ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದು ಉದ್ಘಾಟನೆ

7

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇಂದು ಉದ್ಘಾಟನೆ

Published:
Updated:

ಮಂಗಳೂರು: ವಿಕಿರಣಶೀಲಧಾತುಗಳು ಮತ್ತು ವಿಕಿರಣ ತಂತ್ರಜ್ಞಾನ ಆನ್ವಯಿಕ ಕೇಂದ್ರವು (ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೊಐಸೊಟೋಪ್ಸ್ ಅಂಡ್ ರೇಡಿಯೇಶನ್ ಟೆಕ್ನಾಲಜಿ) ಮಂಗಳೂರು ವಿಶ್ವವಿದ್ಯಾಲಯದಲ್ಲಿ ಗುರುವಾರ ಮಧ್ಯಾಹ್ನ 1.15ಕ್ಕೆ ಉದ್ಘಾಟನೆಗೊಳ್ಳಲಿದೆ.ಮುಂಬೈಯ ಅಣುಶಕ್ತಿ ಇಲಾಖೆ ಅಂಗ ಸಂಸ್ಥೆಗಳಾದ `ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ ಸೈನ್ಸ್~ ಮತ್ತು `ಬೋರ್ಡ್ ಆಫ್ ರೇಡಿಯೇಷನ್ ಅಂಡ್ ಐಸೋಟೋಪ್ ಟೆಕ್ನಾಲಜಿ ಸಹಯೋಗದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ.ವಿಕಿರಣಶೀಲ ಧಾತುಗಳು ಮತ್ತು ವಿಕಿರಣ ತಂತ್ರಜ್ಞಾನ ಉಪಯೋಗಿಸಿ ಮೂಲ ಮತ್ತು ಆನ್ವಯಿಕ ಸಂಶೋಧನೆ ಕೈಗೊಳ್ಳಲು ದೇಶದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿರುವ ಮೊದಲ ಹಾಗೂ ಏಕೈಕ ಕೇಂದ್ರ ಎಂದು ಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ವಿ.ವಿ. ಈ ಎರಡೂ ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. `ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ ಸೈನ್ಸ್~ ಸಂಸ್ಥೆ ರೂ. 3 ಕೋಟಿ ಧನ ಸಹಾಯ ನೀಡಿದೆ. ವಿ.ವಿ. ರೂ 60 ಲಕ್ಷ ವೆಚ್ಚದಲ್ಲಿ ಕೇಂದ್ರದ ಕಟ್ಟಡವನ್ನು ನವೀಕರಿಸಿಕೊಟ್ಟಿದೆ.ಕೇಂದ್ರದಲ್ಲಿ ಗಾಮ ಇರಾಡಿಯೇಟರ್, ರೇಡಿಯೋ ಅಯೊಡಿನೇಷನ್, ಇಂಗಾಲ-14 ಮತ್ತು ಇತರ ಐಸೋಟೋಪ್, ಹೈಬ್ರಿಡೋಮಾ ಮತ್ತು ಸೆಲ್‌ಕಲ್ಚರ್, ರೇಡಿಯೇಷನ್ ಕೌಂಟಿಂಗ್ ಮತ್ತು ಉಪಕರಣಗಳ ಪ್ರಯೋಗಾಲಯ ಇವೆ.

 

ಜೀವವಿಜ್ಞಾನ, ಕೃಷಿ, ವೈದ್ಯಕೀಯ ಮತ್ತು ಔಷಧೀಯ ವಿಜ್ಞಾನ ಕ್ಷೇತ್ರಗಳಲ್ಲಿ ಬಹುವಾಗಿ ಬಳಕೆಯಾಗುತ್ತಿರುವ ವಿಕಿರಣ ಮತ್ತು ವಿಕಿರಣಶೀಲಧಾತುಗಳ ಪರಿಚಯ, ವಿವಿಧ ರೀತಿಯ ಉಪಯೋಗ ಮತ್ತು ಪ್ರಯೋಗಗಳು, ಉನ್ನತ ಮತ್ತು ಅತಿ ಸೂಕ್ಷ್ಮ ಮಟ್ಟದ ಸಂಶೋಧನಾ ಕ್ಷೇತ್ರಗಳಲ್ಲಿ ಇವುಗಳ ಬಳಕೆ ಮತ್ತು ತರಬೇತಿ ಕೊಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಿದೆ.

 

ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ವಿಕಿರಣ ಮತ್ತು ವಿಕಿರಣ ತಂತ್ರಜ್ಞಾನಗಳನ್ನು ಹಾಗೂ ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಅಂತರ ವಿಷಯಗಳಲ್ಲಿ ಸಂಶೋಧನೆ ಮತ್ತು ಕೈಗಾರಿಕೆಗಳಲ್ಲಿ ಉದ್ಯೋಗಕ್ಕೆ ಸೇರಲು ಇಚ್ಛಿಸುವವರಿಗೆ 3 ತಿಂಗಳ ಸರ್ಟಿಫಿಕೇಟ್ ಕೋರ್ಸ್ ನಡೆಸಲಾಗುವುದು ಎಂದರು.ಈ ಕ್ಷೇತ್ರಕ್ಕೆ ಸಂಬಂಧಪಟ್ಟ ಕೈಗಾರಿಕೆಗಳಲ್ಲಿ ಉದ್ಯೋಗದಲ್ಲಿರುವವರಿಗೆ ಮತ್ತು ಸಂಶೋಧನೆಯಲ್ಲಿ ತೊಡಗಿರುವ ಯುವ ವಿಜ್ಞಾನಿಗಳಿಗೆ ತರಬೇತಿ ಕೊಡಲಾಗುವುದು.6 ತಿಂಗಳಿಗೊಮ್ಮೆ ಸ್ನಾತಕೋತ್ತರ ವಿಜ್ಞಾನ ಪದವಿಯ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ತಿಂಗಳ ತರಬೇತಿ ನಡೆಸಲಾಗುವುದು.ವಿಜ್ಞಾನ, ವೈದ್ಯಕೀಯ, ಔಷಧೀಯ ವಿಜ್ಞಾನ, ಕೃಷಿ, ಅರಣ್ಯ ಮುಂತಾದ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ವಿಷಯಗಳಲ್ಲಿ ಅನ್ವಯವಾಗುವ ವಿಕಿರಣ, ವಿಕಿರಣಶೀಲಧಾತು, ವಿಕಿರಣ ತಂತ್ರಜ್ಞಾನ ಮತ್ತು ಅವುಗಳ ಉಪಯೋಗಕ್ಕೆ ಸಂಬಂಧಿಸಿದ ಪಠ್ಯಕ್ರಮ ಸಿದ್ಧಪಡಿಸಿ ಕೊಡಲಾಗುವುದು ಮತ್ತು ಪ್ರಯೋಗಾಲಯ ಒದಗಿಸಲಾಗುವುದು ಎಂದರು.ಈಗಾಗಲೇ ಕೇಂದ್ರದಲ್ಲಿ ಸುಲಭವಾಗಿ ಇನ್ಸುಲಿನ್ ಉತ್ಪತ್ತಿ ಮತ್ತು ಅದರ ಪ್ರಮಾಣ ಗುರುತಿಸುವ, ಗ್ಯಾಸ್ಟ್ರಿಕ್ ಮತ್ತು ಕರುಳಿನ ಹುಣ್ಣಿಗೆ ಕಾರಣವಾಗಿರುವ ಹೆಲೆಕೊ ಬ್ಯಾಕ್ಟರ್ ಪೈಲೋರಿ ಎಂಬ ಜೀವಾಣು ಪತ್ತೆ ಹಚ್ಚುವ, ಜೈವಿಕ ವಸ್ತುಗಳ ಮೇಲೆ ಗಾಮಾ ವಿಕಿರಣದ ಪ್ರಭಾವ, ಅಪಾಯದ ಅಂಚಿನಲ್ಲಿರುವ ಪಶ್ಚಿಮ ಘಟ್ಟದ ಮರಗಳ ಸಂರಕ್ಷಣೆಯ ಸಂಶೋಧನಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry