ಮಂಗಳೂರಿಗೆ ವಿಶ್ವದರ್ಜೆ ನಿಲ್ದಾಣ ಅನುಮಾನ

7

ಮಂಗಳೂರಿಗೆ ವಿಶ್ವದರ್ಜೆ ನಿಲ್ದಾಣ ಅನುಮಾನ

Published:
Updated:
ಮಂಗಳೂರಿಗೆ ವಿಶ್ವದರ್ಜೆ ನಿಲ್ದಾಣ ಅನುಮಾನ

ಮಂಗಳೂರು: ದೇಶದಲ್ಲಿ 50 ವಿಶ್ವದರ್ಜೆಯ ರೈಲು ನಿಲ್ದಾಣಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಈಗಾಗಲೇ ಕ್ರಮ ಕೈಗೊಂಡಿದೆ. ಮಂಗಳೂರು ಸಹ ಇದರಲ್ಲಿ ಸೇರಿದ್ದರೂ, ರಾಜ್ಯ ಸರ್ಕಾರ ಅಗತ್ಯದ 5 ಎಕರೆ ಸ್ಥಳ ಒದಗಿಸದಿದ್ದರೆ ಅದು ಕಾರ್ಯರೂಪಕ್ಕೆ ಬರುವುದು ಸಾಧ್ಯವಿಲ್ಲ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದ್ದಾರೆ.ಮಂಗಳೂರು ರೈಲು ನಿಲ್ದಾಣದ ಅಭಿವೃದ್ಧಿಗೆ 2 ಎಕರೆ ಸ್ಥಳ ಮಾತ್ರ ಲಭ್ಯ ಇದೆ. ಕನಿಷ್ಠ 5 ಎಕರೆ ಇಲ್ಲದಿದ್ದರೆ ವಿಶ್ವದರ್ಜೆ ನಿಲ್ದಾಣಕ್ಕೆ ಅಗತ್ಯವಾದ ಮಾಲ್‌ಗಳು, ವಿಶ್ರಾಂತಿ ಕೊಠಡಿಗಳು ಹಾಗೂ ಇತರ ಸೌಲಭ್ಯಗಳನ್ನು ಒದಗಿಸುವುದು ಸಾಧ್ಯವಿಲ್ಲ. ಮಂಗಳೂರು ಸೆಂಟ್ರಲ್ ಇಲ್ಲವೇ ಜಂಕ್ಷನ್‌ನಲ್ಲಿ ಎಲ್ಲಿ ಸ್ಥಳ ಲಭ್ಯವಾಗುತ್ತದೋ ಅದನ್ನು ವಿಶ್ವದರ್ಜೆ ನಿಲ್ದಾಣವಾಗಿ ಮಾಡಲಾಗುವುದು ಎಂದು ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಮಂಗಳೂರು, ಕಾರವಾರ ಸಹಿತ ಈ ಭಾಗದ ಜನರಿಗೆ ತ್ವರಿತವಾಗಿ ಬೆಂಗಳೂರು ತಲುಪುವುದಕ್ಕೆ ಹಾಸನ-ಶ್ರವಣ ಬೆಳಗೊಳ- ಬೆಂಗಳೂರು ರೈಲು ಮಾರ್ಗ ನಿರ್ಮಾಣ ಅಗತ್ಯವಾಗಿದೆ. ತುಮಕೂರು ಬಳಿ ಸ್ಟಡ್‌ಫಾರಂ ಸ್ಥಳ ಬಿಟ್ಟುಕೊಡುವ ವಿಚಾರದಲ್ಲಿ ವಿಳಂಬ ಉಂಟಾಗಿ ಇಡೀ ಯೋಜನೆಯೇ ವಿಳಂಬವಾಗಿದೆ. ರಾಮನಗರ-ಮೈಸೂರು ಜೋಡಿ ರಸ್ತೆ ನಿರ್ಮಾಣ ಕಾರ್ಯಕ್ಕೆ ಸಹ ಮಂಡ್ಯ ಸಮೀಪ ನಿವೇಶನ ಸ್ವಾಧೀನ ಪಡಿಸುವಿಕೆಯಲ್ಲಿನ ಸಮಸ್ಯೆ ಎದುರಾಗಿದೆ. ಎಷ್ಟು ಬೇಗ ಜಮೀನು ಸ್ವಾಧೀನಪಡಿಸಿ ರಾಜ್ಯ ಸರ್ಕಾರ ಒದಗಿಸುತ್ತದೋ, ಅಷ್ಟು ಬೇಗನೆ ಯೋಜನೆಯೂ ಪೂರ್ಣಗೊಳ್ಳಲಿದೆ ಎಂದರು.ಮಡಿಕೇರಿ ಇದುವರೆಗೆ ರೈಲ್ವೆ ಸಂಪರ್ಕಕ್ಕೆ ಒಳಗಾಗಿಲ್ಲ. ಮೈಸೂರಿನಿಂದ ಕುಶಾಲನಗರಕ್ಕೆ ರೈಲ್ವೆ ಹಳಿ ನಿರ್ಮಾಣ ಸಂಬಂಧ ಯೋಜನಾ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಯುಪಿಎ ಸರ್ಕಾರದಲ್ಲಿ ಕರ್ನಾಟಕದಲ್ಲಿ 15 ಮತ್ತು ಆಂಧ್ರಪ್ರದೇಶದಲ್ಲಿ 12 ಯೋಜನೆಗಳನ್ನು ಇಲಾಖೆ ಕೈಗೊಂಡಿದೆ ಎಂದು ಅವರು ತಿಳಿಸಿದರು.ಅನ್ಯಾಯ ಆಗಿಲ್ಲ: ರೈಲ್ವೆ ಇಲಾಖೆಯಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂಬ ಆರೋಪ ಸರಿಯಲ್ಲ. ಕಳೆದ 5 ವರ್ಷಗಳಲ್ಲಿ 1,500 ಕಿ.ಮೀ.ನಷ್ಟು ಹೊಸ ಬ್ರಾಡ್‌ಗೇಜ್ ರೈಲು ಹಳಿಯನ್ನು ರಾಜ್ಯದಲ್ಲಿ ನಿರ್ಮಿಸಲಾಗಿದೆ. ಹೀಗಾಗಿ ಜಾಫರ್ ಷರೀಫ್ ಕಾಲದಿಂದ ಆರಂಭವಾಗಿ ರಾಜ್ಯದಲ್ಲಿ ಒಟ್ಟು 4,500 ಕಿ.ಮೀ.ನಷ್ಟು ಹಳಿ ನಿರ್ಮಿಸಿದಂತಾಗಿದೆ. ಕಳೆದ 3 ವರ್ಷಗಳಲ್ಲಿ 90 ರೈಲುಗಳನ್ನು ರಾಜ್ಯಕ್ಕೆ ನೀಡಲಾಗಿದೆ ಎಂದು ಸಚಿವ ಮುನಿಯಪ್ಪ ತಿಳಿಸಿದರು.ಮಂಗಳೂರಿನ ಜೆಪ್ಪು ಕುಡುಪಾಡಿ, ಬಜಾಲ್-ಪಡೀಲ್‌ಗಳಲ್ಲಿ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ ಒಟ್ಟು 9 ಕೋಟಿ ರೂಪಾಯಿ ಅಗತ್ಯ ಇದೆ. ಪಾಲಿಕೆ ಇದರ ಅರ್ಧದಷ್ಟನ್ನು ಒದಗಿಸಿದರೆ ತಕ್ಷಣ ಕಾಮಗಾರಿ ಆರಂಭವಾಗಲಿದೆ. ಪಾಲಿಕೆಯ ಬಳಿ ಹಣ ಇಲ್ಲವಾದರೆ ರಾಜ್ಯ ಸರ್ಕಾರ ಹಣ ನೀಡಲಿ ಎಂದರು.ಕೆಲವು ರೈಲುಗಳನ್ನು ಕಂಕನಾಡಿಯಿಂದ ಸೆಂಟ್ರಲ್ ರೈಲು ನಿಲ್ದಾಣಕ್ಕೆ ತರಿಸಬೇಕು ಎಂದು ಒತ್ತಾಯಿಸುವುದು ಸರಿಯಲ್ಲ. ಮಂಗಳೂರಿನಲ್ಲೇ ಇರುವ ಕಂಕನಾಡಿ ರೈಲು ನಿಲ್ದಾಣ ಹೆದ್ದಾರಿಯಲ್ಲಿನ ಬೈಪಾಸ್ ಇದ್ದಂತೆ. ದೂರ ಪ್ರಯಾಣದ ರೈಲುಗಳಿಗೆ ಅಲ್ಲಿಂದಲೇ ತೆರಳುವುದರಿಂದ ಸಮಯ ಉಳಿತಾಯವಾಗುತ್ತದೆ. ಇದನ್ನು ಸಾರ್ವಜನಿಕರು ಗಮನಿಸಬೇಕು ಎಂದು ಸಚಿವರು ಕೇಳಿಕೊಂಡರು.ಪತ್ರಿಕಾಗೋಷ್ಠಿಯಲ್ಲಿ ಡಿಸಿಸಿ ಅಧ್ಯಕ್ಷ ಬಿ.ರಮಾನಾಥ ರೈ, ಮಾಜಿ ಸಂಸದರಾದ ವಿನಯ ಕುಮಾರ್ ಸೊರಕೆ, ಇಬ್ರಾಹಿಂ, ಪಕ್ಷದ ಮುಖಂಡರಾದ ಪಿ.ವಿ.ಮೋಹನ್, ಐವನ್ ಡಿಸೋಜ, ಮಿಥುನ್ ರೈ, ಶಶಿಧರ ಹೆಗ್ಡೆ ಇತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry