ಬುಧವಾರ, ನವೆಂಬರ್ 20, 2019
25 °C
ರವೀಂದ್ರ ಶ್ರೀಕಂಠಯ್ಯ, ಮಾಜಿ ಸ್ಪೀಕರ್ ಕೃಷ್ಣ ಪಕ್ಷೇತರರಾಗಿ ಕಣಕ್ಕೆ

ಮಂಡ್ಯದಲ್ಲಿ ಭುಗಿಲೆದ್ದ ಬಂಡಾಯ

Published:
Updated:

ಮಂಡ್ಯ: ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿನ ಬಂಡಾಯ ಅಂತಿಮಘಟ್ಟ ತಲುಪಿದೆ. ಜತೆಗೆ ಜೆಡಿಎಸ್‌ನಲ್ಲೂ ಬಂಡಾಯದ ಕಹಳೆ ಮೊಳಗಿದೆ.ಶ್ರೀರಂಗಪಟ್ಟಣ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಕೆಪಿಸಿಸಿ ಸದಸ್ಯ ರವೀಂದ್ರಶ್ರೀಕಂಠಯ್ಯ ಅವರು ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದರೆ, ಇತ್ತ ಅಭಿಮಾನಿಗಳ ಒತ್ತಡಕ್ಕೆ ಮಣಿದಿರುವ ಕೆ.ಆರ್.ಪೇಟೆ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿ, ಮಾಜಿ ಸ್ಪೀಕರ್ ಕೃಷ್ಣ ಅವರೂ  ಪಕ್ಷೇತರರಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.ಪಟ್ಟಣದ ಎಸ್.ಎಂ.ಲಿಂಗಪ್ಪ ಸಮುದಾಯದ ಭವನದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕೃಷ್ಣ ಅವರ ಬೆಂಬಲಿಗರು, 'ನಿಮ್ಮ ಬೆಂಬಲಕ್ಕೆ ನಾವೆಲ್ಲರೂ ಇದ್ದೇವೆ. ನೀವು ಸ್ಪರ್ಧಿಸಬೇಕು' ಎಂದು ಒತ್ತಡ ಹಾಕಿದರು.ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, `ರಾಜಕೀಯದಿಂದ ನಿವೃತ್ತನಾಗಬೇಕು ಎಂದುಕೊಂಡಿದ್ದೆ. ಅಭಿಮಾನಿಗಳ ಒತ್ತಡಕ್ಕೆ ಮಣಿದು ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ' ಎಂದು ಘೋಷಿಸಿದರು.ಬೆಂಬಲಿಗರೇ ಕೃಷ್ಣ ಅವರಿಗೆ ಸಭೆಯಲ್ಲಿಯೇ ರೂ 2 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹಿಸಿ ಚುನಾವಣೆ ಖರ್ಚಿಗೆ ಎಂದು ನೀಡಿದರು.ಪಕ್ಷೇತರ ಸ್ಪರ್ಧೆ: 'ನನಗೆ ಮೋಸವಾಗಿದೆ. ಗೆಲ್ಲುವ ಸಾಮರ್ಥ್ಯವಿಲ್ಲದವರಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದ ಜನರ ಇಚ್ಛೆಯಂತೆ ಪಕ್ಷೇತರ ಅಭ್ಯರ್ಥಿಯಾಗಿ ಬುಧವಾರ ನಾಮಪತ್ರ ಸಲ್ಲಿಸಲಿದ್ದೇನೆ' ಎಂದು `ಪ್ರಜಾವಾಣಿ'ಗೆ ರವೀಂದ್ರ ಶ್ರೀಕಂಠಯ್ಯ ತಿಳಿಸಿದರು.ಈ ನಡುವೆಯೇ ಶ್ರೀರಂಗಪಟ್ಟಣ ಕಾಂಗ್ರೆಸ್ ಅಭ್ಯರ್ಥಿಯಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಎಲ್. ಲಿಂಗರಾಜು ನಾಮಪತ್ರ ಸಲ್ಲಿಸಿದ್ದಾರೆ. ಬಿ. ಫಾರಂ ಕೂಡಾ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.ಕೆಪಿಸಿಸಿ ಉಪಾಧ್ಯಕ್ಷ ಅಂಬರೀಷ್ ಅವರು ಜೆಡಿಎಸ್‌ನೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದು, ಮದ್ದೂರು, ಪಾಂಡವಪುರ ಹಾಗೂ ಶ್ರೀರಂಗಪಟ್ಟಣದಲ್ಲಿ ದುರ್ಬಲ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಟಿ.ಎಸ್. ಸತ್ಯಾನಂದ ಅವರು, ಎಐಸಿಸಿ ಅಧ್ಯಕ್ಷ ಸೋನಿಯಾಗಾಂಧಿ ಅವರಿಗೆ ಬರೆದಿರುವ ಪತ್ರದಲ್ಲಿ ಆರೋಪಿಸಿದ್ದಾರೆ.ಶ್ರೀರಂಗಪಟ್ಟಣದಿಂದ ಆಗಮಿಸಿದ್ದ ರವೀಂದ್ರ ಶ್ರೀಕಂಠಯ್ಯ ಅವರ ಬೆಂಬಲಿಗರು, ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಚೇರಿ ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮನೆ ಮುಂದೆ ಪ್ರತಿಭಟನೆ ಮಾಡಿದರಲ್ಲದೇ, ರವೀಂದ್ರರಿಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.ಮಂಡ್ಯದಿಂದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಜಯರಾಂ ಅವರಿಗೂ ಟಿಕೆಟ್ ತಪ್ಪಿದ್ದು, ಅವರೂ ಮಂಗಳವಾರ ಸಂಜೆ ಬೆಂಬಲಿಗರ ಸಭೆ ಕರೆದು ಚರ್ಚೆ ನಡೆಸಿದ್ದಾರೆ.

ಪ್ರತಿಕ್ರಿಯಿಸಿ (+)