ಮಂಡ್ಯದಲ್ಲಿ ರಾಜಕೀಯ ಸಾಮ್ಯತೆ ಕೊರತೆ: ಪ್ರೊ.ಬಿಕೆಸಿ

ಶನಿವಾರ, ಮೇ 25, 2019
32 °C

ಮಂಡ್ಯದಲ್ಲಿ ರಾಜಕೀಯ ಸಾಮ್ಯತೆ ಕೊರತೆ: ಪ್ರೊ.ಬಿಕೆಸಿ

Published:
Updated:

ಶ್ರೀರಂಗಪಟ್ಟಣ: ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ಸಾಮ್ಯತೆ ಕೊರತೆಯಿಂದಾಗಿ ಜಿಲ್ಲೆಯ ಪ್ರಗತಿಗೆ ಹಿನ್ನಡೆಯಾಗಿದೆ ಎಂದು ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಕಾವೇರಿ ಶಾಲೆ ಆವರಣದಲ್ಲಿ ಚಂದಗಾಲು ಎಂ.ಶ್ರೀನಿವಾಸ್ ಪ್ರತಿಷ್ಠಾನ ಶನಿವಾರ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಅಭಿನಂದಿಸಿ ಮಾತನಾಡಿದರು.ಜಿಲ್ಲೆಯ ರಾಜಕೀಯದಲ್ಲಿ ವೈರುಧ್ಯ ಇದ್ದು, ಹೊಂದಾಣಿಕೆ ಮೂಡಬೇಕು. ಸಮಾಜ ಶಾಸ್ತ್ರಜ್ಞರಿಂದ ಅಧ್ಯಯನ ನಡೆಸಿ ಗೊಂದಲಕ್ಕೆ ಪರಿಹಾರ ಕಂಡುಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿರುವ ಮಂದಿ ನಂಬಿಕೆ, ಶ್ರದ್ಧೆ, ಇಚ್ಛಾಶಕ್ತಿ ಹಾಗೂ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು. ಅಧಿಕಾರಿಗಳ ಮೇಲೆ ಸವಾರಿ ಮಾಡುವ, ದರ್ಪ ತೋರುವ ಪ್ರವೃತ್ತಿ ಶೋಭೆ ತರುವಂಥದ್ದಲ್ಲ ಎಂದ ಅವರು ದಿವಂಗತ ಎಂ.ಶ್ರೀನಿವಾಸ್ ಸಾಮಾಜಿಕ ಕಳಕಳಿ, ಬೌದ್ಧಿಕ ತುಡಿತ ಇದ್ದ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.ಶಿಕ್ಷಣ ಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಎನ್.ಎಸ್.ರಾಮೇಗೌಡ ಮಾತನಾಡಿ, ಶೇ 25ರಷ್ಟು ಜನರಿಗೆ ಸಾಮಾನ್ಯ ಶಿಕ್ಷಣ ಸಿಕ್ಕಿಲ್ಲ. ಹಾಗಾಗಿ ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿಯಲ್ಲಿ ಪ್ರಗತಿ ಸಾಧ್ಯವಾಗಿಲ್ಲ. ಶಿಕ್ಷಕರು ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ ಕಲಿತು ಕಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ, ಶಾಸಕ ರಮೇಶ ಬಂಡಿಸಿದ್ದೇಗೌಡ, ಕೆ.ಬಿ.ನರಸಿಂಹೇಗೌಡ, ನಿವೃತ್ತ ಅಧಿಕಾರಿ ಸತ್ಯನಾರಾಯಣ, ಪೊಲೀಸ್ ಅಧಿಕಾರಿ ಎ.ಕೆ.ಸುರೇಶ್ ಮಾತನಾಡಿದರು. ಶ್ರೀ ಸೋಮೆಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.ಎಂ.ಅನಲಾದೇವಿ ಅವರಿಗೆ `ಕೃಷಿ ಶ್ರೀ~; ನರಸಿಂಹೇಗೌಡ ಅವರಿಗೆ `ಸಹಕಾರ ಶ್ರೀ~; ಡಾ.ಎನ್.ಎಸ್.ರಾಮೇಗೌಡ ಅವರಿಗೆ `ಶಿಕ್ಷಣ ಶ್ರೀ~ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪೊಲೀಸ್ ಅಧಿಕಾರಿ ಎ.ಕೆ.ಸುರೇಶ್, ನಿವೃತ್ತ ಎಂಜಿನಿಯರ್ ಚಿಕ್ಕಮಾಯಪ್ಪ, ವಿಶ್ರಾಂತ ಶಿಕ್ಷಣಾಧಿಕಾರಿ ಎಸ್.ಸತ್ಯನಾರಾಯಣ, ಅಂತರರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಪಟು ಮೇಘನಾ, ಪ್ರತಿಭಾವಂತ ವಿದ್ಯಾರ್ಥಿಗಳಾದ ಹೇಮಂತಕುಮಾರ್ ಹಾಗೂ ಬಿ.ಸಂಧ್ಯಾ ಅವರನ್ನು ಅಭಿನಂದಿಸಲಾಯಿತು.ಸಾಹುಕಾರ್ ಜಾನಕಮ್ಮ ಮರೀಗೌಡ, ಎ.ಎಚ್.ನಾರಾಯಣಗೌಡ, ತಾ.ಪಂ. ಅಧ್ಯಕ್ಷ ಟಿ.ಶ್ರೀಧರ್, ಪುರಸಭೆ ಅಧ್ಯಕ್ಷ ಶಿವಾಜಿರಾವ್, ಶಶಿಕುಮಾರ್, ನಗುವನಹಳ್ಳಿ ವೆಂಕಟೇಶ್, ಎನ್.ವಿ.ಚಲುವರಾಜು, ಲಾಲಿಪಾಳ್ಯ ಮಹದೇವು, ಅಪ್ಪಾಜಿ, ಪದ್ಮಮ್ಮ ಸಿದ್ದೇಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry