ಮಂಗಳಯಾನ ಸವಾಲಿನ ಆಹ್ವಾನ

7

ಮಂಗಳಯಾನ ಸವಾಲಿನ ಆಹ್ವಾನ

Published:
Updated:

ಭಾರತ ಮಂಗಳಯಾನ ಕೈಗೊಳ್ಳಲಿರುವ ಜಗತ್ತಿನ ೬ನೇ ರಾಷ್ಟ್ರ. ೧೯೬೪ರಿಂದಲೇ ಈ ‘ಕೆಂಪುಕಾಯ’ವನ್ನು ಶೋಧಿಸುವ ಯತ್ನ ನಡೆಯುತ್ತಲೇ ಬಂದ್ದಿದರೂ, ಕೆಲವು ಪ್ರಶ್ನೆಗಳು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿವೆ. ಅವುಗಳಿಗೆ ಉತ್ತರ ಕಂಡುಕೊಳ್ಳುವ ಸಲುವಾಗಿ ಅಮೆರಿಕ, ರಷ್ಯ, ಚೀನಾ, ಜಪಾನ್‌ ಈಗಾಗಲೇ ಮಂಗಳನಲ್ಲಿಗೆ ಗಗನನೌಕೆಗಳನ್ನು ರವಾನಿಸಿವೆ.ಈ ಪೈಕಿ ೧೯೯೮--–-೨೦೦೩ರಲ್ಲಿ  ಜಪಾನ್ ಹಾಗೂ ನಂತರ ಚೀನಾವು ರಷ್ಯದ ‘ಫೋಬೋಸ್ ಗ್ರಂಟ್’ ಗಗನನೌಕೆಯ ನೆರವಿನೊಂದಿಗೆ ನಡೆಸಿದ ಯಾನಗಳು ಸಫಲವಾಗಲಿಲ್ಲ. ಹೀಗಾಗಿ, ಒಂದೊಮ್ಮೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಯತ್ನವೇನಾದರೂ ಫಲಿಸಿದರೆ, ಮಂಗಳಯಾನದಲ್ಲಿ ಯಶಸ್ವಿಯಾದ ಏಷ್ಯಾದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆ ನಮ್ಮದಾಗಲಿದೆ.ನಮ್ಮ ವಸುಂಧರೆಗೆ ಹೆಚ್ಚಿನ ಸಾಮ್ಯತೆ ಹೊಂದಿರುವ ‘ಅಂಗಾರಕ’ ಈಗ ಹಲವು ಸಂಗತಿಗಳಿಂದ ಆಸಕ್ತಿ ಕೆರಳಿಸಿರುವ ಆಕಾಶಕಾಯ. ಒಂದೆಡೆ,  ಇನ್ನು ಎರಡು- ಮೂರು ದಶಕಗಳೊಳಗೆ ಅದನ್ನು ಮಾನವನ ‘ಹೊಸ ವಸಾಹತು’ವನ್ನಾಗಿಸುವ ಯೋಚನೆಗಳು ಕುಡಿಯೊಡೆದಿವೆ. ಅಲ್ಲಿ ಗಣಿಗಾರಿಕೆ ನಡೆಸುವ ಸಂಭಾವ್ಯತೆ ಬಗ್ಗೆಯೂ ಚಿಂತನೆಗಳು ಗರಿಗೆದರಿವೆ. ಇನ್ನು, ಖಾಸಗಿ ಸಂಸ್ಥೆಯೊಂದು ಕೆಂಪುಗ್ರಹದ ಒಮ್ಮುಖ ಪ್ರವಾಸಕ್ಕಾಗಿ ಈಗಾಗಲೇ ಮುಂಗಡ ಬುಕಿಂಗ್‌ಗೆ ಚಾಲನೆ ನೀಡಿದ್ದು, ಭಾರತವೂ ಸೇರಿದಂತೆ ಪ್ರಪಂಚದ ಹಲವು ರಾಷ್ಟ್ರಗಳ ಹತ್ತಾರು ಸಾವಿರ ಜನ ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಇಸ್ರೊದ ಗಗನನೌಕೆ ಅಲ್ಲಿಗೆ ಹಾರುತ್ತಿದೆ.ಅಂದ ಹಾಗೆ, ಇಸ್ರೊಗೆ ಇದೊಂದು ಪ್ರತಿಷ್ಠೆಯ ಸವಾಲೂ ಹೌದು. ಸುಮಾರು, ನಾಲ್ಕು ದಶಕಗಳಿಂದ ಸಂಸ್ಥೆಯು ಭೂಮಿಯ ಮೇಲಿನ ಸಂವಹನ ಸಂಪರ್ಕ ಸುಧಾರಿಸುವ, ಹವಾಮಾನ ಮಾಹಿತಿ ಒದಗಿಸುವ ಉಪಗ್ರಹಗಳ ಉಡಾವಣೆಗಷ್ಟೇ ತನ್ನ ಬಹುತೇಕ ಸಮಯ, ಸಾಮರ್ಥ್ಯವನ್ನು ವಿನಿಯೋಗಿಸಿತ್ತು. ಇದನ್ನು ಬಿಟ್ಟರೆ, ೨೦೦೮ರಲ್ಲಿ ‘ಚಂದ್ರಯಾನ–೧’ ಯಶಸ್ವಿಯಾಗಿ ಮುಗಿಸಿ ಅಲ್ಲಿ ಜೀವಜಲದ ಪಸೆ ಇರುವುದನ್ನು ದೃಢಪಡಿಸಿ ಜಗತ್ತಿನ ಗಮನ ಸೆಳೆದಿತ್ತು. ಇದೀಗ ಚಂದ್ರಯಾನಕ್ಕೂ ಮಿಗಿಲಾದ ಮಂಗಳಯಾನಕ್ಕೆ ಅದು ಎದೆಯೊಡ್ಡಿದೆ.ವಿಶೇಷವೆಂದರೆ, ಇದರ ವೆಚ್ಚ ಕೂಡ ಚಂದ್ರಯಾನಕ್ಕೆ ತಗುಲಿದಷ್ಟೇ, ಅಂದರೆ ಸುಮಾರು ₨೪೫೦ ಕೋಟಿಯೇ ಆಗಿದ್ದರೂ ಸವಾಲುಗಳು ಮಾತ್ರ ಭಿನ್ನ. ಚಂದ್ರಯಾನಕ್ಕೆ ಸವೆಸಿದ ಹಾದಿ ೪ ಲಕ್ಷ ಕಿ.ಮೀ. ಆದರೆ ಈಗ ಕ್ರಮಿಸಬೇಕಿರುವ ಹಾದಿ, ಅದಕ್ಕಿಂತ ಅಂದಾಜು 962 ಪಟ್ಟು ಅಧಿಕ. ಅಂದರೆ ೩೮.೫ ಕೋಟಿ ಕಿ.ಮೀ!ಹಿಂದೆಲ್ಲಾ ಇಸ್ರೊ ಉಪಗ್ರಹಗಳು ಹೆಚ್ಚೆಂದರೆ 1 ಅಥವಾ 2 ವಾರದೊಳಗೆ ನಿಗದಿತ ಕಕ್ಷೆ ತಲುಪಿಬಿಟ್ಟಿದ್ದವು. ಆದರೆ ಇದೇ ಮೊದಲ ಬಾರಿಗೆ ನೌಕೆಯು ನಿಶ್ಚಿತ ಗುರಿ ತಲುಪುವ ಕ್ಷಣಕ್ಕೆ ೧೦ ತಿಂಗಳಷ್ಟು ಸುದೀರ್ಘ ಅವಧಿ ಕಾಯಬೇಕಿದೆ. ಅಂದರೆ, ಗಗನನೌಕೆಗೆ ನಿರಂತರವಾಗಿ ೩೦೦ರಿಂದ 305 ದಿನಗಳಷ್ಟು ಕಾಲ ಯಾವುದೇ ಅಡೆತಡೆ ಇಲ್ಲದೆ ನೂಕುಬಲ ಒದಗಿಸುವ ತಾಂತ್ರಿಕ ದಕ್ಷತೆ ಭಾರತಕ್ಕೆ ಸಿದ್ಧಿಸಿದೆಯೇ ಎಂಬುದಕ್ಕೂ ಇದು ಉತ್ತರ ನೀಡಲಿದೆ.ಈ ಮೊದಲು ಭಾರತವು ‘ಜಿಎಸ್‌ಎಲ್‌ವಿ’ ನೆರವಿನೊಂದಿಗೆ ಈ ಯಾನ ಕೈಗೊಳ್ಳಲು ಉದೇಶಿಸಿತ್ತು. ಆದರೆ ಕ್ರಯೋಜನಿಕ್ ಎಂಜಿನ್ ನಿರ್ಮಾಣದಲ್ಲಿ ರಾಷ್ಟ್ರ ಇನ್ನೂ ನಿರೀಕ್ಷಿತ ಪರಿಣತಿ ಸಾಧಿಸಿಲ್ಲ. ಅದು ಸಾಕಾರಗೊಳ್ಳಲು ಒಂದೆರಡು ವರ್ಷ ಹಿಡಿಯುವ ಸಾಧ್ಯತೆ ಇದೆ. ಹೀಗಾಗಿ ಈಗ ದ್ರವೀಕೃತ ಇಂಧನ ತಾಂತ್ರಿಕತೆಯ ‘ಪಿಎಸ್‌ಎಲ್‌ವಿ’ ಮೂಲಕವೇ ಗಗನನೌಕೆಯನ್ನು ಅನ್ಯಗ್ರಹ ತಲುಪಿಸುವ ಸಾಹಸಕ್ಕೆ ಕೈಹಾಕಲಾಗಿದೆ.ಅಮೆರಿಕದ ‘ನಾಸಾ’ದ ಮಾರ್ಸ್ ಕ್ಯೂರಿಯಾಸಿಟಿ ರೋವರ್ ಯಾನದ ಸಂಕೀರ್ಣತೆಗೆ ಹೋಲಿಸಿದರೆ ‘ಇಸ್ರೊ’ ಯೋಜನೆ ಸರಳ ಹೌದು. ನಾಸಾ, ಮಂಗಳನ ಅಂಗಳದಲ್ಲಿಯೇ ರೋವರ್‌  ಇಳಿಸಿದ್ದರೆ, ಇಸ್ರೊ  ಗಗನನೌಕೆ ಆ ಗ್ರಹದ ಕಕ್ಷೆಯಲ್ಲಷ್ಟೇ ಪರಿಭ್ರಮಿಸಲಿದೆ. ಆದರೂ, ದೇಶೀಯ ತಾಂತ್ರಿಕ ಪರಿಣತಿಯನ್ನು ಖಾತ್ರಿ ಪಡಿಸಿಕೊಳ್ಳಲು ಇದರಿಂದ ಅನುಕೂಲವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.ಮುಂಚೆಯೇ ಹೇಳಿದಂತೆ, ಹಲವು ಸವಾಲುಗಳ ಯೋಜನೆ ಇದು. ಇವುಗಳ ಪೈಕಿ ಅತ್ಯಂತ ಕಠಿಣ ಸವಾಲೆಂದರೆ, ೧,೩೫೦ ಕೆ.ಜಿ ತೂಕದ, ನ್ಯಾನೊ ಕಾರಿನಷ್ಟು ಗಾತ್ರದ ಗಗಗನೌಕೆಯನ್ನು ಕಕ್ಷೆಗೆ ಯಶಸ್ವಿಯಾಗಿ ಕೂರಿಸಬೇಕಾಗಿರುವುದು. ಈ ನೌಕೆಯು ೩೮೫x೮೦,೦೦೦ ಕಿ.ಮೀ ದೀರ್ಘ ವೃತ್ತಾಕಾರದ ಪಥದಲ್ಲಿ ಪರಿಭ್ರಮಿಸಲಿದೆ. ಒಂದೊಮ್ಮೆ ಇದರಲ್ಲಿ ಯಶಸ್ವಿಯಾದರೆ, ರಾಷ್ಟ್ರದ ಮುಂದಿನ ಹಲವು ದೂರಾಂತರಿಕ್ಷ ಯೋಜನೆಗಳಿಗೆ ಇದು ಚಿಮ್ಮು ಹಲಗೆಯಾಗುವುದಂತೂ ನಿಶ್ಚಿತ.ಬದಲಾದ ಮಾರ್ಗ

ವಾಸ್ತವದಲ್ಲಿ ಈಗಲೇ ಮಂಗಳ­ಯಾನ ಕೈಗೊಳ್ಳುವ ಯೋಚನೆಯನ್ನು ಇಸ್ರೊ ಹೊಂದಿರಲಿಲ್ಲ. ಪೂರ್ವನಿಗದಿ­ಯಂತೆ ೨೦೧೩ರ ಆಸುಪಾಸಿನಲ್ಲಿ  ಚಂದ್ರಯಾನ-–೨ ಯೋಜನೆ ಕೈಗೊಳ್ಳಬೇಕಿತ್ತು. ಆದರೀಗ ಮಂಗಳಯಾನ ಅವಕಾಶ ಕೈಬಿಟ್ಟರೆ ೨೦೧೬ರಿಂದ ೨೦೧೮ರವರೆಗೆ ಕಾಯಬೇಕಾಗುತ್ತದೆ ಎಂಬ ಕಾರಣಕ್ಕೆ ‘ಚಂದ್ರಯಾನ-–೨’ ಮುಂದೂಡಿ, ಲಭ್ಯ ಸಂಪನ್ಮೂಲಗಳನ್ನೇ ನೆಚ್ಚಿಕೊಂಡು  ಸಾಹಸಗಾಥೆ ಬರೆಯಲು ಇಸ್ರೊ ಹೊರಟಿದೆ.ಇದು ಅಂತಿಂಥ ಯಾನವಲ್ಲ. ದೂರಾಂತರಿಕ್ಷ ಯಾನ. ಇಂತಹ ಯಾವುದೇ ಯಾನದ ಮುಖ್ಯ ನಾಡಿಯೇ ದಕ್ಷ ಸಂವಹನ ಸಾಮರ್ಥ್ಯ. ಅಂದರೆ, ೪೦ ಕೋಟಿ ಕಿ.ಮೀ ದೂರದಲ್ಲಿ ಗಿರಕಿ ಹೊಡೆಯುತ್ತಿರುವ ನೌಕೆಗೆ ಇಲ್ಲಿನ ಸಂಕೇತಗಳು ಯಶಸ್ವಿಯಾಗಿ ರವಾನೆಯಾಗಬೇಕು; ಅಲ್ಲಿಂದಲೂ ಸಂಕೇತಗಳು ಭೂಮಿಗೆ ಯಾವುದೇ ತೊಂದರೆಯಿಲ್ಲದೆ ಬರಬೇಕು. ಸಂಕೇತಗಳ ಒಮ್ಮುಖ ಪ್ರಯಾಣಕ್ಕೇ ತಗುಲುವ ಸಮಯ ೨೦ ನಿಮಿಷ. ಹೀಗಾಗಿ, ಅಲ್ಲಿನ ನೌಕಾ ವ್ಯವಸ್ಥೆಯಲ್ಲಿ ಏನೇ ತೊಂದರೆಯಾದರೂ ಇಲ್ಲಿಗೆ ಗೊತ್ತಾಗುವುದಕ್ಕೂ ಅಷ್ಟೇ ಸಮಯ ಹಿಡಿಯುತ್ತದೆ.ಅದನ್ನು ಸರಿಪಡಿಸಲು, ಇಲ್ಲಿಂದ ತಕ್ಷಣವೇ ಏನೇ ನಿರ್ದೇಶನ ನೀಡಿದರೂ ಅದು ತಲುಪಲು ಮತ್ತೆ ೨೦ ನಿಮಿಷ ಹಿಡಿಯುತ್ತದೆ(ಒಟ್ಟು ೪೦ ನಿಮಿಷ). ಹೀಗಾಗಿ ಅಲ್ಲಿನ ನೌಕಾ ವ್ಯವಸ್ಥೆಗೆ ಏನೇ ತೊಂದರೆಯಾದರೂ ತಕ್ಷಣವೇ ಅದನ್ನು ಸ್ವಯಂಚಾಲಿತವಾಗಿ ‘ಸುರಕ್ಷಾ ಅವಸ್ಥೆ’ಗೆ(ಸೇಫ್ ಮೋಡ್) ದೂಡುವ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಜತೆಗೆ, ಭೂಮಿಯ ಮೇಲಿನ ಸಂಪರ್ಕ ಜಾಲವನ್ನೂ ಬಲಪಡಿಸಲಾಗಿದೆ; ಇದಕ್ಕಾಗಿ, ಚಂದ್ರಯಾನದ ವೇಳೆ ನಿರ್ಮಿಸಲಾಗಿದ್ದ ‘ಇಂಡಿಯನ್ ಡೀಪ್ ಸ್ಪೇಸ್  ನೆಟ್‌ವರ್ಕ್’ ಅನ್ನೇ ಕೆಲವು ಬದಲಾವಣೆಗಳೊಂದಿಗೆ ಸುಧಾರಣೆಗೊಳಿಸಲಾಗಿದೆ.ಸಾಧನೆಗಾಗಿ 5 ಸಾಧನ

ಇನ್ನು ಮಂಗಳನ ಅನ್ವೇಷಣೆಗಾಗಿ ನೌಕೆಯು ಒಟ್ಟು ೧೫ ಕೆ.ಜಿ ತೂಕದ ಐದು ಸಾಧನ- ಸಲಕರಣೆಗಳನ್ನು ಹೊತ್ತೊಯ್ಯಲಿದೆ. ಇದರಲ್ಲಿ ‘ಲೈಮನ್ ಆಲ್ಫಾ ಫೋಟೋಮೀಟರ್’(ಎಲ್‌ಎಪಿ) ಅಲ್ಲಿನ ಮೇಲ್‌ಸ್ತರದ ವಾತಾವರಣ­ದಲ್ಲಿನ ಡ್ಯುಟೇರಿಯಂ/ ಹೈಡ್ರೋಜನ್ ಅನುಪಾತವನ್ನು ಲೆಕ್ಕಹಾಕಿ, ಅನಿಲಗಳು ಆವಿಯಾಗುವ ಪ್ರಕ್ರಿಯೆ ಬಗ್ಗೆ ಬೆಳಕು ಚೆಲ್ಲಲಿದೆ. ಮಾರ್ಸ್ ಮೀಥೇನ್ ಸಂವೇದಕವು (ಎಂಎಸ್‌ಎಂ) ಮೀಥೇನ್ ಕುರುಹುಗಳಿಗಾಗಿ, ಅಂದರೆ ಜೀವಕಣಗಳು ಎಂದಾದರೊಮ್ಮೆ ಅಲ್ಲಿ ಇದ್ದವೇ ಅಥವಾ ಈಗಲೂ ಇವೆಯೇ ಎಂಬುದನ್ನು ಪತ್ತೆಹಚ್ಚಲು ತಡಕಾ­ಡಲಿದೆ.‘ಮಾರ್‍ಶಿಯನ್ ಎಕ್ಸೋಸ್ಫೆರಿಕ್ ಕಾಂಪೊಸಿಷನ್ ಎಕ್ಸ್‌ಪ್ಲೋರರ್’ (ಎಂಇಎನ್‌ಸಿಎ) ಮೇಲ್‌ಸ್ತರದ ತಟಸ್ತ ರಾಸಾಯನಿಕ ಸಂಯೋಜನೆಯನ್ನು ವಿಶ್ಲೇಷಿಸಲು ನೆರವಾಗಲಿದೆ. ಮಾರ್ಸ್ ಕಲರ್ ಕ್ಯಾಮೆರಾ(ಎಂಸಿಸಿ) ಆಪ್ಟಿಕಲ್ ಇಮೇಜಿಂಗ್ ಕಾರ್ಯ ಕೈಗೊಂಡರೆ, ‘ಟಿಐಆರ್ ಇಮೇಜಿಂಗ್ ಸ್ಪೆಕ್ಟ್ರೊಮೀಟರ್’(ಟಿಐಎಸ್) ಮೇಲ್ಮೈ ಸ್ವರೂಪ ಮತ್ತು ಖನಿಜ ಸಂಯೋಜನೆಯ ನಕ್ಷೆ ಸಿದ್ಧಪಡಿಸಲಿದೆ.ಒಟ್ಟಾರೆ ಅಂಗಾರಕನ ವಾತಾವರಣ, ಮೇಲ್ಮೈ ಲಕ್ಷಣ, ಗ್ರಹದ ವಿಕಾಸ, ಜೀವಕಣಗಳ ಸಂಭಾವ್ಯ ಅಸ್ತಿತ್ವ, ಗಣಿಗಾರಿಕೆ ಸಾಧ್ಯತೆಗಳಿಗೆ ಇದರಿಂದ ಉತ್ತರ ದೊರೆಯುವ ನಿರೀಕ್ಷೆ ಇದೆ. ಮಂಗಳನ ಕಕ್ಷೆ ಸೇರಿದ ನಂತರ ನೌಕೆಯು ೬ರಿಂದ ೧೦ ತಿಂಗಳ ಕಾಲ ಕಾರ್ಯ ನಿರ್ವಹಿಸುವ ಅಂದಾಜಿದೆ. ಅದೃಷ್ಟವಿದ್ದರೆ ಈ  ಅವಧಿ ಇನ್ನಷ್ಟು ಹೆಚ್ಚಬಹುದು ಅಥವಾ ಅದೃಷ್ಟ ಕೈಕೊಟ್ಟರೆ ೬ ತಿಂಗಳಿಗಿಂತ ಮುಂಚೆಯೇ ಅದು ಸ್ತಬ್ಧವಾಗಿಯೂ ಬಿಡಬಹುದು.ಟೀಕೆ ಇಲ್ಲದೇ ಇಲ್ಲ!

ಅನ್ಯಗ್ರಹವೊಂದರ ಬಗ್ಗೆ ‘ಇಸ್ರೊ’ ಇದೇ ಮೊದಲ ಬಾರಿಗೆ ಕೈಗೊಂಡಿರುವ ಇಂತಹ ಮಹತ್ವಾಕಾಂಕ್ಷೆಯ ಯಾನ ಕೂಡ ಟೀಕೆಗಳಿಂದ ಮುಕ್ತವಾಗಿಲ್ಲ. ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ‘ಚಂದ್ರಯಾನ-–೧’ ಯಶಸ್ವಿಯಾಗಿ ಮುನ್ನಡೆಸಿದ್ದ ಜಿ.ಮಾಧವನ್ ನಾಯರ್ ಅವರೇ ಇದಕ್ಕೆ ಆಕ್ಷೇಪ ಎತ್ತಿರುವುದು ಗಮನಾರ್ಹ.ಅಲ್ಲದೇ ಇನ್ನೂ ಕೆಲವು ತಜ್ಞರು ಸಹ ಈ ಯಾನದ ಔಚಿತ್ಯ ಪ್ರಶ್ನಿಸಿದ್ದಾರೆ. ಯೋಜನೆಯ ಸಾಧಕ- ಬಾಧಕಗಳೇನೇ ಇರಲಿ, ಈ ಯಾನ ಆರಂಭದ ಕ್ಷಣವನ್ನು ಇಡೀ ಜಗತ್ತು ಕುತೂಹಲದಿಂದ ಎದುರು ನೋಡುತ್ತಿದೆ.

ಅರೆಬೆಂದ ಯೋಜನೆ

ಇದೊಂದು ಅರೆಬೆಂದ ಯೋಜನೆ. ಅನಗತ್ಯ ಆತುರ, ಯುಕ್ತ ಉದೇಶಗಳಿಲ್ಲದೆ ಈ ಯಾನವನ್ನು ಕೈಗೊಳ್ಳಲಾಗುತ್ತಿದೆ.

–ಜಿ.ಮಾಧವನ್ ನಾಯರ್,>ಇಸ್ರೊ ಮಾಜಿ ಅಧ್ಯಕ್ಷ

ಹಲವು ಆಶಯ..

ಈ ಯಾನವನ್ನು ಪ್ರತಿಷ್ಠೆಗಾಗಲೀ, ನಮ್ಮ ಬೆನ್ನನ್ನು ತಟ್ಟಿಕೊಳ್ಳಲಾಗಲೀ ಕೈಗೊಂಡಿಲ್ಲ. ಭವಿಷ್ಯದ ಪೀಳಿಗೆಗೆ ನೆರವಾಗುವಂತಹ ಹಲವು ಆಶಯಗಳು ನಮ್ಮ ಉದೇಶದಲ್ಲಿವೆ.

– ಕೆ.ರಾಧಾಕೃಷ್ಣನ್, ಇಸ್ರೊ ಅಧ್ಯಕ್ಷಅಗತ್ಯವಾದರೂ ಏನು?

ರಾಷ್ಟ್ರದ ಶೇ ೫೦ರಷ್ಟು ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿರುವಾಗ, ಶೇ ೫೦ರಷ್ಟು ಕುಟುಂಬಗಳಿಗೆ ನೈರ್ಮಲ್ಯ ಎಂಬುದು ಮರೀಚಿಕೆಯಾಗಿರುವಾಗ ಈ ಯಾನದ ಅಗತ್ಯವಾದರೂ ಏನು? ಭಾರತ ಸೂಪರ್ ಪವರ್ ಎನ್ನಿಸಿಕೊಳ್ಳುವ ಹಪಾಹಪಿಗೆ ಬಿದ್ದು ಕೈಗೊಂಡಿರುವ ಯೋಜನೆ ಇದು.

–ಜಾನ್ ಡ್ರೆಜ್, ಅಭಿವೃದ್ಧಿ ಅರ್ಥಶಾಸ್ತ್ರಜ್ಞ, ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ಸುವರ್ಣಾವಕಾಶ

ದೇಶೀಯ ತಾಂತ್ರಿಕ ಸಿದ್ಧಿಯನ್ನು ಖಾತ್ರಿ ಪಡಿಸಿಕೊಳ್ಳಲು ಇದೊಂದು ಸುವರ್ಣಾವಕಾಶ. ಮುಂದೆ ಅನ್ಯಗ್ರಹಗಳ ಶೋಧನೆಗೆ ಇದು ಬುನಾದಿಯಾಗಲಿದೆ. ಮಂಗಳ ಗ್ರಹದ ಬಗ್ಗೆ ವಿಭಿನ್ನ- ವಿಶಿಷ್ಟವಾದ ಅಂಶಗಳನ್ನು ಕಲೆಹಾಕಲು ಸಾಧ್ಯವಾಗಲಿದೆ.

–ಎಸ್.ಕೆ.ಶಿವಕುಮಾರ್, ಇಸ್ರೊ ಉಪಗ್ರಹ ಕೇಂದ್ರ ನಿರ್ದೇಶಕ‘ಚರ್ಚೆ ನಡೆದಿಲ್ಲ’

ಮಂಗಳಯಾನ ಒಳ್ಳೆಯದೇ. ಆದರೆ, ಚಂದ್ರಯಾನ ವೇಳೆ ವಿಜ್ಞಾನಿಗಳ ಸಮೂಹವನ್ನು ವಿಶ್ವಾಸಕ್ಕೆ ತೆಗೆದುಕೊಂಡ ಹಾಗೆ ಈಗಲೂ ಮಾಡಬೇಕಿತ್ತು. ಆದರೆ, ಈ ಬಾರಿ ವಿಜ್ಞಾನಿಗಳೊಂದಿಗೆ ಹೆಚ್ಚಿನ ಚರ್ಚೆಯನ್ನೇ ನಡೆಸಿಲ್ಲ.

–ಕ್ರಿಷನ್ ಲಾಲ್, ಭೌತಶಾಸ್ತ್ರಜ್ಞ

ತಾಂತ್ರಿಕ ಪ್ರಗತಿ

ಈ ಯಾನಕ್ಕಾಗಿ ರಾಷ್ಟ್ರದ ಸಂವಹನ ತಾಂತ್ರಿಕತೆ, ನೂಕುಬಲ ತಾಂತ್ರಿಕತೆ, ನೌಕಾ ನಿರ್ದೇಶನ ತಾಂತ್ರಿಕತೆಯನ್ನು ಉನ್ನತ ಸ್ತರಕ್ಕೆ ಏರಿಸಲಾಗಿದೆ. ಯಾನ ಯಶಸ್ವಿಯಾದರೆ ನಮ್ಮ ತಾಂತ್ರಿಕ ಪ್ರಗತಿ ಸಾಬೀತಾಗುತ್ತದೆ.

–ಅರುಣನ್ ಎಸ್., ಮಂಗಳಯಾನ ಯೋಜನಾ ನಿರ್ದೇಶಕ

ಸೀಮಿತ ಉದ್ದೇಶ

ಅಧಿಕ ದಕ್ಷತೆಯ ‘ಜಿಎಸ್‌ಎಲ್‌ವಿ’ ತಂತ್ರಜ್ಞಾನದಲ್ಲಿ ಪರಿಣತಿ ಸಾಧಿಸುವ ತನಕ ಈ ಯಾನವನ್ನು ಮುಂದೂಡಬೇಕಿತ್ತು. ಇದೊಂದು ಅತ್ಯಂತ ಸೀಮಿತ ಉದ್ದೇಶಗಳ ಯಾನ.

–ಡಿ.ರಘುನಂದನ್, ಇಂಡಿಪೆಂಡೆಂಟ್ ದೆಹಲಿ ಸೈನ್ಸ್‌ನ ಕಾರ್ಯದರ್ಶಿಹೊರೆಯೇನೂ ಅಲ್ಲ

ಕೇವಲ ಒಂದು ಬೋಯಿಂಗ್ ವಿಮಾನ ಖರೀದಿಗೆ ತಗುಲುವಷ್ಟೇ ವೆಚ್ಚ ಈ ಯಾನಕ್ಕೂ ಆಗುತ್ತದೆ.  ಆರ್ಥಿಕವಾಗಿ ಬೆಳೆಯುತ್ತಿರುವ ಭಾರತದಂತಹ ರಾಷ್ಟ್ರಕ್ಕೆ ಇದು ಹೊರೆಯೇನೂ ಅಲ್ಲ. ಒಂದೊಮ್ಮೆ ದೇಶ ಈಗ ಅವಕಾಶವನ್ನು ಕೈಚೆಲ್ಲಿದರೆ ಮತ್ತೆ ಇನ್ನೂ ನಾಲ್ಕೈದು ವರ್ಷ  ಕಾಯಬೇಕಾಗುತ್ತದೆ.

– ಯೋಜನೆ ಬಗ್ಗೆ ಪರಿಶೀಲನೆ ನಡೆಸಿದ ಸರ್ಕಾರದ ಉನ್ನತ ಅಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry