ಮಂಡ್ಯ: ಸರದಿ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ

7

ಮಂಡ್ಯ: ಸರದಿ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ

Published:
Updated:

ಮಂಡ್ಯ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಟ್ಟಿರುವುದನ್ನು ವಿರೋಧಿಸಿ ಜಿಲ್ಲೆಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳು 22ನೇ ದಿನವೂ ಮುಂದುವರೆದಿದ್ದು, ನಗರದ ಕಾವೇರಿ ವನ ಎದುರು ನಡೆಯುತ್ತಿರುವ ಸರದಿ ಉಪವಾಸ ಸತ್ಯಾಗ್ರಹವೂ ಎರಡನೇ ದಿನಕ್ಕೆ ಕಾಲಿಟ್ಟಿದೆ. ಚಳವಳಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಜನಸಾಗರವೇ ಧರಣಿ ಸ್ಥಳಕ್ಕೆ ಹರಿದುಬರುತ್ತಿದೆ.ನಗರದಲ್ಲಿ ಶುಕ್ರವಾರವೂ ಪ್ರತಿಭಟನೆಗಳ ಅಬ್ಬರ ಜೋರಾಗಿಯೇ ಇತ್ತು. ಅಣಕು ಶವಯಾತ್ರೆ, ಪ್ರತಿಕೃತಿ ದಹನ, ಎತ್ತಿನಗಾಡಿಗಳ ಮೆರವಣಿಗೆ, ಬೈಕ್ ರ‌್ಯಾಲಿ, ರಸ್ತೆ ತಡೆ ಸೇರಿದಂತೆ ಭಿನ್ನ ಮಾದರಿಯಲ್ಲಿ ಪ್ರತಿಭಟನೆ ನಡೆದವು.ಸರದಿ ಉಪವಾಸ ಸತ್ಯಾಗ್ರಹದಲ್ಲಿ ತಗ್ಗಹಳ್ಳಿ ವೆಂಕಟೇಶ್, ಸಿಎಂ ದ್ಯಾವಪ್ಪ, ಪ್ರದೀಪ್‌ಕುಮಾರ್ ಹೆಬ್ರಿ, ಸತೀಶ್ ಕುಮಾರ್, ಜಿ.ಸಿ.ಆನಂದ್ ಹಾಗೂ ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.ಚಿತ್ರನಟ ಶ್ರೀನಗರ ಕಿಟ್ಟಿ, ಕವಯತ್ರಿ ಲತಾ ರಾಜಶೇಖರ್ ಧರಣಿಯಲ್ಲಿ ಭಾಗವಹಿಸಿ ಬೆಂಬಲಿಸಿದರು. ಮುಖಂಡ ಅಬ್ಬಾಸ್ ಅಲಿ ಬೊಹ್ರಾ, 50 ಸಾವಿರ ರೂ. ದೇಣಿಗೆಯನ್ನು ಜಿಲ್ಲಾ ರೈತ ಹಿತರಕ್ಷಣಾ ಸಮಿತಿಗೆ ನೀಡಿದರು.

ಮಂಡ್ಯದ ಬಿಎಲ್‌ಎಸ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಕಾಲೇಜಿನಿಂದ ಜಾಥಾ ಹೊರಟ ವಿದ್ಯಾರ್ಥಿಗಳು ಮೈಸೂರು-ಬೆಂಗಳೂರು ಹೆದ್ದಾರಿ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿದರು. ಕೆಲವೊತ್ತು ನಿರಶನ ನಡೆಸಿದರು.ಆರೋಗ್ಯ ಇಲಾಖೆ `ಡಿ~ ಗ್ರೂಪ್ ನೌಕರರು ಮತ್ತು ವೈದ್ಯಕೀಯ ಸಂಘದ ಪದಾಧಿಕಾರಿಗಳೂ ಸಹ ತಮ್ಮ ಕೆಲಸ ಕಾರ್ಯಗಳಿಂದ ದೂರ ಉಳಿದರು. ಎಂ.ಸಿ.ಲಂಕೇಶ್ ನೇತೃತ್ವದಲ್ಲಿ, ಕಾವೇರಿ ಮಕ್ಕಳ ವೇದಿಕೆ ಪದಾಧಿಕಾರಿಗಳು ಚಳವಳಿಗೆ ಬೆಂಬಲ ಸೂಚಿಸಿ ಧರಣಿಯಲ್ಲಿ ಭಾಗವಹಿಸಿದ್ದರು.ಮೈಷುಗರ್ ಕಾರ್ಮಿಕರ ಒಕ್ಕೂಟ, ಜಿಲ್ಲಾ ಮರಳು ಲಾರಿ ಮಾಲೀಕರು ಹಾಗೂ ಲಾರಿ ಮಾಲೀಕರ ಸಂಘದಿಂದ ಲಾರಿಗಳ ಮೆರವಣಿಗೆ ನಡೆಸಲಾಯಿತು. ಪದಾಧಿಕಾರಿಗಳು ಧರಣಿಯಲ್ಲಿದ್ದರು. ಮಳವಳ್ಳಿ ಬ್ಲಾಕ್ ಕಾಂಗ್ರೆಸ್ ರೈತ ಮತ್ತು ಕೃಷಿ ಕಾರ್ಮಿಕರ ಘಟಕ ಜತೆಗೆ ತಮಿಳರು ಕೂಡ ಕಾವೇರಿ ಚಳವಳಿಯಲ್ಲಿ ಪಾಲ್ಗೊಂಡರು.ಜಿಪಂ ಖಂಡನಾ ನಿರ್ಣಯ: ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ, ಸದಸ್ಯರು ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಖಂಡನಾ ನಿರ್ಣಯ ಕೈಗೊಂಡರು. ನಂತರ, ಜಿಲ್ಲಾ ಪಂಚಾಯಿತಿಯಿಂದ ಸರ್ಕಾರಿ ಬಸ್ ನಿಲ್ದಾಣ ವೃತ್ತ ಮೂಲಕ ಜಾಥಾ ಮೂಲಕ ಆಗಮಿಸಿ ಧರಣಿ ನಡೆಸಿದರು.ನಿವೃತ್ತ ಸರ್ಕಾರಿ ನೌಕರರ ಸಂಘ: ಸಂಘದ ಕಾರ್ಯದರ್ಶಿ ಬೋರೇಗೌಡ, ಸಂಘಟನಾ ಕಾರ್ಯದರ್ಶಿ ರಾಮೇಗೌಡ ನೇತೃತ್ವದಲ್ಲಿ ಸದಸ್ಯರು, ಸಂಘದ ಕಚೇರಿಯಿಂದ ಆರ್‌ಪಿ ರಸ್ತೆ, ಹೆದ್ದಾರಿ ಮೂಲಕ ಧರಣಿ ಸ್ಥಳಕ್ಕೆ ಆಗಮಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡರು.ಟೆಲಿಕಾಂ ಒಕ್ಕೂಟ: ಮಂಡ್ಯ ನಗರದ ಜಿಲ್ಲಾ ಟೆಲಿಕಾಂ ಒಕ್ಕೂಟದ ಸದಸ್ಯರು, ಕಾವೇರಿ ಮಾತೆ ಪ್ರತಿಮೆಯೊಂದಿಗೆ ಜಿ.ವಿ.ದಾಸೇಗೌಡ ವೃತ್ತದಿಂದ ಧರಣಿ ಸ್ಥಳದವರೆಗೆ ಮೆರವಣಿಗೆ ನಡೆಸಿದರು. ಧರಣಿ ನಡೆಸಿದ ಅವರು, ಸಂಜೆ ಪಂಜಿನ ಮೆರವಣಿಗೆ ನಡೆಸಿದರು. ಒಕ್ಕೂಟ ಸದಸ್ಯರು ಪ್ರದರ್ಶಿಸಿದ ಭಿತ್ತಿಪತ್ರಗಳು ಗಮನ ಸೆಳೆದವು.ಬೈಕ್ ರ‌್ಯಾಲಿ: ಮಂಡ್ಯ ತಾಲ್ಲೂಕು ಯಲಿಯೂರು ಸರ್ಕಲ್‌ನ ಕೃಷಿಕ್ ರಿಕ್ರಿಯೇಷನ್ ಸ್ಪೋರ್ಟ್ಸ್ ಸದಸ್ಯರು ಹಾಗೂ ಬನ್ನೂರು ಗ್ರಾಮದ ನೂರಾರು ಮಂದಿ ಪ್ರತ್ಯೇಕವಾಗಿ ಬೈಕ್ ರ‌್ಯಾಲಿ ನಡೆಸಿ ಗಮನ ಸೆಳೆದರು. ಜಿಲ್ಲಾ ವಕೀಲರ ಸಂಘದ ಸದಸ್ಯರು, ಅಧ್ಯಕ್ಷ ಕೆ.ಆರ್.ಕೇಶವಮೂರ್ತಿ ನೇತೃತ್ವದಲ್ಲಿ ಧರಣಿಯಲ್ಲಿ ಇದ್ದರು.

ಎತ್ತಿನಗಾಡಿ ಮೆರವಣಿಗೆ: ಮಂಡ್ಯ ತಾಲ್ಲೂಕು ಬಿ.ಹೊಸೂರು ಗ್ರಾಮದ ಗ್ರಾಮಸ್ಥರು ಎತ್ತಿನಗಾಡಿಗಳೊಂದಿಗೆ ಮೆರವಣಿಗೆಯಲ್ಲಿ ನಗರಕ್ಕೆ ಆಗಮಿಸಿದರು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಬಳಿಕ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದರು.ಅಣಕು ಶವಯಾತ್ರೆ: ಜಿಲ್ಲಾ ಪಡಿತರ ವಿತರಕರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕೇಂದ್ರ ಸಂಪುಟದಲ್ಲಿರುವ ರಾಜ್ಯದ ನಾಲ್ವರು ಸಚಿವರು, ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್, ಜಯಲಲಿತಾ, ಪ್ರಧಾನಮಂತ್ರಿ ಮನಮೋಹನ್ ಸಿಂಗ್, ವಕೀಲ ಫಾಲಿ ಎಸ್.ನಾರಿಮನ್ ಪ್ರತಿಕೃತಿಗಳ ಅಣಕು ಶವಯಾತ್ರೆ ನಡೆಸಿ, ಬಳಿಕ ಸುಡಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry