ಮಂಗನ ಪುಂಡಾಟ: ಕಂಗೆಟ್ಟ ಚಾಲಕರು

5

ಮಂಗನ ಪುಂಡಾಟ: ಕಂಗೆಟ್ಟ ಚಾಲಕರು

Published:
Updated:

ಹುಬ್ಬಳ್ಳಿ: ಕುಂದಗೋಳ-ಶಿರಹಟ್ಟಿ ರಸ್ತೆಯ ಗುಲಗಂಜಿ ಕೊಪ್ಪದ ಬಳಿ ಬೀಡುಬಿಟ್ಟಿರುವ ಮಂಗವೊಂದು ಪದೇ ಪದೇ ನಡೆಸುತ್ತಿರುವ ದಾಳಿಯಿಂದಾಗಿ ವಾಹನ ಸವಾರರು ಕಂಗೆಟ್ಟಿದ್ದಾರೆ.ಮೂರು ಗಂಡು ಹಾಗೂ ಏಳು ಹೆಣ್ಣು ಕೋತಿಗಳ ತಂಡ ಈ ಪ್ರದೇಶದಲ್ಲಿ ಗುಂಪಾಗಿ ಸಂಚರಿಸುತ್ತಿದೆ. ಆ ತಂಡದಲ್ಲಿನ ಮಂಗವೊಂದು ವಾಹನ ಸವಾರರನ್ನು ಕಂಡರೆ ಮುಗಿಬೀಳುತ್ತಿದೆ. ವಿಶೇಷವೆಂದರೆ ಚಾಲಕರ ಸೀಟಿನಲ್ಲಿ ಕುಳಿತವರೇ ಹೆಚ್ಚಾಗಿ ಮಂಗನ ದಾಳಿಗೆ ಸಿಲುಕುತ್ತಿದ್ದಾರೆ.ಮಂಗನ ಈ ಪುಂಡಾಟದಿಂದಾಗಿ ಈ ರಸ್ತೆಯಲ್ಲಿ ಪ್ರಯಾಣಿಸುವುದು ವಾಹನ ಚಾಲಕರಿಗೆ ತಲೆನೋವಾಗಿ ಪರಿಣಮಿಸಿದೆ. ಕಳೆದ ಮೂರು ತಿಂಗಳಲ್ಲಿ ಮಂಗ ಕಚ್ಚಿ 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಬಹುತೇಕರು ಶಿರಹಟ್ಟಿ, ಕುಂದಗೋಳ ಹಾಗೂ ಹುಬ್ಬಳ್ಳಿಯ ಕಿಮ್ಸನಲ್ಲಿ ಚಿಕಿತ್ಸೆ ಪಡೆದಿದ್ದಾರೆ.ಮುನ್ನೆಚ್ಚರಿಕೆ: ಕುಂದಗೋಳದಿಂದ ಶಿರಹಟ್ಟಿಗೆ ಸಂಚರಿಸುವ ವಾಹನಗಳನ್ನು ಗುಲಗಂಜಿಕೊಪ್ಪ ಸಮೀಪದ ಎಂಜಿನಿಯರಿಂಗ್ ಕಾಲೇಜು ಬಳಿಯೇ ನಿಲ್ಲಿಸಿ ಮಂಗದ ಹಾವಳಿಯ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ನೀಡುವ ಪರಿಸ್ಥಿತಿ ತಲೆದೋರಿದೆ. ಮಂಗನ ದಾಳಿಯಿಂದ ತಪ್ಪಿಸಿಕೊಳ್ಳಲು ವಾಹನದ ಕಿಟಕಿ ಬಂದ್ ಮಾಡಿಕೊಂಡು ಹೋಗುವಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗುತ್ತಿದೆ.ಕಾರು, ಬಸ್ಸು, ಲಾರಿ ಚಾಲಕರು ಕಿಟಕಿ ಗಾಜು ಬಂದ್ ಮಾಡಿಕೊಂಡು ಮಂಗನ ಸಂಭವನೀಯ ದಾಳಿಯಿಂದ ತಪ್ಪಿಸಿಕೊಳ್ಳುತ್ತಾರೆ. ಆದರೆ ದ್ವಿಚಕ್ರವಾಹನ ಸವಾರರು ಹಾಗೂ ಟ್ರ್ಯಾಕ್ಟರ್ ಚಾಲಕರ ಮೇಲೆ ದಾಳಿ ಮುಂದುವರಿದಿದೆ.ಗುಲಗಂಜಿಕೊಪ್ಪ ಸಮೀಪದ ತೆಂಗಿನ ತೋಟದಲ್ಲಿ ಉಳುಮೆ ಮಾಡುತ್ತಿದ್ದ ಶಿರಹಟ್ಟಿಯ ಮಹಾಂತೇಶ ಬಳಗಾನೂರ ಮೇಲೆ ದಾಳಿ ನಡೆಸಿರುವ ಮಂಗ ಅವರ ಪಕ್ಕೆಲುಬು ಹರಿದು ಗಾಯ ಮಾಡಿದೆ. ಶಿರಹಟ್ಟಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಹಾಂತೇಶ ಅವರನ್ನು ಪೋಷಕರು ಹುಬ್ಬಳ್ಳಿ ಆಸ್ಪತ್ರೆಗೆ ಕರೆ ತಂದಿದ್ದರು. ಪಕ್ಕೆಲುಬಿಗೆ 9 ಹೊಲಿಗೆ ಹಾಕಲಾಗಿದೆ.

 

`ನಂಗೆ ಮೋಸ ಆತ್ರಿ, ಮಂಗನ ಹಾವಳಿ ಇದೆ ಎಂದು ಸಾಕಷ್ಟು ಮುಂಜಾಗರೂಕತೆ ಕೈಗೊಂಡಿದ್ದೆ. ಹೊಲದಲ್ಲಿ ಟ್ರ್ಯಾಕ್ಟರ್ ರಿವರ್ಸ್ ತೆಗೆದುಕೊಳ್ಳಲು ಹಿಂದಕ್ಕೆ ತಿರುಗಿದ್ದ ವೇಳೆ ನನ್ನ ಮೇಲೆ ದಾಳಿ ಮಾಡಿ ಗಾಯಗೊಳಿಸಿತು~ ಎಂದು ಮಹಾಂತೇಶ್ ಪ್ರಜಾವಾಣಿಗೆ ಪ್ರತಿಕ್ರಿಯಿಸಿದರು.ಇದೇ ಮಂಗಗಳ ಗುಂಪು ಕುಂದಗೋಳ ತಾಲ್ಲೂಕು ಸಂಕ್ಲೀಪುರ ಭಾಗದಲ್ಲಿ ತೀವ್ರ ಹಾವಳಿ ಇಟ್ಟಿತ್ತು. ಅಲ್ಲಿಯ ಜನರು ಅರಣ್ಯ ಇಲಾಖೆಗೆ ದೂರು ಕೊಟ್ಟಾಗ ಈ ಭಾಗಕ್ಕೆ ಓಡಿಸಲಾಯಿತು ಎನ್ನುತ್ತಾರೆ ಶಿರಹಟ್ಟಿ ತಾಲ್ಲೂಕು ರಾಮಗಿರಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ದೊಡ್ಡಮನಿ.ಮಂಗಗಳ ಹಾವಳಿ ತಪ್ಪಿಸುವಂತೆ ನಾವೂ ಅರಣ್ಯ ಇಲಾಖೆಗೆ ದೂರು ನೀಡಿದ್ದೇವೆ ಎಂದು ದೊಡ್ಡಮನಿ ಹೇಳುತ್ತಾರೆ.  ಪುಂಡಾಟ ನಡೆಸುತ್ತಿರುವ ಮಂಗ ಅಥವಾ ಅದರ ಮರಿಗೆ ಯಾರೋ ವಾಹನ ಹರಿಸಿ ಗಾಯಗೊಳಿಸಿರಬಹುದು ಅದೇ ಕಾರಣಕ್ಕೆ ಅದು ಹೆಚ್ಚಾಗಿ  ಚಾಲಕರ ಮೇಲೆ ದಾಳಿ ಮಾಡುತ್ತಿದೆ ಎನ್ನುತ್ತಾರೆ ಹುಬ್ಬಳ್ಳಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಎಂ.ಪತ್ತಾರ.`ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿವೆ. ಗದಗ ವಲಯ ಅರಣ್ಯಾಧಿಕಾರಿಯೊಂದಿಗೆ ತಾವು ಸಂಪರ್ಕದಲ್ಲಿದ್ದು, ಮಂಗ ಹಿಡಿಯಲು ಬಾದಾಮಿ ತಾಲ್ಲೂಕಿನ ಚೊಳಚಗುಡ್ಡದಿಂದ ಮಂಗ ಹಿಡಿಯುವವರನ್ನು ಕರೆಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಶೀಘ್ರ ಅದರ ಹಾವಳಿಗೆ ಅಂತ್ಯ ಹಾಡಲಿದ್ದೇವೆ ಎಂದು ಹೇಳುತ್ತಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry