ಶನಿವಾರ, ನವೆಂಬರ್ 16, 2019
21 °C
ಸಂಪೂರ್ಣ ಸುರಕ್ಷಾ ಕಾರ್ಯಕ್ರಮ:

ಮಂಗಳೂರು: 11 ಲಕ್ಷ ಸದಸ್ಯರ ನೋಂದಣಿ

Published:
Updated:

ಮಂಗಳೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ತನ್ನ ಸ್ವಸಹಾಯ ಸಂಘ ಸದಸ್ಯರು ಮತ್ತು ಅವರ ಕುಟುಂಬಗಳ ಆರೋಗ್ಯ ರಕ್ಷಣೆಗಾಗಿ 2003-04ರಲ್ಲಿ ಆರಂಭಿಸಿದ ಸಂಪೂರ್ಣ ಸುರಕ್ಷಾ ಕಾರ್ಯಕ್ರಮ ದಶಕದ ಸಂಭ್ರಮದಲ್ಲಿದೆ. 2013-14ನೇ ಸಾಲಿಗೆ 11 ಲಕ್ಷ ಸದಸ್ಯರನ್ನು ನೋಂದಣಿ ಮಾಡಿಕೊಂಡಿದೆ.ನೋಂದಾಯಿತ ಆಸ್ಪತ್ರೆಗಳಲ್ಲಿ ಪಾವತಿರಹಿತ ಚಿಕಿತ್ಸಾ ಸೌಲಭ್ಯ, ಹೆರಿಗೆ, ಅಪಘಾತ, ಮರಣ ಸಾಂತ್ವನ ಸೌಲಭ್ಯ, ಕುಟುಂಬದ ಸದಸ್ಯರ ಒಟ್ಟು ಸೌಲಭ್ಯವನ್ನು ಯಾವುದೇ ವ್ಯಕ್ತಿಗೆ ವರ್ಗಾವಣೆ ಮಾಡುವ ಸೌಲಭ್ಯ ಇವೇ ಮೊದಲಾದ ವಿಶೇಷಗಳನ್ನು ಒಳಗೊಂಡಿರುವ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದನ್ವಯ ಇದುವರೆಗೂ 6 ಲಕ್ಷ ಸದಸ್ಯರಿಗೆ ವಿಮಾ ಕಂಪೆನಿಗಳಿಂದ ರೂ. 201 ಕೋಟಿಗೂ ಹೆಚ್ಚಿನ ಸೌಲಭ್ಯ ಒದಗಿಸಲಾಗಿದೆ. ಪಾಲುದಾರ ಕುಟುಂಬಗಳೇ ವಂತಿಗೆ ನೀಡಿ ಸೌಲಭ್ಯ ಪಡೆದುಕೊಳ್ಳುವ ಈ ಸುಸ್ಥಿರ ಯೋಜನೆ ಕಾರ್ಯಕ್ಷಮತೆಯಿಂದ ಗಮನ ಸೆಳೆದಿದೆ.ಪ್ರಸಕ್ತ ಸಾಲಿಗೆ 11 ಲಕ್ಷ ಸದಸ್ಯರು ರೂಪಾಯಿ 42 ಕೋಟಿ ವಂತಿಗೆ ಪಾವತಿಸಿದ್ದು, ವಿಮಾ ಕಂಪೆನಿಗಳಾದ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ, ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿ, ಓರಿಯಂಟಲ್ ಇನ್ಸೂರೆನ್ಸ್ ಕಂಪೆನಿ, ಯುನೈಟೆಡ್ ಇನ್ಸೂರೆನ್ಸ್ ಕಂಪೆನಿಗಳಿಗೆ ತಲಾ ರೂ. 10 ಕೋಟಿಯಂತೆ ಪ್ರೀಮಿಯಂ ಪಾವತಿಸಲಾಗಿದೆ.ಈ ಯೋಜನೆಯನ್ವಯ ಆರು ಸದಸ್ಯರ ಪ್ರತಿಯೊಂದು ಕುಟುಂಬಕ್ಕೂ ರೂ. 60,000ವರೆಗೆ ಚಿಕಿತ್ಸಾ ಸೌಲಭ್ಯವನ್ನು ನೋಂದಾಯಿತ ಕುಟುಂಬಗಳಿಗೆ ವಿಮಾ ಕಂಪನಿಗಳು ಒದಗಿಸಲಿವೆ. ಸದಸ್ಯರ ನೋಂದಣಿ, ಆಸ್ಪತ್ರೆಗಳ ಆಯ್ಕೆ, ಒಳರೋಗಿ ಸ್ವೀಕಾರಕ್ಕೆ ಅನುಮತಿ, ಬಿಲ್ಲುಗಳ ಪರಿಶೀಲನೆ ಮತ್ತು ಆಸ್ಪತ್ರೆಗಳಿಗೆ ಪಾವತಿ ಜವಾಬ್ದಾರಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಹಿಸಿಕೊಂಡಿರುತ್ತದೆ.

ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಂಪೂರ್ಣ ಸುರಕ್ಷಾ ಕಾರ್ಯಕ್ರಮದ ಕೇಂದ್ರ ಕಚೇರಿ ಧರ್ಮಸ್ಥಳದಲ್ಲಿದ್ದು, ವೈದ್ಯರು, ಆಡಳಿತ ತಜ್ಞರು ಇರುವ 60 ಜನ ಸಿಬ್ಬಂದಿ ದುಡಿಯುತ್ತಿದ್ದಾರೆ. ಪ್ರತಿಯೊಂದು ನಗರದಲ್ಲೂ ನೋಂದಾುತ ಸದಸ್ಯರ ಸೇವೆಗಾಗಿ ಸಂಪೂರ್ಣ ಸುರಕ್ಷಾ ಸಹಾಯಕರು ಕರ್ತವ್ಯ ವಹಿಸುತ್ತಾರೆ. ಸುರಕ್ಷಾ ಕಾರ್ಯಕ್ರಮ ಸಂಪೂರ್ಣ ಆನ್‌ಲೈನ್ ಆಗಿದ್ದು, ಸೌಲಭ್ಯಗಳು ಸದಸ್ಯರಿಗೆ ಶೀಘ್ರ  ದೊರೆಯುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್. ಎಚ್. ಮಂಜುನಾಥ್ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)