ಗುರುವಾರ , ಮಾರ್ಚ್ 23, 2023
28 °C

ಮಂಡ್ಯ: ಮುಂದುವರಿದ ಕುಟುಂಬ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ರಾಜಕಾರಣ ಉಸಿರಾಗಿರುವ ಮಂಡ್ಯ ಜಿಲ್ಲೆಯಲ್ಲಿ ಎರಡನೇ ಹಂತದಲ್ಲಿ ಜಿಪಂ/ತಾಪಂ ಚುನಾವಣೆ ನಡೆಯಲಿದ್ದು, ಕೌಟುಂಬಿಕ ರಾಜಕಾರಣ ಮುಂದುವರಿದಿದೆ. ಮಾಜಿ ಶಾಸಕರ ಮಗಳು, ಮಗ, ಸೊಸೆ, ಮಾಜಿ ಸಚಿವರ ಮೊಮ್ಮಗ, ಸಂಬಂಧಿಕರೂ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.ಹೀಗಾಗಿ, ಜಿಪಂ/ತಾಪಂ ಚುನಾವಣೆಯಲ್ಲೂ ಜಿಲ್ಲೆಯಲ್ಲಿ ರಾಜಕಾರಣಿಗಳ ಮಕ್ಕಳು, ಸಂಬಂಧಿಕರಿಗೆ ರಾಜಕೀಯ ಪ್ರವೇಶದ ಮೆಟ್ಟಿಲಾಗಿದೆ. ಪಕ್ಷಗಳ ಟಿಕೆಟ್‌ಗಳಡಿಯಲ್ಲಿಯೇ ನಾಮಪತ್ರ ಸಲ್ಲಿಸಿರುವ ಅವರು ಮತದಾರ ಪ್ರಭು ಭೇಟಿಗೆ ತಯಾರಿ ನಡೆಸಿದ್ದಾರೆ.ಜಿಲ್ಲೆಯಲ್ಲಿ ‘ನಿತ್ಯ ಸಚಿವ’ ಎಂದೇ ಗುರುತಿಸಲ್ಪಡುವ ಕೆ.ವಿ.ಶಂಕರಗೌಡ ಅವರ ಮೊಮ್ಮಗ, ಮೇಲ್ಮನೆಯ ಮಾಜಿ ಸದಸ್ಯ ಸಚ್ಚಿದಾನಂದ ಅವರ ಪುತ್ರ ವಿಜಯಾನಂದ್ ಈಗ ಜಿಲ್ಲಾ ಪಂಚಾಯಿತಿ ಅಭ್ಯರ್ಥಿ. ಕೆರೆಗೋಡು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ತಾತ, ತಂದೆಯ ವರ್ಚಸ್ಸಿನ ಜೊತೆಗೆ ಜೆಡಿಎಸ್‌ಗೆ ಜಿಲ್ಲೆಯಲ್ಲಿರೋ ಒಲವು ನೆರವಾಗಬಹುದು ಎಂಬ ನಂಬಿಕೆ ಅವರದು. ಉಳಿದಂತೆ, ಪಾಂಡವಪುರ ತಾಲ್ಲೂಕು ಚಿನಕುರಳಿಯಲ್ಲಿ ಮಾಜಿ ಶಾಸಕ ಕೆಂಪೇಗೌಡರ ಮಗಳು ಮೀನಾಕ್ಷಮ್ಮ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.ಮದ್ದೂರು ತಾಲ್ಲೂಕು ಕೊಪ್ಪ ಜಿಪಂ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಮಂಚೇಗೌಡರ ಪುತ್ರ, ಜಿಪಂ ಮಾಜಿ ಸ್ವರೂಪ್‌ಚಂದ್ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಉಳಿದಂತೆ, ಮಂಡ್ಯ ತಾಲ್ಲೂಕು ದುದ್ದ ಕ್ಷೇತ್ರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಅವರ ಅಳಿಯ ಸಾಯಿ ರವೀಂದ್ರ ಬಿಜೆಪಿ ಅಭ್ಯರ್ಥಿಯಾಗಿ ದುದ್ದ ಕ್ಷೇತ್ರದಲ್ಲಿ ಕಣದಲ್ಲಿದ್ದಾರೆ.ಇನ್ನು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಅವರ ಸಂಬಂಧಿಯೂ ಆಗಿರುವ ವಿದ್ಯಾನಾಗೇಂದ್ರ ಅವರು ಜಿಲ್ಲಾ ಪಂಚಾಯಿತಿಗೆ ಬೂದನೂರು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ. ಪತಿಯ ಅಕಾಲಿಕ ನಿಧನದ ಬಳಿಕ ವಿದ್ಯಾ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ಗೆ ಯತ್ನಿಸಿದ್ದರು. ಆದರೆ, ಬಿಜೆಪಿ ಕೈಹಿಡಿಯಿತು. ಚುನಾವಣೆಯಲ್ಲಿ ಸೋತರೂ, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕವಾದರು. ಅಧ್ಯಕ್ಷರಾಗಿದ್ದುಕೊಂಡೇ ಈಗ ಸ್ಪರ್ಧೆಗಿಳಿದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.