ಮಂಗಳವಾರ, ಜನವರಿ 21, 2020
20 °C
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ಪ್ರಸ್ತಾವನೆ

ಮಂಗಳೂರಿಗೆ 90 ಕಿ.ಮೀ ಉದ್ದದ ವರ್ತುಲ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ‘ವರ್ತುಲ ರಸ್ತೆಯನ್ನು ನಿರ್ಮಿಸುವುದರಿಂದ ಮಾತ್ರ ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು. ಈ ಕುರಿತ ಶಕ್ಯತಾ ವರದಿ ತಯಾರಿಸುವ ಹೊಣೆಯನ್ನು ಸಂಸ್ಥೆಯೊಂದಕ್ಕೆ ವಹಿಸಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ್‌ ಮಿಶ್ರಾ ತಿಳಿಸಿದರು.ರಾಷ್ಟ್ರಿಯ ಹೆದ್ದಾರಿ ಕಾಮಗಾರಿಗಳ ಬಗ್ಗೆ ಚರ್ಚಿಸುವ ಸಲುವಾಗಿ ಸಂಸದ ನಳಿನ್‌ ಕುಮಾರ್‌ ಅಧ್ಯಕ್ಷತೆಯಲ್ಲಿ ಇಲ್ಲಿನ ಸರ್ಕಿಟ್‌ ಹೌಸ್‌ನಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.‘ಮೂಲ್ಕಿ, ಪೊಳಲಿ, ತೊಕ್ಕೊಟ್ಟನ್ನು ಒಳಗೊಂಡು 90 ಕಿ.ಮೀ. ಉದ್ದದ ವರ್ತುಲ ರಸ್ತೆ ನಿರ್ಮಿಸುವ ಪ್ರಸ್ತಾವವಿದೆ’ ಎಂದು ಅವರು ತಿಳಿಸಿದರು.ನೇತ್ರಾವತಿ ಸೇತುವೆ ಜನವರಿಗೆ ಪೂರ್ಣ

‘ನೇತ್ರಾವತಿ ನದಿಯ ನೂತನ ಸೇತುವೆ ಕಾಮಗಾರಿ ಜನವರಿ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ. ಆ ಬಳಿಕ, ಹಳೆಸೇತುವೆಯನ್ನು ದುರಸ್ತಿ ಪಡಿಸಲಾಗುವುದು. ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿಯನ್ನು ಜನವರಿಯಲ್ಲಿ ಆರಂಭಿಸಲಾಗುವುದು. ತೊಕ್ಕೊಟ್ಟು ನಾಗಬನದಿಂದ 70 ಮೀಟರ್‌ ದೂರದಿಂದ ಆರಂಭವಾಗುವ ಮೇಲ್ಸೇತುವೆಯು ಉಳ್ಳಾಲ ರಸ್ತೆಯವರೆಗೆ ಮುಂದುವರಿಯಲಿದೆ. ಇದರ ಇಕ್ಕೆಲಗಳಲ್ಲೂ ಸರ್ವೀಸ್‌ ರಸ್ತೆ ನಿರ್ಮಾಣಗೊಳ್ಳಲಿದೆ. ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ನಿರ್ಮಿಸಿಕೊಟ್ಟ ಬಳಿಕವೇ ಹೊಸ ಮೇಲ್ಸೇತುವೆ ಕಾಮಗಾರಿ ಆರಂಭಿಸುತ್ತೇವೆ. ಈ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ಒಂದು ವರ್ಷ ಬೇಕಾಗಲಿದೆ’ ಎಂದು ಮಿಶ್ರಾ ತಿಳಿಸಿದರು.ಡಿನೋಟಿಫಿಕೇಷನ್‌ಗೆ ಅವಕಾಶವಿಲ್ಲ

‘ಸುರತ್ಕಲ್‌ನ ಎನ್‌ಐಟಿಕೆ ಬಳಿ ಈಗಿರುವ ಚತುಷ್ಪಥ  ಹಾಗೂ ಕುಂದಾಪುರ–ಸುರತ್ಕಲ್‌ ಚತುಷ್ಪಥ ರಸ್ತೆ ಕೂಡುವಲ್ಲಿ 45 ಅಡಿ ಅಗಲದ ರಸ್ತೆ ನಿರ್ಮಾಣವಾಗಲಿದೆ. ಆದರೆ, ಇಲ್ಲಿ 60 ಅಡಿ ರಸ್ತೆಗಾಗಿ ಭೂಸ್ವಧೀನ ಮಾಡಲಾಗಿದೆ. ಸ್ಥಳೀಯರ ಬೇಡಿಕೆ ಮೇರೆಗೆ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಿದ್ದರಿಂದ ಈ ವ್ಯತ್ಯಯ ಆಗಿದೆ. ಕೇಂದ್ರ ಭೂಸಾರಿಗೆ ನಿಯಮದ ಪ್ರಕಾರ ಒಮ್ಮೆ ಹೆದ್ದಾರಿಗೆ ಸ್ವಾಧೀನ ಮಾಡಿಕೊಂಡ ಭೂಮಿಯನ್ನು ಮತ್ತೆ ಡಿನೋಟಿಫೈ ಮಾಡುವುದಕ್ಕೆ ಅವಕಾಶವಿಲ್ಲ’ ಎಂದರು.22 ಕೋಟಿ ಮಂಜೂರು: ‘ಹೆದ್ದಾರಿ ಪಕ್ಕ ಸರ್ವೀಸ್‌ ರಸ್ತೆ ನಿರ್ಮಿಸಲು, ಮೋರಿಗಳನ್ನು ಕಟ್ಟಲು. ಕೆಳ ಸೇತುವೆ ನಿರ್ಮಿಸಲು ಒಟ್ಟು 22 ಕೋಟಿ ಹಣ ಮಂಜೂರಾಗಿದೆ. ನಂತೂರಿನಲ್ಲೂ ಫ್ಲೈಓವರ್‌ ನಿರ್ಮಾಣ ಆಗಲಿದೆ. ಎಲ್ಲಾ ಮೇಲ್ಸೇತುವೆಯಲ್ಲೂ ದಾರಿದೀಪದ ವ್ಯವಸ್ಥೆ ಕಲ್ಪಿಸಲಾಗುವುದು. ಅಗತ್ಯ ಇರುವ ಕಡೆ ಕಾಂಕ್ರೀಟ್‌ ರಸ್ತೆ ನಿರ್ಮಿಸಲಾಗುವುದು’ ಎಂದು ಮಿಶ್ರಾ ಭರವಸೆ ನೀಡಿದರು.ಬಿ.ಸಿ.ರೋಡ್‌ನಲ್ಲಿ ಬೆಳಿಗ್ಗೆ ವೇಳೆ ಸಂಚಾರ ದಟ್ಟಣೆ ತಪ್ಪಿಸಲು ಬೆಂಗಳೂರು ಕಡೆಯಿಂದ ಬರುವ ಬಸ್‌ಗಳನ್ನು ಮೇಲ್ಸೇತುವೆ ಇಳಿದ ಬಳಿಕವೇ ನಿಲ್ಲಿಸುವುದಕ್ಕೆ ಕ್ರಮಕೈಗೊಳ್ಳುವಂತೆ, ಇದಕ್ಕಾಗಿ ಕೆಎಸ್‌ಆರ್‌ಟಿಸಿ ಸಂಸ್ಥೆಗೆ ಸೇರಿದ ಜಾಗವನ್ನು ಬಳಸಿಕೊಳ್ಳಲು ಕ್ರಮವಹಿಸುವಂತೆ ಸಂಸದರು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಅವರಿಗೆ ಸೂಚಿಸಿದರು.ಇನ್ನು 10 ದಿನಗಳ ಒಳಗಾಗಿ ಬಿ.ಸಿ.ರೋಡ್‌ ಸರ್ವೀಸ್‌ ರಸ್ತೆಯ ಡಾಂಬರೀಕರಣ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.‘ತೊಕ್ಕೊಟ್ಟು ಹಾಗೂ ನೇತ್ರಾವತಿ ಸೇತುವೆ ನಡುವೆ ವಾಹನ ಅಪಘಾತಕ್ಕೀಡಾದರೆ, ಅಥವಾ ಹದಗೆಟ್ಟು ನಿಂತರೆ ತಾಸುಗಟ್ಟಲೆ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್‌ ಕುಂಪಲ ದೂರಿದರು. ನಂತೂರಿನ ವೃತ್ತವನ್ನು ಕಿರಿದುಗೊಳಿಸಿದರೆ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು ಎಂದು ಸಂಚಾರಿ ಪೊಲೀಸ್‌ ವಿಭಾಗದ ಎಸಿಪಿ ಉದಯ ನಾಯ್ಕ್‌ ಸಲಹೆ ನೀಡಿದರು. ಎನ್‌ಎಚ್‌ಎಐ ಎಂಜಿನಿಯರ್‌ಗಳಾದ ಪ್ರದೀಪ್‌, ದಿನಕರ್‌, ಸಹಾಯಕ ಆಯುಕ್ತ ಪ್ರಶಾಂತ್‌, ಸಂಚಾರಿ ಇನ್‌ಸ್ಪೆಕ್ಟರ್‌ಗಳಾದ ನಾಗರಾಜ್‌, ಗುರುದತ್‌ ಮತ್ತಿತರರಿದ್ದರು.ಎರಡೆರಡು ಕಡೆ ಶುಲ್ಕ: ಬಿ.ಸಿ.ರೋಡ್‌ ಬಂದ್‌ ಎಚ್ಚರಿಕೆ

‘ಪಾಣೆಮಂಗಳೂರು ಸೇತುವೆ ಬಳಿ ಈಗಾಗಲೇ ವಾಹನಗಳಿಂದ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಇದೀಗ ಬ್ರಹ್ಮರಕೂಟ್ಲು ಬಳಿ ಇದೇ 5ರಿಂದ ಶುಲ್ಕ ವಸೂಲಿ ಮಾಡುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಐದು ಕಿ.ಮೀ. ವ್ಯಾಪ್ತಿಯಲ್ಲಿ ಎರಡೆರಡು ಕಡೆ ಶುಲ್ಕ ವಸೂಲಿ ಮಾಡಿದರೆ ಬಿ.ಸಿ.ರೋಡ್‌ನಲ್ಲಿ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತೇವೆ’ ಎಂದು ಗೋವಿಂದ ಪ್ರಭು ಅವರು ಎಚ್ಚರಿಸಿದರು.

‘ಪಾಣೆಮಂಗಳೂರು ಸೇತುವೆಗಾದ ವೆಚ್ಚಕ್ಕಿಂತಲೂ ಅಧಿಕ ಮೊತ್ತ ಹೆದ್ದಾರಿ ಶುಲ್ಕದ ಮೂಲಕ ಸಂಗ್ರಹವಾಗಿದೆ. ಇಲ್ಲಿ ಇನ್ನೂ ಶುಲ್ಕ ಸಂಗ್ರಹಿವುಸುವುದನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ’ ಎಂದು ಸ್ಥಳೀಯರು ದೂರಿದರು

ಪ್ರತಿಕ್ರಿಯಿಸಿ (+)