ಮಂಜುಗುಣಿ ಎಂಬ ತಿರುಪತಿ

7

ಮಂಜುಗುಣಿ ಎಂಬ ತಿರುಪತಿ

Published:
Updated:

ಸಹ್ಯಾದ್ರಿ ಶ್ರೇಣಿಯ ಮೇಲಿರುವ ಶಿರಸಿ ತಾಲ್ಲೂಕಿನ ಮಂಜುಗುಣಿ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧ. ಮಂಜುಗುಣಿಯ ಶ್ರೀ ವೆಂಕಟರಮಣ ದೇವರ ದರ್ಶನ ಪಡೆದರೆ ತಿರುಪತಿಗೆ ಹೋಗಿ ಬಂದಷ್ಟೇ ಪುಣ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.ಶಿರಸಿಯಿಂದ ಕುಮಟಾ ರಸ್ತೆಯಲ್ಲಿ 26 ಕಿಮೀ ದೂರದಲ್ಲಿ ಹಸಿರು ಹಾಸಿನ ಮಧ್ಯೆ ನೆಲೆಸಿರುವ ವೆಂಕಟೇಶನ ಕ್ಷೇತ್ರ ಮಹಿಮೆ ಕುತೂಹಲ ಹುಟ್ಟಿಸುತ್ತದೆ. 9 ನೇ ಶತಮಾನದಲ್ಲಿ ತಿರುಪತಿಯಿಂದ ತೀರ್ಥಯಾತ್ರೆ ಹೊರಟ ತಿರುಮಲ ಯೋಗಿಗಳು ಮಂಜುಗುಣಿಯಿಂದ ಎಂಟು ಕಿಲೋ ಮೀಟರ್ ದೂರದಲ್ಲಿ ಗಿಳಿಲಗುಂಡಿ ಊರಿನ ಕೊಳದ ಬಳಿ ತಪಸ್ಸಿಗೆ ಕುಳಿತಿದ್ದರು.ಆಗ ಅವರಿಗೆ ಶಿಲೆಯ ಹಾಸಿನ ಮೇಲೆ ಶಂಖ, ಚಕ್ರ, ಧನುರ್ಬಾಣ ಧರಿಸಿದ ವೆಂಕಟೇಶ ವಿಗ್ರಹದ ದರ್ಶನ ದೊರೆಯಿತು. ಅವರು ಈ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದ ಪುಣ್ಯ ಕ್ಷೇತ್ರವೇ ಮಂಜುಗುಣಿ ಎಂದು ಇತಿಹಾಸ ಹೇಳುತ್ತದೆ.ಈ ಕ್ಷೇತ್ರದ ಇನ್ನೊಂದು ವಿಶೇಷವೆಂದರೆ ಚೈತ್ರ ಪೂರ್ಣಿಮೆಯ ದಿನ ನಡೆಯುವ ಮಹಾ ರಥೋತ್ಸವಕ್ಕೆ ಶ್ರೀ ವೆಂಕಟೇಶ ತಿರುಪತಿಯಿಂದ ಇಲ್ಲಿಗೆ ಬರುತ್ತಾನೆ ಎಂದು ಭಕ್ತರು ನಂಬುತ್ತಾರೆ. ಇದಕ್ಕೆ ಪುಷ್ಟಿ ಎಂಬಂತೆ ಅಂದು ತಿರುಪತಿಯಲ್ಲಿ ದೇವರಿಗೆ ಪೂಜೆ ಇರುವುದಿಲ್ಲ.ವಿಜಯನಗರ ಕಾಲಕ್ಕಿಂತ ಪೂರ್ವದ್ದೆನ್ನಲಾದ ಶೈಲಿಯ ಅನೇಕ ಸುಂದರ ಕೆತ್ತನೆಗಳು ದೇವಾಲಯದ ಒಳಾಂಗಣದಲ್ಲಿವೆ. ಮುಖಮಂಟಪ, ನವರಂಗ, ಅರ್ಧ ಮಂಟಪ ಹಾಗೂ ಗರ್ಭಗೃಹ ಒಳಗೊಂಡ ದೇವಾಲಯದ ನವರಂಗವನ್ನು ಉಡುಪಿಯ ವಾದಿರಾಜ ಯತಿಗಳು ನಿರ್ಮಿಸಿದ್ದಾರೆ ಎಂದು ಕ್ಷೇತ್ರ ಪುರಾಣದಲ್ಲಿ ಉಲ್ಲೇಖವಿದೆ.
ಇದಕ್ಕೆ ಸಾಕ್ಷಿಯಾಗಿ ಕಂಬಗಳ ಮೇಲೆ ಕಡಗೋಲು ಕೃಷ್ಣ ಹಾಗೂ ಹಯಗ್ರೀವ ಮೂರ್ತಿಗಳ ಕೆತ್ತನೆಗಳಿವೆ. ವೆಂಕಟೇಶನ ಪಕ್ಕದಲ್ಲಿ ಪದ್ಮಾವತಿ ನೆಲೆಸಿದ್ದಾಳೆ. ಪದ್ಮಾವತಿ ಅಮ್ಮನವರ ಗುಡಿ ವೆಂಕಟೇಶನ ಬಲಭಾಗದಲ್ಲಿದೆ. ಅಪರೂಪದ ಸಾಲಿಗ್ರಾಮಗಳು, ವಿಶಾಲ ರಥಬೀದಿ, ಸುಂದರ ಕೆತ್ತನೆಯ ಮರದ ರಥ ಇಲ್ಲಿನ ವಿಶೇಷ ಆಕರ್ಷಣೆ. ಔಷಧೀಯ ಗುಣ ಹೊಂದಿರುವ ಮಂಜುಗುಣಿ ಚಕ್ರತೀರ್ಥ ಕೆರೆಯ ಜಲ ಚರ್ಮರೋಗ ನಿವಾರಕ ಗುಣ ಹೊಂದಿದೆ.ಅಕ್ಕಿ, ತೆಂಗಿನಕಾಯಿ, ನಾಣ್ಯ ತುಲಾಭಾರದ ಜೊತೆಗೆ ನಾಲಿಗೆ, ಕಾಲು ಹೀಗೆ ಶರೀರದ ವಿವಿಧ ಭಾಗಗಳ ಬೆಳ್ಳಿ-ಬಂಗಾರದ ಮುದ್ರಿಕೆಯನ್ನು ಹರಕೆ ಒಪ್ಪಿಸುವ ಪದ್ಧತಿ ಇಲ್ಲಿದೆ. ಭಾಗವತ ಸಂಪ್ರದಾಯದ ರೀತಿಯಲ್ಲಿ ಇಲ್ಲಿ ನಿತ್ಯಪೂಜೆ ನಡೆಯುತ್ತದೆ. ದೇವಾಲಯದ ಒಳ ಪ್ರಾಂಗಣ ಭಕ್ತರ ನೆರವಿನ್ಲ್ಲಲಿ ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ನಿರ್ಮಾಣಗೊಂಡಿದೆ.ವಿಶೇಷ ದಿನಗಳು: ಚೈತ್ರ ಶುದ್ಧ ಚತುರ್ದಶಿಯ ದಿನ ದೇವರ ವರ್ಧಂತಿ ಉತ್ಸವ. ಮಾರನೇ ದಿನ ಮಹಾ ರಥೋತ್ಸವ. ರಥೋತ್ಸವದ ಮೊದಲ ಐದು ದಿನ ಭಾರತದಲ್ಲೇ ಅಪರೂಪವಾದ ಯಾನ ಯಂತ್ರೋತ್ಸವ ಜರುಗುತ್ತದೆ. ಚಾತುರ್ಮಾಸ್ಯ ಪೂಜೆ, ಶ್ರೀಕೃಷ್ಣಜನ್ಮಾಷ್ಟಮಿ, ಗಣೇಶ ಚತುರ್ಥಿ, ಶರನ್ನವರಾತ್ರಿ ಇಲ್ಲಿನ ವಿಶೇಷ ಉತ್ಸವದ ದಿನಗಳು.ಮಂಜುಗುಣಿ ಕ್ಷೇತ್ರಕ್ಕೆ ತೆರಳಲು ಶಿರಸಿಯಿಂದ ಮಾತ್ರ ಬಸ್ ಸೌಕರ್ಯ ಇದೆ. ಶಿರಸಿ- ಕುಮಟಾ ಮುಖ್ಯ ರಸ್ತೆಯಿಂದ ನಾಲ್ಕು ಕಿಮೀ ಒಳ ಹೋಗಬೇಕು. ಖಾಸಗಿ ವಾಹನ ದೇವಾಲಯದವರೆಗೆ ತಲುಪುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry