ಮಂಗಳವಾರ, ಮೇ 17, 2022
24 °C

ಮಂಗಳನ ಅಂಗಳದಿ ಜೀವಪೋಷಕ ಉಷ್ಣತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮಂಗಳ ಗ್ರಹದಲ್ಲಿ ಹಿಂದೊಮ್ಮೆ ದಿನಕ್ಕೆ ಕೆಲವು ಗಂಟೆಗಳ ಕಾಲವಾದರೂ ಭೂಮಿಯದನ್ನೇ ಹೋಲುವ ವಾತಾವರಣ ಇದ್ದಿರಬಹುದೆಂಬುದಕ್ಕೆ ವಿಜ್ಞಾನಿಗಳು ಪುರಾವೆ ಪತ್ತೆಹಚ್ಚಿದ್ದಾರೆ. ಶತಕೋಟಿ ವರ್ಷಗಳ ಹಿಂದೆ ಈ ಗ್ರಹದಲ್ಲಿ ಜೀವಿಗಳು ಇದ್ದಿರಬಹುದಾದ ಸಂಭಾವ್ಯತೆಯೂ ಇದರೊಂದಿಗೆ ಹೆಚ್ಚಾಗಿದೆ.

3ಮಂಗಳ ಗ್ರಹದ ಧೂಮಕೇತುವೊಂದರ ಖನಿಜಾಂಶಗಳ ವಿಶ್ಲೇಷಣೆ ಹೊಸ ಸಾಕ್ಷ್ಯ ಒದಗಿಸಿದೆ. ಈ ಗ್ರಹದಲ್ಲಿ ಹಿಂದೊಮ್ಮೆ ಅತಿ ತಂಪೂ ಅಲ್ಲದ, ಅತ್ಯುಷ್ಣತೆಯೂ ಇಲ್ಲದ ಹಿತಕರ ವಾತಾವರಣ ಇತ್ತೆಂಬುದನ್ನು ಸಂಶೋಧನೆ ಪುಷ್ಟೀಕರಿಸಿದೆ. ಧೂಮಕೇತುವಿನ ಈ ಖನಿಜಾಂಶಗಳು 18 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ರೂಪುಗೊಂಡಿವೆ ಎಂಬುದು ಪ್ರಯೋಗಗಳಿಂದ ತಿಳಿದುಬಂದಿದೆ. ಅಂದರೆ, ಇದು ಜೀವಿಗಳ ಪೋಷಣೆಗೆ ಸೂಕ್ತವಾದ ತಾಪಮಾನವಾಗಿದೆ. ಆದರೆ ಈ ಹಿತಕರ ವಾತಾವರಣ ಕೇವಲ ತಾತ್ಕಾಲಿಕವಾಗಿತ್ತೋ ಅಥವಾ ನಿರಂತರವಾಗಿ ನೆಲೆಸಿತ್ತೋ ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ ಎಂದು ಕ್ಯಾಲಿಫೋರ್ನಿಯಾ ವಿ.ವಿ. ಸಂಶೋಧಕ ವುಡಿ ಫಿಶ್ಚರ್ ವಿವರಿಸಿದ್ದಾರೆ.

ಮಂಗಳ ಗ್ರಹದ ತಾಪಮಾನದ ಬಗ್ಗೆ ಲಭ್ಯವಾಗಿರುವ ಈ ಸಾಕ್ಷ್ಯ ಅತ್ಯಂತ ಮಹತ್ವಾದ್ದಾಗಿದೆ. ಗ್ರಹದ ಇತಿಹಾಸ, ಅದರಲ್ಲಿ ಹಿಂದೊಮ್ಮೆ ದ್ರವರೂಪಿ ನೀರು ಇತ್ತೇ?- ಇತ್ಯಾದಿಗಳ ಬಗ್ಗೆ ತಿಳಿಯಲು ಇದರಿಂದ ಇನ್ನಷ್ಟು ಅನುಕೂಲವಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

ತಾಮ್ರವರ್ಣದ ಈ ಕಾಯದ ಈಗಿನ ಮೇಲ್ಮೈ ತಾಪಮಾನ ಶೂನ್ಯಕ್ಕಿಂತ ಕೆಳಗೆ 63 ಡಿ.ಸೆ (ಮೈನಸ್ 63 ಡಿ.ಸೆ) ಇದ್ದು ಜೀವಿಗಳ ಪೋಷಣೆಗೆ ಸೂಕ್ತವಾಗಿಲ್ಲ. ಆದರೆ ಈ ಗ್ರಹದಲ್ಲಿ ನದಿಗಳು, ಸರೋವರದ ಅಂಗಳಗಳು, ಖನಿಜ ನಿಕ್ಷೇಪಗಳು ಹಿಂದೊಮ್ಮೆ ಇದ್ದಿರುವ ಕುರುಹುಗಳನ್ನು ಮಂಗಳ ಗ್ರಹದ ಅಧ್ಯಯನಕ್ಕೆ ಹಾರಿಬಿಡಲಾಗಿರುವ ಗಗನನೌಕೆಗಳು ಹಾಗೂ ರೋವರ್ ಸಾಧನಗಳು ರವಾನಿಸಿರುವ ಚಿತ್ರಗಳೂ ಪುಷ್ಟೀಕರಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.