ಮಂಗಣ್ಣನ ಫೋಟೊಗ್ರಫಿ

ಶನಿವಾರ, ಜೂಲೈ 20, 2019
28 °C

ಮಂಗಣ್ಣನ ಫೋಟೊಗ್ರಫಿ

Published:
Updated:

ಶಾಲಾ ಮಕ್ಕಳಿಗೆ ಬೇಸಿಗೆ ರಜ ದಿನಗಳು ಬಂದಿದ್ದವು. ನಗರದಿಂದ ಹಳ್ಳಿಗೆ ಮೊಮ್ಮಕ್ಕಳು ಬಂದಿದ್ದರು. ಅವತ್ತು ಬಿಸಿಲು - ಮಳೆ ಇದ್ದುದರಿಂದ ಆಕಾಶದಲ್ಲಿ ಕಾಮನಬಿಲ್ಲು ಮೂಡಿತ್ತು.`ತಾತ, ತಾತ ಒಂದು ಕಥೆ ಹೇಳಿ' ಎಂದು ಮೊಮ್ಮಕ್ಕಳು ನನಗೆ ಘೇರಾವ್ ಮಾಡಿದ್ದರು.ಯಾವ ಕಥೆ ಹೇಳಲಿ ಎಂದು ಯೋಚಿಸುತ್ತಾ ತಲೆ ಕೆರ‌್ಕೊಂಡು ಆಕಾಶ ನೋಡಿದೆ. `ನೋಡಿ ಅಲ್ಲಿ ಕಾಮನಬಿಲ್ಲು, ಬಿಸಿಲು ಮಳೆ ಇದ್ದಾಗ ಕಾಮನಬಿಲ್ಲು ಆಕಾಶವೆಂಬ ಪರದೆ ಮೇಲೆ ಮೂಡಿಬರುತ್ತೆ. ಆ ಶುಭ ಕಾಲದಲ್ಲಿ ಕಾಗೆ - ನರಿ ಮದುವೆ ಅಂತ ಅನಾದಿಕಾಲದಿಂದಲೂ ನಮ್ಮ ಪೂರ್ವಜರು ಕಥೆ ಹೇಳಿಕೊಂಡು ಬಂದಿದ್ದಾರೆ.ಆ ಕಥೆ ಸ್ವಲ್ಪ ಬದಲಿಸಿ ಹೇಳ್ತೀನಿ ಕೇಳಿ'. ಹೀಗೇ ಒಮ್ಮೆ ಸಕಾಲದಲ್ಲಿ ಕಾಡಿನಲ್ಲಿ ಕಾಗೆಗೂ ನರಿಗೂ ಮದುವೆ ಏರ್ಪಾಟು ಆಯ್ತಂತೆ. ಆ ಮದುವೇಲಿ ಕರಡಿ ಕುಣಿತ ಇತ್ತು. ನವಿಲುಗಳು ಸಂತೋಷದಿಂದ ನರ್ತನ ಮಾಡಿದವು. ಕೋಗಿಲೆಯ ಇಂಪಾದ ಗಾಯನಕ್ಕೆ ಎಲ್ಲ ಕಿವಿಗೊಟ್ಟು ತಲೆದೂಗಿದವು.ಮಂಗಗಳು ಮಾವಿನ ಮರ ಹತ್ತಿ ಸಿಹಿ ಮಾವಿನ ಹಣ್ಣು ಕಿತ್ತು ಎಲ್ಲರಿಗೂ ಹಂಚಿದವು.`ನಾನು ಮದುವೆ ಫೋಟೊ ಚೆನ್ನಾಗಿ ತೆಗೀತೀನಿ ನೋಡ್ರೋ' ಅಂತ ತಾನು ನಗರದಿಂದ ಲಪಟಾಯಿಸಿ ತಂದಿದ್ದ ಒಂದು ಹಳೇ ಕ್ಯಾಮೆರಾನ ನಮ್ಮ ಮಂಗಣ್ಣ ಎಲ್ಲರಿಗೂ ತೋರಿಸುತ್ತಾ ನಿಂತ.ಫೋಟೊ ತೆಗೆಸಿಕೊಳ್ಳಲು ಎಲ್ಲಾ ಉತ್ಸಾಹದಿಂದ ಬಂದರು. ಕಾಗೆ-ನರಿಯನ್ನು, ಸಿಂಗರಿಸಿ ಮಂಟಪದಲ್ಲಿ ಕೂರಿಸಿದರು. ಅದರ ಸುತ್ತಾ ಕಾಡಿನ ಗೆಳೆಯರು ಹಲ್ಲು ಕಿಸಿದು, ಬಾಲ ಮುದುರಿ ಕೂತರು. ಮಂಗಣ್ಣ `ಟಕ್' ಅಂತ ಫೋಟೊ ತೆಗೆದ. `ಈಗ ಬನ್ರಪೋ ಫೋಟೊ ತೋರಿಸ್ತೀನಿ' ಎಂದು ಕ್ಯಾಮೆರಾ ಬಿಚ್ಚಿದ.ಅರೆರೇ, ಅದರಲ್ಲಿ ಫಿಲಮ್ಮೇ ಹಾಕಿರಲಿಲ್ಲ! `ಯಡವಟ್ಟಾಯ್ತಲ್ಲ' ಎಂದು ಹಲ್ಲು ಕಿಸಿದು ಮಂಗಣ್ಣ ಜಿಗಿದು ಮರ ಏರಿದ, ಕಥೆ ಕಾಡಿಗ್ಹೋಯ್ತು! `ಹೋ' ಎಂದು ಕತೆ ಕೇಳಿದ ಮಕ್ಕಳು ನಗುಮುಖದಿಂದ ಚಪ್ಪಾಳೆ ಹೊಡೆದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry