ಮಂಗಳ ಗ್ರಹದಲ್ಲಿ ನೀರು...

7

ಮಂಗಳ ಗ್ರಹದಲ್ಲಿ ನೀರು...

Published:
Updated:
ಮಂಗಳ ಗ್ರಹದಲ್ಲಿ ನೀರು...

ಮಂಗಳ ಗ್ರಹ ಸುತ್ತುವ ಕೃತಕ ಉಪಗ್ರಹ `ರಿಕಾನ್ನೈಸನ್ಸ್ ಆರ್ಬಿಟರ್~ ನಿಂದ ಅಚ್ಚರಿದಾಯಕ ಹೊಸ ಮಾಹಿತಿ ಸಿಕ್ಕಿದೆ. ಘನರೂಪದಲ್ಲಿ ಅಂದರೆ, ಐಸ್‌ಆಗಿ- ಮಂಗಳದಲ್ಲಿ ನೀರು ಇರುವುದು ಈಗಾಗಲೇ ಗೊತ್ತು.ಆದರೆ, ನೀರು ಘನೀಭವಿಸುವಾಗ ಜೈವಿಕ ಪ್ರಕ್ರಿಯೆಗಳು ಸ್ತಬ್ಧವಾಗುತ್ತವೆ. ಇದೀಗ ಆರ್ಬಿಟರ್ ಹೊಸ ನೀರಿನ ಲಭ್ಯತೆ, ಜೀವಿಗಳ ಅಸ್ತಿತ್ವ ಮತ್ತಿತರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಪಲ್ಲಟಗೊಳ್ಳುವ ಗೆರೆಗಳಂಥ ರಚನೆಗಳನ್ನು  ಕ್ಯಾಮೆರಾದಿಂದ  ಸೆರೆಹಿಡಿಯಲಾಗಿದ್ದು,  ಈ ಚಿತ್ರಗಳು ಮಂಗಳದಲ್ಲಿ ಹರಿಯುವ ನೀರು ಇರುವ ಸಾಧ್ಯತೆಗಳನ್ನು ಸೂಚಿಸಿವೆ. ಕಪ್ಪಗೆ ಕಾಣುವ, ಬೆರಳುಗಳಂಥ ರಚನೆಗಳು ಮಂಗಳದ ವಸಂತ ಋತುವಿನಲ್ಲಿ  ಕಾಣಿಸಿಕೊಂಡು, ಬೇಸಿಗೆ ಬಂದಂತೆ  ಹೆಚ್ಚು ಸ್ಫುಟವಾಗುತ್ತವೆ.ಚಳಿಗಾಲ ಸಮೀಪಿಸಿದಂತೆ ಅವು ಮಾಯವಾಗುತ್ತವೆ. ಈ ವಿದ್ಯಮಾನ ಹಲವು ಬಾರಿ ಪುನರಾವರ್ತನೆಗೊಂಡಿದೆ. ಮಂಗಳದ ದಕ್ಷಿಣಾರ್ಧಗೋಲದ ಮಧ್ಯ ಅಕ್ಷಾಂಶಗಳ ಇಳಿಜಾರು ಪ್ರದೇಶಗಳಲ್ಲಿ ಈ ವಿದ್ಯಮಾನ ಕಂಡು ಬಂದಿದೆ.ಇದರ ಬಗ್ಗೆ ಹಲವು ಊಹಾಪೋಹಗಳು ನಡೆದಿವೆ. ನೀರು ಘನವಾಗಲು ಬೇಕಾಗುವುದಕ್ಕಿಂತ ಕೆಳಗಿನ ಉಷ್ಣತೆಯಲ್ಲಿ ಉಪ್ಪು ನೀರು ಘನವಾಗುತ್ತದೆ. ಅಂದರೆ, ಐಸಿಗಿಂತಲೂ  ಕೆಳಗಿನ ಉಷ್ಣತೆಯಲ್ಲಿ  ಉಪ್ಪು ನೀರು  ದ್ರವಸ್ಥಿತಿಯಲ್ಲಿಯೇ ಇದ್ದು ಹರಿಯಬಲ್ಲದು. ಬೆರಳುಗಳಂಥ ಗೆರೆ ರಚನೆಗಳು ಮಂಗಳದ  ಉಳಿದ ಲಕ್ಷಣಗಳಿಗಿಂತ ಭಿನ್ನವಾದಂಥವು. ವಾತಾವರಣ ಹೆಚ್ಚುಬೆಚ್ಚಗಾದಂತೆ ಈ ಗೆರೆಗಳು ಹೆಚ್ಚು ಉದ್ದವಾಗುತ್ತವೆ. ಇವುಗಳ ಅಗಲ 0.5 ಮೀಟರ್‌ನಿಂದ 5 ಮೀಟರ್‌ಗಳ ತನಕ ಇರಬಹುದು. ಉದ್ದವೋ  ನೂರಾರು ಮೀಟರ್ ಇರಬಹುದು.ಹಳ್ಳ ಅಥವಾ ಕಂದರಗಳಂಥ ಮಂಗಳದ ರಚನೆಗಳು  ಈ ಗೆರೆ ರಚನೆಗಳಿಗಿಂತ   ಹೆಚ್ಚು ಅಗಲವಾಗಿವೆ.  ಧ್ರುವ ಪ್ರದೇಶಗಳ ಕಡೆಗೆ ಇಳಿಜಾರಾಗಿವೆ ಆದರೆ, ಗೆರೆ ರಚನೆಗಳು ಒಂದೊಂದಾಗಿರದೆ ಗುಂಪಾಗಿ  ಮಂಗಳದ ಕುಳಿಗಳಿಂದ ಹೊರಟಂತೆ ಕಾಣಿಸುತ್ತವೆ.ಒಂದು ಕುಳಿಯಲ್ಲಿ ಸಾವಿರ ಗೆರೆಗಳು ಕಂಡದ್ದೂ ಉಂಟು.   ಇವು ಸೂಚಿಸುವ ನೀರಿನ ಹರಿವು ಎಂಥದ್ದು? ಲವಣ ನಿಕ್ಷೇಪಗಳು  ಮಂಗಳದಲಲಿ ಧಾರಾಳವಾಗಿರುವುದು ಈಗಾಲೇ ತಿಳಿದು ಬಂದಿದೆ. ಕಾರ್ಬನ್ ಡೈಆಕ್ಸೈಡ್ ರೂಪದಲ್ಲಿ ಇರಬೇಕಾದರೆ ಮಂಗಳದ ಉಷ್ಣತೆ ಇನ್ನೂ  ಕಡಮೆ ಇರಬೇಕು.ಆದರೆ, ಸಾಮಾನ್ಯ ನೀರು ಘನವಾಗದಿರ ಬೇಕಾದರೆ ಮಂಗಳದ  ಉಷ್ಣತೆ ಈಗಿರುವುದಕ್ಕಿಂತ ಹೆಚ್ಚಿರಬೇಕು. ಅಂದರೆ, ಈ ಎರಡೂ ಸಾಧ್ಯತೆಗಳು ಇಲ್ಲ.  ಆದ್ದರಿಂದ ಉಪ್ಪು ನೀರಿನ ಹರಿವು ಗೆರೆ ರಚನೆಗಳಿಗೆ ಕಾರಣವಾಗಿರ ಬಹುದೆಂಬ  ಊಹೆಗೆ ಹೆಚ್ಚಿನ ಬಲ ಬಂದಿದೆ.ಭೂಮಿಯ ಸಾಗರಗಳಲ್ಲಿ ಇರುವ  ನೀರಿನಷ್ಟೇ  ಲವಣಾಂಶ ಮಂಗಳದ ಉಪ್ಪು ನೀರಿನಲ್ಲೂ ಇರಬಹುದೆಂಬ ಊಹೆಯಿಂದ ಹಲವರು ಈ ವಿವರಣೆಗೆ ಮುಂದುವರಿದಿದ್ದಾರೆ.

 

ಬೇಸಿಗೆಯಲ್ಲಿ  ಕಪ್ಪಾಗಿ ಕಾಣುವ ಗೆರೆ ರಚನೆಗಳು   ಚಳಿಗಾಲ ಬಂದಂತೆ ತಮ್ಮ ಕಪ್ಪು ಬಣ್ಣ  ಕಳೆದು ಕೊಳ್ಳುತ್ತವೆ. ಉಪ್ಪು ನೀರಿನ ಹರಿವಿನಿಂದ ಮೇಲ್ಮೈ ಕಣಗಳ  ಸ್ಥಾನ  ಬದಲಾಗಬಹುದು ಅಥವಾ  ನೆಲದ ನುಣುಪು  ವ್ಯತ್ಯಯವಾಗಬಹುದು.ಇದರಿಂದ ಗೆರೆಗಳು ಕಪ್ಪಾಗಿ ಕಾಣಿಸಬಹುದು. ಆದರೆ, ಉಷ್ಣತೆ ಕಡಿಮೆ ಆದಾಗ ಗೆರೆಗಳು ಕಡಿಮೆ ಕಪ್ಪಾಗಿ ಕಾಣಿಸುವುದು ಏಕೆ ಎಂಬುದಕ್ಕೆ  ಇನ್ನೂ ಉತ್ತರ  ಸಿಕ್ಕಿಲ್ಲ. ಉಪಗ್ರಹದ  ರೋಹಿತ ಮಾಪಕದಿಂದ ಕಂಡು ಬಂದಂತೆ ನೀರಿನ ಅಸ್ತಿತ್ವ  ಪತ್ತೆಯಾಗಿಲ್ಲ.ಕ್ಯಾಮೆರಾಕ್ಕೆ ಸಿಕ್ಕಿದ ಲಕ್ಷಣಗಳು ಕ್ಷಿಪ್ರವಾಗಿ ಮಾಯವಾಗುವುದರಿಂದ ಅಥವಾ ನೆಲಾಂತರ್ಗತವಾಗುವುದರಿಂದ ಈ ಫಲಿತಾಂಶ ಬಂದಿರಬಹುದು.

ಮತ್ತೆ  ಮತ್ತೆ ಕಾಣಿಸುವ ಕಪ್ಪು ಹರಿವುಗಳು ಉಪ್ಪು ನೀರು ಇರುವುದನ್ನು ಸೂಚಿಸುವುದು ಖಾತ್ರಿಯಾದರೆ ಮಂಗಳಗ್ರಹದಲ್ಲಿ  ದ್ರವ ನೀರಿರುವ ಜಾಗಗಳು ಇರುವುದು ಮೊದಲ ಬಾರಿಗೆ ಪತ್ತೆಯಾದಂತೆ ಆಗುವುದು. ಮಂಗಳದಲ್ಲಿ ವಿಶಿಷ್ಟ    ಜೀವಿಗಳು ಇರಬಹುದಾದ ಸಾಧ್ಯತೆಯನ್ನೂ ಇದು ಸೂಚಿಸುವುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry