ಸೋಮವಾರ, ಆಗಸ್ಟ್ 19, 2019
22 °C
ಬ್ಯಾಸ್ಕೆಟ್‌ಬಾಲ್: ಮಿಂಚಿದ ಸೌಕಿನ್ ಶೆಟ್ಟಿ

ಮಂಗಳೂರು ಕ್ಲಬ್‌ಗೆ ರೋಚಕ ಜಯ

Published:
Updated:
ಮಂಗಳೂರು ಕ್ಲಬ್‌ಗೆ ರೋಚಕ ಜಯ

ಬೆಂಗಳೂರು: ಸೌಕಿನ್ ಶೆಟ್ಟಿ (15 ಪಾಯಿಂಟ್) ತೋರಿದ ಉತ್ತಮ ಪ್ರದರ್ಶನದ ಬಲದಿಂದ ಮಂಗಳೂರು ಬ್ಯಾಸ್ಕೆಟ್‌ಬಾಲ್ ಕ್ಲಬ್ (ಎಂಬಿಸಿ) ಇಲ್ಲಿ ಕೆಎಸ್‌ಬಿಎ ಆಶ್ರಯದಲ್ಲಿ ಡಿ.ಎನ್.ರಾಜಣ್ಣ ಸ್ಮಾರಕ ಟ್ರೋಫಿಗಾಗಿ ನಡೆಯುತ್ತಿರುವ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಎನ್‌ಜಿವಿ ವಿರುದ್ಧ ಗೆದ್ದಿತು.ಕಂಠೀರವ ಕ್ರೀಡಾಂಗಣದ ಕೋರ್ಟ್‌ನಲ್ಲಿ ಸೋಮವಾರ ನಡೆದ ಪಂದ್ಯದ ನಿಗದಿತ ಸಮಯದಲ್ಲಿ ಎಂಬಿಸಿ ಹಾಗೂ ಎನ್‌ಜಿವಿ ತಂಡಗಳು 40-40 ರಲ್ಲಿ ಸಮಬಲ ಸಾಧಿಸಿದವು. ಬಳಿಕ ನೀಡಲಾದ ಹೆಚ್ಚುವರಿ ಸಮಯದಲ್ಲಿ ಎಂಬಿಸಿ 55-52 ರಲ್ಲಿ ಎನ್‌ಜಿವಿ ವಿರುದ್ಧ ರೋಚಕ ಗೆಲುವು ಪಡೆಯಿತು. ಎನ್‌ಜಿವಿ ಪರ ಸುದಾಂಶು (19 ಪಾಯಿಂಟ್ಸ್) ನಡೆಸಿದ ಪ್ರಬಲ ಹೋರಾಟ ವ್ಯರ್ಥವಾಯಿತು.ದಿನದ ಇತರ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ವಿಎನ್‌ಎಸ್‌ಸಿ 42-21ರಲ್ಲಿ ದೇವಾಂಗ ಯೂನಿಯನ್ ವಿರುದ್ಧವೂ; ಎಸ್.ಬ್ಲೂಸ್ 34-29ರಲ್ಲಿ ಮಂಡ್ಯದ ವಿಬಿಸಿ ಮೇಲೂ; ಯಂಗ್ ಓರಿಯನ್ಸ್ 40-16ರಲ್ಲಿ ಐಬಿಬಿಸಿ ವಿರುದ್ಧವೂ; ಸ್ಪೋರ್ಟ್ಸ್ ಹಾಸ್ಟೆಲ್ 37-19ರಲ್ಲಿ ದಾವಣಗೆರೆ ಗ್ರೀನ್ಸ್ ಮೇಲೂ ಹಾಗೂ ಜೆಎಸ್‌ಸಿ 39-28ರಲ್ಲಿ ಹಲಸೂರು ಸ್ಪೋರ್ಟ್ಸ್ ಯೂನಿಯನ್ ವಿರುದ್ಧವೂ ಗೆದ್ದವು.ಜೆಎಸ್‌ಸಿಗೆ ಮೇಲುಗೈ: ಸೋಸಲೆ ಟ್ರೋಫಿಗಾಗಿ ಬಾಲಕಿಯರ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ಜೆಎಸ್‌ಸಿ 32-12 ರಲ್ಲಿ ಧಾರವಾಡ ರೋವರ್ಸ್‌ ತಂಡವನ್ನು ಮಣಿಸಿತು. ಪಂದ್ಯದ ಮೊದಲಾರ್ಧದಲ್ಲಿ 12-4 ರಲ್ಲಿ ಮುನ್ನಡೆ ಸಾಧಿಸಿದ್ದ ಜೆಎಸ್‌ಸಿ ಉತ್ತರಾರ್ಧದಲ್ಲೂ ಉತ್ತಮ ಪ್ರದರ್ಶನ ತೋರಿ ಸುಲಭ ಗೆಲುವು ಪಡೆಯಿತು.ದಿನದ ಮತ್ತೊಂದು ಪಂದ್ಯದಲ್ಲಿ ಬೀಗಲ್ಸ್ ಬ್ಯಾಸ್ಕೆಟ್‌ಬಾಲ್ ಕ್ಲಬ್ 27-18ರಲ್ಲಿ ಅಪ್ಪಯ್ಯ ಬ್ಯಾಸ್ಕೆಟ್‌ಬಾಲ್ ಕ್ಲಬ್ ವಿರುದ್ಧ ಜಯಿಸಿತು.ಸೆಮಿಫೈನಲ್‌ಗೆ ಡಿವೈಎಸ್‌ಎಸ್ ಮಂಡ್ಯ: ಬಾಲಕಿಯರ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಮಂಡ್ಯದ ಡಿವೈಎಸ್‌ಎಸ್ ತಂಡ 37-26 ರಲ್ಲಿ ವಿಮನಾಪುರ ಸ್ಪೋರ್ಟ್ಸ್ ಕ್ಲಬ್ ತಂಡವನ್ನು ಮಣಿಸಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.

Post Comments (+)