ಮಂತ್ರಾಲಯ ಪ್ರಭುವಿಗೆ 340ನೇ ಆರಾಧನೆ

7

ಮಂತ್ರಾಲಯ ಪ್ರಭುವಿಗೆ 340ನೇ ಆರಾಧನೆ

Published:
Updated:
ಮಂತ್ರಾಲಯ ಪ್ರಭುವಿಗೆ 340ನೇ ಆರಾಧನೆ

ಆಸ್ತಿಕರಲ್ಲಿ ಗುರುಸಾರ್ವಭೌಮರೆಂದೇ ವಿಖ್ಯಾತರಾಗಿರುವ ಮಂತ್ರಾಲಯದ ಮಹಾಪ್ರಭು ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ಸಶರೀರ ಬೃಂದಾವನಸ್ಥರಾಗಿ ಇಂದಿಗೆ (ಆ. 15) 340 ವರ್ಷ.

ಕಲಿಯುಗದ `ಕಲ್ಪವೃಕ್ಷ ಹಾಗೂ ಕಾಮಧೇನು~ ಎಂದೇ ಹೆಸರಾದ ಗುರುಸಾರ್ವಭೌಮರು ಮೂರೂವರೆ ಶತಮಾನಗಳ ಹಿಂದೆಯೇ, ಸಕಲ ಜೀವಿಗಳ ಕಲ್ಯಾಣಕ್ಕೆ ತನ್ನ ಜೀವನವನ್ನೇ ಮುಡಿಪಾಗಿಟ್ಟು ಅಧ್ಯಾತ್ಮ ಜ್ಞಾನದ ಹೊಸ ಬೆಳಕು ಪ್ರಸರಿಸಿ ಯತಿಶ್ರೇಷ್ಠರೆನಿಸಿಕೊಂಡರು.

ಇದೇ ಕಾರಣದಿಂದಾಗಿ, ಶತಮಾನಗಳು ಉರುಳಿದರೂ ಅವರ ಕೀರ್ತಿ ದಿನೇದಿನೇ ಪ್ರಕಾಶಮಾನವಾಗಿ ಮಿನುಗುತ್ತಿದೆ.ಇಂದು ಗುರುರಾಯರ ಆರಾಧನೆ. ಇದು ಖರನಾಮ ಸಂವತ್ಸರ ಶ್ರಾವಣ ಕೃಷ್ಣ ಬಿದಿಗೆ. ಮೂಲ ಮಠ ಮಂತ್ರಾಲಯದ ಶಾಖೆಗಳಾದ ಸೀತಾಪತಿ ಅಗ್ರಹಾರ, ಚಾಮರಾಜಪೇಟೆ, ಚಿಕ್ಕಪೇಟೆ, ಮಾರುತಿ ಸೇವಾನಗರ, ಶೇಷಾದ್ರಿಪುರಂ ಹಾಗೂ ಜಯನಗರ 5ನೇ ಬ್ಲಾಕ್ ಮಾತ್ರವಲ್ಲದೆ ಮೃತ್ತಿಕಾ ಬೃಂದಾವನಗಳಿರುವ ಎನ್.ಆರ್. ಕಾಲೋನಿ, ದೇವಗಿರಿ (ಬನಶಂಕರಿ), ಮಲ್ಲೇಶ್ವರಂ (ವೆಸ್ಟ್ ಪಾರ್ಕ್), ಯಲಹಂಕ, ಕೆಂಗೇರಿ, ಕೋಣನಕುಂಟೆ, ಹುಳಿಮಾವು, ಚಿಕ್ಕಲಸಂದ್ರ (ಸಾರ್ವಭೌಮ ನಗರ) ಸೇರಿ ವಿವಿಧೆಡೆಯ 100ಕ್ಕೂ ಹೆಚ್ಚು ರಾಯರ ಮಠಗಳಲ್ಲಿ ಮೂರು ದಿನಗಳ ಆರಾಧನಾ ಮಹೋತ್ಸವಕ್ಕೆ ನಿನ್ನೆಯೇ ಚಾಲನೆ ಸಿಕ್ಕಿದೆ.ಗುರುರಾಯರು ಬೃಂದಾವನಸ್ಥರಾದ ದಿನವೇ `ಮಧ್ಯಾರಾಧನೆ~. ಇದರ ಹಿಂದು- ಮುಂದಿನ ದಿನಗಳಂದು ಪೂರ್ವಾರಾಧನೆ ಹಾಗೂ ಉತ್ತರಾರಾಧನೆ. ಈ ಪವಿತ್ರ ಆಚರಣೆಯಲ್ಲಿ ಲಕ್ಷಾಂತರ ಭಕ್ತರು ಭಕ್ತಿ, ಶ್ರದ್ಧೆಯಿಂದ ಪಾಲ್ಗೊಳ್ಳುತ್ತಾರೆ.ಪೂರ್ವದಲ್ಲಿ ಬ್ರಹ್ಮದೇವನ ಶಾಪವನ್ನು ವರವಾಗಿ ಸ್ವೀಕರಿಸಿದ ಶಂಕುಕರ್ಣನೆಂಬ ದೇವತೆ, ಕೃತಯುಗದಲ್ಲಿ ಪ್ರಹ್ಲಾದ, ದ್ವಾಪರದಲ್ಲಿ ಬಾಹ್ಲಿಕ ರಾಜ, ಕಲಿಯುಗದಲ್ಲಿ ವ್ಯಾಸರಾಯರು ಹಾಗೂ ಕೊನೆಯಲ್ಲಿ `ರಾಘವೇಂದ್ರರಾಗಿ~ ಪ್ರಜ್ವಲಿಸಿದರು ಎಂಬ ಪ್ರತೀತಿ.ರಾಘವೇಂದ್ರ ಸ್ವಾಮಿಗಳ ಪೂರ್ವಾಶ್ರಮದ ಹೆಸರು `ವೆಂಕಟನಾಥ~. ಇವರು ಗೋಪಮ್ಮ ಹಾಗೂ ತಿಮ್ಮಣ್ಣ ಭಟ್ಟ ದಂಪತಿಗಳ 3 ಮಕ್ಕಳಲ್ಲಿ ಒಬ್ಬನಾಗಿ ಕ್ರಿ. ಶ. 1595, ಮನ್ಮಥನಾಮ ಸಂ. ಪಾಲ್ಗುಣ ಶುಕ್ಲ ಸಪ್ತಮಿಯಂದು ಜನಿಸಿದರು.

ಕ್ರಿ.ಶ. 1597 ಹೇವಳಂಬಿ ನಾಮ ಸಂ. ದಲ್ಲಿ ಚವಲ, 1602ರಲ್ಲಿ ಉಪನಯನ ಸಂಸ್ಕಾರಕ್ಕೆ ಒಳಗಾದರು. ನಂತರ ಕ್ರಿ.ಶ. 1614 ಆನಂದನಾಮ ಸಂವತ್ಸರದಲ್ಲಿ ಸರಸ್ವತಿಯೊಂದಿಗೆ ಲಗ್ನವಾದರು. ಈ ದಂಪತಿಗೆ ಲಕ್ಷ್ಮೀನಾರಾಯಣನೆಂಬ ಮಗು ಹುಟ್ಟುತ್ತದೆ.ಕಡು ಬಡತನದಿಂದಾಗಿ ತಿಮ್ಮಣ್ಣ ಭಟ್ಟರಿಗೆ ಜೀವನ ಸಾಗಿಸುವುದೇ ಒಂದು ದೊಡ್ಡ ಸಮಸ್ಯೆ. ಹೀಗಾಗಿ ವೆಂಕಟನಾಥ ಕುಂಭಕೋಣಕ್ಕೆ ತೆರಳಿ ಸುಧೀಂದ್ರ ತೀರ್ಥರಲ್ಲಿ ಕಲಿತು ಗುರುಕುಲದ ಪಾಠಶಾಲೆಯ ವಟುಗಳಿಗೆ ಪಾಠ ಪ್ರವಚನ ಮಾಡಿ ಜೀವನ ಸಾಗಿಸುತ್ತಾರೆ.

ಸುಧೀಂದ್ರ ತೀರ್ಥರ ಕಾಲ ಅಂತ್ಯ ಹತ್ತಿರ ಬರುತ್ತಿದ್ದಂತೆ `ಮೂಲರಾಮ~ ಕನಸಿನಲ್ಲಿ ಬಂದು ವೆಂಕಟನಾಥನನ್ನು ಉತ್ತರಾಧಿಕಾರಿಯಾಗಿ ನೇಮಿಸಿಕೊಳ್ಳುವಂತೆ ಸೂಚಿಸುತ್ತಾನೆ. ಹೀಗಾಗಿ ಕ್ರಿ. ಶ. 1621ರ ಪಾಲ್ಗುಣ ಶುಕ್ಲ ಬಿದಿಗೆಯಂದು ವೆಂಕಟನಾಥರು, ಸುಧೀಂದ್ರ ತೀರ್ಥರ ಉತ್ತರಾಧಿಕಾರಿಯಾಗಿ `ರಾಘವೇಂದ್ರ ತೀರ್ಥ~ರೆಂದು ಸನ್ಯಾಸ ಸ್ವೀಕರಿಸುತ್ತಾರೆ.ನಂತರ ದ್ವೈತ ಮತ ಪ್ರಚಾರ ಮಾಡುತ್ತಾ ಸಂಚಾರ ಕೈಕೊಳ್ಳುತ್ತಾರೆ. ಹೀಗೆ ಒಮ್ಮೆ ಆದವಾನಿ ನವಾಬನಾಗಿದ್ದ ಸಿದ್ದಿ ಮಸೂದ್ ಖಾನ್ ಆಸ್ಥಾನಕ್ಕೆ ಭೇಟಿ ನೀಡುತ್ತಾರೆ.ಗುರುಗಳನ್ನು ಪರೀಕ್ಷಿಸುವ ನೆಪದಿಂದ ನವಾಬ ತಟ್ಟೆಯಲ್ಲಿ ಮಾಂಸವಿರಿಸಿ, ಶಾಲಿನಿಂದ ಮುಚ್ಚಿ ಕಾಣಿಕೆಯಾಗಿ ನೀಡುತ್ತಾನೆ. ದಿವ್ಯದೃಷ್ಟಿಯಿಂದ ಇದನ್ನು ತಿಳಿದ ಯತಿಗಳು ತೀರ್ಥ ಪ್ರೋಕ್ಷಣ್ಯದಿಂದ ಮಾಂಸವನ್ನು ಹಣ್ಣು ಹಂಪಲಾಗಿ ಪರಿವರ್ತಿಸುತ್ತಾರೆ.ಪ್ರಹ್ಲಾದ ರಾಜರ ಕುಲದೇವತೆ ಮಂಚಾಲಮ್ಮ ನೆಲೆಯಾಗಿ ನಿಂತಿರುವ ಮಂಚಾಲೆ ಗ್ರಾಮವನ್ನು ನವಾಬನಿಂದ ದತ್ತಿಯಾಗಿ ಪಡೆಯುತ್ತಾರೆ.1806 ರಲ್ಲಿ ಅಂದರೆ ಸಶರೀರ ಬೃಂದಾವನಸ್ಥರಾಗಿ 135 ವರ್ಷದ ನಂತರ ಶ್ರೀಗಳು ಬೃಂದಾವನದಿಂದ ಹೊರಬಂದು ಅಂದಿನ ಬಳ್ಳಾರಿ ಕಲೆಕ್ಟರ್ ಆಗಿದ್ದ ಸರ್ ಥಾಮಸ್ ಮುನ್ರೋ ಜತೆ ಮಾತುಕತೆ ನಡೆಸಿದ್ದರು. ಇದನ್ನು ಸ್ವತಃ ಮುನ್ರೋ ಅಂದಿನ ಮದ್ರಾಸ್ ಗೆಜೆಟ್‌ನಲ್ಲಿ ದಾಖಲಿಸಿದ್ದಾರೆ.`ಮಾಧ್ವದ್ವೈತ~ ಸಿದ್ಧಾಂತದ ಮೇಲೆ 47 ಗ್ರಂಥಗಳನ್ನು ರಚಿಸಿದ ಶ್ರೀಗಳು, ಧಾರ್ಮಿಕ ಸೌಹಾರ್ದ, ಭಾವೈಕ್ಯಕ್ಕೆ ಒತ್ತು ಕೊಟ್ಟವರು. ಸುಮಾರು ಮೂರೂವರೆ ಶತಮಾನದ ಹಿಂದೆ ದೇಶದ್ಲ್ಲೆಲೆಡೆ ಜಾತಿ ಮತ ಹಾಗೂ ವರ್ಣಭೇದ ತಾಂಡವವಾಡುತ್ತಿರುವ ಕಾಲದಲ್ಲೇ `ಜಾತಿಗಿಂತ ನೀತಿ ಮೇಲು~, `ಮಡಿಗಿಂತ ಭಕ್ತಿ ಮೇಲು~ ಎನ್ನುವ ತತ್ವವನ್ನು ವಿಶ್ವಕ್ಕೆ ಸಾರಿದ್ದರು. ಅವರ ಬಳಿ ಉಚ್ಚ - ನೀಚ, ಬಡವ - ಬಲ್ಲಿದ, ಸ್ತ್ರೀ - ಪುರುಷ ಹಾಗೂ ಸ್ವದೇಶಿ - ವಿದೇಶಿ ಎನ್ನುವ ಭೇದಭಾವ ಇರಲಿಲ್ಲ.ಕ್ರಿ. ಶ. 1671 ವಿರೋಧಿನಾಮ ಸಂ. ಶ್ರಾವಣ ಕೃಷ್ಣ ಬಿದಿಗೆಯಂದು, ಭಕ್ತಾದಿಗಳ ಸಮಕ್ಷಮದಲ್ಲಿ ರಾಘವೇಂದ್ರ ತೀರ್ಥರು ಸಶರೀರವಾಗಿ ಆದವಾನಿ ತಾಲ್ಲೂಕಿನ ಮಂಚಾಲೆ ಗ್ರಾಮದಲ್ಲಿ (ಇಂದಿನ ಮಂತ್ರಾಲಯ) ಬೃಂದಾವನಸ್ಥರಾದರು.

ಈ ಸ್ಥಳ ನೀಡಿದ ಮುಸ್ಲಿಮರ ಮೇಲಿನ ಪ್ರೀತಿಯ ದ್ಯೋತಕವಾಗಿ ತಮ್ಮ ಬೃಂದಾವನದ ತುದಿಯಲ್ಲಿ `ಗುಮ್ಮಟ~ವನ್ನು ಇರಿಸಿಕೊಂಡು ಹಿಂದೂ ಮುಸ್ಲಿಂ ಭಾವೈಕ್ಯವನ್ನು ಸಾರಿದ ಹಿಂದೂ ಗುರುಗಳಿವರು.ಬಳ್ಳಾರಿಯಿಂದ 135 ಕಿ. ಮೀ ಹಾಗೂ ರಾಯಚೂರಿನಿಂದ 45 ಕಿ. ಮೀ. ದೂರದಲ್ಲಿನ ಮಂತ್ರಾಲಯಕ್ಕೆ ಬರುವ ಭಕ್ತರ ಸಂಖ್ಯೆ ಅಪಾರ.ಈ ಟಿವಿಯಲ್ಲಿ ಮಂತ್ರಾಲಯದಿಂದ ನೇರಪ್ರಸಾರ

ಈ ಟೀವಿ ಕನ್ನಡ ವಾಹಿನಿ ಇಂದು (ಆ. 15) ಬೆಳಿಗ್ಗೆ 8ರಿಂದ ಮಂತ್ರಾಲಯದಲ್ಲಿ ನಡೆಯುವ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 340ನೇ ಆರಾಧನಾ ಮಹೋತ್ಸವವನ್ನು ನೇರವಾಗಿ ಪ್ರಸಾರ ಮಾಡಲಿದೆ.ಮೂರು ಶತಮಾನಗಳಿಂದಲೂ ಜನಮಾನಸದಲ್ಲಿ ಅಚ್ಚಳಿಯದೇ ಸ್ಥಾನ ಪಡೆದಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಬಂದಾವನದ ದಿವ್ಯದರ್ಶನದೊಂದಿಗೆ ಅಲ್ಲಿ ನಡೆಯುವ ವಿವಿಧ ಅಭಿಷೇಕ, ಮಹಾಪೂಜೆ, ಅರ್ಚನೆಗಳ ಆರಾಧನೆಯನ್ನು ನೇರವಾಗಿ ವೀಕ್ಷಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry