ಭಾನುವಾರ, ಫೆಬ್ರವರಿ 28, 2021
23 °C

ಮಂಡ್ಯದಲ್ಲಿ ಈಗ ಬೇಸಿಗೆ ಶಿಬಿರಗಳ ಭರಾಟೆ

ಬಸವರಾಜ ಹವಾಲ್ದಾರ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯದಲ್ಲಿ ಈಗ ಬೇಸಿಗೆ ಶಿಬಿರಗಳ ಭರಾಟೆ

ಮಂಡ್ಯ: ಬೇಸಿಗೆ ರಜೆಯೊಂದಿಗೆ ಮಕ್ಕಳ ತರಬೇತಿ ಶಿಬಿರಗಳೂ ಆರಂಭವಾಗಿವೆ. ವಿವಿಧ ಆಟ, ಆಟದೊಂದಿಗೆ ಪಾಠ, ಮಾನಸಿಕ ಸಾಮರ್ಥ್ಯ ವೃದ್ಧಿ, ನಾಟಕ, ನೃತ್ಯ ಸೇರಿದಂತೆ ಹಲವು ವಿಭಾಗಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ.ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಒಂದು ಸುತ್ತಿನ ಶಿಬಿರ ಪೂರ್ಣಗೊಳಿಸಲಾಗಿದ್ದು, ಎರಡನೇ ಸುತ್ತಿನ ಶಿಬಿರ ಆರಂಭವಾಗುತ್ತಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳೂ ಇದರಲ್ಲಿ ಭಾಗವಹಿಸುತ್ತಿದ್ದಾರೆ.

ನಾಟಕ, ಸಮೂಹ ನೃತ್ಯ, ಚಿತ್ರಕಲೆ, ಕರಕುಶಲ ಕಲೆ, ಕರಾಟೆ, ಯೋಗ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಬೋಧನೆ ಮಾಡಲಾಗುತ್ತದೆ.ಮಂಡ್ಯ ಚೆಸ್‌ ಅಕಾಡೆಮಿ ವತಿಯಿಂದಲೂ ಬೇಸಿಗೆ ಅಂಗವಾಗಿ ಮಕ್ಕಳು ಹಾಗೂ ಹಿರಿಯರಿಗಾಗಿ ಚೆಸ್‌ ಶಿಬಿರ ಆಯೋಜಿಸಲಾಗಿದೆ. ಏಕಾಗ್ರತೆ, ಸಹನೆ, ವಿಚಾರಶಕ್ತಿಯನ್ನು ಹೆಚ್ಚಿಸುವ ಕೆಲಸವನ್ನು ಚೆಸ್‌ ಆಟ ಮಾಡುತ್ತದೆ.ಪಿಇಟಿ ಸಂಸ್ಥೆ ವತಿಯಿಂದ ಬಾಲ್‌ ಬ್ಯಾಡ್ಮಿಂಟನ್‌, ಕ್ರಿಕೆಟ್‌, ಈಜು, ಸ್ಕೇಟಿಂಗ್‌ ವಿಭಾಗಗಳಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ. ನುರಿತ ತಜ್ಞರು ತರಬೇತಿ ನೀಡುತ್ತಿದ್ದಾರೆ. ದೈಹಿಕ ಸದೃಢತೆಯ ಜತೆಗೆ ಮಾನಸಿಕವಾಗಿಯೂ ಗಟ್ಟಿಯಾಗುತ್ತಾರೆ.ಕಲಾ ತಪಸ್ವಿ ಟ್ರಸ್ಟ್‌ ವತಿಯಿಂದ ಮಣ್ಣಿನ ಕಲಾಕೃತಿ ರಚನೆ, ಚಿನ್ಮಯ್‌ ಮಿಷನ್‌ ವತಿಯಿಂದ ಆಧ್ಯಾತ್ಮ ಹಾಗೂ ಶ್ಲೋಕಗಳ ಪಠಣದ ಬಗ್ಗೆ ಶಿಬಿರಗಳನ್ನು ನಡೆಸಲಾಗುತ್ತದೆ. ಇದಲ್ಲದೇ ವಿವಿಧ ಸಂಸ್ಥೆಗಳು ವಿವಿಧ ಬಗೆಯ ಶಿಬಿರಗಳನ್ನು ಏರ್ಪಡಿಸುತ್ತವೆ.ವಾಣಿಜ್ಯಮಯ: ಕೆಲವರು ಶಿಬಿರಗಳನ್ನು ಸೇವಾ ಮನೋಭಾವದಿಂದ ನಡೆಸಿದರೆ, ಇನ್ನು ಕೆಲವರು ಅವುಗಳನ್ನು ವಾಣಿಜ್ಯೀಕರಣಗೊಳಿಸಿದ್ದಾರೆ. ಕೆಲವು ಶಿಬಿರಗಳಿಗೆ ಬಡ ಹಾಗೂ ಮಧ್ಯಮ ವರ್ಗದವರು ಮಕ್ಕಳನ್ನು ಕಳುಹಿಸಲು ಯೋಚಿಸಬೇಕಾದಷ್ಟು ಶುಲ್ಕಗಳನ್ನು ನಿಗದಿಪಡಿಸಲಾಗಿದೆ. ಕೆಲವೆಡೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಿದ್ದು, ಸರಿಯಾಗಿ ಕಲಿಸಲು ಆಗದಂತಹ ಸ್ಥಿತಿಯೂ ಇದೆ.

ಮಕ್ಕಳಿಗೆ ಭಾರ: ಕೆಲವು ಮಕ್ಕಳು ಉತ್ಸಾಹದಿಂದ ಶಿಬಿರಗಳಲ್ಲಿ ಪಾಲ್ಗೊಂಡರೆ, ಇನ್ನು ಕೆಲವು ಮಕ್ಕಳು ಪೋಷಕರ ಒತ್ತಾಸೆಗೆ ಮಣಿದು, ಒಲ್ಲದ ಮನಸ್ಸಿನಿಂದ ಶಿಬಿರಗಳಲ್ಲಿದ್ದಾರೆ.ಬೇರೆಯವರ ಮಕ್ಕಳು ಶಿಬಿರಕ್ಕೆ ಸೇರಿದ್ದಾರೆ. ನಮ್ಮ ಮಕ್ಕಳೂ ಸೇರಬೇಕು ಎಂಬುದು ಕೆಲ ಪೋಷಕರ ಆಸೆಯಾದರೆ, ಇನ್ನು ಕೆಲವರದ್ದು, ಬಂದವರ ಮುಂದೆ ನಮ್ಮ ಮಕ್ಕಳನ್ನು ಶಿಬಿರಗಳಿಗೆ ಸೇರಿಸಿದ್ದೇವೆ ಎಂದು ಹೇಳಿಕೊಳ್ಳುವುದಕ್ಕಾಗಿ ಕಳುಹಿಸುತ್ತಾರೆ.ಬಹುತೇಕರು ಗ್ರಾಮೀಣ ಮೂಲದಿಂದಲೇ ಬಂದಿರುತ್ತಾರೆ. ಹಿಂದಿನ ದಿನಗಳಲ್ಲಿ ಬೇಸಿಗೆ ಬಂತೆಂದರೆ ಸಾಕು ಅಜ್ಜ – ಅಜ್ಜಿಯ ಮನೆಗೆ ಓಡುತ್ತಿದ್ದರು. ಆದರೆ, ಈಗ ಶಿಬಿರಗಳಿಂದಾಗಿ ರಜೆಯಲ್ಲಿಯೂ ನಗರದಲ್ಲಿ ಕಾಲ ಕಳೆಯಬೇಕಾದ ಸ್ಥಿತಿ ಎದುರಾಗಿದೆ. ಹೀಗಾಗಿ ಗ್ರಾಮೀಣ ಸಂಸ್ಕೃತಿ, ಸೊಗಡಿನಿಂದ ಮಕ್ಕಳು ವಂಚಿತರಾಗುತ್ತಿದ್ದಾರೆ.‘ಮಕಳು ಆಸಕ್ತಿ ಹೊಂದಿದ ವಿಷಯದ ಶಿಬಿರವಾಗಿದ್ದರೆ ಕಳುಹಿಸಬೇಕು. ಜೊತೆಗೆ ಬೇರೆ ಚಟುವಟಿಕೆಗಳಿಗೂ ಅವಕಾಶ ಮಾಡಿಕೊಡಬೇಕು. ಪ್ರವಾಸ, ಸಮಾರಂಭಗಳಿಗೂ ಹೋಗಲು ಅವಕಾಶ ಮಾಡಿಕೊಡಬೇಕು. ಆಗಲೇ ಮಕ್ಕಳಿಗೆ ಶಿಬಿರ ಸಹನೀಯವಾಗುತ್ತದೆ. ಇಲ್ಲದಿದ್ದರೆ, ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎನ್ನುತ್ತಾರೆ’ ಪ್ರಕಾಶ್‌.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.