ಮಂಡ್ಯ ಜಿ.ಪಂ: ಜೆಡಿಎಸ್ ಆಡಳಿತ ಶುರು

7

ಮಂಡ್ಯ ಜಿ.ಪಂ: ಜೆಡಿಎಸ್ ಆಡಳಿತ ಶುರು

Published:
Updated:

ಮಂಡ್ಯ: ನಿರೀಕ್ಷೆಯಂತೇ ಮಂಡ್ಯ ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಜೆಡಿಎಸ್‌ನ ಶಿವಣ್ಣ ಮತ್ತು ಜಯಲಕ್ಷ್ಮಮ್ಮ ಕ್ರಮವಾಗಿ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಮಂಗಳವಾರ ಚುನಾಯಿತರಾದರು. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಇವರು ಸ್ಪರ್ಧೆಯಲ್ಲಿದ್ದ ಕಾಂಗ್ರೆಸ್‌ನ ಜಯಕಾಂತಾ ಮತ್ತು ಸರ್ವಮಂಗಳಾ ವಿರುದ್ಧ 24-16 ಮತಗಳ ಅಂತರದಿಂದ ಜಯಗಳಿಸಿದರು. ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಚುನಾವಣಾಧಿಕಾರಿ ಆಗಿದ್ದರು.ಒಟ್ಟು 40 ಸದಸ್ಯ ಬಲದ ಜಿಲ್ಲಾ ಪಂಚಾಯಿತಿಯಲ್ಲಿ ಜೆಡಿಎಸ್ 24 ಸದಸ್ಯರನ್ನು ಹೊಂದುವ ಮೂಲಕ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿತ್ತು.  ಕಾಂಗ್ರೆಸ್ 14 ಸ್ಥಾನ ಗೆದ್ದಿದ್ದರೆ, ರೈತ ಸಂಘದ ಅಭ್ಯರ್ಥಿ ಮತ್ತು ಪಕ್ಷೇತರ ಅಭ್ಯರ್ಥಿ ತಲಾ ಒಂದು ಕ್ಷೇತ್ರಗಳಲ್ಲಿ ಜಯಗಳಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಶಿವಣ್ಣ ಹೆಸರನ್ನು ಇನ್ನೊರ್ವ ಆಕಾಂಕ್ಷಿ ಆರ್.ಕೆ.ಕುಮಾರ್ ಅನುಮೋದಿಸಿದ್ದರೆ, ಪ್ರತಿಸ್ಪರ್ಧಿ ಜಯಕಾಂತಾ ಹೆಸರನ್ನು ಬಸವರಾಜು ಅನುಮೋದಿಸಿದರು. ಉಪಾಧ್ಯಕ್ಷೆ ಸ್ಥಾನಕ್ಕೆ ಸರ್ವಮಂಗಳಾ ಹೆಸರನ್ನು ಹುಚ್ಚೇಗೌಡ ಅನುಮೋದಿಸಿದ್ದರೆ, ಜಯಲಕ್ಷ್ಮಮ್ಮ ಹೆಸರನ್ನು ಕೋಮಲಾ ಅನುಮೋದಿಸಿದ್ದರು.ನಿಗದಿಯ ಅವಧಿಯಲ್ಲಿ ನಾಮಪತ್ರ ವಾಪಸು ಪಡೆದ ಹಿನ್ನೆಲೆಯಲ್ಲಿ ಚುನಾವಣೆ ಅನಿವಾರ್ಯ ಆಗಿದ್ದು, ಕೈ ಎತ್ತುವ ಪ್ರಕ್ರಿಯೆ ಮೂಲಕ ಆಯ್ಕೆ ನಡೆಯಿತು. ಜೆಡಿಎಸ್‌ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳ ಪರ 24 ಮತ್ತು ಪ್ರತಿಸ್ಪರ್ಧಿಗಳ ಪರವಾಗಿ 16 ಮತಗಳು ಬಂದವು. ಜಿಲ್ಲಾ ಪಂಚಾಯಿತಿಯ ಮೊದಲ ಅವಧಿಗೆ ಈ ಚುನಾವಣೆ ನಡೆಸಿದ್ದು, ಇವರ ಅವಧಿಯು ಅಕ್ಟೋಬರ್ 16, 2012ರಂದು ಅಂತ್ಯಗೊಳ್ಳಲಿದೆ ಎಂದು ಚುನಾವಣಾ ಅಧಿಕಾರಿ ಎಂ.ವಿ.ಜಯಂತಿ ಘೋಷಿಸಿದರು. ಮೊದಲ ಅವಧಿಗೆ ಅಧ್ಯಕ್ಷ ಸ್ಥಾನ ‘ಪರಿಶಿಷ್ಟ ಜಾತಿ’ ಮತ್ತು ಉಪಾಧ್ಯಕ್ಷೆ ಸ್ಥಾನ ‘ಹಿಂದುಳಿದ ವರ್ಗ ಬಿ ಮಹಿಳೆ’ ವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ ಶಿವಣ್ಣ ಜಿಲ್ಲಾ ಪಂಚಾಯತಿಯಲ್ಲಿ ನಾಗಮಂಗಲ ತಾಲ್ಲೂಕು ಚೀಣ್ಯ ಮತ್ತು ಜಯಲಕ್ಷ್ಮಮ್ಮ ಮಳವಳ್ಳಿ ತಾಲ್ಲೂಕು ಹಲಗೂರು ಕ್ಷೇತ್ರ ಪ್ರತಿನಿಧಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry