ಸೋಮವಾರ, ಮಾರ್ಚ್ 1, 2021
31 °C
ಫ್ಲೈಓವರ್ ಹೋಯ್ತು, ಬೈಪಾಸ್‌ ಬಂತು

ಮಂಡ್ಯ: ಬೈಪಾಸ್‌್ ಎಡಕ್ಕೋ... ಬಲಕ್ಕೋ..?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಬೈಪಾಸ್‌್ ಎಡಕ್ಕೋ... ಬಲಕ್ಕೋ..?

ಮಂಡ್ಯ: ನಗರದಲ್ಲಿನ ಸಂಚಾರ ಒತ್ತಡ ನಿವಾರಿಸಲು ಬೈಪಾಸ್‌ ನಿರ್ಮಿಸಬೇಕೋ, ಫ್ಲೈಓವರ್‌ ನಿರ್ಮಿಸಬೇಕೋ ಎಂಬ ಗೊಂದಲ ಹಲವಾರು ವರ್ಷಗಳಿಂದ ನಡೆದಿತ್ತು. ಅದಕ್ಕೆ ಈಗ ತೆರೆ ಬಿದ್ದಿದ್ದು, ಬೈಪಾಸ್‌ ನಿರ್ಮಿಸಬೇಕು ಎಂದಾಗಿದೆ. ಆದರೆ, ಅದನ್ನು ಬೆಂಗಳೂರು– ಮೈಸೂರು ಹೆದ್ದಾರಿಯ ಬಲಕ್ಕೋ, ಎಡಕ್ಕೋ ನಿರ್ಮಿಸಬೇಕು ಎಂಬ ಗೊಂದಲ ಎದುರಾಗಿದೆ.ಹಲವಾರು ವರ್ಷಗಳಿಂದ ಬೆಂಗಳೂರಿನಿಂದ ಮೈಸೂರು ರಸ್ತೆಯ ಎಡಭಾಗದಲ್ಲಿ ಬೈಪಾಸ್‌ ನಿರ್ಮಿಸುವ ಪ್ರಸ್ತಾವನೆಯೊಂದಿತ್ತು. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರವು ಈ ಪ್ರಸ್ತಾವನೆ ತಯಾರಿಸಿ, ಸರ್ಕಾರಕ್ಕೆ ಸಲ್ಲಿಸಿತ್ತು.ಬೈಪಾಸ್‌ ನಿರ್ಮಾಣದ ಮಾತುಗಳು ಕೇಳಿ ಬಂದಾಗಲೆಲ್ಲ, ಫ್ಲೈಓವರ್‌ ವಿಷಯವನ್ನು ಎತ್ತಿ ಗೊಂದಲ ಉಂಟು ಮಾಡುತ್ತಿದ್ದರು. ಜತೆಗೆ, ಬೈಪಾಸ್‌ ನಿರ್ಮಾಣಕ್ಕೆ ರೈತರು ಭೂಮಿಯನ್ನು ಕೊಡುವುದಿಲ್ಲ ಎಂಬ ಕೂಗು ಕೇಳಿ ಬರುತ್ತಿತ್ತು. ಬೈಪಾಸ್‌ ವಿರೋಧಿಸಿ ಪ್ರತಿಭಟನೆಗಳೂ ನಡೆದಿದ್ದವು.ಇದೀಗ ಬೆಂಗಳೂರು– ಮೈಸೂರು ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಲಾಗಿದೆ. ಈ ರಸ್ತೆಯನ್ನು ಉನ್ನತೀಕರಿಸಿ ಆರರಿಂದ ಎಂಟು ಪಥದ ರಸ್ತೆ ಯನ್ನಾಗಿ ನಿರ್ಮಿಸಲು ಯೋಜಿಸಲಾಗಿದೆ. ಈ ಕುರಿತು ಈಚೆಗೆ ಪೂರ್ವಭಾವಿ ಸಭೆ ಯೊಂದನ್ನೂ ನಡೆಸಲಾಗಿದೆ.ರಾಷ್ಟ್ರೀಯ ಹೆದ್ದಾರಿ ವಲಯದ ಅಧಿಕಾರಿಗಳು, ಮಂಡ್ಯದ ಮಧ್ಯದಲ್ಲಿ ಹಾದು ಹೋದರೆ ಆಸ್ತಿ ನಷ್ಟ ಉಂಟಾಗುವುದರಿಂದ ಬೈಪಾಸ್‌ ನಿರ್ಮಿಸುವುದೇ ಸೂಕ್ತ ಎಂದಿದ್ದಾರೆ. ಬೈಪಾಸ್‌ ಮಂಡ್ಯದ ಬಲಭಾಗದಲ್ಲಿ ನಿರ್ಮಾಣ ಮಾಡಬೇಕು ಎಂದು ಸೂಚಿಸಿದ್ದಾರೆ.ಮಂಡ್ಯ ಎಡಭಾಗದಲ್ಲಿ ಬೈಪಾಸ್‌ ನಿರ್ಮಿಸಿದರೆ ಅಮರಾವತಿ ಹೋಟೆಲ್‌ನಿಂದ ಆರಂಭವಾಗಿ ಚೀರನಹಳ್ಳಿ, ಕ್ಯಾತುಂಗೆರೆ ಹೊರವಲಯದಲ್ಲಿ ಹಾಯ್ದು ಹೋಗಲಿದೆ. ಈ ಮಾರ್ಗದಲ್ಲಿ ಈಗಾಗಲೇ ನೀಲನಕ್ಷೆಯೊಂದನ್ನು ಮುಡಾ ವತಿಯಿಂದ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೂ ಅದಕ್ಕೆ ಚಾಲನೆ ಸಿಕ್ಕಿಲ್ಲ.ಈಗ ಹೆದ್ದಾರಿ ನಿರ್ಮಾಣದವರು ಬೈಪಾಸ್‌ ಅನ್ನು ಅಮರಾವತಿಯಿಂದ ಆರಂಭಿಸಿ ಚಿಕ್ಕಮಂಡ್ಯ, ಕೋಣನಹಳ್ಳಿ ಮೂಲಕ ಬೆಂಗಳೂರು– ಮೈಸೂರು ಹೆದ್ದಾರಿ ಸೇರಿಸಲು ಯೋಜಿಸಿದ್ದಾರೆ. ಮುಡಾ ನಿರ್ಮಾಣ ಮಾಡ ಬೇಕು ಎಂದಿರುವುದು 13 ಕಿ.ಮೀ ಉದ್ದವಿದ್ದರೆ, ಹೆದ್ದಾರಿಯವರು ಸೂಚಿಸಿರುವುದು 11 ಕಿ.ಮೀ. ಇದೆ.‘ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕುರಿತು ವರದಿ ಸಲ್ಲಿಸಲು ಏಜೆನ್ಸಿಯೊಂದಕ್ಕೆ ಸರ್ವೆ ಕಾರ್ಯವನ್ನು ನೀಡಲಾಗುತ್ತಿದೆ. ಅವರು ಯಾವ ಕಡೆಗೆ ಮಾಡಿದರೆ ಸೂಕ್ತ ಎಂಬುದನ್ನು ಸೂಚಿಸಲಿದ್ದಾರೆ. ಅದರ ಮೇಲೆ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಕೈಗೊಳ್ಳಲಾಗುತ್ತದೆ’ ಎನ್ನುತ್ತಾರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು.ಒಟ್ಟಿನಲ್ಲಿ ಬೈಪಾಸ್ ನಿರ್ಮಾಣ ಮಾಡುವ ಎರಡೂ ಕಡೆಗಳಲ್ಲಿ ರೈತರು ಭೂಮಿ ಕೊಡಲು ಹಿಂದೇಟು ಹಾಕುವ ಲಕ್ಷಣಗಳು ಕಾಣುತ್ತಿವೆ. ಜತೆಗೆ ಯಾವ ಕಡೆಯಿಂದ ಬೈಪಾಸ್‌ ಹಾದು ಹೋಗಲಿದೆ ಎಂಬ ಕುತೂಹಲವೂ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.