ಮಂಗಳೂರು: ಸೇಂಟ್ ಥೆರೆಸಾ ಶಾಲೆ ಮೇಲೆ ದಾಳಿ

7

ಮಂಗಳೂರು: ಸೇಂಟ್ ಥೆರೆಸಾ ಶಾಲೆ ಮೇಲೆ ದಾಳಿ

Published:
Updated:

ಮಂಗಳೂರು: ನಗರದ ಬೆಂದೂರ್‌ವೆಲ್‌ನ ಸೇಂಟ್ ಥೆರೆಸಾ ಶಾಲೆಯಲ್ಲಿರುವ ಥೆರೆಸಾ ಪ್ರತಿಮೆಗೆ ಭಾನುವಾರ ಮುಂಜಾನೆ ದುಷ್ಕಮಿಗಳ ತಂಡವೊಂದು ಕಲ್ಲು ಹಾಗೂ ಇಟ್ಟಿಗೆ ತೂರಿ ಪ್ರತಿಮೆಯ ಹೊರಭಾಗದ ಫೈಬರ್ ಗ್ಲಾಸ್ ಒಡೆದು ಹಾಕಿದ ಘಟನೆ ನಡೆದಿದೆ.ಬೆಳಿಗ್ಗೆ 4.30ರ ಸುಮಾರಿಗೆ ಬೈಕ್‌ನಲ್ಲಿ ಬಂದ ಮೂವರ ತಂಡವೊಂದು ಪ್ರತಿಮೆಯತ್ತ ಕಲ್ಲು ತೂರಿದೆ. ಈ ವೇಳೆ ಸದ್ದು ಕೇಳಿದ ಸಂಸ್ಥೆಯ ವಾಚ್‌ಮೆನ್ ಬಂದು ನೋಡುವ ವೇಳೆಗೆ ದುಷ್ಕಮಿಗಳು ಪರಾರಿಯಾಗಿದ್ದಾರೆ. ಅವರ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಫೈಬರ್ ಗ್ಲಾಸ್‌ಗೆ ಪೂರ್ತಿ ಹಾನಿಯಾಗಿದೆ. ಆದರೆ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ.2008ರ ಚರ್ಚ್ ದಾಳಿಯ ವೇಳೆಯಲ್ಲೂ ಶಾಲೆಯ ಕಟ್ಟಡಕ್ಕೆ ಕಲ್ಲು ತೂರಲಾಗಿತ್ತು. ಆಗ ಪ್ರತಿಮೆ ಸುತ್ತ ಗಾಜು ಇತ್ತು. ಅದು ಒಡೆದು ಹೋದ ಹಿನ್ನೆಲೆಯಲ್ಲಿ ಫೈಬರ್ ಗ್ಲಾಸ್ ಅಳವಡಿಸಲಾಗಿತ್ತು. ಅದಾದ ಬಳಿಕ ಮತ್ತೊಮ್ಮೆ ದಾಳಿ ನಡೆದಿತ್ತು. ಈಗ ಮೂರನೇ ಬಾರಿ ದಾಳಿ ನಡೆದಿದೆ. ಈ ಸಂಸ್ಥೆ ಬೆಥನಿ ವಿದ್ಯಾಸಂಸ್ಥೆಯ ಆಧೀನದಲ್ಲಿದೆ.ಮಂಗಳೂರು ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry