ಮಂಗಳ ಚಂದಿರ ಎಲ್ಲಿ ಬೆಳಗಿದ ನೋಡಿ

7

ಮಂಗಳ ಚಂದಿರ ಎಲ್ಲಿ ಬೆಳಗಿದ ನೋಡಿ

Published:
Updated:
ಮಂಗಳ ಚಂದಿರ ಎಲ್ಲಿ ಬೆಳಗಿದ ನೋಡಿ

ಬೆಂಗಳೂರಿನಂಥ ಊರಿನ ಸುಮಾರು ಜನ ಇಂಟರ್‌ನೆಟ್‌ನಲ್ಲೇ ದಿನದ ಬಹುಪಾಲು ಕಳೆಯುವುದರಿಂದ ಪುಸ್ತಕ ಓದುವುದು, ಸಂಗೀತ ಕೇಳುವುದು ಆನ್‌ಲೈನ್ ಮಾಡುವುದು ಸುಲಭ. ಇಂಥ ಡಿಜಿಟಲ್ ಸಂಗೀತ ಸಾಹಿತ್ಯ ಎಷ್ಟು ಖುಷಿ ಕೊಡುತ್ತದೆ ಕೊಡುವುದಿಲ್ಲ ಅನ್ನುವ ವಾದವನ್ನು ಸದ್ಯಕ್ಕೆ ಪಕ್ಕಕ್ಕಿಟ್ಟು ನೋಡಿದಾಗ ಬಹಳಷ್ಟು ಹೊಸ ಸೌಕರ್ಯಗಳು ಕಣ್ಣಿಗೆ ಬೀಳುತ್ತವೆ.ಲೌಡ್ಲೀ (www.loudlee.com) ಎಂಬ ಸಂಗೀತ ಕೇಳಲು ಸಹಾಯ ಮಾಡುವ ವೆಬ್‌ಸೈಟ್ ಈಚೆಗೆ ನನ್ನ ಗಮನಕ್ಕೆ ಬಂತು. ಇದನ್ನು ಫೇಸ್‌ಬುಕ್‌ನೊಂದಿಗೆ ಹೊಂದಿಸಿಕೊಂಡು ಸಾವಿರಾರು ಹಾಡು ಖರ್ಚಿಲ್ಲದೆ ಕೇಳಬಹುದು. ನಿಮ್ಮ ಸ್ನೇಹಿತರೂ ಈ ಸೌಲಭ್ಯವನ್ನು ಬಳಸಿದರೆ ಅವರು ಯಾವ ಹಾಡುಗಳನ್ನು ಕೇಳುತ್ತಿದ್ದಾರೆ ಎಂದು ನಿಮಗೆ ತಿಳಿಸುತ್ತದೆ. ಸಂಗೀತವನ್ನು (ಕಾನೂನುಬದ್ಧವಾಗಿ) ಹಂಚಿಕೊಂಡು ಕೇಳುವ ಸೌಕರ್ಯವಾಗಿ ಇದು ಮೂಡಿ ಬಂದಿದೆ.ಈಗಿರುವ ಲೌಡ್ಲೀಯಲ್ಲಿ ಇಂಗ್ಲಿಷ್ ಪಾಪ್ ಹಾಡುಗಳೇ ಹೆಚ್ಚು. ಅರವತ್ತರ ದಶಕದ ಬೀಟಲ್ಸ್‌ನಿಂದ ಹಿಡಿದು ಈ ವರ್ಷದ ಗ್ರ್ಯಾಮಿ ಪ್ರಶಸ್ತಿ ಗೆದ್ದ ಹಾಡುಗಾರ್ತಿ ಅಡೆಲ್‌ವರೆಗೂ ಪಾಶ್ಚಿಮಾತ್ಯ ಸಂಗೀತದ ಸಾವಿರಾರು ಜನಪ್ರಿಯ ಕಲಾವಿದರ ಹೆಸರುಗಳನ್ನು ಹುಡುಕಿ ಹಾಡುಗಳನ್ನು ಕೇಳಬಹುದು. ಸದ್ಯಕ್ಕೆ ಭಾರತೀಯ ಕಲಾವಿದರ ಸಂಖ್ಯೆ ಕಡಿಮೆ. ಆದರೆ ಕಿಶೋರ್ ಕುಮಾರ್, ರವಿಶಂಕರ್ ಎಂದು ಹುಡುಕಿದರೆ ಕೆಲವು ಧ್ವನಿಮುದ್ರಿಕೆಗಳಾದರೂ ಸಿಗುತ್ತವೆ.ಇಂಟರ್‌ನೆಟ್‌ನಲ್ಲಿ ಭಾರತೀಯ ಸಂಗೀತ ಬಿಟ್ಟಿಯಾಗಿ ಕೇಳುವವರಿಗೆ ಅತ್ಯುತ್ತಮ ಸೈಟ್ ಅಂದರೆ ಗೂಗಲ್ ಮ್ಯೂಸಿಕ್. (ಗೂಗಲ್, ಇಂಡಿಯಾ ಮತ್ತು ಮ್ಯೂಸಿಕ್ ಎಂದು ಗೂಗಲ್‌ನಲ್ಲೇ ಹುಡುಕಿ). ಎಚ್ ಎಂ ವಿ (ಈಗಿನ ಆರ್ ಪೀ ಜಿ ಸರೆಗಮ) ದಂಥ ಸಂಸ್ಥೆಗಳ ಸಹಯೋಗದಿಂದ ನಡೆಯುತ್ತಿರುವ ಈ ಸೈಟ್‌ನಲ್ಲಿ ಕನ್ನಡವೂ ಸೇರಿದಂತೆ ಹಲವಾರು ಭಾಷೆಗಳ ಹಾಡುಗಳನ್ನು ಕೇಳಬಹುದು.

 

1943ರಲ್ಲಿ ಬಿಡುಗಡೆಯಾದ ಸತ್ಯ ಹರಿಶ್ಚಂದ್ರ ಚಿತ್ರದಲ್ಲಿ ಬಿ.ಎಸ್. ರಾಜಯ್ಯಂಗಾರ್ ಹಾಡಿದ ಕೆಲವು ಹಾಡುಗಳನ್ನು ಈ ಲೇಖನಕ್ಕೆ ಸಂಶೋಧನೆ ಮಾಡುವ ಸಂದರ್ಭದಲ್ಲಿ ಕೇಳಲು ಸಿಕ್ಕವು. ಎಪ್ಪತ್ತು ಹಾಗೂ ಎಂಭತ್ತರ ದಶಕದ ಹಾಡುಗಳು ಸುಮಾರು ಕಂಡುಬಂದವು, ಆದರೆ ಇತ್ತೀಚಿನ ಚಿತ್ರಗಳ ಹಾಡುಗಳು ಹೆಚ್ಚಾಗಿ ಇದ್ದ ಹಾಗಿಲ್ಲ.ಗೂಗಲ್ ಮ್ಯೂಸಿಕ್‌ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವೂ ಸಿಗುತ್ತದೆ. ಈ ಸೇವೆ ಉಚಿತ, ಆದರೆ ನೀವು ಹಾಡುಗಳನ್ನು ಡೌನ್‌ಲೋಡ್ ಮಾಡಬೇಕಾದರೆ ಶುಲ್ಕ ತೆರಬೇಕು. ಗೂಗಲ್ ಬಗ್ಗೆ ಗೊತ್ತಿದ್ದರಿಂದ ಲೌಡ್ಲೀ ಕಂಡಾಗ ನನಗೇನೂ ನಿಧಿ ಸಿಕ್ಕಷ್ಟು ಖುಷಿಯಾಗಲಿಲ್ಲ. ಲೌಡ್ಲೀಯ ಒಂದೇ ಹಿರಿಮೆ ಎಂದರೆ ಅದು ಸ್ನೇಹಿತರ ಸಂಗೀತ ಕೇಳ್ಮೆಯನ್ನು ನಮಗೆ ಬಿತ್ತರಿಸುತ್ತಿರುತ್ತದೆ. ಗೂಗಲ್ ಮ್ಯೂಸಿಕ್‌ನಲ್ಲಿರುವಷ್ಟು ಭಾರತೀಯ ಸಂಗೀತ ಅಲ್ಲಿ ನಿರೀಕ್ಷೆ ಮಾಡುವುದು ಅವಾಸ್ತವಿಕ.

 

ಈ ಟಿಪ್ಪಣಿ ಬರೆಯುವುದಕ್ಕೆ ಇನ್ನೊಂದು ಕಾರಣವಿದೆ. ಕನ್ನಡ ಹಾಡುಗಳು ಇರಬಹುದೇ ಎಂದು ನಾನು ಹುಡುಕ ಹೊರಟಾಗ ಲೌಡ್ಲೀಯಲ್ಲಿ ಸಿಕ್ಕಿದ್ದು ತುಂಬಾ ಆಶ್ಚರ್ಯದ ಒಂದು ಹಾಡು.ಈ ಹಾಡಿನ ಶೀರ್ಷಿಕೆಯೇ `ಕನ್ನಡ~ ಎಂದು. ಪ್ಲೇ ಒತ್ತಿದಾಗ ಕೇಳಿಬಂದಿದ್ದು ಮಕ್ಕಳು ಕೈಯಲ್ಲಿ ಗೆಜ್ಜೆ ತಟ್ಟುತ್ತಾ ಹಾಡುತ್ತಿರುವ ಹಾಡು: `ಕನ್ನಡ ನಾಡಿನ ಮಂಗಳ ಚಂದಿರ ತುಂಬಿ ಬೆಳಗಿ ಬರಲಿ.~ ಹವ್ಯಾಸಿ ಮಟ್ಟದ ಹಾಡುಗಾರಿಕೆ ಕೇಳುತ್ತಿದಂತೆಯೇ ಒಂದು ಗಿಟಾರ್ ಶೈಲಿಯ `ಬಜೂಕಿ~ ಎಂಬ ವಾದ್ಯ ಅದೇ ಟ್ಯೂನ್ ಬಾರಿಸತೊಡಗಿತು.ಹಾಗೆಯೇ ಬೆಳೆಯುತ್ತ ಹೋಗಿ ಒಂದು ಪೂರ್ತಿ ಹಾಡನ್ನು ಪಾಶ್ಚಿಮಾತ್ಯ ವಾದ್ಯಗಳು ನುಡಿಸುತ್ತವೆ. ಈ ಮೈಕ್ ಮೈನಿಯೇರಿ ಮತ್ತು ಮಾರ್ನಿಕ್ಸ್ ಬಸ್‌ಟ್ರಾ ಜಾಜ್ ಕ್ವಾರ್ಟೆಟ್ (ಅಂದರೆ ನಾಲ್ಕು ಜನರ ಜಾಜ್ ತಂಡ) ಹಾಡನ್ನು ನುಡಿಸುತ್ತಿರುವ ಯೂ ಟ್ಯೂಬ್ ವೀಡಿಯೊ ಕೂಡ ಇದೆ.ಈ ಜಾಗತಿಕ ಯುಗದಲ್ಲಿ ಪಶ್ಚಿಮದವರ ಹಾಡುಗಳು ಎಲ್ಲೆಲ್ಲೂ ನಮ್ಮನ್ನು ಆವರಿಸುವಾಗ ನಮ್ಮ ಹಾಡೊಂದನ್ನು ಅಲ್ಲಿಯ ಕೆಲವು ಕಲಾವಿದರು ಯಾವುದೋ ಕೆಫೆಯಲ್ಲೋ ಬಾರಲ್ಲೋ ನುಡಿಸುತ್ತಿರುವುದನ್ನು ಕೇಳಿ ಚಕಿತಗೊಂಡೆ.

ಇದು ಮಹಾನ್ ಕಲಾವಿದರ ರಾಗದಾರಿ ಸಂಗೀತವಾಗಿರದೇ ಹಿಂದಿಯೇತರ ಭಾಷೆಯ ನಾಡಪ್ರೀತಿ ಬಿಂಬಿಸುವ ಗೀತೆ ಎನ್ನುವುದು ನನ್ನ ಆಶ್ಚರ್ಯಕ್ಕೆ ಕಾರಣ. ಎಚ್.ಎಂ.ರಂಗನಾಥ್ ಎಂಬುವರು ಬರೆದ ಈ ಹಾಡನ್ನು 25 ವರ್ಷದ ಹಿಂದೆ ಅಂತರ ಕಾಲೇಜು ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ತುಂಬ ಹಾಡುತ್ತಿದ್ದರು.ಜಾಜ್ ಕ್ವಾರ್ಟೆಟ್‌ನ ಸಂಗೀತ ಉತ್ಕೃಷ್ಟವೆಂದು ಹೇಳಲಾಗದಿದ್ದರೂ ಇಂಥ ವಿನಿಮಯ ಆಗುತ್ತಿರುವುದು ಸಂತೋಷದ ಹೊಸ ಬೆಳವಣಿಗೆ ಅಲ್ಲವೇ? ಬೆಂಗಳೂರಿನ ಜಪಾನೀಯರು ಮುದ್ದು ಮುದ್ದಾಗಿ ನಮ್ಮ ಹಾಡುಗಳನ್ನು ಹಾಡಿದಾಗ ನಮಗಾಗುವ ರೋಮಾಂಚನವೇ ಈ ಹಾಡನ್ನು ಕೇಳಿದಾಗಲೂ ಆಗುತ್ತದೇನೋ!ಭಾರತದ ನೆಲ್ಸನ್ ಮಂಡೇಲ

ದೇವೇಗೌಡರಿಗೆ 80 ವರ್ಷ ತುಂಬಿ ಅಭಿನಂದನಾ ಕಟ್ ಔಟ್‌ಗಳು ಎಲ್ಲೆಡೆ ವಿಜೃಂಭಿಸುತ್ತಿವೆ. ಜನತಾ ದಳದ ಮಹಾ ನಾಯಕರಾದ  ಗೌಡರನ್ನು ಓಲೈಸಲು ಪಕ್ಷದ ಕಾರ್ಯಕರ್ತರು ತುದಿಗಾಲಲ್ಲಿ ನಿಂತ ಸಮಯದಲ್ಲೇ ದಿಲ್ಲಿಯ ಪತ್ರಕರ್ತೆ ಸುಹಾಸಿನಿ ಹೈದರ್ ಮಾಡಿದರು ಎನ್ನಲಾದ ಜೋಕ್ ಕೇಳಿ.

 

`ಭಾರತದ ನೆಲ್ಸನ್ ಮಂಡೇಲ ಯಾರು?~ ಉತ್ತರ: `ದೇವೇಗೌಡರು.~ ಅದು ಹೇಗೆ? `ನೆಲ ಸನ್~ ಅಂದರೆ `ಮಣ್ಣಿನ ಮಗ~. ಇನ್ನು ಹೇಗಿದ್ದರೂ ಅವರಿಗೆ `ಮಂಡೆ ಇಲ್ಲ!~ ಕರ್ನಾಟಕದಿಂದ ಹೋಗಿ ಪ್ರಧಾನ ಮಂತ್ರಿಯಾದ ಅವರಿಗೆ ಮಂಡೆ ಇಲ್ಲ ಎಂದು ಯಾರೂ ಗಂಭೀರವಾಗಿ ನಂಬಲಾರರು. ಆದರೂ ಜೋಕ್ ವಿಟ್ಟಿಯಾಗಿದೆ ಅಲ್ಲವೇ?srramakrishna@gmail.com

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry