ಮಂಗನಕಾಯಿಲೆ: ಶಾಶ್ವತ ಪರಿಹಾರಕ್ಕೆ ಆಗ್ರಹ

7

ಮಂಗನಕಾಯಿಲೆ: ಶಾಶ್ವತ ಪರಿಹಾರಕ್ಕೆ ಆಗ್ರಹ

Published:
Updated:

ಶಿವಮೊಗ್ಗ: ಹಲವು ವರ್ಷಗಳಿಂದ ಮಲೆನಾಡಿನ ಜನರನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಂಗನಕಾಯಿಲೆ (ಕೆಎಫ್‌ಡಿ- ಕ್ಯಾಸನೂರು ಕಾಡಿನ ಕಾಯಿಲೆ) ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಪಕ್ಷಾತೀತವಾಗಿ ಸೋಮವಾರ ಸಾಮಾನ್ಯಸಭೆಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.20 ವರ್ಷಗಳ ಹಿಂದೆ ಕಾಣಿಸಿಕೊಂಡ ಮಂಗನಕಾಯಿಲೆ, ಸತತ ಮೂರು ವರ್ಷಗಳಿಂದ ತೀರ್ಥಹಳ್ಳಿ, ಹೊಸನಗರಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುತ್ತಿದೆ. ರೋಗ ಉಲ್ಬಣಗೊಂಡು ಪ್ರತಿವರ್ಷವೂ ಜನ ಸಾಯುತ್ತಿದ್ದಾರೆ. ಇಷ್ಟಾದರೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಕೈಗೊಂಡಿಲ್ಲ ಎಂದು ಸದಸ್ಯರಾದ ಕಲಗೋಡು ರತ್ನಾಕರ, ಹಾರೋಗುಳಿಗೆ ಪದ್ಮನಾಭ್, ಬಿ.ಎಸ್. ಯಲ್ಲಪ್ಪ ಆಕ್ರೋಶ ವ್ಯಕ್ತಪಡಿಸಿದರು.ಈ ಸಂಬಂಧ ಕೆಲಭಾಗಗಳಿಗೆ ಭೇಟಿ ನೀಡಿದಾಗ ವೈದ್ಯರು ಹಾಗೂ ಸಿಬ್ಬಂದಿಗಳ ಕೊರತೆ ಕಂಡುಬರುತ್ತಿದೆ. ವಾಹನ ಹಾಗೂ ಇಂಧನದ ಕೊರತೆ ಕಂಡುಬಂದಿದೆ. ಕೂಡಲೇ, ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ತೀರ್ಥಹಳ್ಳಿಯ ಹುಂಚದಕಟ್ಟೆ, ಯೋಗಿಮಳಲಿ, ದೇಮ್ಲಾಪುರ ಹಾಗೂ ಹೊಸನಗರದ ದೋಬೈಲು, ಮಸ್ಕಾನೆ, ಹೆಬ್ಬಳ್ಳಿ, ಹಿರೇಸನಿ, ವಾಟೆಸರ, ಬೆಳ್ಳೂರು ಮತ್ತಿತರ ಕಡೆಗಳಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡಿದೆ. ಜನ ಆತಂಕಗೊಂಡಿದ್ದು, ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಿ, ಅವರಲ್ಲಿ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.ಈ ಕಾಯಿಲೆಯಿಂದ ಇಬ್ಬರು ಮೃತಪಟ್ಟಿದ್ದು, ಈ ಸ್ಥಳಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಭೇಟಿ ನೀಡಿಲ್ಲ. ಅಲ್ಲದೇ, ಈ ತುರ್ತು ಸಂದರ್ಭದಲ್ಲಿ ಚಿಕಿತ್ಸೆ ನೀಡಬೇಕಾದ ಯೋಗಿಮಳಲಿ ಆರೋಗ್ಯ ಕೇಂದ್ರ ಭಾನುವಾರ ಬಾಗಿಲು ಮುಚ್ಚಿದ್ದು, ಸಂಬಂಧಪಟ್ಟ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಲಗೋಡು ರತ್ನಾಕರ ಒತ್ತಾಯಿಸಿದರು.ತಕ್ಷಣ ಪ್ರತಿಕ್ರಿಯಿಸಿದ ಅಧ್ಯಕ್ಷರಾದ ಶುಭಾ ಕೃಷ್ಣಮೂರ್ತಿ, ಸ್ಥಳಕ್ಕೆ ತೆರಳಲು ತಾವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚಿಸಿರುವುದಾಗಿ ತಿಳಿಸಿದರು.ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚನ್ನಬಸಪ್ಪ, ಈ ರೋಗದಿಂದ ಒಬ್ಬರು ಮೃತಪಟ್ಟಿದ್ದು, ಇನ್ನೊಬ್ಬರು ಮಂಗನಕಾಯಿಲೆ (ಕೆಎಫ್‌ಡಿ)ಯಿಂದ ಮೃತಪಟ್ಟಿರುವುದು ದೃಢವಾಗಿಲ್ಲ. ಆರು ಕೆಎಫ್‌ಡಿ ಪ್ರಕರಣಗಳು ಈಗಾಗಲೇ ವರದಿಯಾಗಿವೆ. ಇವುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಕಾಣಿಸಿಕೊಂಡ ಪ್ರದೇಶಗಳಲ್ಲಿ ಜ್ವರ ಸಮೀಕ್ಷೆ ನಡೆದಿದೆ. ತೀರ್ಥಹಳ್ಳಿ ಆಸ್ಪತ್ರೆಯಲ್ಲಿ ಕೆಎಫ್‌ಡಿ ವಾರ್ಡ್‌ನ್ನೇ ತೆರೆಯಲಾಗಿದೆ. ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಿದ್ದು, ಜ್ವರ ಪ್ರಕರಣಗಳನ್ನು ದಾಖಲು ಮಾಡಿಕೊಂಡು ರಕ್ತಪರೀಕ್ಷೆ ನಡೆಸುವಂತೆ ತಿಳಿಸಲಾಗಿದೆ ಎಂದು ವಿವರಿಸಿದರು.ಮಂಗಳವಾರದಿಂದ ರೋಗಿಗಳಿಗೆ ಲಸಿಕೆ ನೀಡಲಾಗುತ್ತದೆ. ಈ ಲಸಿಕೆಗಳನ್ನು ತರಲು ಕೆಎಫ್‌ಡಿ ಉಪ ನಿರ್ದೇಶಕರು ವಾಹನದಲ್ಲಿ ಬೆಂಗಳೂರು ಸಮೀಪದ ಹೆಬ್ಬಾಳ ಮಂಗನಕಾಯಿಲೆ ಸಂಶೋಧನಾ ಕೇಂದ್ರಕ್ಕೆ ತೆರಳಿದ್ದಾರೆ ಎಂದರು.ಈ ಸಂದರ್ಭದಲ್ಲಿ ಮಾತನಾಡಿದ ಹಾರೋಗುಳಿಗೆ ಪದ್ಮನಾಭ್, ಕೃಷ್ಣೇಗೌಡ, ಸುಮಂಗಲಾ, ಲಲಿತಾ ನಾರಾಯಣ, ರಕ್ತದ ಮಾದರಿ ಪರೀಕ್ಷೆಯಾಗಿ ವರದಿ ಬರುವುದು ತಡವೇಕೆ ಎಂದು ಪ್ರಶ್ನಿಸಿದರು.ಈ ರಕ್ತವನ್ನು ಇಲಿಯ ಮೇಲೆ ಪ್ರಯೋಗ ಮಾಡಬೇಕು; ಹಾಗಾಗಿ, ತಡವಾಗುತ್ತಿದೆ. ಇನ್ನು ಮುಂದೆ ಕೇವಲ 24 ಗಂಟೆ ಒಳಗೆ ವರದಿ ಪಡೆಯುವ ವೈರಸ್ ಸಂಶೋಧನಾ ಘಟಕದಲ್ಲಿ ನಗರದಲ್ಲಿ ಆರಂಭವಾಗಲಿದೆ. ಇದೇ 14ರಂದು ಇದಕ್ಕೆ ಸಂಬಂಧಿಸಿದ ವಿಜ್ಞಾನಿಗಳು ಆಗಮಿಸಿ, ಪರಿಶೀಲಿಸಲಿದ್ದಾರೆ ಎಂದು ಡಿಎಚ್‌ಒ ಸ್ಪಷ್ಟನೆ ನೀಡಿದರು.ಈ ಹಿಂದೆ ಶಿವಮೊಗ್ಗದಲ್ಲಿ ಈ ಕಾಯಿಲೆಯ ಲಸಿಕಾ ಉತ್ಪಾದನಾ ಕೇಂದ್ರ ಇತ್ತು. ಆದರೆ, ಇದು ಸೂಕ್ಷ್ಮ ಕೆಲಸವಾಗಿದ್ದು, ಮುಂಜಾಗ್ರತೆಯಿಂದ ಉತ್ಪಾದಿಸಬೇಕಿದೆ. ಈ ನಿಟ್ಟಿನಲ್ಲಿ 2000ರಲ್ಲೇ ಈ ಕೇಂದ್ರವನ್ನು ಹೆಬ್ಬಾಳ್‌ಗೆ ವರ್ಗಾಯಿಸಲಾಗಿದೆ ಎಂದರು.ಈ ಕಾಯಿಲೆ ಮಂಗಗಳಿಂದ ಹರಡುವುದರಿಂದ ಕಾಡಿನಲ್ಲಿ ಮೃತಪಟ್ಟ ಮಂಗಗಳನ್ನು ಹೂಳುವ ವ್ಯವಸ್ಥೆಯಾಗಬೇಕು ಎಂದು ಡಾ.ಚನ್ನಬಸಪ್ಪ ತಿಳಿಸಿದಾಗ, ಈ ಬಗ್ಗೆ ಅರಣ್ಯ ಇಲಾಖೆಗೆ ಸೂಚನೆ ಕಳುಹಿಸುವುದಾಗಿ ಸಿಇಒ ಡಾ.ಸಂಜಯ್ ಬಿಜ್ಜೂರ್ ಹೇಳಿದರಲ್ಲದೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ, ಪಶುವೈದ್ಯ ಇಲಾಖೆ, ಅಧಿಕಾರಿಗಳ ತುರ್ತುಸಭೆ ಕರೆದು ಮುಂಜಾಗ್ರತಾ ಕ್ರಮಗಳನ್ನು ಕೂಡಲೆ ಕೈಗೊಳ್ಳುವುದಾಗಿ ಹೇಳಿದರು. ರೋಗದ ಹತೋಟಿಯ ಬಗ್ಗೆ ಶಾಶ್ವತ ವ್ಯವಸ್ಥೆ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದೆಂದು ಹೇಳಿದರು.ಜಿಲ್ಲೆಗೆ ರಸ್ತೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಹೆಚ್ಚುವರಿ ಅನುದಾನ ಕಲ್ಪಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಿಗೆ ಪ್ರಸ್ತಾವ ಕಳುಹಿಸುವ ನಿರ್ಣಯ ಕೈಗೊಳ್ಳಲಾಯಿತು.

ಅಧ್ಯಕ್ಷರು, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದರು.ಸಭೆಯಲ್ಲಿ ಉಪಾಧ್ಯಕ್ಷ ಎಚ್. ಗಂಗಾಧರಪ್ಪ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry