ಮಂಗಳವಾರ, ಏಪ್ರಿಲ್ 13, 2021
23 °C

ಮಂಗಳೂರಿನ ಕೆಂಬಣ್ಣದ ಕಟ್ಟಡಗಳ ಕಥೆ

ರಾಜೇಶ್ ರೈ ಚಟ್ಲ Updated:

ಅಕ್ಷರ ಗಾತ್ರ : | |

ಮಂಗಳೂರಿನ ಹಂಪನಕಟ್ಟೆ ರಸ್ತೆಯಲ್ಲಿ ಓಡಾಡುವವರು ಅಲ್ಲಿನ ಸರ್ಕಾರಿ ಕಾಲೇಜು (ಈಗಿನ ವಿವಿ ಕಾಲೇಜು) ಕಟ್ಟಡವನ್ನು ಆಚ್ಚರಿಯಿಂದ ನೋಡುತ್ತಾರೆ. ಈ ಕಟ್ಟಡ ಕಟ್ಟಿ ಎಷ್ಟು ವರ್ಷಗಳಾದವು? ಈಗಲೂ ಹೊಸ ಕಟ್ಟಡದಂತಿದೆ ಎಂದುಕೊಳ್ಳುತ್ತಾರೆ. ಅದೇ ಈ ಕೆಂಬಣ್ಣದ ಕಟ್ಟಡದ ವೈಶಿಷ್ಟ್ಯ! ಅಪೂರ್ವ ವಿನ್ಯಾಸದ ಈ ಕಟ್ಟಡದಲ್ಲಿ ಅದೇನೋ ಆಕರ್ಷಣೆ, ಚುಂಬಕ ಶಕ್ತಿ ಇದೆ.ಮಂಗಳೂರಿನಲ್ಲಿರುವ ಕೆಂಪು ಕಟ್ಟಡ ಇದೊಂದೇ ಅಲ್ಲ. ಜಿಲ್ಲಾಧಿಕಾರಿಗಳ ಹಳೇ ಕಚೇರಿ, ಕೋರ್ಟ್‌ನ ಹಳೆ ಕಟ್ಟಡ, ಗಣಪತಿ ಪ್ರೌಢಶಾಲೆ, ರಥ ಬೀದಿಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಅದರ ಪಕ್ಕದಲ್ಲೇ ಇರುವ ಮಹಿಳೆಯರ ಪದವಿ ಪೂರ್ವ ಕಾಲೇಜು- ಇವೆಲ್ಲ ಈ ಮಂಗಳೂರಿನ ಕೆಂಪು ಕಟ್ಟಡಗಳು.ಈ ಕೆಂಪು ಕಟ್ಟಡಗಳ ಪೈಕಿ ಕೋರ್ಟ್ ಕಟ್ಟಡವನ್ನು ಭಾಗಶಃ ಕೆಡವಲಾಗಿದೆ. ಅಲ್ಲಿ ಹೊಸ ಕಾಂಕ್ರೀಟ್ ಕಟ್ಟಡದ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಜಿಲ್ಲಾಧಿಕಾರಿ ಕಚೇರಿಯ ಹಳೇ ಕಟ್ಟಡ ಈಗ ಕೆಲ ಸರ್ಕಾರಿ ಕಚೇರಿಗಳ, ದಾಖಲೆಗಳ (ರೆಕಾರ್ಡ್) ಕಚೇರಿಯಾಗಿದೆ. ಈ ಕಟ್ಟಡಗಳೆಲ್ಲ ಹಳೆಯವಾದರೂ ಅವುಗಳ ಆಕರ್ಷಣೆ ಕಡಿಮೆಯಾಗಿಲ್ಲ. ಇವುಗಳು ನೂರಾರು ನೆನಪುಗಳನ್ನು ಹೊತ್ತು ನಿಂತಿವೆ. ಕೆಂಪು ಬಣ್ಣದ ಕಟ್ಟಡಗಳೆಂದರೆ ಅವು ಸರ್ಕಾರಿ ಕಚೇರಿಗಳು. ಬ್ರಿಟಿಷರ ಆಡಳಿತದ ಪಳಿಯುಳಿಕೆಗಳು. ಅಷ್ಟೇ ಅಲ್ಲ ಅವಕ್ಕೆ ಒಂದು ಸಾಂಸ್ಕೃತಿಕ ಆಯಾಮವೂ ಇದೆ.ಮಂಗಳೂರು ವಿವಿ ಕಾಲೇಜು ಕಟ್ಟಡಕ್ಕೆ ತನ್ನದೇ ಆದ ಇತಿಹಾಸವಿದೆ. ಇಲ್ಲಿ ಕನ್ನಡ ಹಾಗೂ ಇಂಗ್ಲಿಷ್ ಕಲಿತ ಅಸಂಖ್ಯಾತ ವಿದ್ಯಾವಂತರು ದೇಶದ ಹಲವು ಕ್ಷೇತ್ರಗಳಲ್ಲಿ ದುಡಿದು ಹೆಸರು ಗಳಿಸಿದ್ದಾರೆ. ಪಂಜೆ ಮಂಗೇಶರಾವ್, ಮಂಜೇಶ್ವರ ಗೋವಿಂದ ಪೈ, ಬೆನಗಲ್ ರಾಮರಾವ್, ಕಾರ್ನಾಡ ಸದಾಶಿವರಾವ್, ಕುದ್ಮಲ್ ರಂಗರಾವ್, ಡಾ.  ಶಿವರಾಮ ಕಾರಂತ, ಕಮಲಾದೇವಿ ಚಟ್ಟೋಪಾಧ್ಯಾಯ, ಡಾ.ಎ.ಬಿ. ಶೆಟ್ಟಿ, ಡಾ.ಯು.ಪಿ. ಮಲ್ಯ, ಸೂರ್ಯನಾರಾಯಣ ಅಡಿಗ ಮತ್ತಿತರರು ಇಲ್ಲಿ ಕಲಿತವರು. ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯಿಲಿ, ಲೋಕಸಭೆ ಉಪಸಭಾಧ್ಯಕ್ಷರಾಗಿದ್ದ ಪಿ.ಎಂ.ಸಯೀದ್, ಪ್ರಸಾರ ಭಾರತಿ ಮಾಜಿ ಅಧ್ಯಕ್ಷ ಎಂ.ವಿ.ಕಾಮತ್, ನಿವೃತ್ತ ನ್ಯಾಯಮೂರ್ತಿ ಜಗನ್ನಾಥ್ ಶೆಟ್ಟಿ, ಸಾಹಿತಿ ಡಿ.ಕೆ. ಚೌಟ ಹೀಗೆ ಬೆಳೆಯುತ್ತದೆ ಪಟ್ಟಿ. ಕ್ರಿ.ಶ.1800ರ ವೇಳೆಗೆ ಜಿಲ್ಲೆಯಲ್ಲಿ ಬ್ರಿಟಿಷ್ ಆಡಳಿತ ಆರಂಭವಾಯಿತು. ಆರಂಭದ ವರ್ಷಗಳಲ್ಲಿ ಶಿಕ್ಷಣದ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಕ್ಕಲಿಲ್ಲ. ಮತ ಪ್ರಚಾರಕ್ಕೆ ಬಂದ ಜರ್ಮನಿಯ ಬಾಸೆಲ್ ಮಿಷನ್ ಸಂಸ್ಥೆ ತನ್ನ ಉದ್ದೇಶದ ಜತೆಗೆ ಇಲ್ಲಿ ಹಲವು ಶಿಕ್ಷಣ ಕೇಂದ್ರಗಳನ್ನು ಆರಂಭಿಸಿದ ನಂತರ ಈ ಭಾಗದಲ್ಲಿ ಶೈಕ್ಷಣಿಕ ಅಭಿವೃದ್ಧಿ ಆಯಿತು. ಬಾಸೆಲ್ ಮಿಷನ್ ಸಂಸ್ಥೆ ಕಾಸರಗೋಡು ಸೇರಿದಂತೆ ಮಂಗಳೂರು, ಉತ್ತರ ಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಗಳಲ್ಲಿ ಅನೇಕ ಶಾಲೆಗಳನ್ನು ಆರಂಭಿಸಿತು.ಮಂಗಳೂರಿನ ಹಂಪನಕಟ್ಟೆ ಪ್ರದೇಶದಲ್ಲಿ ‘ಪ್ರೊವಿನ್ಸಿಯಲ್ ಸ್ಕೂಲ್’ ಹೆಸರಿನಲ್ಲಿ 1824ರಲ್ಲಿ ಆರಂಭಗೊಂಡ ಶಿಕ್ಷಣ ಸಂಸ್ಥೆಯೊಂದು ಒಂದರಿಂದ 10ನೇ ತರಗತಿವರೆಗೆ ಶಿಕ್ಷಣ ನೀಡುತ್ತಿತ್ತು. ನಂತರ ವಿವಿಧ ಹಂತದಲ್ಲಿ ವಿಸ್ತಾರಗೊಂಡ ಈ ಸಂಸ್ಥೆ 1879ರಲ್ಲಿ ಅಧಿಕೃತ ಸರ್ಕಾರಿ ಕಾಲೇಜು ಆಗಿ ಈಗಿನ ವಿವಿ ಕಾಲೇಜು ಕಟ್ಟಡದಲ್ಲಿ ಅಸ್ವಿತ್ವಕ್ಕೆ ಬಂತು. ಆಗಿನ ಕೆಲ ಶ್ರೀಮಂತರು ಸ್ಥಳೀಯ ವಿದ್ಯಾರ್ಥಿಗಳಿಗೆ ಗುಣಮಟ್ಟದ ಉನ್ನತ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ 75 ಸಾವಿರ ರೂಗಳನ್ನು ಸಂಗ್ರಹಿಸಿ ಮದ್ರಾಸ್ ಸರ್ಕಾರಕ್ಕೆ ನೀಡಿ ಇಲ್ಲಿ ಸರ್ಕಾರಿ ಕಾಲೇಜು ಸ್ಥಾಪಿಸಬೇಕೆಂದು ಮನವಿ ಮಾಡಿಕೊಂಡಿದ್ದರು. ಅದರ ಪರಿಣಾಮವಾಗಿ ಇಲ್ಲಿ ಈ ಕಾಲೇಜು ಸ್ಥಾಪನೆಯಾಯಿತು.  ಈ ಕಾಲೇಜಿಗೆ ನೇಮಕವಾದ ಪ್ರಾಚಾರ್ಯರಾದ ಪಿವಿಎಸ್ ಶಾಸ್ತ್ರಿ, ಚೆಟ್ಟೂರು, ಹಶೀಮ್ ಅವರು ಇಂಗ್ಲೆಂಡ್‌ನಲ್ಲಿ ಶಿಕ್ಷಣ ಪಡೆದಿದ್ದರು!ಸರ್ಕಾರಿ ಕಾಲೇಜು ಆರಂಭವಾದ ನಂತರ ಇಲ್ಲಿದ್ದ ಪ್ರಾಥಮಿಕ ಮತ್ತು ಪ್ರೌಢಶಾಲೆ ತರಗತಿಗಳನ್ನು ‘ಮುನ್ಸಿಪಲ್ ಸ್ಕೂಲ್’ಗೆ ವರ್ಗಾಯಿಸಲಾಯಿತು. 1902ರಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿನಿಯರೂ ಇಲ್ಲಿ ಪ್ರವೇಶ ಪಡೆಯುವಂತಾಯಿತು. 1948ರಲ್ಲಿ ಈ ಕಾಲೇಜನ್ನು ಪ್ರಥಮ ದರ್ಜೆ ಕಾಲೇಜು ಆಗಿ ಮೇಲ್ದರ್ಜೆಗೆ ಏರಿಸಲಾಯಿತು. ವೀರಪ್ಪ ಮೊಯಿಲಿ ರಾಜ್ಯ ಮುಖ್ಯಮಂತ್ರಿಯಾದ ನಂತರ (1993ರಲ್ಲಿ) ಈ ಕಾಲೇಜು ಮಂಗಳೂರು ವಿವಿಗೆ ಹಸ್ತಾಂತರವಾಯಿತು.ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸಕ್ಕೆ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಸಾಕ್ಷಿಯಾಗಿದೆ. ಕೆಂಪು ಕಟ್ಟಡದ ನೋಟವೇ ಚಂದ. ಪ್ರಸ್ತುತ ಇದನ್ನು ಪುರಾತತ್ವ ಇಲಾಖೆಗೆ ಒಪ್ಪಿಸುವ ಕಾರ್ಯ ಆರಂಭಗೊಂಡಿದೆ.1799ರಲ್ಲಿ ಬ್ರಿಟಿಷ್ ಅಧಿಕಾರಿ ಮೇಜರ್ ಮುನ್ರೋ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. 1905ರಲ್ಲಿ ಎಚ್.ಎಸ್. ಬಹದ್ದೂರ್ ಅಧಿಕಾರ ವಹಿಸಿದ ಮೊದಲ ಭಾರತೀಯ ಜಿಲ್ಲಾಧಿಕಾರಿ. 1940ರಲ್ಲಿ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿದ ಎಂ. ಸುಬ್ರಹ್ಮಣ್ಯ ಮೊದಲ ಐಎಎಸ್ ಅಧಿಕಾರಿ.ವಿಜಯನಗರದ ಅರಸರು, ಪೋರ್ಚುಗೀಸರು, ಟಿಪ್ಪು ಸುಲ್ತಾನ್ ಆಡಳಿತದ ನಂತರ ದಕ್ಷಿಣ ಕನ್ನಡದ ಪ್ರದೇಶ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು. 1914ರಿಂದ 1919ರವರೆಗೆ ನಡೆದ 2ನೇ ಮಹಾಯುದ್ಧದಲ್ಲಿ ಈ ಭಾಗದ 88 ಮಂದಿ ಭಾಗವಹಿಸಿದ್ದರು. ಅವರಲ್ಲಿ ಇಬ್ಬರು ಹುತಾತ್ಮರಾಗಿದ್ದರು. ಈ ಸಂಗತಿಯನ್ನು ದಾಖಲಿಸಿದ ಫಲಕ ಕಟ್ಟಡದ ಗೋಡೆಯ ಮೇಲಿದೆ! ಹೀಗೆ ಮಂಗಳೂರಿನ ಎಲ್ಲ ಕೆಂಪು ಕಟ್ಟಡಗಳ ಹಿಂದೆಯೂ ಒಂದೊಂದು ಕಥೆ ಇದೆ.ರೈಲು, ರಸ್ತೆ, ವಿಮಾನ, ಬಂದರು ಸೌಲಭ್ಯ ಹೊಂದಿರುವ ಮಂಗಳೂರು, ರಾಜ್ಯದ ಆರ್ಥಿಕ ಹೆಬ್ಬಾಗಿಲು ಎಂಬ ಹೆಗ್ಗಳಿಕೆ ಇದೆ. ಇತ್ತೀಚಿನ ವರ್ಷಗಳಲ್ಲಿ ನಗರ ಯದ್ವಾತದ್ವಾ ಬೆಳೆಯುತ್ತಿದೆ. ಹೊಸ ನೀರು ಬಂದಾಗ ಹಳೆ ನೀರು ಕೊಚ್ಚಿ ಹೋಗಲೇಬೇಕು; ಓಬಿರಾಯನ ಕಾಲದ ಕಟ್ಟಡಗಳು ನೆಲಕ್ಕುರುಳಿ ಅಲ್ಲಿ ಆಧುನಿಕ ಸ್ಪರ್ಶದ ಗಗಗಮುಖಿ ಮಹಡಿ-ಮಾಲ್‌ಗಳು ತಲೆ ಎತ್ತಬೇಕು. ಸರ್ಕಾರಿ ಕಟ್ಟಡಗಳೂ ಇದಕ್ಕೆ ಹೊರತಾಗಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆ ಅನಿವಾರ್ಯ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.