ಮಂಗಳೂರು: ಹೊಸ ಎಟಿಸಿ ನಿರ್ಮಿಸಿ

7

ಮಂಗಳೂರು: ಹೊಸ ಎಟಿಸಿ ನಿರ್ಮಿಸಿ

Published:
Updated:

ನವದೆಹಲಿ: 158 ಜನರನ್ನು ಬಲಿ ತೆಗೆದುಕೊಂಡ ಮಂಗಳೂರು ವಿಮಾನ ನಿಲ್ದಾಣ ದುರಂತ ಕುರಿತು ವಿಚಾರಣೆ ನಡೆಸಿದ ಏರ್ ಮಾರ್ಷಲ್ ಬಿ.ಎನ್. ಗೋಖಲೆ ನೇತೃತ್ವದ ಸಮಿತಿಯು ವಿಮಾನ ನಿಲ್ದಾಣದ ಹಲವು ಲೋಪಗಳನ್ನು ಪತ್ತೆ ಹಚ್ಚಿದ್ದು, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ `ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ~ (ಎಎಐ) ಇವುಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ವಿಮಾನ ನಿಲ್ದಾಣ ಮಧ್ಯದಲ್ಲಿ ಹೊಸ `ವಾಯುಸಂಚಾರ ನಿಯಂತ್ರಣ ಗೋಪುರ~ (ಎಟಿಸಿ) ನಿರ್ಮಿಸಬೇಕು. ಹವಾಮಾನ ಅಧಿಕಾರಿಗೂ ಸ್ಥಳಾವಕಾಶ ಕಲ್ಪಿಸಲು ಸಾಧ್ಯವಾಗುವಂತೆ ವಿಶಾಲವಾದ ಗೋಪುರ ಇರಬೇಕು. ಈಗಿನ ಎಟಿಸಿ ಗೋಪುರದಲ್ಲಿ ಸಾಕಷ್ಟು ಸ್ಥಳಾವಕಾಶ ಇಲ್ಲ. ಅಲ್ಲದೆ, ಹೊಸ `ಟರ್ಮಿನಲ್~ನಿಂದ ವಿಮಾನ ಹಾರಾಟ ಆರಂಭವಾದ ಬಳಿಕ ಇಡೀ ನಿಲ್ದಾಣದ ನೋಟ ಸ್ಪಷ್ಟವಾಗಿ ಕಾಣುವುದಿಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ವಿಮಾನ ದುರಂತದ ಬಳಿಕ `ಟೇಬಲ್ ಟಾಪ್~ ವಿಮಾನ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ವಿಚಾರಣಾ ಸಮಿತಿ ಸದಸ್ಯರು ಪ್ರತಿಯೊಂದು ವಿಮಾನ ನಿಲ್ದಾಣದಲ್ಲಿ `ಏರಿಯಾ ರಾಡಾರ್~ ಅಳವಡಿಸುವ ಅಗತ್ಯವಿದೆ. ಆದರೆ, ಇದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆರ್ಥಿಕವಾಗಿ ಕಾರ್ಯಸಾಧುವಲ್ಲವಾದ್ದರಿಂದ `ರಿಪೀಟರ್ ಡಿಸ್‌ಪ್ಲೇ~ ಅಳವಡಿಸಬೇಕು ಇದರಿಂದ ವಾಯು ಮಾರ್ಗದ ಮೇಲೆ ನಿಗಾ ವಹಿಸಲು ಏರ್ ಕಂಟ್ರೋಲ್‌ಗೆ ಸಾಧ್ಯವಾಗಲಿದೆ ಎಂದು ವರದಿ ಸಲಹೆ ಮಾಡಿದೆ.

ಮಂಗಳೂರು ನಿಲ್ದಾಣದಲ್ಲಿ ಏರಿಯಾ ರಾಡರ್ ಅಲಭ್ಯತೆ ವಿಮಾನ ದುರಂತಕ್ಕೆ ಕಾಣಿಕೆ ನೀಡಿದೆ. ದುರಂತಕ್ಕೀಡಾದ ವಿಮಾನ  ಸಮೀಪಕ್ಕೆ ಬಂದಾಗ ಏರ್ ಕಂಟ್ರೋಲ್‌ನಿಂದ ಇಳಿಯುವಂತೆ ಸೂಚನೆ ಕೊಡಲಾಗಿದೆ. ಏರಿಯಾ ರಾಡರ್ ಇದ್ದಿದ್ದರೆ ದೂರದಲ್ಲೇ ವಿಮಾನಕ್ಕೆ ಸೂಚನೆ ನೀಡಬಹುದಿತ್ತು. ಇದರಿಂದ ವಿಮಾನವನ್ನು ಸುರಕ್ಷಿತವಾಗಿ ಇಳಿಸಲು ಸಾಧ್ಯವಾಗುತ್ತಿತ್ತು ಎಂದು ವರದಿ ವಿವರಿಸಿದೆ.

ವಿಮಾನ ಇಳಿಯುವ ಅಥವಾ ಏರುವ ರನ್‌ವೇ ಸುಮಾರು 300 ಮೀಟರ್ ಅಗಲ ಇರಬೇಕು. ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಕೇವಲ 150 ಮೀಟರ್ ಅಗಲವಿದೆ. ಈ ರನ್‌ವೇ ಮತ್ತಷ್ಟು ಕಿರಿದಾಗದಂತೆ ಎಚ್ಚರ ವಹಿಸಬೇಕು. ರನ್‌ವೇ ಸುಧಾರಣಾ ಕ್ರಮಗಳನ್ನು ತಡಮಾಡದೆ ಕೈಗೆತ್ತಿಕೊಳ್ಳಬೇಕು ಎಂದು ವರದಿ ಕಿವಿಮಾತು ಹೇಳಿದೆ.

ವಿಮಾನ ನಿಲ್ದಾಣದ ಅಗ್ನಿ ಶಾಮಕ ಪಡೆಗಳ ನೈಪುಣ್ಯತೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ವಿಮಾನ ಚಾಲನಾ ಸಿಬ್ಬಂದಿಗೆ ಬಿಡುವು ಸಿಕ್ಕಾಗ `ಸಿಮ್ಯುಲೇಟರ್ಸ್‌~ನಲ್ಲಿ ತರಬೇತಿ ನೀಡಬೇಕು. ಇದಕ್ಕಾಗಿ ಹೆಚ್ಚಿನ ಸಂಖ್ಯೆಯ ಸಿಮ್ಯುಲೇಟರ್, ವಿಮಾನದ ಮಾದರಿಗಳು ಹಾಗೂ ತರಬೇತಿ ವಿಮಾನಗಳು ಪ್ರಾದೇಶಿಕವಾಗಿ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ವಿವರಿಸಿದೆ.

ಮಂಗಳೂರು ವಿಮಾನ ನಿಲ್ದಾಣದ ಸುತ್ತಮುತ್ತ ಬಾಕಿ ಉಳಿದಿರುವ ನೀರಿನ ಟ್ಯಾಂಕ್ ಬಣ್ಣದ ಕೆಲಸ ಮತ್ತು ಮರಗಿಡಗಳನ್ನು ಸವರುವ ಕೆಲಸವನ್ನು ಪೂರ್ಣಗೊಳಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ರಾಜ್ಯ ಸರ್ಕಾರದ ಜತೆ ಚರ್ಚಿಸಬೇಕು. ಮಂಗಳೂರು ವಿಮಾನ ನಿಲ್ದಾಣ ಎತ್ತರದ ಪ್ರದೇಶದಲ್ಲಿ ಇರುವುದರಿಂದ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಕೊಡಬಾರದು. ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ರಸ್ತೆಗಳನ್ನು ನಿರ್ಮಿಸಬೇಕು ಎಂದು ಹೇಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry