ಮಂಡೂರು ತ್ಯಾಜ್ಯ ಘಟಕದತ್ತ ಸುಳಿಯದ ಕಸದ ಲಾರಿ

6

ಮಂಡೂರು ತ್ಯಾಜ್ಯ ಘಟಕದತ್ತ ಸುಳಿಯದ ಕಸದ ಲಾರಿ

Published:
Updated:
ಮಂಡೂರು ತ್ಯಾಜ್ಯ ಘಟಕದತ್ತ ಸುಳಿಯದ ಕಸದ ಲಾರಿ

ಮಹದೇವಪುರ: ಮಂಡೂರು ಗ್ರಾಮದಲ್ಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮತ್ತೆ ನಗರ ಪ್ರದೇಶದಲ್ಲಿನ ಕಸವನ್ನು ತಂದು ಸುರಿಯುವುದನ್ನು ಇಲ್ಲಿನ ಜನತೆ ತೀವ್ರವಾಗಿ ವಿರೋಧಿಸುತ್ತಿರುವುದರಿಂದ ಗುರುವಾರ ಕಸದ ಒಂದು ಲಾರಿಯೂ  ತ್ಯಾಜ್ಯ ಘಟಕದತ್ತ ಸುಳಿಯಲಿಲ್ಲ.ಅಲ್ಲದೆ ನಿನ್ನೆ ಕಸವನ್ನು ತುಂಬಿಕೊಂಡು ಬಂದಂತಹ ಕೆಲ ಲಾರಿಗಳ ಚಾಲಕರು ಪ್ರತಿಭಟನಾಕಾರರಿಗೆ ಹೆದರಿ ತ್ಯಾಜ್ಯ ವಿಲೇವಾರಿ ಘಟಕದೊಳಗೆ ಲಾರಿಗಳನ್ನು ನಿಲ್ಲಿಸಿದ್ದಾರೆ.ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದರಿಂದ ಘಟಕದ ಸುತ್ತಮುತ್ತ ಸಾಕಷ್ಟು ದುರ್ನಾತ ಹಬ್ಬಿದೆ. ಘಟಕದೊಳಗೆ ಎಲ್ಲೆಂದರಲ್ಲಿ ಕಸವನ್ನು ಸುರಿಯಲಾಗಿದೆ. ಆದರೆ ಇದುವರೆಗೂ ತಂದು ಸುರಿದಿರುವ ಸಾವಿರಾರು ಲಾರಿ ಲೋಡ್‌ಗಳಷ್ಟು ಕಸವನ್ನು ಸಮರ್ಪಕವಾಗಿ ವಿಂಗಡಣೆ ಮಾಡುವ ಕಾರ್ಯಕ್ಕೆ ಪೂರ್ಣ ವಿರಾಮ ಬಿದ್ದಿದೆ.ಬುಧವಾರ ರಾತ್ರಿ ಸುಮಾರು ಇನ್ನೂರು ಲಾರಿಗಳು ಕಸವನ್ನು ತುಂಬಿಕೊಂಡು ಬಂದಿದ್ದವು. ಮಧ್ಯರಾತ್ರಿಯವರೆಗೂ ಸ್ಥಳೀಯ ಜನತೆ ರಸ್ತೆಯಲ್ಲಿ ಕಾವಲು ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಕಸವನ್ನು ತುಂಬಿಕೊಂಡು ಬಂದಂತಹ ಲಾರಿಗಳು ಹೊಸಕೋಟೆಯತ್ತ ತೆರಳಿದವು. ಅಲ್ಲಿನ ಮಾಲೂರು ರಸ್ತೆಯ ಅಕ್ಕಪಕ್ಕ ಹಾಗೂ ಕೊಳತೂರು ಎಂಬ ಗ್ರಾಮದ ನೀಲಗಿರಿ ತೋಪಿನಲ್ಲಿ ಕಸವನ್ನು ಸುರಿಯಲಾಗಿದೆ ಎಂದು ಗೊತ್ತಾಗಿದೆ.`ಮಂಡೂರಿನಲ್ಲಿ ಕಸವನ್ನು ವಿಲೇವಾರಿ ಮಾಡಲು ಜನತೆಯ ಮನವೊಲಿಸಲಾಗಿದೆ. ಜನರ ಒಪ್ಪಿಗೆ ಪಡೆಯಲಾಗಿದೆ. ರಾತ್ರಿ ವೇಳೆಯಲ್ಲಿ ಮಾತ್ರ ಕಸವನ್ನು ಸುರಿಯಲಾಗುವುದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಈ ಬಗ್ಗೆ ಸ್ಥಳೀಯ ಯಾರೊಂದಿಗೆಯೂ ಆಯುಕ್ತರು ಖುದ್ದಾಗಿ ಬಂದು ಮಾತುಕತೆ ನಡೆಸಿಲ್ಲ~ ಎಂದು  ಬೈಯಪ್ಪನಹಳ್ಳಿಯಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಹಿರಿಯ ನಾಗರಿಕರಾದ ಆಂಜನಪ್ಪ `ಪ್ರಜಾವಾಣಿ~ಗೆ ತಿಳಿಸಿದರು.ಆಯುಕ್ತರು ಯಾವ ಜನತೆಯೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬುದು ನಮಗೆ ತಿಳಿದಿಲ್ಲ. ಏನೇ ಆಗಲಿ ಮತ್ತೆಂದೂ ಈ ಘಟಕದಲ್ಲಿ ಕಸವನ್ನು ತಂದು ಹಾಕುವಂತಿಲ್ಲ. ಕಸ ಹಾಕಲು ಬರುವ ಲಾರಿಗಳನ್ನು ಅಡ್ಡಗಟ್ಟಿ ಬೆಂಕಿ ಹಚ್ಚಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.ಈಗಾಗಲೇ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತಂದು ಹಾಕಿರುವ ಕಸವನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಿ ಮುಗಿಸಬೇಕು. ಆದರೆ ಘಟಕದೊಳಗೆ ಇದುವರೆಗೂ ಅಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದಾಗಿ ದಿನದ ಇಪ್ಪನಾಲ್ಕು ಗಂಟೆಗಳ ಕಾಲ ದುರ್ನಾತ ಮಂಡೂರು ಮಾತ್ರವಲ್ಲದೆ ಸುತ್ತಮುತ್ತಲಿನ ಊರುಗಳಿಗೂ ಹರಡುತ್ತಿದೆ ಎಂದು ಅವರು ಆರೋಪಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry