ಸೋಮವಾರ, ಅಕ್ಟೋಬರ್ 14, 2019
29 °C

ಮಂಗಳೂರು ದುರಂತ, ತಲಾ 75 ಲಕ್ಷ ಪರಿಹಾರ: ಸುಪ್ರೀಂ ನೋಟಿಸ್

Published:
Updated:

 

ನವದೆಹಲಿ (ಐಎಎನ್ಎಸ್): ಕಳೆದ 2010ರ ಮೇ ತಿಂಗಳಲ್ಲಿ ಮಂಗಳೂರಿನಲ್ಲಿ ಸಂಭವಿಸಿದ ವಿಮಾನ ದುರಂತದಲ್ಲಿ ಮಡಿದ 158 ಮಂದಿಯ ಕುಟುಂಬದ ಸದಸ್ಯರಿಗೆ ಕನಿಷ್ಠ ತಲಾ 75 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂಬ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಕೇಂದ್ರ ಸರ್ಕಾರ ಮತ್ತು ಏರ್ ಇಂಡಿಯಾ ವಿಮಾನ ಸಂಸ್ಥೆಗೆ ನೋಟಿಸ್ ನೀಡಿದೆ.

~ಮಾಂಟ್ರೀಲ್ ನಲ್ಲಿ ನಡೆದ ಸಮಾವೇಶದಲ್ಲಿನ ಒಪ್ಪಂದದಂತೆ ರಾಷ್ಟ್ರೀಯ ವಿಮಾನ ಸಂಸ್ಥೆ (ಏರ್ ಇಂಡಿಯಾ)ಯು  ವಿಮಾನ ಅಪಘಾತಗಳಲ್ಲಿ ಮೃತರಾದವರ ಸಂಬಂಧಿಕರ ಕುಟುಂಬಗಳಿಗೆ ವಿಶೇಷ ಹಣ ಪಡೆಯುವ ಹಕ್ಕಿನ( ಸ್ಪೇಷಲ್ ಡ್ರಾಯಿಂಗ್ ರೈಟ್ಸ್ ) ಅಡಿ ಮಂಗಳೂರಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತರಾದವರ ಕುಟುಂಬದ ಸಂಬಂಧಿಗಳಿಗೆ ತಲಾ 75 ಲಕ್ಷ ರೂಪಾಯಿ ಪರಿಹಾರ ಕೊಡಬೇಕು~ ಎಂದು ಅರ್ಜಿದಾರರಾದ ಎಸ್. ಅಬ್ದುಲ್ ಸಲಾಮ್  ಮತ್ತು ಇತರರ ಪರವಾಗಿ  ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ವಾದವನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ನ ವಿಭಾಗೀಯ ಪೀಠವು ಈ ಕ್ರಮ ಕೈಗೊಂಡಿದೆ.

ಅಂತರ್ರಾಷ್ಟ್ರೀಯ ಹಣಕಾಸು ನಿಧಿಯು ಗೊತ್ತು ಪಡಿಸಿರುವಂತೆ   ಮಂಗಳೂರಿನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮೃತರಾದ ಸಂಬಂಧಿಕರಿಗೆ ನೀಡಬಹುದಾದ ಎಸ್. ಡಿ. ಆರ್ ನ ಪ್ರಮಾಣದ ಪರಿಹಾರ ಹಣದ ಮೌಲ್ಯ ಸುಮಾರು 75 ಲಕ್ಷ ರೂಪಾಯಿಗಳಾಗುತ್ತದೆ. 

2010ರ ಮೇ ತಿಂಗಳು 22 ರಂದು ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದಲ್ಲಿ ದುಬೈ ನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನವು  ಇಳಿಯುವಾಗ ನಡೆದ ಅಪಘಾತದಲ್ಲಿ, ಅಬ್ದುಲ್ ಸಲಾಮ್ ಅವರು ಮಗ ಮೊಹಮ್ಮದ ರಪೀಕ್ ಅವರನ್ನು ಕಳೆದುಕೊಂಡಿದ್ದಾರೆ.

Post Comments (+)