ಸೋಮವಾರ, ಮೇ 25, 2020
27 °C

ಮಂಗಗಳ ಕಾಟಕ್ಕೆ ಜನ ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಂಗಿ: ಮಂಗಗಳ ಉಪಟಳಕ್ಕೆ ಸಮೀಪದ ಶಿರಸಂಗಿ, ಕಲ್ಲಾಪೂರ ಹಾಗೂ ಇನಾಂ ಗೋವನಕೊಪ್ಪ ಗ್ರಾಮಸ್ಥರು ಕಂಗಾಲಾಗಿದ್ದಾರೆ. ದಿನವೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಲೇ ಮಂಗಗಳಿಂದ ರಕ್ಷಣೆ ಪಡೆಯಲು ಪರದಾಡುತ್ತಿದ್ದಾರೆ. ಸಮಸ್ಯೆ ವಿಕೋಪಕ್ಕೆ ತಿರುಗಿ ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.ಶಿರಸಂಗಿ, ಕಲ್ಲಾಪುರ ಮತ್ತು ಇನಾಂ ಗೋವನಕೊಪ್ಪ ಗ್ರಾಮಗಳಲ್ಲಿ 250ಕ್ಕೂ ಹೆಚ್ಚು ಮಂಗಗಳು ವಾಸವಾಗಿವೆ. ಈ ಊರುಗಳಲ್ಲಿ ಬಹುತೇಕ ಮಣ್ಣಿನ ಮೇಲ್ಚಾವಣಿ ಮತ್ತು ಮಣ್ಣಿನ ಮನೆಗಳಿವೆ. ಮನೆಯಿಂದ ಮನೆಗೆ ಜಿಗಿದಾಡಿ, ಓಡಾಡುತ್ತಿರುವ ಮಂಗಗಳಿಂದ ಮಣ್ಣು ಶಿಥಿಲಗೊಳ್ಳುತ್ತಿವೆ ಎಂಬುದು ಗ್ರಾಮಸ್ಥರ ಆತಂಕ.ಸಮಸ್ಯೆಗೆ ಪರಿಹಾರ ಸೂಚಿಸಬೇಕು. ಗ್ರಾಮಗಳಲ್ಲಿ ಬಿಡಾರ ಹೂಡಿರುವ ಮಂಗಗಳಿಂದ ರಕ್ಷಣೆ ನೀಡಬೇಕು. ಕರಿಮಂಗಗಳು ಓಡಾಡುವ ಜನರಿಗೂ ಕಿರುಕುಳ ನೀಡುತ್ತಿವೆ. ಮನೆಗಳ ಬಾಗಿಲು ತೆಗೆದಿಟ್ಟರೆ ಒಳಗೆ ನುಗ್ಗಿ ಸಾಮಗ್ರಿಗಳನ್ನು ಚೆಲ್ಲಾಪಿಲ್ಲಿ ಮಾಡಿ ಹಾಳುಗೆಡಹುತ್ತಿವೆ ಎಂದು ಎಂದು ಗ್ರಾಮಸ್ಥರು ದೂರಿದ್ದಾರೆ.ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗೆ ಮಂಗ–ಗಳ ಹಾವಳಿ ನಿಯಂತ್ರಿಸುವಂತೆ ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ. ಅವುಗಳಿಂದ ತೊಂದರೆ ನಿರಂತರವಾಗಿದೆ.ಮನೆಗಳ ಮೇಲ್ಛಾವಣಿ ಹಾಳಾಗುತ್ತಿದೆ. ಇನ್ನೊಂದೆಡೆ ಗ್ರಾಮಸ್ಥರಿಗೆ ರಕ್ಷಣೆ ಇಲ್ಲವಾಗಿದೆ. ಯಾವುದೇ ಸಂದರ್ಭದಲ್ಲಿಯೂ ಮಂಗಗಳು ದಾಳಿ ನಡೆಸುವ ಆತಂಕವಿದೆ ಎಂದೂ ಆಪಾದಿಸಿದ್ದಾರೆ.ಊರಿನ ಪಕ್ಕದಲ್ಲಿರುವ ಜಮೀನುಗಳ ರೈತರ ಸ್ಥಿತಿಯಂತೂ ಹೇಳತೀರದು. ಯಾವುದೇ ತರಹದ ಬೆಳೆ ಬೆಳೆದರೂ ಅದನ್ನು ನಾಶ ಮಾಡುವ ಮಂಗಗಳನ್ನು ಓಡಿಸುವುದೇ ಇಲ್ಲಿಯ ರೈತರ ಪ್ರತೀ ದಿನದ ಕೆಲಸವಾಗಿದೆ.ಕೆಲವು ವರ್ಷಗಳ ಹಿಂದೆ ಸುಮಾರು ಇಪ್ಪತ್ತು ಮೂವತ್ತರಷ್ಟು ಇದ್ದ ಮಂಗಗಳ ಸಂಖ್ಯೆ ಈಗ ಹತ್ತು ಪಟ್ಟು ಹೆಚ್ಚಾಗಿವೆ. ಆಗ ಮನುಷ್ಯರಿಗೆ ಹೆದರಿ ಓಡುತ್ತಿದ್ದವು. ಈಗ ಮನುಷ್ಯರನ್ನೇ ಹೆದರಿಸುತ್ತಿವೆ. ಇಲ್ಲಿಯ ಶ್ರೀ ಕಾಳಿಕಾ ದೇವಿ ದೇವಸ್ಥಾನಕ್ಕೆ ಆಗಮಿಸುವ ಪ್ರವಾಸಿಗರನ್ನು ಸಾಕಷ್ಟು ಬಾರಿ ಗಾಯಗೊಳಿಸಿವೆ. ದೇವಸ್ಥಾನಕ್ಕೆ ಭಕ್ತರು ತರುವ ಕಾಯಿ, ಹಣ್ಣುಗಳನ್ನು ಕಿತ್ತು ತಿನ್ನುತ್ತವೆ ಎಂದಿದ್ದಾರೆ.ಒಬ್ಬರೇ ಹೆಣ್ಣು ಮಕ್ಕಳು ಮನೆಯ ಹಿತ್ತಲುಗಳಲ್ಲಿ ಕೆಲಸ ಮಾಡುವಂ–ತಿಲ್ಲ. ಹಾಗೇನಾದರೂ ಮಾಡುತ್ತಿದ್ದರೆ ಹಿಂದಿನಿಂದ ಹತ್ತಾರು ಮಂಗಗಳು ಮೈಮೇಲೆ ಎರಗುತ್ತವೆ. ಗಾಯಗೊಳಿಸಿ ಪರಾರಿಯಾಗು–ತ್ತವೆ. ಇಂಥ ಘಟನೆ ನಡೆದಾಗಲೆಲ್ಲ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ಹೇಳುವರು.ಮಂಗಗಳ ನಿಯಂತ್ರಣಕ್ಕೆ ವಿಷಪ್ರಾಶನ ಮಾಡಿಸಲು ಪರಿಸರವಾದಿಗಳು, ಪ್ರಾಣಿ ದಯಾ ಸಂಘದವರು ಅವಕಾಶ ನೀಡುತ್ತಿಲ್ಲ. ವಿನಾಕಾರಣ ಮಾರಣ ಹೋಮ ನಡೆಸುವ ಬದಲಾಗಿದೆ ಬೇರೆ ಕಡೆ ಸ್ಥಳಾಂತರಿಸುವ ಪ್ರಯತ್ನ ಮಾಡಲು ಮನವಿ ಮಾಡುವುದಾಗಿ ಭರವಸೆ ನೀಡುವರು. ಇಲಾಖೆ ಸಿಬ್ಬಂದಿ ಮಂಗಗಳ ಹಾವಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಜನರೇ ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂಬ ಆತಂಕವೂ ಗ್ರಾಮಸ್ಥರಿಗೆ ಇದೆ.ಜನರಿಗೆ ದಿನನಿತ್ಯ ತೊಂದರೆ ನೀಡುವ ಮಂಗಗಳ ಹಾವಳಿ ತಪ್ಪಿಸಲು ಗ್ರಾಮ ಪಂಚಾಯಿತಿ ಮತ್ತು ಅರಣ್ಯ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಬೇಕು. ಮಂಗಗಳನ್ನು ಹಿಡಿಯಲು ಅಗತ್ಯ ವ್ಯವಸ್ಥೆ ಮಾಡಬೇಕು. ಪರಿಣಿತರಿಂದ ಮಂಗಗಳನ್ನು ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸುವ ಅಥವಾ ಕಾಡಿಗೆ ಬಿಡುವ ಕೆಲಸ ಮಾಡಬೇಕು. ಇಲ್ಲವಾದರೆ ಗ್ರಾಮಸ್ಥರೆಲ್ಲರೂ ಅರಣ್ಯ ಕಚೇರಿ ಯಲ್ಲಿ ಬಿಡಾರ ಹೂಡುವುದು ಅನಿವಾರ್ಯ ಆಗಲಿದೆ ಎಂದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.