ ಪಡೆದರು. ಕನ್ನಡ ವಿದ್ವಾನ್ ಪದವಿಯನ್ನೂ ಸ್ವಯಂ ಪ್ರಯತ್ನದಿಂದಲೇ ಪಡೆದರು.ವಿದ್ವತ್ ಪದವಿ ಗಳಿಸಿದ ನಂತರ ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದ ಅವರು ನಂತರ ಬೇಲೂರಿನಲ್ಲಿ ಕೆಲ ಕಾಲ ಇದ್ದರು. ಕೆಲ ಕಾಲದಲ್ಲಿಯೇ ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾಪಾಠ ಶಾಲೆಯಲ್ಲಿಅಧ್ಯಾಪಕರಾಗಿ ಸೇರಿದ ಅವರು ೧೯೭೬ರಲ್ಲಿ ನಿವೃತ್ತರಾದರು.೧೯೪೧ರಲ್ಲಿ ಸಾಗರ ತಾಲ್ಲೂಕಿನ ಮಂಚಾಲೆಯ ಕಮಲಾಕ್ಷಮ್ಮ ಅವರನ್ನು ವಿವಾಹವಾದ ಶರ್ಮಾ ಅವರಿಗೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ. ೧೯೭೩ರಲ್ಲಿ ಅವರ ಪತ್ನಿ ತೀರಿಕೊಂಡರು.ಡಿವಿಜಿ ಅವರ ಬಹುತೇಕ ಎಲ್ಲ ಕೃತಿಗಳಲ್ಲಿಯೂ ಶರ್ಮಾ ಅವರ ಸಹಾಯ ಇದ್ದೇ ಇರುತ್ತಿತ್ತು.  ‘ಹತ್ತರಲ್ಲಿ ಒಂದೆಂಬಂತೆ ಒಬ್ಬ ಹಳೆಯ ಪಂಡಿತನಾಗಿ ಕಳೆದು ಹೋಗುತ್ತಿದ್ದ ನನ್ನನ್ನು ಕನ್ನಡಕ್ಕೂ, ಕನ್ನಡ ನಾಡಿನ ಜನತೆಗೆ ದಕ್ಕಿಸಿದ್ದು ಡಿವಿಜಿ’ ಎಂದು ನೆನೆಯುತ್ತಿದ್ದ ಅವರು ಡಿವಿಜಿ ನಿಧನದ ನಂತರ ಅವರ ‘ಮರುಳ ಮುನಿಯನ ಕಗ್ಗ’ ಪುಸ್ತಕ ಹೊರ ಬರುವಂತೆ ಮಾಡಿ­ದವರು. ಡಿವಿಜಿ ಅವರ ‘ಜೀವನ ಧರ್ಮಯೋಗ’ ಕೃತಿಯ ಮೊದಲ ಓದುಗ ಶರ್ಮಾ. ಶರ್ಮಾ ಅವರನ್ನು ಡಿವಿಜಿ ಯಾವಾಗಲೂ ‘ಪಂಡಿತರೇ’ ಎಂದೇ ಸಂಬೋಧಿಸುತ್ತಿದ್ದರು.ಡಿವಿಜಿ ಅವರಿಗೆ ತಿಂಡಿ ತಿನಿಸುಗಳೆಂದರೆ ಬಹಳ ಪ್ರೀತಿ. ಶರ್ಮಾ ಅವರು ಮಿತ ಆಹಾರಿ. ಶರ್ಮಾ ಅವರು ಡಿವಿಜಿ ಅವರ ಮನೆಗೆ ಯಾವಾಗ ಹೋದರೂ ಬೋಂಡಾ ಸಮಾರಾಧನೆ ಇತ್ತು. ಒಮ್ಮೆ ಅವರು ಹೋದಾಗ ಡಿವಿಜಿ ಬಟ್ಟಲು ತುಂಬಾ ಬೋಂಡಾ ಇಟ್ಟುಕೊಂಡು ಮೆಲ್ಲುತ್ತಿದ್ದರು. ಎಷ್ಟೇ ಒತ್ತಾಯಿಸಿದರೂ ಶರ್ಮಾ ಒಂದು ಬೋಂಡಾವನ್ನು ಬಿಟ್ಟು ಮತ್ತೊಂದು ತೆಗೆದುಕೊಳ್ಳಲಿಲ್ಲ. ಆಗ ಡಿವಿಜಿ ‘ಪಂಡಿತರೆ ನಿಮ್ಮ ಹೊಟ್ಟೆ ಲೇಡೀಸ್ ರಿಸ್ಟ್ ವಾಚ್. ನನ್ನದೋ ವಾಲ್ ಕ್ಲಾಕ್’ ಎಂದು ನಕ್ಕಿದ್ದರು.ಸರಳ, ಮಾತೃ ಹೃದಯಿಯಾಗಿದ್ದ ರಂಗನಾಥ ಶರ್ಮಾ ಅವರು ಕೊನೆಯ ಕಾಲದವರೆಗೂ ವಿನೋದ­ದಲ್ಲಿಯೇ ಕಾಲ ಕಳೆದರು. ತಮ್ಮನ್ನು ತಾವು ವಿನೋದ ಮಾಡಿಕೊಳ್ಳುತ್ತಲೇ ಮತ್ತೆ ಬಾರದ ಊರಿಗೆ ತೆರಳಿದರು.‘ಗಣಪತಿ ನಿಮ್ಮ ಹಲ್ಲನ್ನು ಕಾಪಾಡಲಿ’

ಒಮ್ಮೆ ಶರ್ಮಾ ಅವರು ಹಲ್ಲು ನೋವಿನ ಚಿಕಿತ್ಸೆಗಾಗಿ ಹೊರಟು ದಾರಿಯಲ್ಲಿ ಡಿವಿಜಿ ಕಂಡಾಗ ಡಿವಿಜಿ ವಿನೋದಕ್ಕಾಗಿ ‘ಆ ಏಕದಂತ ಗಣಪತಿಯು ನಿಮ್ಮ ಹಲ್ಲನ್ನು ಕಾಪಾಡಲಿ’ ಎಂದು ಹಾರೈಸಿ ಸಂಸ್ಕೃತದಲ್ಲಿ ಒಂದು ಶ್ಲೋಕ ರಚಿಸಿ ಹೇಳಿದರು. ಚಿಕಿತ್ಸೆ ಪಡೆದು ವಾಪಸು ಬಂದ ಶರ್ಮಾ ‘ತಾನು ಒಂಟಿ ಹಲ್ಲಿನವನೆಂಬ ಅಸೂಯೆಯಿಂದ ಆ ವಕ್ರ­ದಂತನು ನನ್ನ ಎರಡು ಹಲ್ಲು­ಗಳನ್ನು ಕೀಳಿಸಿದನು’ ಎಂದು ಡಿವಿಜಿ ಆರಂಭಿಸಿದ್ದ ಶ್ಲೋಕವನ್ನು ಇವರು ಪೂರ್ಣಗೊಳಿಸಿದರು.

ಪ್ರತಿಕ್ರಿಯಿಸಿ (+)