ಮಂಡ್ಯ ಪೂರ್ಣ ಬಂದ್

7
ಕಾವೇರಿ ನೀರು ಬಿಡುಗಡೆಗೆ ತೀವ್ರ ಆಕ್ರೋಶ

ಮಂಡ್ಯ ಪೂರ್ಣ ಬಂದ್

Published:
Updated:

ಮಂಡ್ಯ: ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಕರೆಯಂತೆ ಶನಿವಾರ ಮಂಡ್ಯ ಜಿಲ್ಲೆಯಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.ನಾಗಮಂಗಲ ಹೊರತುಪಡಿಸಿ ಉಳಿದ ತಾಲ್ಲೂಕು ಕೇಂದ್ರಗಳಲ್ಲಿ ವಾಣಿಜ್ಯ ಚಟುವಟಿಕೆ ಸ್ಥಗಿತಗೊಂಡಿತ್ತು. ಜಿಲ್ಲೆಯ ಬಹುತೇಕ ಕಡೆ ಚಿತ್ರಮಂದಿರಗಳ ಪ್ರದರ್ಶನವೂ ರದ್ದಾಗಿತ್ತು. ಮಂಡ್ಯ ತಾಲ್ಲೂಕಿನ ಇಂಡವಾಳು, ಕಬ್ಬನಹಳ್ಳಿ, ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆ ಮುಂತಾದ ಕಡೆಗಳಲ್ಲಿ ಗ್ರಾಮಸ್ಥರು ರಸ್ತೆ ತಡೆ ನಡೆಸಿದರು. ರಸ್ತೆಯಲ್ಲಿಯೇ ಬತ್ತ ನಾಟಿ ಮಾಡಿ, ಕಬ್ಬನ್ನು ನೆಟ್ಟು ಪ್ರತಿಭಟನೆಗೆ ಇಳಿದಿದ್ದರಿಂದ ಬೆಂಗಳೂರು- ಮೈಸೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮಕ್ಕಳು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದು ವಿಶೇಷ.ಕಬ್ಬನಹಳ್ಳಿ, ಭೂತನ ಹೊಸಹಳ್ಳಿಯಲ್ಲಿಯೂ ರಸ್ತೆ ತಡೆ ನಡೆಸಿದ್ದರಿಂದ ಮಂಡ್ಯ- ಕೆ.ಎಂ. ದೊಡ್ಡಿ ಸಂಚಾರ ಸ್ಥಗಿತಗೊಂಡಿತ್ತು. ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯಲ್ಲಿ ರೈತ ನಾಯಕಿ ಸುನಂದಾ ಜಯರಾಂ ಅವರ ನೇತೃತ್ವದಲ್ಲಿ ರಸ್ತೆ ತಡೆ ನಡೆಸಲಾಯಿತು. ಅಲ್ಲಿಗೆ ಭೇಟಿ ನೀಡಿದ ಐಜಿಪಿ ರಾಮಚಂದ್ರರಾವ್ ಅವರ ಮನವಿ ಮೇರೆ ರಸ್ತೆ ತಡೆ ಕೈಬಿಟ್ಟು, ಪ್ರತಿಭಟನೆ ಮುಂದುವರಿಸಲಾಯಿತು.

ಹಲ್ಲೇಗೆರೆ ಗ್ರಾಮದಲ್ಲಿ ಶಿವರಾಮು ಅವರ ನೇತೃತ್ವದಲ್ಲಿ ಗ್ರಾಮಸ್ಥರು, ಪ್ರತಿ ಮನೆಯ ಮೇಲೂ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟಿಸಿದರು.

ಮಂಡ್ಯದಲ್ಲಿ ಪ್ರಮುಖ ಬೀದಿಗಳಲ್ಲಿ ಅಂಗಡಿ- ಮುಂಗಟ್ಟುಗಳು ಬಾಗಿಲು ತೆರೆಯಲಿಲ್ಲ. ಮುಂಜಾಗ್ರತಾ ಕ್ರಮವಾಗಿ ಬಸ್ಸುಗಳು ರಸ್ತೆಗೆ ಇಳಿಯಲಿಲ್ಲ.ಇದರಿಂದಾಗಿ ಪರ ಊರುಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ತೊಂದರೆ ಎದುರಿಸಬೇಕಾಯಿತು. ಆದರೆ ರೈಲು ಸಂಚಾರ ಯಾವುದೇ ತಡೆಯಿಲ್ಲದೆ ನಡೆಯಿತು. ಹೀಗಾಗಿ ಬಹುತೇಕರು ರೈಲಿನ ಮೊರೆ ಹೋದರು.ನಗರದ ಸಂಜಯ ವೃತ್ತದಲ್ಲಿ ವಿವಿಧ ಸಂಘಟನೆಗಳು ನಿರಂತರವಾಗಿ ಪ್ರತಿಭಟನೆ ನಡೆಸಿದವು. ಕೇಂದ್ರ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೇಳಿಬಂತು. ಕನ್ನಡ ಪರ ಸಂಘಟನೆಗಳ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಬೈಕ್ ರ‌್ಯಾಲಿ ಮಾಡಿದರು.ಕೆಆರ್‌ಎಸ್ ಮುತ್ತಿಗೆ ಇಂದು

ಮಂಡ್ಯ: ತಮಿಳುನಾಡಿಗೆ ನೀರು ಬಿಡುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿ ಡಿ.9 ರಂದು ಕೆಆರ್‌ಎಸ್ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಕಾರ್ಯದರ್ಶಿ ಎನ್.ರಾಜು ತಿಳಿಸಿದ್ದಾರೆ.ಎಲ್ಲ ಸಂಘಟನೆಗಳವರೂ ಮುತ್ತಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನೀರು ನಿಲ್ಲಿಸುವವರೆಗೂ ಅಲ್ಲಿ ಪ್ರತಿಭಟನೆಯನ್ನು ಮುಂದುವರಿಸಲಾಗುವುದು ಎಂದು ಅವರು ಹೇಳಿದ್ದಾರೆ.ಎಲ್ಲರೂ ಪ್ರತಿಭಟಿಸಿ: ಮಾದೇಗೌಡ

ಕಾವೇರಿ ನದಿ ನೀರಿನ ವಿವಾದ ಕೇವಲ ಹಳೆ ಮೈಸೂರು ಭಾಗಕ್ಕೆ ಸಂಬಂಧಿಸಿದ್ದಲ್ಲ. ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರತಿಭಟಿಸಲು ರಾಜ್ಯದ ಎಲ್ಲೆಡೆಯ ಜನ ಕಾವೇರಿ ಹೋರಾಟಕ್ಕೆ ಧುಮುಕಬೇಕು ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಅಧ್ಯಕ್ಷ ಜಿ. ಮಾದೇಗೌಡ ಮನವಿ ಮಾಡಿದರು.ಬಂದ್ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಸಮಸ್ಯೆಗೆ ನಾವು ಮಾತ್ರ ಮತ್ತು ಕೃಷ್ಣಾ ಸಮಸ್ಯೆಗೆ ಉತ್ತರ ಕರ್ನಾಟಕದವರಷ್ಟೇ ಪ್ರತಿಭಟಿಸಬಾರದು. ರಾಜ್ಯದ ಎಲ್ಲ ಸಮಸ್ಯೆಗಳಿಗೆ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕಾದ ಅವಶ್ಯಕತೆ ಇದೆ. ಆಗಲೇ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುತ್ತದೆ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry