ಮಂಡಿಸದ ಸಿಎಜಿ ವರದಿಗೆ ಆಕ್ಷೇಪ

7

ಮಂಡಿಸದ ಸಿಎಜಿ ವರದಿಗೆ ಆಕ್ಷೇಪ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನಪಡಿಸಿಕೊಂಡ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿರುವುದು ಮತ್ತು ನಿವೇಶನ ಹಂಚಿಕೆಗೆ ಸಂಬಂಧಿಸಿದ ಮಹಾಲೇಖಪಾಲರ (ಸಿಎಜಿ) ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸದೇ ಇರುವುದಕ್ಕೆ ಕಾಂಗ್ರೆಸ್ ಸೋಮವಾರ ವಿಧಾನಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.ಈ ವಿಷಯ ಪ್ರಸ್ತಾಪಿಸಿದ ವಿರೋಧ ಪಕ್ಷದ ಉಪ ನಾಯಕ ಟಿ.ಬಿ.ಜಯಚಂದ್ರ, `ಗಣಿಗಾರಿಕೆಗೆ ಸಂಬಂಧಿಸಿದಂತೆ ಸಿಎಜಿ ಈಗಾಗಲೇ ಒಂದು ಲೆಕ್ಕ ಪರಿಶೋಧನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಬಿಡಿಎ ನಿವೇಶನ ಹಂಚಿಕೆ ಹಾಗೂ ಜಮೀನಿನ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮತ್ತೊಂದು ವರದಿಯನ್ನು ಸಲ್ಲಿಸಿದೆ. ಆದರೆ, ತನಗೆ ವಿರುದ್ಧವಾದ ಅಂಶಗಳು ವರದಿಯಲ್ಲಿವೆ ಎಂಬ ಕಾರಣಕ್ಕಾಗಿ ಈ ವರದಿಗಳನ್ನು ವಿಧಾನಮಂಡಲದಲ್ಲಿ ಮಂಡಿಸಲು ಸರ್ಕಾರ ಹಿಂದೇಟು ಹಾಕುತ್ತಿದೆ' ಎಂದು ದೂರಿದರು.`ನವೆಂಬರ್ 27ರಂದೇ ಎರಡೂ ವರದಿಗಳು ಸರ್ಕಾರದ ಕೈಸೇರಿವೆ. ಸಂವಿಧಾನದ ಪ್ರಕಾರ ತಕ್ಷಣವೇ ಈ ವರದಿಗಳನ್ನು ರಾಜ್ಯಪಾಲರಿಗೆ ಕಳುಹಿಸಿ ಅನುಮೋದನೆ ಪಡೆಯಬೇಕಿತ್ತು. ಬಳಿಕ ವಿಧಾನಮಂಡಲದಲ್ಲಿ ಮಂಡಿಸಬೇಕಿತ್ತು. ಸಿಎಜಿ ವರದಿಗಳನ್ನು ಪಡೆಯುವುದು ನಮ್ಮ ಹಕ್ಕು. ಅದನ್ನು ಮೊಟಕುಗೊಳಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ವರದಿಗಳನ್ನು ಮಂಡಿಸದೇ ಇರಲು ಸರ್ಕಾರ ತೀರ್ಮಾನಿಸಿದೆ ಎಂಬ ಮಾಹಿತಿ ನನಗೆ ದೊರೆತಿದೆ. ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು' ಎಂದರು.ಜಯಚಂದ್ರ ಅವರ ಆರೋಪಗಳಿಗೆ ಪ್ರತಿಕ್ರಿಸಿದ ಕಾನೂನು ಸಚಿವ ಎಸ್.ಸುರೇಶಕುಮಾರ್, `2012ರ ಮಾರ್ಚ್ 31ರ ಅವಧಿಗೆ ಕೊನೆಗೊಂಡಂತೆ ಎರಡು ವರದಿಗಳನ್ನು ಸಿಎಜಿ ಸಲ್ಲಿಸಿರುವುದು ನಿಜ. ಈ ವರದಿಗಳು ಸರ್ಕಾರದ ಪರಿಶೀಲನೆಯಲ್ಲಿವೆ. ಬಳಿಕ ರಾಜ್ಯಪಾಲರ ಅನುಮೋದನೆ ಪಡೆದು ಸದನದ ಮುಂದಿಡಲಾಗುವುದು' ಎಂದರು.ಆಗ ಮತ್ತೆ ಆಕ್ಷೇಪ ಎತ್ತಿದ ಜಯಚಂದ್ರ, `ಸಿಎಜಿ ವರದಿಗಳನ್ನು ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇಲ್ಲ. ಸಿಎಜಿ ಸಾಂವಿಧಾನಿಕ ಸಂಸ್ಥೆ. ಅದು ನೀಡುವ ವರದಿಯನ್ನು ತಕ್ಷಣವೇ ಸದನದ ಮುಂದಿಡಬೇಕಾದುದು ಸರ್ಕಾರದ ಹೊಣೆಗಾರಿಕೆ' ಎಂದು ಅಸಮಾಧಾನ ವ್ಯಕ್ತಪಡಿಸಿದರು.`ವರದಿಯನ್ನು ಈಗಾಗಲೇ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿದೆ' ಎಂದು ಸಚಿವರು ಸಮಜಾಯಿಷಿ ನೀಡಿದರು. `ವರದಿ ಬಂದು 15 ದಿನಗಳಾಗಿವೆ. ರಾಜ್ಯಪಾಲರ ಅನುಮೋದನೆ ಪಡೆಯಲು 15 ದಿನಗಳು ಬೇಕೇ' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry