ಶುಕ್ರವಾರ, ಮೇ 7, 2021
21 °C

ಮಂಗಳ ದಿನದಲ್ಲಿ ಬಂಗಾರಕ್ಕೆ ಮುಗಿಬಿದ್ದ ಗ್ರಾಹಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಬೆಳ್ಳಿ, ಬಂಗಾರ, ಪಾತ್ರೆ, ಎಲೆಕ್ಟ್ರಾನಿಕ್ಸ್ ....ಎಲ್ಲ ಮಳಿಗೆಗಳ ಮುಂದೆಯೂ ಮಂಗಳವಾರ ಜನವೋ ಜನ. ಚಿನ್ನದ ಮಳಿಗೆಗಳಲ್ಲಂತೂ ದಿನವಿಡೀ ಖರೀದಿಯ ಭರಾಟೆ. ಶುಭದಿನವೆಂದು ಹೇಳಲಾಗುವ ಅಕ್ಷಯ ತೃತೀಯದಲ್ಲಿ ಏನನ್ನಾದರೂ ಖರೀದಿಸಬೇಕೆಂದು ಮಾರುಕಟ್ಟೆಯ ಕಡೆಗೆ ಹೆಜ್ಜೆ ಹಾಕಿದವರ ಮೊದಲ ಆದ್ಯತೆ ಚಿನ್ನ.ಗ್ರಾಹಕರನ್ನು ಸ್ವಾಗತಿಸಲು ದೊಡ್ಡ ಚಿನ್ನದ ಮಳಿಗೆಗಳಲ್ಲಿ ಭಾರಿ ಸಿದ್ಧತೆಯೂ ನಡೆದಿತ್ತು. ವಿವಿಧ ಯೋಜನೆಗಳನ್ನು ಮೊದಲೇ ಘೋಷಿಸಿದ್ದ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ತಂಪು ಪಾನೀಯ, ಸಿಹಿ ಇತ್ಯಾದಿ ಸಿದ್ಧವಾಗಿತ್ತು. ಕೆಲವು ಮಳಿಗೆಗಳಲ್ಲಿ ಆಭರಣಗಳಿಗೆ ಪೂಜೆ ಮಾಡಿಕೊಡುವ ಸೌಲಭ್ಯ ಕೂಡ ಕಲ್ಪಿಸಲಾಗಿತ್ತು. ಒಂದು ಅಂದಾಜಿನ ಪ್ರಕಾರ ನಗರದಲ್ಲಿ ಮಂಗಳವಾರ ಒಟ್ಟು 13 ಕೆ.ಜಿ. ಚಿನ್ನ ಮಾರಾಟವಾಗಿದೆ. ಇದರ      ಮೌಲ್ಯ ಸುಮಾರು ನಾಲ್ಕು ಕೋಟಿಗಿಂತಲೂ ಅಧಿಕ!ಅಕ್ಷಯ ತೃತೀಯದ ಅಂಗವಾಗಿ ಚಿನ್ನದ ಮಳಿಗೆಗಳು ಏಪ್ರಿಲ್ ಆರಂಭದಿಂದಲೇ ಮುಂಗಡ ಬುಕ್ಕಿಂಗ್ ಸೌಲಭ್ಯ ಕಲ್ಪಿಸಿದ್ದವು. ಬುಕ್ ಮಾಡಿದವರು ಮಂಗಳವಾರ ಬರುವಷ್ಟರಲ್ಲಿ ಅವರ ಇಷ್ಟದ ಆಭರಣ ಸಿದ್ಧವಾಗಿತ್ತು. ಹೀಗಾಗಿ ಪಾಳಿ ಹಚ್ಚುವ ಪ್ರಯಾಸವಿಲ್ಲದೆ ಚಿನ್ನವನ್ನು ತೆಗೆದುಕೊಂಡು ಹೋದರು.ಬರದ ಛಾಯಿಯಿಂದಾಗಿ ಖರೀದಿ ಕಡಿಮೆ ಎಂದು ಕೆಲವು ಮಳಿಗೆಯವರು ಹೇಳಿದರಾದರೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಚಿನ್ನ ಖರೀದಿಸಿದವರ ಸಂಖ್ಯೆ ಹೆಚ್ಚು ಎಂದು ಇನ್ನು ಕೆಲವರು ಹೇಳಿದರು. ಚಿನ್ನ ಮಾತ್ರವಲ್ಲ; ಎಲೆಕ್ಟ್ರಾನಿಕ್ಸ್, ಪಾತ್ರೆ ಮತ್ತಿತರ ವಸ್ತುಗಳ ಖರೀದಿಯೂ ಜೋರಾಗಿತ್ತು. ವಾಹನಗಳನ್ನು ಬುಕ್ ಮಾಡಿದವರು ಅವುಗಳನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೂ ಇದೇ ದಿನವನ್ನು ನಿಗದಿ ಮಾಡಿದ್ದರು.ಸರಾಫ ಕಟ್ಟೆಯಲ್ಲಿ ಸದ್ದು-ಗದ್ದಲವಿಲ್ಲ:  ದೊಡ್ಡ ಮಳಿಗೆಗಳಲ್ಲಿ ಆಭರಣ ಖರೀದಿಗೆ ಜನ ಮುಗಿ ಬಿದ್ದರೆ ಸರಾಫ ಕಟ್ಟೆಯಲ್ಲಿ ವ್ಯಾಪಾರ ಎಂದಿನಂತೆ ನಡೆದಿತ್ತು. ಅಲ್ಲಿ ಯಾವುದೇ ಸದ್ದು-ಗದ್ದಲವಿರಲಿಲ್ಲ. ಸಂಜೆ ವೇಳೆ ಮಾತ್ರ ಗ್ರಾಹಕರ ಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ಚಿನ್ನದ ಅಂಗಡಿಯವರು ಗ್ರಾಹಕರಿಗಾಗಿ ವಿಶೇಷವಾಗಿ ಏನನ್ನೂ ಸಿದ್ಧಪಡಿಸಿರಲಿಲ್ಲ. ಸಹಜವಾಗಿಯೇ ಅವರನ್ನು ಸ್ವಾಗತಿಸಿದರು.`ಸರಾಫ ಕಟ್ಟೆಯಲ್ಲಿ ಅಕ್ಷಯ ತೃತೀಯದಂದು ವಿಶೇಷವಾದ ಖರೀದಿ ನಡೆಯುವುದಿಲ್ಲ. ಇಲ್ಲಿಗೆ ಹಳ್ಳಿಗಳಿಂದ ಬರುವವರೇ ಹೆಚ್ಚು. ಈ ಬಾರಿ ಬರ ಇರುವುದರಿಂದ ಹಾಗೂ ಚಿನ್ನದ ಬೆಲೆ ಹೆಚ್ಚಿರುವುದರಿಂದ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ~ ಎಂದು ಹುಬ್ಬಳ್ಳಿ ಸರಾಫ ಸಂಘದ ಅಧ್ಯಕ್ಷ ಗೋವಿಂದ ನಿರಂಜನ `ಪ್ರಜಾವಾಣಿ~ಗೆ ತಿಳಿಸಿದರು.

`ಎಂದಾದರೊಮ್ಮೆ ಅಗತ್ಯವಿದ್ದಾಗ ಚಿನ್ನ ಖರೀದಿ ಮಾಡುತ್ತೇವೆ. ಈ ಬಾರಿ ಖರೀದಿ ಮಾಡಬೇಕೆಂದು ನಿರ್ಧರಿಸಿದಾಗಲೇ ಹಬ್ಬ ಬಂದಿದೆ~ ಎಂದು ಮೂಗುಬೊಟ್ಟು         ಹಾಗೂ ಮಾಂಗಲ್ಯದ ಗುಂಡುಗಳನ್ನು ಖರೀದಿಸಿದ ನಗರದ ಶಾರದಮ್ಮ ಕಂಬಾರ ಹೇಳಿದರು.ನಗರದ ದೊಡ್ಡ ಮಳಿಗೆಗಳಲ್ಲಿ ಸಂಜೆ ವೇಳೆ ಭಾರಿ ಜನದಟ್ಟಣೆ ಕಂಡು ಬಂತು. ಕೆಲವು ಮಳಿಗೆಗಳಲ್ಲಿ ಜನರನ್ನು ನಿಯಂತ್ರಿಸುವುದಕ್ಕೆ ಸಿಬ್ಬಂದಿ ಭಾರಿ ಶ್ರಮಪಟ್ಟರು.`ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಗ್ರಾಂಗೆ ಸುಮಾರು 800 ರೂಪಾಯಿ ಹೆಚ್ಚಾಗಿದ್ದರೂ ಚಿನ್ನ ಖರೀದಿಸುವವರ ಉತ್ಸಾಹ ಕಡಿಮೆಯಾಗಲಿಲ್ಲ. ಗ್ರಾಹಕದ ಸಂಖ್ಯೆಯಲ್ಲಿ ಸುಮಾರು 30 ಶೇಕಡಾ ಹೆಚ್ಚಳ ಕಂಡುಬಂದಿದೆ~ ಎಂದು ಮಲಬಾರ್ ಗೋಲ್ಡ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕ ಶಶಾಂಕ ಏಕಬೋಟೆ ತಿಳಿಸಿದರು.ಹೂವಿನ ವ್ಯಾಪಾರ `ಡಲ್~: ಶುಭದಿನದಂದು ಭರ್ಜರಿ ಮಾರಾಟದ ಕನಸು ಹೊತ್ತುಕೊಂಡು ಬಂದ ಹೂವಿನ ವ್ಯಾಪಾರಿಗಳು ಮಾತ್ರ ನಿರಾಸೆ ಅನುಭವಿಸಬೇಕಾಯಿತು. ಹೂ ಕೊಳ್ಳಲು ಗ್ರಾಹಕರು ಹೆಚ್ಚು ಉತ್ಸಾಹ ತೋರಲಿಲ್ಲ.`ಸೋಮವಾರ ಮಾರಿಗೆ 10 ರೂಪಾಯಿಗೆ ಮಾರಿದ್ದೆವು. ಬೇಡಿಕೆ ಕಡಿಮೆ ಇರುವುದರಿಂದ ಇಂದು ಕೂಡ ಅದೇ ದರಕ್ಕೆ ಮಾರುತ್ತಿದ್ದೇವೆ~ ಎಂದು ಹೂವಿನ ವ್ಯಾಪಾರಿ ಸುಶೀಲಾ ಭಾವಿಕಟ್ಟಿ ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.