ಮಂಗಳೂರು ವಿವಿ ಘಟಿಕೋತ್ಸವ: ಶ್ರೀಕುಮಾರ್ ಬ್ಯಾನರ್ಜಿ

7

ಮಂಗಳೂರು ವಿವಿ ಘಟಿಕೋತ್ಸವ: ಶ್ರೀಕುಮಾರ್ ಬ್ಯಾನರ್ಜಿ

Published:
Updated:

ಮಂಗಳೂರು: ಶಿಕ್ಷಣ, ಶಕ್ತಿಮೂಲ ಹಾಗೂ ಪರಿಸರ ವಿಚಾರದ ಬಗ್ಗೆ ಹೆಚ್ಚಿನ ಗಮನ ಹರಿಸುವುದರ ಮೂಲಕ ಜಗತ್ತು ಎದುರಿಸುತ್ತಿರುವ ಸಮಸ್ಯೆ ಗಳನ್ನು ಬಗೆಹರಿಸಬಹುದು ಎಂದು ಅಣುಶಕ್ತಿ ಆಯೋಗದ ಅಧ್ಯಕ್ಷ, ಕೇಂದ್ರ ಅಣುಶಕ್ತಿ ಇಲಾಖೆ ಕಾರ್ಯದರ್ಶಿ ಡಾ. ಶ್ರೀಕುಮಾರ್ ಬ್ಯಾನರ್ಜಿ ಪ್ರತಿಪಾದಿಸಿದರು.ಮಂಗಳೂರು ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ 30ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಮುಂದು ವರಿಯುತ್ತಿರುವ ಜಗತ್ತಿನಲ್ಲಿ ಪರಿಸರ ರಕ್ಷಣೆ ಜತೆಗೇ ಬೃಹತ್ ಪ್ರಮಾಣದ ಜನಸಂಖ್ಯೆಯ ಅವಶ್ಯಕತೆಗಳನ್ನು ಪೂರೈಸುವುದು ಇಂದಿನ ಸವಾಲು. ಸಂಪನ್ಮೂಲ, ಸಾಮಗ್ರಿ ಹಾಗೂ ಇಂಧನ ಮೂಲಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ಅವರು ಗಮನ ಸೆಳೆದರು.ಪರಿಸರ ಮಾಲಿನ್ಯ ಸಮಸ್ಯೆ ಮಾನವ ಕುಲಕ್ಕೆ ದೊಡ್ಡ ಬೆದರಿಕೆ. ಜಾಗತಿಕ ತಾಪಮಾನ ಏರಿಕೆ ಭೀತಿಯ ಜತೆಗೇ ಇತರೆ ಮಾಲಿನ್ಯ ವಿಚಾರಗಳ ಬಗೆಗೂ ಹೆಚ್ಚಿನ ಗಮನ ಹರಿಸಬೇಕಿದೆ. ಪರಿಸರ ಮಾಲಿನ್ಯದ ಕೆಲವು ಸಮಸ್ಯೆಗಳನ್ನು ಸರಿಪಡಿಸಲು ನ್ಯಾನೋ ತಂತ್ರಜ್ಞಾನ ಕ್ಷೇತ್ರದಲ್ಲಾದ ಇತ್ತೀಚಿನ ಬೆಳವಣಿಗೆಗಳ ಮೂಲಕ ಸರಿಪಡಿಸಬಹುದು. ಸಮಾಜ ದಲ್ಲಾಗುವ ಹೊಸ ಶೋಧಗಳು ನೂತನ ತಂತ್ರಜ್ಞಾನದ ಹುಟ್ಟಿಗೆ ಕಾರಣ ಆಗುತ್ತವೆ ಎಂದು ಅವರು ತಿಳಿಸಿದರು.ಕಲ್ಲಿದ್ದಲು, ಪೆಟ್ರೋಲಿಯಂ, ನೈಸರ್ಗಿಕ ಅನಿಲಗಳನ್ನು ಸಾಂಪ್ರ ದಾಯಿಕ ಶಕ್ತಿಮೂಲ ಹೆಚ್ಚು ಅವಲಂಬಿಸಿದೆ. ಮುಂದಿನ ದಿನಗಳಲ್ಲಿ ಶಕ್ತಿಮೂಲಗಳ ಬೇಡಿಕೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುವ ಕಾರಣ ಇವುಗಳನ್ನೇ ಅವಲಂಬಿಸುವುದು ಸರಿಯಲ್ಲ. ಉಷ್ಣ ವಿದ್ಯುತ್ ಸ್ಥಾವರ ಗಳು ಹಸಿರು ಮನೆ ಅನಿಲಕ್ಕೆ ಮುಖ್ಯ ಕಾರಣ ಆಗುತ್ತಿವೆ.

 

ಕಳೆದ ಶತಮಾನ ದಲ್ಲಾದ ತೀವ್ರ ಕೈಗಾರಿಕೀಕರಣದ ಪರಿಣಾಮದಿಂದ ಹಸಿರುಮನೆ ಅನಿಲ ಪ್ರಮಾಣ ಐದು ಪಟ್ಟು ಜಾಸ್ತಿ ಯಾಯಿತು. ಇಂತಹ ಅಪಾಯಗಳನ್ನು ನಿಯಂತ್ರಿಸುವ ಸಲುವಾಗಿ ಸಾಂಪ್ರ ದಾಯಿಕ ಹಾಗೂ ನೂತನ ಇಂಧನ ಮೂಲಗಳ ನಡುವೆ ಸಮನ್ವಯ ಸಾಧಿಸಿ ಬಳಕೆ ಮಾಡುವುದು ಸೂಕ್ತ ಎಂದು ಅವರು ತಿಳಿಸಿದರು.ದೇಶದಲ್ಲಿ ಇಂಧನಗಳಲ್ಲಿ ಪ್ರಸ್ತತ ಅಣುವಿದ್ಯುತ್ ಕೊಡುಗೆ ಶೇ. 3ರಷ್ಟು ಮಾತ್ರ. ಇತ್ತೀಚಿನ ದಿನಗಳಲ್ಲಿ ಅಣು ವಿದ್ಯುತ್ ಉತ್ಪಾದನೆ ವಿಚಾರದಲ್ಲಿ ಭಾರತ ಇತರೆ ದೇಶಗಳಿಗೆ ಸರಿಸಮವಾಗಿ ಬೆಳೆಯುತ್ತಿದೆ ಎಂದರು. ಡಾ. ಶ್ರೀಕುಮಾರ್ ಬ್ಯಾನರ್ಜಿ, ನವದೆಹಲಿಯ ಸಾರ್ವಜನಿಕ ಹಣಕಾಸು ಹಾಗೂ ನೀತಿಯ ರಾಷ್ಟ್ರೀಯ ಸಂಸ್ಥೆಯ ನಿರ್ದೇಶಕ ಡಾ. ಗೋವಿಂದ ರಾವ್ ಮಾರ್ಪಳ್ಳಿ, ಹಿರಿಯ ಸಾಹಿತಿ ಏರ್ಯ ಲಕ್ಷ್ಮಿನಾರಾಯಣ ಆಳ್ವ ಅವರಿಗೆ ಉನ್ನತ ಶಿಕ್ಷಣ ಸಚಿವ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಗೌರವ ಡಾಕ್ಟರೇಟ್, ಪದವಿ ಪ್ರದಾನ ಮಾಡಿದರು. 43 ಮಂದಿ ಡಾಕ್ಟರೇಟ್, 17 ಮಂದಿ ಎಂಫಿಲ್, 182 ಮಂದಿ ಸ್ನಾತಕೋತ್ತರ ಪದವಿ, 1169 ಮಂದಿ ಪದವಿ ಸ್ವೀಕರಿಸಿದರು. ವಿವಿಧ ಪದವಿಗಳಲ್ಲಿ ರ‌್ಯಾಂಕ್ ಗಳಿಸಿದ 35 ಮಂದಿ ಚಿನ್ನದ ಪದಕ, ಅತ್ಯಧಿಕ ಅಂಕ ಗಳಿಸಿದ 57 ಮಂದಿ ನಗದು ಬಹುಮಾನ ಸ್ವೀಕರಿಸಿದರು. ಕುಲಪತಿ ಪ್ರೊ. ಟಿ.ಸಿ.ಶಿವಶಂಕರಮೂರ್ತಿ, ಕುಲಸಚಿವ ಪ್ರೊ. ಚಿನ್ನಪ್ಪ ಗೌಡ, ಪರೀಕ್ಷಾಂಗ ಕುಲಸಚಿವ ಪಿ.ಎಸ್. ಯಡಪಡಿತ್ತಾಯ, ಸಿಂಡಿಕೇಟ್ ಸದಸ್ಯರು, ವಿವಿಧ ನಿಕಾಯದ ಮುಖ್ಯಸ್ಥರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry