ಮಂಗಳೂರು ಧರ್ಮಪ್ರಾಂತ್ಯ

7

ಮಂಗಳೂರು ಧರ್ಮಪ್ರಾಂತ್ಯ

Published:
Updated:

ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ಶತಮಾನೋತ್ತರ ಬೆಳ್ಳಿಹಬ್ಬ ಆಚರಣೆ ಸಮಾರೋಪ ಸಮಾರಂಭ ಇದೇ 11ರಿಂದ ನಗರದಲ್ಲಿ ನಡೆಯಲಿದ್ದು, 12ರಂದು ಸಂಜೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪಾಲ್ಗೊಳ್ಳಲಿದ್ದಾರೆ.11ರಂದು ಸಂಜೆ 4ಕ್ಕೆ ಬೋಳಾರದ ರೊಜಾರಿಯೊ ಕೆಥೆಡ್ರಲ್‌ನಲ್ಲಿ ಪವಿತ್ರ ಬಲಿಪೂಜೆ ನಡೆಯಲಿದೆ. ರೋಮ್ ಪ್ರತಿನಿಧಿ ಆರ್ಚ್ ಬಿಷಪ್ ಸಾವಿಯೊ ಹೊನ್ ನೇತೃತ್ವದಲ್ಲಿ 20 ಬಿಷಪರು ಮತ್ತು 300 ಮಂದಿ ಧರ್ಮಗುರುಗಳು ಪಾಲ್ಗೊಳ್ಳುವರು ಎಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ರೆ.ಅಲೋಷಿಯಸ್ ಪಾವ್ಲ್ ಡಿಸೋಜ ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಅದೇ ದಿನ ಸಂಜೆ 5.30ಕ್ಕೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತದ ಕಾರ್ಡಿನಲ್ ಹಾಗೂ ಮುಂಬೈಯ ಆರ್ಚ್‌ಬಿಷಪ್ ಓಸ್ವಾಲ್ಡ್ ಗ್ರೇಸಿಯಸ್ ವಹಿಸುವರು. ಬೆಂಗಳೂರಿನ ಆರ್ಚ್ ಬಿಷಪ್ ಬರ್ನಾರ್ಡ್ ಮೊರಾಸ್, ಸಚಿವರಾದ ವಿ.ಎಸ್.ಆಚಾರ್ಯ, ಕೃಷ್ಣ ಪಾಲೆಮಾರ್, ರಾಜ್ಯಸಬಾ ಸದಸ್ಯರಾದ ಆಸ್ಕರ್ ಫರ್ನಾಂಡಿಸ್, ಮೇಬಲ್ ರೆಬೆಲ್ಲೊ ಪಾಲ್ಗೊಳ್ಳುವರು ಎಂದರು.12ರಂದು ಸಂಜೆ 4ಕ್ಕೆ ನೆಹರೂ ಮೈದಾನದಲ್ಲಿ ಓಸ್ವಾಲ್ಡ್ ಗ್ರೇಸಿಯಸ್ ನೇತೃತ್ವದಲ್ಲಿ ಬಲಿಪೂಜೆ ನಡೆಯಲಿದೆ. ನಂತರ ನಡೆಯುವ ಕಾರ್ಯಕ್ರಮದಲ್ಲಿ ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಎಂ.ವೀರಪ್ಪ ಮೊಯಿಲಿ, ಹಲವು ಬಿಷಪರು, ಧರ್ಮಗುರುಗಳು ಪಾಲ್ಗೊಳ್ಳುವರು ಎಂದು ಬಿಷಪ್ ತಿಳಿಸಿದರು.5 ಮನೆಪೂರ್ಣ:  ಧರ್ಮಪ್ರಾಂತ್ಯದ ಶತಮಾನೋತ್ತರ ಬೆಳ್ಳಿಹಬ್ಬದ ಸ್ಮರಣಾರ್ಥ ಎಲ್ಲಾ 161 ಚರ್ಚ್‌ಗಳಿಗೆ ತಲಾ ಒಂದರಂತೆ ಮನೆಗಳನ್ನು ಕಟ್ಟಿಕೊಳ್ಳಲು ಬಡವರಿಗೆ ನೆರವು ನೀಡಲಾಗುತ್ತಿದೆ. ಈಗಾಗಲೇ 5 ಮನೆಗಳ ನಿರ್ಮಾಣ ಪೂರ್ಣಗೊಂಡಿದೆ.

 

ಕಡು ಬಡವರಿಗೆ ಧರ್ಮಪ್ರಾಂತ್ಯದ ವತಿಯಿಂದ 2 ಲಕ್ಷ ರೂಪಾಯಿ ವೆಚ್ಚದ ಮನೆಯನ್ನು ಉಚಿತವಾಗಿ ಕಟ್ಟಿಸಿಕೊಡಲಾಗುತ್ತಿದೆ. ಈ ಮನೆಗಳ ನಿರ್ಮಾಣಕ್ಕಾಗಿ 28 ಲಕ್ಷ ರೂಪಾಯಿ ಧರ್ಮಪ್ರಾಂತ್ಯದಿಂದ ನೀಡಲಾಗಿದೆ. ಮನೆ ನಿರ್ಮಿಸಿಕೊಡುವುದಕ್ಕೆ ಈವರೆಗೆ ದಾನಿಗಳಿಂದ 52.30 ಲಕ್ಷ ರೂಪಾಯಿ ಸಂಗ್ರಹವಾಗಿದೆ ಎಂದು ಬಿಷಪ್ ತಿಳಿಸಿದರು.ಸಂಪೂರ್ಣ ಉಚಿತ ಮನೆಗಳನ್ನು ನಿರ್ಮಿಸಿಕೊಡುವುದಕ್ಕೆ ಈಗಾಗಲೇ ಸಂಪಾಜೆ, ಪಂಜ ಸಹಿತ ನಾಲ್ಕೈದು ಸ್ಥಳಗಳನ್ನು ಗುರುತಿಸಲಾಗಿದೆ. ಪಂಜದಲ್ಲಿ ಇಂತಹ 5 ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದರು.ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯ, ಪಿಯುಸಿವರೆಗೆ ಸಂಪೂರ್ಣ ಶುಲ್ಕ ಪಾವತಿ, ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹದಂತಹ ಹಲವು ಕ್ರಮಗಳನ್ನು ಸಹ ಧರ್ಮಪ್ರಾಂತ್ಯದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದರು.ಹೆನ್ರಿ ಸಿಕ್ವೇರಾ, ವಿಲಿಯಂ ಮಿನೇಜಸ್, ಜೆ.ಬಿ.ಕ್ರಾಸ್ತ, ಐವನ್ ಡಿಸೋಜ, ಒನಿಲ್ ಡಿಸೋಜ, ಮಾರ್ಸೆಲ್ ಮೊಂತೆರೊ, ರೇಮಂಡ್ ಡಿಕುನ್ಹಾ ಪತ್ರಿಕಾಗೋಷ್ಠಿಯಲ್ಲಿದ್ದರು.ಮನೆ ಹೆಸರಲ್ಲಿ ವಂಚನೆ ಆರೋಪ: ಪ್ರತಿಕ್ರಿಯೆಗೆ ನಕಾರ

ಮಂಗಳೂರು:
ಮಂಗಳೂರು ಧರ್ಮಪ್ರಾಂತ್ಯದ ಶತಮಾನೋತ್ತರ ಬೆಳ್ಳಿಹಬ್ಬದ (125 ವರ್ಷ) ಪ್ರಯುಕ್ತ 161 ಚರ್ಚ್‌ಗಳಿಗೆ ತಲಾ ಒಂದರಂತೆ ಮನೆಗಳನ್ನು ಬಡವರಿಗೆ ಕಟ್ಟಿಸಿಕೊಡುವ ಯೋಜನೆಯಲ್ಲಿ ಚರ್ಚ್‌ನಿಂದ ವಂಚನೆ ಆಗುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಲು ಬಿಷಪ್ ರೆ.ಅಲೋಷಿಯಸ್ ಪಾವ್ಲ್ ಡಿಸೋಜ ನಿರಾಕರಿಸಿದರು.ಧರ್ಮಪ್ರಾಂತ್ಯಕ್ಕೂ, ಈ ಆರೋಪಗಳಿಗೂ ಸಂಬಂಧ ಇಲ್ಲ. ಹಣಕಾಸಿನ ವ್ಯವಹಾರ ನೋಡಿಕೊಳ್ಳುವುದೇನಿದ್ದರೂ ಆಯಾ ಚರ್ಚ್. ಹೀಗಾಗಿ ಆರೋಪಗಳೇನಾದರೂ ಇದ್ದರೆ ಆಯಾ ಚರ್ಚ್‌ನಿಂದಲೇ ವಿವರಣೆ ಪಡೆಯಬೇಕು ಎಂದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಕುಲಶೇಖರ ಚರ್ಚ್ ಕಾರ್ಯದರ್ಶಿ ಸುಶೀಲ್ ನರ‌್ಹೋನ್ಹಾ, ಸಮಸ್ಯೆ ಎದುರಾಗಿರುವುದು ಕುಲಶೇಖರ ಚರ್ಚ್‌ನಲ್ಲಿ ಮಾತ್ರ. ಶತಮಾನೋತ್ತರ ಬೆಳ್ಳಿಹಬ್ಬ ಸಮಾರಂಭ ಕೊನೆಗೊಂಡ ನಂತರ ಇದೇ 16ರಂದು ಪತ್ರಿಕಾಗೋಷ್ಠಿ ನಡೆಸಿ ಈ ವಿವಾದದ ಬಗ್ಗೆ ಚರ್ಚ್ ವತಿಯಿಂದ ಸ್ಪಷ್ಟನೆ ನೀಡಲಾಗುವುದು ಎಂದರು.ಮರೋಳಿ ಸಮೀಪ ಫಾದರ್ ಮುಲ್ಲರ್ಸ್‌ ಆಸ್ಪತ್ರೆಗಾಗಿ ಕೆಲವು ಕುಟುಂಬಗಳಿಗೆ ಪರಿಹಾರ ನೀಡಿ ಸ್ಥಳಾಂತರಿಸಲಾಗುತ್ತಿದೆ. ಬಲವಂತದ ಕ್ರಮ ಕೈಗೊಳ್ಳುತ್ತಿಲ್ಲ. ಇದರ ವಿರುದ್ಧ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಬಿಷಪ್ ವಿವರ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry