ಬುಧವಾರ, ನವೆಂಬರ್ 13, 2019
28 °C

ಮಂಡಗದ್ದೆ ಬಳಿ ಕಾಳ್ಗಿಚ್ಚು

Published:
Updated:

ತೀರ್ಥಹಳ್ಳಿ (ಶಿವಮೊಗ್ಗ ಜಿಲ್ಲೆ):ತಾಲ್ಲೂಕಿನ ಮಂಡಗದ್ದೆ ಸಮೀಪ ಮುಡುಬ ಕಾಡಿನಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದೆ.  ಏ. 12ರಂದು ಕಾಣಿಸಿಕೊಂಡ ಕಾಳ್ಗಿಚ್ಚು ದಿನದಿಂದ ದಿನಕ್ಕೆ ವ್ಯಾಪಿಸುತ್ತಿದೆ. ಬೆಂಕಿಯು 5ರಿಂದ 6 ಹೆಕ್ಟೇರ್ ಪ್ರದೇಶದಲ್ಲಿ ಹಬ್ಬಿದೆ.ಮುಡುಬ ಸಮೀಪದ ಪುಟ್ಟೊಡ್ಲು, ಉಳ್ಳೋಡಿ, ಕೆಸುವಿನಮನೆ ಭಾಗದ ಕಾಡಿನಲ್ಲಿ ಸಣ್ಣಗೆ ಕಾಣಿಸಿಕೊಂಡ ಬೆಂಕಿ ಹೆಚ್ಚುತ್ತಲೇ ಸಾಗಿದೆ. ಎಲೆ ಉದುರಿಸುವ ಕಾಡು ಇದಾಗಿರುವುದರಿಂದ ಕಾಡಿನ ತುಂಬೆಲ್ಲಾ ತರಗೆಲೆಗಳು ಉದುರಿ ಬಿದ್ದಿವೆ. ಬೆಂಕಿ ತೀವ್ರವಾಗಿ ಹಬ್ಬಲು ಇದು ಕಾರಣವಾಗಿದೆ. ಅರಣ್ಯ ಇಲಾಖೆಯ 20 ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಸಂಜೆ ಹಾಗೂ ಬೆಳಗಿನ ಹೊತ್ತಲ್ಲಿ ಬೆಂಕಿ ನಂದಿಸುವ ಕೆಲಸದಲ್ಲಿ ತೊಡಗಿದ್ದಾರೆ. ಆದರೆ ಬಿಸಿಲಿನ ತೀವ್ರತೆಯಿಂದಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.ಅಗ್ನಿಶಾಮಕ ವಾಹನ ಕಾಡಿನೊಳಕ್ಕೆ ಹೋಗಲು ಸಾಧ್ಯವಾಗದೇ ಇರುವುದು ಕೂಡ ಕಾರ್ಯಾಚರಣೆಗೆ ತೊಡಕಾಗಿದೆ. ಆದರೆ ಬೆಂಕಿ ಈಗ ನಿಯಂತ್ರಣದಲ್ಲಿದೆ ಎಂದು ಮಂಡಗದ್ದೆ ವಲಯ ಅರಣ್ಯಾಧಿಕಾರಿ ರವಿಕುಮಾರ್ ತಿಳಿಸಿದ್ದಾರೆ.ಒಣಗಿ ನಿಂತಿರುವ ಸಾವಿರಾರು ಬಿದಿರು ಮೆಳೆಗಳು ಪಟಪಟನೆ ಸಿಡಿದು ಸುಟ್ಟು ಕರಕಲಾಗುತ್ತಿವೆ. ಅಮೂಲ್ಯ ಸಸ್ಯರಾಶಿ, ಔಷಧೀಯ ಸಸ್ಯಗಳು, ವಿಶಿಷ್ಟ ಜಾತಿಯ ಬಳ್ಳಿಗಳು ಬೆಂಕಿಯ ಆಹುತಿಯಾಗಿವೆ.

ಕಾಡುಪ್ರಾಣಿಗಳು ದಿಕ್ಕುಕಾಣದಂತಾಗಿವೆ. ಪಕ್ಷಿಗಳ ಗೂಡು, ಮೊಟ್ಟೆ-ಮರಿಗಳು ಬೆಂಕಿಗೆ ಆಹುತಿಯಾಗಿವೆ. ಹಾವು, ಉಡ, ಬರ್ಕ, ಹಂದಿ, ಜಿಂಕೆ, ಕಾಡುಕುರಿಗಳು ಬೆಂಕಿಯಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿವೆ.   ಯಾರೋ ಕಿಡಿಗೇಡಿಗಳು ಕಾಡಿಗೆ ಬೆಂಕಿ ಇಟ್ಟಿರಬಹುದು ಎಂದು ಶಂಕಿಸಲಾಗಿದೆ.

ಪ್ರತಿಕ್ರಿಯಿಸಿ (+)