ಮಂಗಳೂರು ವಿಮಾನ ದುರಂತ: ವರದಿ ಬಹಿರಂಗ

7

ಮಂಗಳೂರು ವಿಮಾನ ದುರಂತ: ವರದಿ ಬಹಿರಂಗ

Published:
Updated:

ನವದಹೆಲಿ (ಪಿಟಿಐ):  158 ಮಂದಿಯನ್ನು ಬಲಿ ತೆಗೆದುಕೊಂಡ ಮಂಗಳೂರು ವಿಮಾನ ದುರಂತಕ್ಕೆ ಸಂಬಂಧಿಸಿದ ತನಿಖೆಯ ಅಂತಿಮ ವರದಿಯನ್ನು ಶುಕ್ರವಾರ ಬಹಿರಂಗಪಡಿಸಲಾಗಿದೆ.`ಈ ಭೀಕರ ದುರಂತಕ್ಕೆ ವಿಮಾನದ ಕ್ಯಾಪ್ಟನ್ ಝಡ್ ಗ್ಲುಸಿಕಾ ಅವರೇ ಕಾರಣ~ ಎಂದು ಘಟನೆ ನಡೆದ ಎರಡು ವರ್ಷಗಳ ಬಳಿಕ ಬಹಿರಂಗಗೊಂಡ ವರದಿಯಲ್ಲಿ ತನಿಖಾಧಿಕಾರಿಗಳು ಆರೋಪಿಸಿದ್ದಾರೆ.ವಿಮಾನವನ್ನು ರನ್‌ವೇಯಲ್ಲಿ ಇಳಿಸದೆ, ಸುತ್ತು ಹಾಕಿಸಿ ಎಂದು ಅಧಿಕಾರಿ ಎಚ್.ಎಸ್.ಅಹ್ಲುವಾಲಿಯಾ ಅವರು ಮೂರು ಬಾರಿ ಕರೆ ನೀಡಿದ್ದರೂ ಅದನ್ನು ಕಡೆಗಣಿಸಿ ಗ್ಲುಸಿಕಾ ವಿಮಾನವನ್ನು ಟೇಬಲ್‌ಟಾಪ್ ರನ್‌ವೇಯಲ್ಲಿ ಇಳಿಸಿದ್ದೇ ದುರಂತಕ್ಕೆ ಕಾರಣ ಎಂದು ಏರ್ ಮಾರ್ಷಲ್ ಭೂಷಣ್ ನಿಖಾಂತ್ ಗೋಖಲೆ ಅವರ ನೇತೃತ್ವದಲ್ಲಿ ನಡೆದ ತನಿಖಾ ವರದಿ ಸ್ಪಷ್ಟಪಡಿಸಿದೆ.2010ರ ಅಕ್ಟೋಬರ್ ತಿಂಗಳಿನಲ್ಲೇ ತನಿಖೆಯ ಮುಖ್ಯಾಂಶಗಳನ್ನು ತಂಡ ಸಲ್ಲಿಸಿದ್ದರೂ ಸಂಪೂರ್ಣ ವರದಿಯನ್ನು ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶನಾಲಯದ ವೆಬ್‌ಸೈಟ್‌ನಲ್ಲಿ ಶುಕ್ರವಾರ ಪ್ರಕಟಿಸಲಾಗಿದೆ.ದುರಂತ ನಡೆದ 2010ರ ಮೇ 22ರಂದು ಬೆಳಿಗ್ಗೆ, 737-800 ಬೋಯಿಂಗ್ ವಿಮಾನವನ್ನು ರನ್‌ವೇಯಿಂದ 5,200 ಅಡಿಗಳಷ್ಟು ದೂರದಿಂದ ಇಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಆದರೆ ಪೂರ್ಣ ದೂರವನ್ನು (5,200 ಅಡಿ) ಕ್ರಮಿಸುವ ಮುನ್ನವೇ ಅಂದರೆ, 2,800 ಅಡಿ ಕ್ರಮಿಸುವಷ್ಟರಲ್ಲಿಯೇ ಅದನ್ನು ಇಳಿಸಲಾಯಿತು.

ತಪ್ಪಿನ ಅರಿವಾದ ತಕ್ಷಣವೇ ಕ್ಯಾಪ್ಟನ್ ವಿಮಾನವನ್ನು ಪುನಃ ಮೇಲಕ್ಕೆ ಹಾರಿಸಲು ಪ್ರಯತ್ನಿಸಿದಾಗ ಅದರ ಬಲ ರೆಕ್ಕೆಯು ರನ್‌ವೇ ಪಕ್ಕದಲ್ಲಿದ್ದ ಸೂಚನಾ ಕಂಬಕ್ಕೆ ತಾಗಿ ನಿಯಂತ್ರಣ ಕಳೆದುಕೊಂಡಿತು. ಅಲ್ಲಿಂದ ನೇರವಾಗಿ ನಿಲ್ದಾಣದ ಗಡಿ ದಾಟಿ ಅದು ಪ್ರಪಾತಕ್ಕೆ ಉರುಳಿತು ಎಂದು ವರದಿ ತಿಳಿಸಿದೆ.  ದೇಶದಲ್ಲಿ ವಿಮಾನಯಾನ ಸೇವೆಗಳು ವ್ಯಾಪಕ ಪ್ರಮಾಣದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ, ಇಂಥ ದುರಂತಗಳು ಮರುಕಳಿಸದಿರಲು ಸ್ವತಂತ್ರ ನಾಗರಿಕ ವಿಮಾನಯಾನ ಸುರಕ್ಷಾ ಮಂಡಳಿಯೊಂದನ್ನು ಸ್ಥಾಪಿಸುವುದು ಅತ್ಯಗತ್ಯ ಎಂದು ತನಿಖಾ ತಂಡ ವರದಿಯಲ್ಲಿ ಸಲಹೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry