ಭಾನುವಾರ, ಡಿಸೆಂಬರ್ 8, 2019
25 °C

ಮಂಡ್ಯದಲ್ಲಿ ನಿವೇಶನ ಕೊರತೆ

Published:
Updated:
ಮಂಡ್ಯದಲ್ಲಿ ನಿವೇಶನ ಕೊರತೆ

ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಬರುವ ಮಂಡ್ಯದಲ್ಲಿಯೂ ನಿವೇಶನಗಳಿಗೆ ತೀವ್ರವಾದ ಬೇಡಿಕೆ ಇದೆ. ಆದರೆ ಪೂರೈಕೆ ಮಾತ್ರ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿದೆ. ಪರಿಣಾಮ ನಿವೇಶನಗಳ ಬೆಲೆ ಗಗನದತ್ತ ಮುಖ ಮಾಡಿದೆ.ಜಿಲ್ಲಾ ಕೇಂದ್ರವಾದ ಮಂಡ್ಯದ ಸುತ್ತ-ಮುತ್ತಲೂ ಬಹುತೇಕ ಭೂಮಿಯು ಕಾವೇರಿ ನೀರಾವರಿ ಪ್ರದೇಶದ ವ್ಯಾಪ್ತಿಗೆ ಬರುವುದರಿಂದ ಹಸಿರು ವಲಯ ಎಂದು ಘೋಷಿಸಲಾಗಿದೆ. ಹಸಿರು ವಲಯವಾದ್ದರಿಂದ ನಿವೇಶನಕ್ಕಾಗಿ ಭೂಮಿ ಪರಿವರ್ತನೆ ಮಾಡಿಸಿಕೊಳ್ಳುವುದು ಕಷ್ಟದ ಕೆಲಸ. ಹೀಗಾಗಿ ಹೊಸ ಬಡಾವಣೆಗಳ ರಚನೆಗೆ ಬಹುತೇಕ ರಿಯಲ್ ಎಸ್ಟೇಟ್ ಡೆವಲಪರ್‌ಗಳು ಮುಂದಾಗುತ್ತಿಲ್ಲ.12 ವರ್ಷದ ಹಿಂದೆ ಮಂಡ್ಯಕ್ಕೆ ಹೊಂದಿಕೊಂಡಿದ್ದ ಕೆರೆಯಂಗಳವನ್ನು ಮುಚ್ಚಿ `ಮಂಡ್ಯ ನಗರ ಅಭಿವೃದ್ಧಿ ಪ್ರಾಧಿಕಾರ'(ಮುಡಾ) ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು ಬಿಟ್ಟರೆ, ಹೊಸದಾಗಿ ಬಡಾವಣೆ ನಿರ್ಮಾಣ ಮಾಡುವ ಕೆಲಸ `ಮುಡಾ'ದಿಂದ ಮತ್ತೆ ಆಗಿಲ್ಲ.

ಕೆರೆ ಅಂಗಳದಲ್ಲಿ ಬಡಾವಣೆ ನಿರ್ಮಾಣವಾಗಿ ದಶಕವೇ ಕಳೆದರೂ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸ ಇಂದಿಗೂ ಕೈಗೂಡಿಲ್ಲ. ಆದರೂ ಅಲ್ಲಿ ನಿವೇಶನಗಳಿಗೆ ಬೇಡಿಕೆಯೇನೂ ತಗ್ಗಿಲ್ಲ.ಮಂಡ್ಯದ ಹೊರವಲಯವಾದ ಕ್ಯಾತುಂಗೆರೆ, ಕಾರಸವಾಡಿ, ಯತ್ತಗದಹಳ್ಳಿ, ಇಂಡವಾಳು ಗ್ರಾಮಗಳ ರೈತರ ಹೊಲಗಳನ್ನು ಸಹಭಾಗಿತ್ವದ ಆಧಾರದ ಮೇಲೆ ಬಡಾವಣೆ ನಿರ್ಮಾಣಕ್ಕೆ ಅರ್ಜಿ ಆಹ್ವಾನಿಸಲಾಗಿತ್ತು. ಯಾವುದೇ ರೈತರು ಬಡಾವಣೆ ನಿರ್ಮಾಣಕ್ಕೆ ಮುಂದೆ ಬಂದಿಲ್ಲ.2007ರಲ್ಲಿ `ಮುಡಾ' ವತಿಯಿಂದ ನಿವೇಶನದ ಬೇಡಿಕೆಯ ಸಮೀಕ್ಷೆಗಾಗಿ ಅರ್ಜಿ ಆಹ್ವಾನಿಸಲಾಗಿತ್ತು. 29 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ನಿವೇಶನಗಳಿಗೆ ಇರುವ ಬೇಡಿಕೆಯನ್ನು ತೋರಿಸುತ್ತದೆ. ಅರ್ಜಿ ಶುಲ್ಕದ ರೂಪದಲ್ಲಿಯೇ ರೂ1.75 ಕೋಟಿ ಸಂಗ್ರಹವಾಗಿದೆ. ಹೊಸ ಬಡಾವಣೆಗಳನ್ನು ಅಭಿವೃದ್ಧಿಪಡಿಸದ,  ನಿವೇಶನಗಳನ್ನು ರಚಿಸದ `ಮುಡಾ' ವಿರುದ್ಧ ಸಾರ್ವಜನಿಕರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.`ಕರ್ನಾಟಕ ಗೃಹ ನಿರ್ಮಾಣ ಮಂಡಳಿ'ಯು ಸ್ವರ್ಣಸಂದ್ರ, ಕೆರೆ ಅಂಗಳ ಪಕ್ಕದಲ್ಲಿ ನಿವೇಶನಗಳನ್ನು ಮಾಡಿತ್ತು. ಅವುಗಳು ಮಾರಾಟವಾಗಿವೆ. ಕೆರೆ ಅಂಗಳ ಪಕ್ಕದಲ್ಲಿ ಮೂಲ ಸೌಕರ್ಯದ ಕೊರತೆಯಿಂದಾಗಿ ಮನೆಗಳ ನಿರ್ಮಾಣವಾಗಿಲ್ಲ.ಖಾಸಗಿಯಾಗಿ ಹೊಸಳ್ಳಿ, ವಿ.ವಿ.ನಗರದ ಮುಂದಿನ ಭಾಗದಲ್ಲಿ ಹೊಸ ಬಡಾವಣೆಗಳು ಅಸ್ತಿತ್ವಕ್ಕೆ ಬಂದಿವೆ. 10 ಗುಂಟೆಯಿಂದ ಒಂದು ಎಕರೆವರೆಗೆ ಜಮೀನು ಹೊಂದಿದವರು ಬಡಾವಣೆಗಳನ್ನು ರಚಿಸಿದ್ದಾರೆ. ಆದರೆ ಅವುಗಳಲ್ಲಿ ಬಹುತೇಕ ಬಡಾವಣೆಗಳು ಅನಧಿಕೃತವಾಗಿವೆ.ನಗರದ ಹೃದಯ ಭಾಗದಲ್ಲಿರುವ ಅಶೋಕ ನಗರ, ಸುಭಾಷ ನಗರದಲ್ಲಿ ಪ್ರತಿ ಚದರ ಅಡಿಗೆ ರೂ3,000 ಇದೆ. ವಿ.ವಿ.ನಗರದಲ್ಲಿ ಚದರ ಅಡಿಗೆ ರೂ900ರಿಂದ ರೂ1300ದವರೆಗೂ ಬೆಲೆ ನಡೆಯುತ್ತಿದೆ. ಮಂಡ್ಯದಲ್ಲಿ ಕಡಿಮೆ ಎಂದರೂ   ಚದುರ ಅಡಿಗೆ ರೂ 500ಗಿಂತ ಕಡಿಮೆ ಬೆಲೆಗೆ ನಿವೇಶನ ದೊರೆಯುವುದಿಲ್ಲ.ಜಿಲ್ಲೆಯ ಮದ್ದೂರಿನ ಆರಂಭದಿಂದ ಶ್ರೀರಂಗಪಟ್ಟಣದ ಅಂತ್ಯದವರೆಗಿನ ಬೆಂಗಳೂರು-ಮೈಸೂರು ರಸ್ತೆಯ ಪಕ್ಕದ ಹೊಲಗಳು ಅದಾಗಲೇ ಮಾರಾಟವಾಗಿಬಿಟ್ಟಿವೆ. ಈ ರಸ್ತೆಯಲ್ಲಿ ಈಗಾಗಲೇ ಐವತಕ್ಕೂ ಹೆಚ್ಚು ಡಾಬಾ, ಹೋಟೆಲ್‌ಗಳು ನೆಲೆಯೂರಿವೆ. ಮುಂದಿನ ದಿನಗಳಲ್ಲಿ ಈಗ ಖರೀದಿಯಾಗಿರುವ ಭೂಮಿಯೂ ಅದಕ್ಕೆ ಬಳಕೆಯಾಗುವ ಲಕ್ಷಣಗಳೇ ಕಾಣುತ್ತಿವೆ.`ಮಂಡ್ಯದ ಹೊರವಲಯದ ಒಂದು ಎಕರೆ ಭೂಮಿಯ ಬೆಲೆ ಒಂದು ಕೋಟಿ ರೂಪಾಯಿಗೆ ಸಮೀಪವಿದೆ. ಹಸಿರು ವಲಯ ಇರುವುದರಿಂದ ಭೂ ಪರಿವರ್ತನೆಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ ಅಷ್ಟೊಂದು ಹಣ ಹೂಡಿ, ನಿವೇಶನ ರಚನೆಗೆ ಯಾರೂ ಮುಂದಾಗುತ್ತಿಲ್ಲ' ಎನ್ನುತ್ತಾರೆ ಭೂಮಿ ವಹಿವಾಟಿನಲ್ಲಿ ತೊಡಗಿಸಿಕೊಂಡಿರುವ ಎಂ.ಜೆ.ಚಿಕ್ಕಣ್ಣ.ಅರ್ಧ ಎಕರೆಯಿಂದ ಒಂದು, ಒಂದೂವರೆ ಎಕರೆ ಭೂಮಿ ಹೊಂದಿದವರ ಸಂಖ್ಯೆಯೇ ಈ ಭಾಗದಲ್ಲಿ ಹೆಚ್ಚಿದೆ. ದೊಡ್ಡ ಪ್ರಮಾಣದಲ್ಲಿ ಭೂಮಿ ಒಬ್ಬರದ್ದೂ ಇಲ್ಲ. ಹಾಗಾಗಿ, ಒಬ್ಬ ರೈತ ಭೂಮಿ ಮಾರಾಟಕ್ಕೆ ಒಪ್ಪಿದರೂ, ಇನ್ನೊಬ್ಬರು ಒಪ್ಪುವುದಿಲ್ಲ. ಒಂದೆರಡು ಎಕರೆ ಭೂಮಿ ಖರೀದಿಸಿ ಬಡಾವಣೆ ಅಭಿವೃದ್ಧಿ ಪಡಿಸುವುದೆಂದರೆ ಅದು ನಷ್ಟದ ಬಾಬತ್ತು. ಈ ಅಂಶವೂ ಹೊಸ ಬಡಾವಣೆಗಳ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎನ್ನುತ್ತಾರೆ ಅವರು.

ಪ್ರತಿಕ್ರಿಯಿಸಿ (+)