ಸೋಮವಾರ, ಮಾರ್ಚ್ 8, 2021
25 °C
1ರಿಂದ 7ನೇ ತರಗತಿ: ಗಮನಹರಿಸದ ಶಿಕ್ಷಣ ಇಲಾಖೆ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತ

ಮಂಡಿಬೆಲೆ ಶಾಲೆಗೆ ಒಬ್ಬರೇ ಶಿಕ್ಷಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡಿಬೆಲೆ ಶಾಲೆಗೆ ಒಬ್ಬರೇ ಶಿಕ್ಷಕರು!

ವಿಜಯಪುರ: ಈ ಶಾಲೆಯ 70 ಮಂದಿ ವಿದ್ಯಾರ್ಥಿಗಳಿಗೆ ಇರುವುದು ಒಬ್ಬರೇ ಶಿಕ್ಷಕ..! ಇಲ್ಲಿಗೆ ಸಮೀಪ ಮಂಡಿಬೆಲೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ 1 ರಿಂದ 7 ನೇ ತರಗತಿವರೆಗೂ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇಷ್ಟು ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವುದು ಕೇವಲ ಒಬ್ಬರೇ ಶಿಕ್ಷಕ.ಒಂದು ವರ್ಷದಿಂದಲೂ ಈ ಶಾಲೆಯ ದಾಖಲಾತಿ ಪರಿಶೀಲನೆ, ಅಕ್ಷರ ದಾಸೋಹ, ಎಸ್‌ಡಿಎಂಸಿ ಸಭೆ, ಪೋಷಕರ ಸಭೆ, ಪಾಠ ಬೋಧನೆ ಎಲ್ಲ ಕೆಲಸಗಳನ್ನು ಇಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬರೇ ಶಿಕ್ಷಕರಾದ ಸೀತಾರಾಮಯ್ಯ ಅವರು ನಿರ್ವಹಿಸುತ್ತಿದ್ದಾರೆ.

ಶಿಕ್ಷಕರು ಇಲ್ಲದ ಕಾರಣ ದಿನಕ್ಕೆ 2 ಅಥವಾ 3 ತರಗತಿಗಳು ಮಾತ್ರ ನಡೆಯುತ್ತವೆ. ಶಿಕ್ಷಕರಿಲ್ಲದ್ದನ್ನು ಗಮನಿಸಿದ ಪೋಷಕರು ಮಕ್ಕಳನ್ನು ಶಾಲೆ ಬಿಡಿಸಿ ಬೇರೆ ಶಾಲೆಗಳಿಗೆ ದಾಖಲಾತಿ ಮಾಡಿಸಿದ್ದಾರೆ.ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮುನಿರಾಜು ಮಾತನಾಡಿ, ‘ವಾರಕ್ಕೊಮ್ಮೆ ಅರ್ಜಿಗಳನ್ನು ಹಿಡಿದು ತಾಲ್ಲೂಕು ಶಿಕ್ಷಣ ಅಧಿಕಾರಿ ಕಚೇರಿಗೆ ಅಲೆದಾಡುತ್ತಲೇ ಇದ್ದೇವೆ. ಆದರೆ, ಶಿಕ್ಷಕರು ಮಾತ್ರ ಬರುತ್ತಿಲ್ಲ. ನಿಯೋಜನೆ ಪದ್ಧತಿಯಲ್ಲಿ ಶಿಕ್ಷಕರನ್ನು ನೇಮಿಸುವಂತೆಯೂ ಬಿಇಒ ಅವರಲ್ಲಿ ಕೇಳಿದ್ದರೂ ಸಹ ಈ ಬಗ್ಗೆ ಅವರು ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ದೂರಿದರು.7ನೇ ತರಗತಿ ವಿದ್ಯಾರ್ಥಿ ದರ್ಶನ್ ಮಾತನಾಡಿ, ‘ಎಲ್ಲ ತರಗತಿಗಳಿಗೂ ಒಬ್ಬರೇ ಶಿಕ್ಷಕರು ಪಾಠ ಮಾಡುತ್ತಿರುವುದರಿಂದ ಪಠ್ಯಗಳು ಮುಗಿಯುತ್ತಿಲ್ಲ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಮೇಲೆ ವಿಶೇಷ ಗಮನ ವಹಿಸಲು ಸಾಧ್ಯವಾಗುತ್ತಿಲ್ಲ. ಕನ್ನಡ, ಹಿಂದಿ, ಇಂಗ್ಲಿಷ್, ಗಣಿತ ಎಲ್ಲ ವಿಷಯಗಳನ್ನು  ಸೀತಾರಾಮಯ್ಯ ಸರ್ ಅವರೆ  ಬೋಧಿಸುತ್ತಿದ್ದು, ಒಂದು ತರಗತಿಗೆ ಪಾಠ ಮಾಡುವಾಗ ಬೇರೆ ವಿದ್ಯಾರ್ಥಿಗಳು ಗಲಾಟೆಯಲ್ಲಿ ನಿರತರಾಗಿರುತ್ತಾರೆ. ಇದರಿಂದ ಪಾಠ ಕೇಳಲು ನಮಗೆ ತೊಂದರೆಯಾಗುತ್ತಿದೆ’ ಎಂದರು.ಶಿಕ್ಷಕ ಸೀತಾರಾಮಯ್ಯ ಮಾತನಾಡಿ, ‘ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೂ ಒಬ್ಬನೇ ಪಾಠ ಮಾಡಬೇಕಿರುವುದರಿಂದ ಹೊರೆ ಹೆಚ್ಚಾಗಿದೆ. ಇಲಾಖೆಯ ತರಬೇತಿ ಕಾರ್ಯಕ್ರಮಗಳು, ಸಭೆಗಳು, ಅಕ್ಷರ ದಾಸೋಹದ ಅವಶ್ಯಕತೆಗಳು ಇತರೆ ಎಲ್ಲ ಕಾರ್ಯಗಳನ್ನು ಒಬ್ಬನೇ ಮಾಡಬೇಕಿದೆ. ಆರೋಗ್ಯ ಹದಗೆಟ್ಟರೂ ರಜೆ ಹಾಕುವಂತಿಲ್ಲದ ಪರಿಸ್ಥಿತಿ ಇದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಬಿಸಿಯೂಟದ ಯೋಜನೆಯನ್ನು ಕಾರ್ಮಿಕರ ಸಹಾಯದಿಂದ ನಿಭಾಯಿಸಿಕೊಂಡು ಹೋಗುತ್ತಿದ್ದೇನೆ’  ಎಂದು ಅವರು ಹೇಳಿದರು.ಮುಖ್ಯಾಂಶಗಳು

* ಒಂದು ವರ್ಷದಿಂದ ಒಬ್ಬರೇ ಶಿಕ್ಷಕರಿಂದ ಕಾರ್ಯ ನಿರ್ವಹಣೆ

* ಒಂದು ವರ್ಷದಿಂದ ಒಂದೂ ರಜೆ ಪಡೆಯದ ಶಿಕ್ಷಕಶಿಕ್ಷಕರ ಕೊರತೆಯಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಇಕ್ಕಟ್ಟಿಗೆ ಸಿಲುಕಿದ್ದು, ಆದಷ್ಟು ಶೀಘ್ರ ಇಲಾಖೆ ಅಧಿಕಾರಿಗಳು ಶಿಕ್ಷಕರ ನೇಮಕಾತಿ ಮಾಡಬೇಕು

ಶ್ರೀನಿವಾಸ್, ಮಂಡಿಬೆಲೆ ನಿವಾಸಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.