ಮಂಗಗಳ ಸಂಗ

7

ಮಂಗಗಳ ಸಂಗ

Published:
Updated:

ಒಬ್ಬ ರೈತನ ಮನೆಯ ಅಂಗಳದಂಚಿನಲ್ಲಿ ಬಂದು ದೊಡ್ಡ ಮಾವಿನ ಮರವಿತ್ತು. ಸೊಂಪಾಗಿ ಬೆಳೆದು ತಂಪಾದ ನೆರಳು ಕೊಡುತ್ತಿದ್ದ ಆ ಮರದ ಮೇಲೆ ನಾನಾ ತರಹದ ಹಕ್ಕಿಗಳು ಗೂಡು ಕಟ್ಟಿಕೊಂಡು ನೆಮ್ಮದಿಯಿಂದ ವಾಸಿಸುತ್ತಿದ್ದವು. ಅಳಿಲುಗಳು ಆರಾಮವಾಗಿ ಆಡುತ್ತಾ ಇರುತ್ತಿದ್ದವು. ಮರದ ಮೇಲೆ ಮನೆ ಮಾಡಿಕೊಂಡಿದ್ದ ಕೋಗಿಲೆಗಳು ಮಧುರವಾಗಿ ಹಾಡುತ್ತಾ ಇರುತ್ತಿದ್ದವು. ಮರಕ್ಕೆ ಹಬ್ಬಿಕೊಂಡಿದ್ದ ಮಲ್ಲಿಗೆ ಬಳ್ಳಿ ಸುಂದರವಾದ ಪರಿಮಳ ಬೀರುವ ಹೂಗಳನ್ನು ಬಿಟ್ಟು ಎಲ್ಲರಿಗೂ ಸಂತೋಷ ನೀಡುತ್ತಾ ಇತ್ತು. ರೈತ ತಾನೇ ಕೈಯಾರೆ ಆ ಮಾವಿನ ಸಸಿಯನ್ನು ನೆಟ್ಟು, ಪ್ರೀತಿಯಿಂದ ನೀರು ಗೊಬ್ಬರ ಕೊಟ್ಟು ಬೆಳೆಸಿದ್ದ. ಮರವು ಈಗ ದೊಡ್ಡದಾಗಿ ಮರದ ತುಂಬಾ ರುಚಿಯಾದ, ಸಿಹಿಸಿಹಿಯಾದ ದೊಡ್ಡ ಗಾತ್ರದ ಹಣ್ಣುಗಳನ್ನು ನೀಡುತ್ತಿತ್ತು. ಹಾಗಾಗಿ ರೈತ ಅದನ್ನು ತುಂಬಾ ಪ್ರೀತಿಯಿಂದ ಪೋಷಿಸಿಕೊಂಡು ಬರುತ್ತಿದ್ದ.ಒಂದು ದಿನ ಮಂಗಗಳ ಹಿಂಡೊಂದು ಆ ಮಾವಿನ ಮರದ ಬಳಿ ಬಂದು ಮರದ ಮೇಲೆ ವಾಸಿಸಲು ಆಶ್ರಯ ಕೇಳಿದವು. ಪಾಪದ ಮರ, ಹಿಂದೆ ಮುಂದೆ ಯೋಚಿಸದೇ ಹೂಂ ಅಂದುಬಿಟ್ಟಿತು. ಸರಿ, ಅಂದಿನಿಂದ ಆ ಮಂಗಗಳು ಮಾವಿನ ಮರದ ಮೇಲೆ ವಾಸಿಸಲು ಪ್ರಾರಂಭಿಸಿದವು. ಆದರೆ ಮಂಗಗಳು ತಮ್ಮ ಪಾಡಿಗೆ ತಾವು ಸುಮ್ಮನಿರಲಿಲ್ಲ. ಹಗಲಿನಲ್ಲಿ ಅಲ್ಲೇ ಸಮೀಪದಲ್ಲಿದ್ದ ರೈತನ ಬಾಳೆಯ ತೋಟಕ್ಕೆ ಹೋಗಿ ಬಾಳೆಕಾಯಿಗಳನ್ನೆಲ್ಲಾ ತಿಂದುಹಾಕಿ, ಮರಗಳನ್ನು ಮುರಿದು ಕೆಡವಿ ಹಾಳುಗೆಡವತೊಡಗಿದವು. ರೈತನ ಹಿತ್ತಲಿನಲ್ಲಿ ಬೆಳೆದ ತರಕಾರಿಗಳನ್ನು ಲೂಟಿ ಮಾಡಿ ಗಿಡಗಳನ್ನು ಹಾಳು ಮಾಡಿದವು. ರೈತನ ಹೆಂಡತಿ ಜೋಪಾನವಾಗಿ ಬೆಳೆಸಿದ್ದ ಹೂತೋಟದ ಗಿಡಗಳ ಚಿಗುರೆಲೆಗಳನ್ನು ಹರಿದು ತಿಂದು ತೋಟವನ್ನು ಸರ್ವನಾಶ ಮಾಡಿದವು. ರೈತನ ಮನೆಯ ಮೇಲೆ ಹತ್ತಿ, ಹಾರಿ ಕುಣಿದು ಮಾಡಿನ ಹಂಚುಗಳನ್ನೆಲ್ಲಾ ಒಡೆದು ಹಾಕತೊಡಗಿದವು.ಈ ಮಂಗಗಳ ಕಾಟದಿಂದ ರೈತ ಕಂಗಾಲಾಗಿಹೋದ. ಮಂಗಗಳ ಹಾವಳಿಯಿಂದ ತೋಟದ ಬೆಳೆಯೊಂದೂ ಕೈಗೆ ಸಿಕ್ಕದೆ ಅಪಾರ ನಷ್ಟ ಅನುಭವಿಸಿದ ಆತ ಎಷ್ಟೇ ಪ್ರಯತ್ನಿಸಿದರೂ ಈ ಮಂಗಗಳನ್ನು ನಿಯಂತ್ರಿಸಲಾಗಲಿಲ್ಲ. ಯಾವುದಕ್ಕೂ ಹೆದರದ ಈ ಮಂಗಗಳನ್ನು ಹೇಗೆ ಓಡಿಸಬೇಕೆಂದು ತಿಳಿಯದೆ ಆತ ತಲೆ ಮೇಲೆ ಕೈಹೊತ್ತುಕೊಂಡು ಕುಳಿತ. ರೈತನ ಪರಿಸ್ಥಿತಿ ನೋಡಿ ಮಾವಿನ ಮರಕ್ಕೆ ತುಂಬಾ ಬೇಸರವಾಯಿತು. ರೈತನ ಬೆಳೆಗಳಿಗೆ ಯಾವುದೇ ತೊಂದರೆ ಕೊಡದೆ ಸುಮ್ಮನಿರಿ ಎಂದು ಅದು ಮಂಗಗಳಿಗೆ ಬುದ್ಧಿ ಹೇಳಿತು. ಆದರೆ ದುಷ್ಟ ಮಂಗಗಳು ತಮಗೆ ಆಶ್ರಯ ಕೊಟ್ಟ ಮಾವಿನ ಮರದ ಮಾತನ್ನೇ ಕೇಳಲಿಲ್ಲ. ಬದಲಿಗೆ ಮಾವಿನ ಮರದ ಎಳೆ ಚಿಗುರುಗಳನ್ನೇ ಹರಿದು ಹರಿದು ತಿನ್ನುತ್ತಾ ಮರಕ್ಕೆ ನೋವನ್ನುಂಟು ಮಾಡಿದವು. ಕೊಂಬೆಗಳ ಮೇಲೆ ಮನಬಂದಂತೆ ಹತ್ತಿ ಹಾರಿ ರೆಂಬೆಗಳನ್ನು ಮುರಿದು ಮರವನ್ನು ಗಾಯಗೊಳಿಸಿದವು. ಮರದಲ್ಲಿದ್ದ ಎಳೆಯ ಹೀಚುಗಾಯಿಗಳನ್ನೇ ಉದುರಿಸಿ ಹಾಕಿ ಹಣ್ಣೇ ಸಿಗದಂತೆ ಮಾಡಿದವು. ಯಾಕಾದರೂ ಈ ಕೆಟ್ಟ ಕೋತಿಗಳಿಗೆ ತಾನು ಆಶ್ರಯ ನೀಡಿದೆನಪ್ಪಾ ಎಂದು ಮರ ಈಗ ಮರುಗತೊಡಗಿತು.ಒಂದು ದಿನ ರೈತ ಮನೆಗೆ ಬಂದ ಗೆಳೆಯನ ಬಳಿ ತಾನು ಮಂಗಗಳಿಂದ ಅನುಭವಿಸುತ್ತಿರುವ ಕಷ್ಟವನ್ನು ಹೇಳಿಕೊಂಡ. ಮನೆಯ ಸುತ್ತ ಮುತ್ತ ನೋಡಿ ಪರೀಕ್ಷಿಸಿದ ಗೆಳೆಯ: `ಅಂಗಳದಲ್ಲಿ ಮನೆ-ತೋಟಕ್ಕೆ ಸಮೀಪವಾಗಿ ಈ ದೊಡ್ಡ ಮಾವಿನ ಮರ ಇರುವುದರಿಂದಲೇ ನಿನಗೆ ಮಂಗಗಳ ಕಾಟ ಶುರುವಾಗಿದೆ. ಈ ಮರವನ್ನು ಕಡಿದು ಹಾಕಿ ಬಿಡು. ಆಗ ಈ ಮಂಗಗಳು ಇರಲು ಜಾಗವಿಲ್ಲದೇ ದೂರ ಹೊರಟು ಹೋಗುತ್ತವೆ~ ಎಂದು ಸಲಹೆ ನೀಡಿದ. ರೈತನಿಗೂ ಗೆಳೆಯನ ಸಲಹೆ ಸರಿಯೆನಿಸಿತು. ಇಷ್ಟು ಒಳ್ಳೆಯ ಹಣ್ಣುಗಳನ್ನು ನೀಡುವ ತನ್ನ ಪ್ರೀತಿಯ ಮಾವಿನ ಮರವನ್ನು ಮನಸ್ಸಿಲ್ಲದ ಮನಸ್ಸಿನಿಂದ ಒಂದು ದಿನ ಕಡಿಸಿಹಾಕಿಬಿಟ್ಟ.ಪಾಪ... ತಾನು ಒಳ್ಳೆಯವನೇ ಆಗಿದ್ದರೂ, ದುಷ್ಟ ಮಂಗಗಳಿಗೆ ಆಶ್ರಯ ಕೊಟ್ಟ ತಪ್ಪಿಗೆ ಮಾವಿನ ಮರ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾಯಿತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry