ಮಂಗಗಳ ದಾಳಿಗೆ ಹೈರಾಣದ ನಗರ

7

ಮಂಗಗಳ ದಾಳಿಗೆ ಹೈರಾಣದ ನಗರ

Published:
Updated:

ಕಾರವಾರ: ಅದು ಮಧ್ಯಾಹ್ನದ ಹೊತ್ತು ಮನೆಯ ಮೇಲ್ಛಾವಣಿಗೆ ಬಳಸಿದ ಹಂಚುಗಳ ಮೇಲೆ ಯಾರೋ ನಡೆದಾಡಿದಂತಿತ್ತು. ಹಾಡಹಗಲೇ ಕಳ್ಳರು ಕನ್ನ ಹಾಕಲು ಬಂದರೆ ಎಂದು ಭಯಪಡುತ್ತಲೇ ಮನೆಯ ಹೊರಗೆ ಬಂದು ನೋಡಿದರೆ ಡಜನ್ ಮಂಗಗಳು ಒಂದು ಮನೆಯಿಂದ ಇನ್ನೊಂದು ಮನೆಗೆ ಹಾರುತ್ತ ಮುಂದೆ ಸಾಗುತ್ತಿದ್ದವು!ಇದು ನಗರದ 31 ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ಪುನರಾವರ್ತನೆ ಆಗುವ ಘಟನೆ. ಅಡಿಕೆ ತೋಟಗಳಲ್ಲಿ ಅಡಿಕೆ ತಿಂದು ಬೆಳೆಯನ್ನೇ ಹಾಳು ಮಾಡಿರುವ ಮಂಗಗಳ ಹಾವಳಿ ಈಗ ನಗರ ಪ್ರದೇಶಕ್ಕೂ ಹಬ್ಬಿದೆ. ನಗರದಲ್ಲಿ ಎಲ್ಲೆಂದರಲ್ಲಿ ಕಂಡುಬರುವ ಮಂಗಗಳು ಮನುಷ್ಯರ ಮೇಲೂ ದಾಳಿ ಮಾಡಲು ಆರಂಭಿಸಿವೆ.ನಗರದ ಕೋಡಿಬಾಗ, ಕಾಜುಬಾಗ, ಬಾಂಡಿಶಿಟ್ಟಾ, ಕಳಸವಾಡಾ, ಗುನಗಿವಾಡಾ, ಹಬ್ಬುವಾಡಾ, ನಂದನಗದ್ದಾ, ಸುಂಕೇರಿ ಹೀಗೆ ನಗರಸಭೆಯ 31 ವಾರ್ಡ್‌ಗಳಲ್ಲಿ ಮಂಗಗಳು ಗಿರಕಿ ಹೊಡೆಯುತ್ತಿವೆ. ಮಕ್ಕಳು, ಮರಿಗಳನ್ನು ಕಟ್ಟಿಕೊಂಡು ಓಡಾಡುತ್ತಿರುವ ಮಂಗಗಳ ಕುಟುಂಬ ನಗರದ ಜನರನ್ನು ಹೈರಾಣಾಗುವಂತೆ ಮಾಡಿದೆ.ಮನೆಯ ತಾರಸಿಯ ಮೇಲೆ ಹಾರಿ ದಡ್‌ಬಡ್ ಎಂದು ಶಬ್ದ ಮಾಡುತ್ತ ಹಾರುವ ಮಂಗಗಳು ಪಟಾಕಿ ಸದ್ದಿಗೂ ಬೆದರುತ್ತಿಲ್ಲ. ಬದಲಾಗಿ ಜನರನ್ನೇ ಗುರಾಯಿಸಿ ಹೆದರಿಕೊಂಡು ಅವರೇ ಓಡಿಹೋಗುವಂತ ಸನ್ನಿವೇಶವನ್ನು ಸೃಷ್ಟಿಸುತ್ತಿವೆ.ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ನಗರದ ಲಿಂಗನಾಯ್ಕ ವಾಡಾದಲ್ಲಿ ಮಂಗಗಳ ಮಾರು ಕಾರಬಾರು ಅಷ್ಟಿಷ್ಟಲ್ಲ. ತೆಂಗಿನ ಮರದಲ್ಲಿರುವ ಎಳೆಕಾಯಿಗಳನ್ನು ಸುಲಿದು ಅದರೊಳಗಿರುವ ಗಂಜಿ ತಿನ್ನುವುದರಿಂದ ತೆಂಗಿನಕಾಯಿ ಫಲ ಬರದೆ ಮನೆಯ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ. ಮನೆಯಲ್ಲಿ ತೆಂಗಿನಮರವಿದ್ದರೂ ಪಟ್ಟಣದಿಂದ ತೆಂಗಿನಕಾಯಿ ತಂದು ತಿನ್ನಬೇಕಾದ ಪರಿಸ್ಥಿತಿಯನ್ನು ಮಂಗಗಳು ನಿರ್ಮಾಣ ಮಾಡಿವೆ.`ಮಂಗಗಳ ಕಾಟ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ದಿನಬಿಟ್ಟು ದಿನ ಮಂಗಗಳು ನಮ್ಮ ಹಿತ್ತಲಿಗೆ ಬರುತ್ತವೆ. ಅವುಗಳಿಗೆ ಬೆದರಿಸಿ ನಾವು ಸುಸ್ತಾಗಿದ್ದೇವೆ. ಕೆಲ ದೊಡ್ಡ ಮಂಗಗಳಂತೂ ನಮ್ಮನ್ನು ದಿಟ್ಟಿಸಿ ನೋಡುವ ಪರಿ ಹೆದರಿಕೆ ಹುಟ್ಟಿಸುತ್ತದೆ' ಎನ್ನುತ್ತಾರೆ ಇಲ್ಲಿಯ ನಿವಾಸಿಗಳು.ಮಂಗಗಳು ಇಷ್ಟುದೊಡ್ಡ ಸಂಖ್ಯೆಯಲ್ಲಿ ಎಲ್ಲಿಂದ ಬಂದಿವೆ ಎನ್ನುವುದು ಯಾರಿಗೂ ತಿಳಿದಿಲ್ಲ. 'ಬಯಲುಸೀಮೆ ಭಾಗದಲ್ಲಿ ಮಂಗಗಳ ಹಾವಳಿ ಜಾಸ್ತಿಯಿದ್ದು ಅಲ್ಲಿಂದ ಹಿಡಿದು ಇಲ್ಲಿಯ ಅರಣ್ಯ ಪ್ರದೇಶದಲ್ಲಿ ಬಿಡಲಾಗುತ್ತಿದೆ ಎನ್ನುವ ಮಾಹಿತಿ ಇದೆ. ಇದು ಎಷ್ಟರ ಮಟ್ಟಿಗೆ ಸತ್ಯ ಎನ್ನುವುದು ಗೊತ್ತಿಲ್ಲ' ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.`ನಗರದಲ್ಲಿ ಮಂಗಗಳ ಕಾಟ ಜಾಸ್ತಿಯಾಗಿರುವುದು ಗಮನಕ್ಕೆ ಬಂದಿದೆ. ದೂರು ಬಂದ ಕಡೆಗೆ ಹೋಗಿ ಅವುಗಳ ಹಿಂಡನ್ನು ಅರಣ್ಯದತ್ತ ಓಡಿಸುವ ಕಾರ್ಯ ನಡೆಯುತ್ತಿದೆ. ಈಚೆಗೆ ಮಂಗವೊಂದನ್ನು ಹಿಡಿದು ಅಣಶಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ. ಇವುಗಳ ಹಾವಳಿ ನಿಯಂತ್ರಿಸುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗುವುದು' ಎಂದು ವಲಯ ಅರಣ್ಯ ಅಧಿಕಾರಿ ಮಂಜುನಾಥ `ಪ್ರಜಾವಾಣಿ'ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry