ಮಂಗಳವಾರ, ಜುಲೈ 27, 2021
21 °C

ಮಂಗಳವಾರವೂ ಮಳೆ, ರಕ್ಷಣಾ ಕಾರ್ಯಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳವಾರವೂ ಮಳೆ, ರಕ್ಷಣಾ ಕಾರ್ಯಕ್ಕೆ ಅಡ್ಡಿ

ಗೌಚಾರ್/ಡೆಹ್ರಾಡೂನ್/ (ಪಿಟಿಐ/ಐಎಎನ್‌ಎಸ್ ): ಉತ್ತರಾಖಂಡದಲ್ಲಿ ಭಾರಿ ಮಳೆ ಹಾಗೂ ಪ್ರವಾಹದಿಂದ ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯವು  ಮಂಗಳವಾರವೂ ಸುರಿಯುತ್ತಿರುವ ಮಳೆಯ ನಡುವೆ ಮುಂದುವರೆದಿದ್ದು, ಮೃತ ದೇಹಗಳ ಸಾಮೂಹಿಕ ಅಂತ್ಯಕ್ರಿಯೆಗೆ ಭರದ ಸಿದ್ದತೆ ನಡೆಸಲಾಗಿದೆ.ವಾಯುಸೇನೆಯ ಅತಿ ದೊಡ್ಡ ಹೆಲಿಕಾಪ್ಟರ್ ಆದ ಎಂಐ-17, ಪ್ರತಿಕೂಲ ಹವಾಮಾನದ ಮಧ್ಯೆಯೂ ಅಂತಿಮ ವಿಧಿ ವಿಧಾನ ನಡೆಸಲು ಅವಶ್ಯವಿದ್ದ ಪರಿಕರಗಳನ್ನು ಹೊತ್ತು ಮಂಗಳವಾರ ಕೇದಾರನಾಥ ಕ್ಷೇತ್ರಕ್ಕೆ ಬಂದು15-20 ಮೀಟರ್ ಎತ್ತರದಿಂದ ಸೌದೆ, ಉರುವಲು ವಸ್ತುಗಳನ್ನು ಕೆಳಕ್ಕೆ ಬೀಳಿಸಿ ವಾಪಸ್ ಹೋಗುವಾಗ ಕೆಲವು ಮಂದಿಯನ್ನು ರಕ್ಷಿಸಿದೆ.ರಾಜ್ಯದಲ್ಲಿ ಮಂಗಳವಾರವೂ ಮಳೆ ಹಾಗೂ ದಟ್ಟ ಮಂಜು ಮುಂದುವರೆದಿದ್ದು, ರಕ್ಷಣಾ ಕಾರ್ಯಕ್ಕೆ ತೊಡಕಾಗಿ ಪರಿಣಮಿಸಿದೆ. ಮಂಗಳವಾರ 142 ಮೃತದೇಹಗಳು ದೊರಕಿದ್ದು, ಮೃತರ ಸಂಖ್ಯೆ 822ಕ್ಕೆ ತಲುಪಿದೆ ಎಂದು ಅಧಿಕೃತ ಮೂಲಗಳು ಹೇಳಿವೆ. ಇನ್ನೂ ರಾಜ್ಯದಲ್ಲಿ 8 ಸಾವಿರ ಜನರು ಅಪಾಯದಲ್ಲೇ ಕಾಲ ದೂಡುತ್ತಿದ್ದಾರೆ.ಇಲ್ಲಿನ ತೆಹ್ರಿ ಕ್ಷೇತ್ರದಲ್ಲಿ ಇಂದು ಭೂಕುಸಿತ ಸಂಭವಿಸಿದ್ದು, ಒಬ್ಬ ಮಹಿಳೆ ಹಾಗೂ ಒಂದು ಮಗು ಸಾವನ್ನಪ್ಪಿದ್ದಾರೆ.ಜೋಷಿಮಠ. ದೇವಪ್ರಯಾಗ ಹಾಗೂ ರುದ್ರಪ್ರಯಾಗದ ಅಗಸ್ತ್ಯ ಮುನಿ ಕ್ಷೇತ್ರದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ರಕ್ಷಣಾ ಕಾರ್ಯ ಸ್ಥಗಿತಗೊಂಡಿದೆ. ಒಂದು ಮೂಲದ ಪ್ರಕಾರ ಕೇದಾರನಾಥ ಕ್ಷೇತ್ರದಲ್ಲಿ ರಕ್ಷಣಾ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಬದುಕುಳಿದವರ ಸಾಧ್ಯತೆ ಕ್ಷೀಣಗೊಂಡಿದೆ ಎಂದು ಹೇಳಲಾಗಿದೆ.ಆದರೆ ಬದರಿನಾಥ ಕ್ಷೇತ್ರದಲ್ಲಿ ಸಾವಿರಾರು ಮಂದಿ ನಿರಾಶ್ರಿತರಿದ್ದು, ಅವರಿಗೆ ಆಹಾರಪೊಟ್ಟಣಗಳನ್ನು ತಲುಪಿಸುವ ಕಾರ್ಯಕ್ಕೂ ಮಳೆ ಅಡ್ಡಿಪಡಿಸಿದೆ ಎಂದು ಹೇಳಲಾಗಿದೆ. ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬರೇ 60 ಮಂದಿಯನ್ನು ಮಾತ್ರ ರಕ್ಷಿಸಲು ಸಾಧ್ಯವಾಗಿದೆ.ಭಾರತ-ಟಿಬೆಟಿಯನ್ ಗಡಿ ಭದ್ರತಾ ಪಡೆಯು ಇನ್ನಷ್ಟು ಯೋಧರ ತಂಡಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲು ನಿರ್ಧರಿಸಿದೆ. ಗಡಿ ಭದ್ರತಾ ಪಡೆಯ ಯೋಧರು ತಮ್ಮ ಒಂದು ದಿನದ ವೇತನವನ್ನು ಸಂತ್ರಸ್ಥರ ನೆರವಿಗೆ ನೀಡಲು ಮುಂದಾಗಿದ್ದು, 5 ಹಳ್ಳಿಗಳನ್ನು ದತ್ತು ಪಡೆದಿದ್ದಾರೆ.ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಅವರು ಉತ್ತರ ಭಾರತದಲ್ಲಿ ಬಂದರೆಗಿದ ಮಳೆಯಿಂದಾದ ಸಾವುನೋವಿಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.