ಮಂಡಗದ್ದೆ ಸಮೀಪ ಭೂಕಂಪನ

7

ಮಂಡಗದ್ದೆ ಸಮೀಪ ಭೂಕಂಪನ

Published:
Updated:

ತೀರ್ಥಹಳ್ಳಿ: ತಾಲ್ಲೂಕಿನ ಮಂಡಗದ್ದೆ ಹೋಬಳಿ ಸಿಂಗನಬಿದರೆ ಗ್ರಾಮ ಪಂಚಾಯ್ತಿಯ ಮೂರುಕೈ ಸುತ್ತಮುತ್ತ ಮಧ್ಯಾಹ್ನ 2.45ರ ಹೊತ್ತಿಗೆ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ.ಸುಮಾರು 3ರಿಂದ 4 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದರಿಂದ ಮನೆಯಲ್ಲಿರುವ ಪಾತ್ರೆಗಳು ಸದ್ದು ಮಾಡಿವೆ. ಆತಂಕಗೊಂಡ ಜನರು ಮನೆಯಿಂದ ಹೊರಬಂದಿದ್ದಾರೆ. ಸಿಂಗನಬಿದರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುತ್ತಮುತ್ತಲ ಗ್ರಾಮಗಳಾದ ತಳಲೆ, ಕೀಗಡಿ, ಹೆಗಲತ್ತಿ ತೋಟದಕೊಪ್ಪ ಸುತ್ತಮುತ್ತ ಸುಮಾರು ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯ ತಾಲ್ಲೂಕು ಕೆಡಿಪಿ ಸದಸ್ಯ ತಳಲೆ ಪ್ರಸಾದ್‌ಶೆಟ್ಟಿ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.ಹಣಗೆರೆ ಘಟ್ಟದ ಕಡೆಯಿಂದ ಭಾರೀ ಶಬ್ದ ಕೇಳಿಸಿತು. ನಂತರ ಭೂಮಿ ಕಂಪಿಸಿತು. ನಾವೆಲ್ಲ ಮನೆಯಿಂದ ಹೊರಗೆ ಬಂದೆವು. ನಂತರ ಇದೇ ರೀತಿಯ ಅನುಭವ ಇಲ್ಲಿನ ಬಹುತೇಕರಿಗೆ ಆಗಿದೆ ಎಂದು ಸಿಂಗನಬಿದರೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ರಮೇಶ್ ತಿಳಿಸಿದ್ದಾರೆ.ಹಣಗೆರೆ ಘಟ್ಟದ ಭಾಗದಲ್ಲಿರುವ ಮನೆಗಳಲ್ಲಿ ಹೆಂಗಸರು ಶಬ್ದ ಕೇಳಿ ಚಿಕ್ಕ ಚಿಕ್ಕ ಮಕ್ಕಳನ್ನು ತಕ್ಷಣ ಮನೆಯಿಂದ ಹೊರಕ್ಕೆ ಕರೆದುಕೊಂಡು ಬಂದಿದ್ದಾರೆ. ಬಿದಿರಿನಿಂದ ನಿರ್ಮಾಣವಾದ ಮನೆಗಳಲ್ಲಿ ಶಬ್ದವಾಗಿದೆ. ಮರಗಿಡಗಳು ತಕ್ಷಣಕ್ಕೆ ಅಲ್ಲಾಡಿದಂತೆ ಕಂಡುಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಗದ್ದೆಕೊಯ್ಲಿನ ಕೆಲಸದಲ್ಲಿ ತೊಡಗಿರುವ ನಮಗೆ ಗುಡುಗಿನ ಶಬ್ದವಾಯಿತು. ತಕ್ಷಣಕ್ಕೆ ಯಾರಿಗೂ ಏನೂ ಅರಿವಾಗಲಿಲ್ಲ ಎಂದು ಬಿದರಹಳ್ಳಿ ರಘುನಾಥ್ ತಿಳಿಸಿದ್ದಾರೆ. ಮಂಡಗದ್ದೆಯಲ್ಲಿಯೂ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆಯಿಂದ ಯಾವುದೇ ಹಾನಿ ಸಂಭವಿಸಿರುವ ಕುರಿತು ವರದಿಯಾಗಿಲ್ಲ.ಭೂಕಂಪನದ ಅರಿವಾಗುತ್ತಿದ್ದಂತೆಯೇ ಜನರೆಲ್ಲ ಗುಂಪು ಗುಂಪಾಗಿ ಚರ್ಚಿಸತೊಡಗಿದರು. ಡಿ. 21ಕ್ಕೆ ಪ್ರಳಯವಾಗುತ್ತದೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಈ ಘಟನೆ ಜನರಲ್ಲಿ ಆತಂಕ ಸೃಷ್ಟಿಸಿದೆ.ಮೂರು ವರ್ಷಗಳ ಹಿಂದೆ ಮಂಡಗದ್ದೆ ಸಮೀಪ ಸಿಂಧುವಾಡಿಯಲ್ಲಿ ಘಟ್ಟ ಜರಿದು ಸುಮಾರು ಮೂರು ಎಕರೆ ಪ್ರದೇಶ ಜಖಂಗೊಂಡಿತ್ತು. ತುಂಗಾ ಮೇಲ್ದಂಡೆ ಯೋಜನೆಯಾದ ನಂತರ ಮುಳುಗಡೆಯ ಹಿನ್ನೀರು ಜಾಸ್ತಿಯಾಗಿರುವುದರಿಂದ ಈ ಪ್ರದೇಶದಲ್ಲಿ ಆಗಾಗ್ಗೆ ಇಂಥ ಘಟನೆಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಭಾಗದಲ್ಲಿ ನೂರಾರು ಕೊಳವೆ ಬಾವಿ ಇರುವುದು ಕೂಡ ಭೂಕಂಪನಕ್ಕೆ ಕಾರಣ ಇರಬಹುದು ಎಂಬುದು ಜನರ ಅನುಮಾನ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry