ಸೋಮವಾರ, ಜೂನ್ 21, 2021
30 °C

ಮಂಜೇಶ್ವರ ಶಾಸಕ ನಿರ್ಲಕ್ಷ್ಯ: ಕೇರಳ ತುಳು ಅಕಾಡೆಮಿ ಅನಾಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಸರಗೋಡು: ಕಾಸರಗೋಡಿನ ಹೆಮ್ಮೆಯ ಅಕಾಡೆಮಿ ಎನಿಸಿದ್ದ `ಕೇರಳ ತುಳು ಅಕಾಡೆಮಿ~ ಅನಾಥವಾಗಿದೆ. ಎಡರಂಗದ ಅಭಿಮಾನದ ಕೂಸಾಗಿದ್ದ ಈ ಅಕಾಡೆಮಿ ಐಕ್ಯರಂಗ ಅಧಿಕಾರದ ಗದ್ದುಗೆ ಏರಿದ ಬಳಿಕ ಕಳೆದ ಒಂದು ವರ್ಷದಿಂದ ತೆರೆಮರೆಗೆ ಸರಿದಿದೆ ಎಂಬ ವಿಷಾದದ ಮಾತುಗಳು ಕೇಳಿಬಂದಿವೆ.ಎಡರಂಗ ಆಡಳಿತದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರ ಶಾಸಕರಾದ ಸಿ.ಎಚ್.ಕುಞ್ಞಂಬು ಅವರ ದೂರದೃಷ್ಟಿಯ ಫಲವಾಗಿ ತುಳುನಾಡಿನ ಜಾನಪದ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆ ಉಳಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೇರಳ ತುಳು ಅಕಾಡೆಮಿ ಸ್ಥಾಪನೆಗೊಂಡಿತ್ತು. ಆ ಮೂಲಕ ಕೇರಳದಲ್ಲಿ `ಸಾಂಸ್ಕೃತಿಕ ರಾಜಕಾರಣ~ಕ್ಕೆ ನಾಂದಿ ಹಾಡಿದಂತಾಗಿದ್ದಿತು. `ಕೇರಳ ತುಳು ಅಕಾಡೆಮಿ~ ಮತ್ತು `ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ~  ಸ್ಥಾಪನೆಯೂ ಆಗಿತ್ತು. ಹೊಸಂಗಡಿಯಲ್ಲಿ ಉದ್ಘಾಟನೆಗೊಂಡ ಕೇರಳ ತುಳು ಅಕಾಡೆಮಿ ಪೆರ್ಲದಲ್ಲಿ ಬೃಹತ್ ತುಳು ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸಾಕಷ್ಟು ಸುದ್ದಿ ಮಾಡಿತ್ತು.2009ರ ಡಿ. 19 ಮತ್ತು 20ರಂದು ಕಳಿಯೂರಿನಲ್ಲಿ `ತುಳು ಜನಪದ ಜಾತ್ರೆ~ ಮತ್ತು 2011 ಜ.14ರಿಂದ 16ರ ವರೆಗೆ `ದೇಸೊದ ತುಳು ಜಾತ್ರೆ~ ಪೈವಳಿಕೆಯಲ್ಲಿ ನಡೆದಿತ್ತು. ಇದು ಕಾಸರಗೋಡಿನ ತುಳು ಅಭಿಮಾನಿಗಳನ್ನು ಒಂದೆಡೆ ಸೇರಿಸಿ ಸಾಂಸ್ಕೃತಿಕ ರಸದೌತಣ ಉಣಬಡಿಸಿತ್ತು. ತುಳುವಿನ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್ ಭಾಗವಹಿಸಿ ತುಳುವಿನ ಬಗೆಗಿನ ತಮ್ಮ ಕಾಳಜಿಯನ್ನು ಸ್ಪಷ್ಟಪಡಿಸಿದ್ದರು.ಅಧ್ಯಕ್ಷರ ರಾಜೀನಾಮೆ: ಕಳೆದ ಚುನಾವಣೆಯಲ್ಲಿ ಪಿ.ಬಿ.ಅಬ್ದುಲ್ ರಸಾಕ್ ಮಂಜೇಶ್ವರ ಶಾಸಕರಾಗಿ ಆಯ್ಕೆಯಾದ ಬಳಿಕ ಕೇರಳ ತುಳು ಅಕಾಡೆಮಿ ಪತನದ ಹಾದಿ ಹಿಡಿದಿದೆ. ಐಕ್ಯರಂಗ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಳೆದ ಒಂದು ವರ್ಷದಿಂದ ಅಕಾಡೆಮಿಯ ಚಟುವಟಿಕೆಗಳು ಸ್ಥಗಿತಗೊಂಡಿದೆ. ಇದರಿಂದ ಬೇಸತ್ತು  ಅಕಾಡೆಮಿ ಅಧ್ಯಕ್ಷರಾಗಿದ್ದ ಡಾ.ವೆಂಕಟರಾಜ ಪುಣಿಂಚತ್ತಾಯರು ರಾಜೀನಾಮೆ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ಅಕಾಡೆಮಿ ಮತ್ತು ಅದರ ಅಧ್ಯಕ್ಷರನ್ನು ಮಂಜೇಶ್ವರ ಶಾಸಕರೇ ಸಂಪರ್ಕಿಸಿಲ್ಲ!ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಅಕಾಡೆಮಿಯ ಸದಸ್ಯರೂ ಆಗಿದ್ದ ಅಂದಿನ ಶಾಸಕ ಸಿ.ಎಚ್.ಕುಞ್ಞಂಬು ಕೂಡಾ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಪುಣಿಂಚತ್ತಾಯ ಅವರನ್ನು ಸಂಪರ್ಕಿಸಿದಾಗ `ಅನಾರೋಗ್ಯದ ಕಾರಣ ರಾಜೀನಾಮೆ ನೀಡಿದ್ದೇನೆ ಎಂದು `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದ್ದಾರೆ.ಅಕಾಡೆಮಿಯಲ್ಲಿ ಈಗ 10 ಮಂದಿ ಸದಸ್ಯರಿದ್ದು, 3 ತಿಂಗಳಿಗೊಮ್ಮೆ ಸಭೆ ಮಾತ್ರ ನಡೆಯುತ್ತಿದೆ ಎಂದು ತುಳು ಅಕಾಡೆಮಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿಗಾರ್ ತಿಳಿಸಿದ್ದಾರೆ. ಮಂಜೇಶ್ವರ ಹೊಸಂಗಡಿ ಸಮೀಪದ ಅಂಗಡಿಪದವಿನಲ್ಲಿ ಸಿ.ಎಚ್.ಕುಞ್ಞಂಬು ಅವರ ಮುತುವರ್ಜಿಯಿಂದ ಒಂದು ಎಕರೆ ಸ್ಥಳ ಅಕಾಡೆಮಿಗೆ ಲಭಿಸಿದೆ. ಎಡರಂಗ ಸರ್ಕಾರ 2011-12ರಲ್ಲಿ ಮಂಜೂರು ಮಾಡಿದ ರೂ.10ಲಕ್ಷ ಇನ್ನೂ ಅಕಾಡೆಮಿಯ ಕೈಸೇರಿಲ್ಲ!ಅಕಾಡೆಮಿಯ ಕಚೇರಿ ಸಮುಚ್ಛಯ ನಿರ್ಮಾಣಕ್ಕಾಗಿ ರೂ.50 ಲಕ್ಷ ಅಂದಾಜಿಸಲಾಗಿದ್ದು, ಕೇರಳ ಮತ್ತು ಕರ್ನಾಟಕ ಸರ್ಕಾರಗಳ ನೆರವಿಗೆ ಮನವಿ ಮಾಡಲಾಗಿತ್ತು. ಜನಪರ ಶಾಸಕರಾಗಿದ್ದ ಸಿ.ಎಚ್.ಕುಞ್ಞಂಬು ತರುವಾಯ ಕಳೆದ ಒಂದು ವರ್ಷದಿಂದ ತುಳು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲದೆ ಮಂಜೇಶ್ವರ ಮಂಡಲ ಬರಡಾಗಿದೆ.

 

ಹೊಸ ಸಮಿತಿ ರಚನೆಯಾಗಿಲ್ಲ:

ಐಕ್ಯರಂಗ ಅಧಿಕಾರವೇರಿದ ಬಳಿಕ ಅಕಾಡೆಮಿಯ ಸಮಿತಿ ರಚನೆಯೂ ಆಗಿಲ್ಲ. ಸ್ಥಳೀಯ ಶಾಸಕರು ತುಳು ಅಕಾಡೆಮಿಯನ್ನೇ ಮರೆತಿದ್ದಾರೆ ಎಂದು  ಸದಸ್ಯರೊಬ್ಬರು `ಪ್ರಜಾವಾಣಿ~ ಪ್ರತಿನಿಧಿಯೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.ಪ್ರತಿಕ್ರಿಯೆ-ಪ್ರತಿಭಟನೆ ಎಲ್ಲಿ?: `ತುಳು ಜನಪದ ಜಾತ್ರೆ~ ಮತ್ತು `ದೇಸೊದ ತುಳು ಜಾತ್ರೆ~ ಮೊದಲಾದ ಬೃಹತ್ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದಾಗ ಜನರು, ಜನಪ್ರತಿನಿಧಿಗಳಿಂದ ಮೂಡಿಬಂದ ಪ್ರತಿಕ್ರಿಯೆ, ವಿರೋಧ ಈಗ ತಣ್ಣಗಾಗಿದೆ. ಅಕಾಡೆಮಿ ವಿಷಯದಲ್ಲಿ ಅಂದಿನ ಶಾಸಕರ ವಿರುದ್ಧ ಧ್ವನಿ ಎತ್ತಿದ ಬಿಜೆಪಿ ಹಾಗೂ ಅಕಾಡೆಮಿಗಾಗಿ ವಿಶೇಷವಾಗಿ ಮುತುವರ್ಜಿ ವಹಿಸಿದ ಎಡರಂಗ ಮುಂದಾಳುಗಳೂ ಕೂಡ ಮೌನ ವಹಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.