ಸೋಮವಾರ, ಜೂನ್ 1, 2020
27 °C

ಮಂತ್ರಿಯಲ್ಲಿ ಇಂಡೆಕ್ಸ್ ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂತ್ರಿಯಲ್ಲಿ ಇಂಡೆಕ್ಸ್ ಪ್ರದರ್ಶನ

ದೇಶದ ಅತಿ ದೊಡ್ಡ ಮಾಲ್ ಎಂದೇ ಖ್ಯಾತಿ ಪಡೆದ ಮಲ್ಲೇಶ್ವರದ ಮಂತ್ರಿ ಸ್ಕ್ವೇರ್‌ನಲ್ಲಿ ನಡೆಯುತ್ತಿರುವ ‘ಇಂಡೆಕ್ಸ್ ಅವಾರ್ಡ್’ ಪ್ರದರ್ಶನ ಜ.26ಕ್ಕೆ ಕೊನೆಗೊಳ್ಳಲಿದೆ.ಡೆನ್ಮಾರ್ಕ್ ವಿದೇಶಾಂಗ ಖಾತೆ ಸಹಯೋಗದಲ್ಲಿ ‘ಮಂತ್ರಿ’ ಇದನ್ನು ಮೊಟ್ಟ ಮೊದಲ ಸಲ ಭಾರತದಲ್ಲಿ ಆಯೋಜಿಸಿದೆ. ಜನರ ಬದುಕನ್ನು ಸುಧಾರಿಸುವ ವಿವಿಧ ಸಾಧನಗಳು ಮತ್ತು ವಿನ್ಯಾಸಗಳನ್ನು ಗುರುತಿಸಿ ಇಂಡೆಕ್ಸ್ ಅವಾರ್ಡ್ ಮೂಲಕ ಪ್ರದರ್ಶಿಸಲಾಗುತ್ತದೆ. 2002ರಲ್ಲಿ ಆರಂಭವಾದ ‘ಇಂಡೆಕ್ಸ್’ ಡೆನ್ಮಾರ್ಕ್ ಮೂಲದ ಸ್ವಯಂ ಸೇವಾ ಸಂಸ್ಥೆ.ಈ ಹಿಂದೆ ಪ್ರಶಸ್ತಿಗೆ ಪಾತ್ರವಾದ ಮತ್ತು ಈ ಸಲ ಪ್ರವೇಶ ಪಡೆದ 25 ಉತ್ತಮ ವಿನ್ಯಾಸಗಳನ್ನು ಇಲ್ಲಿ ನೋಡಬಹುದಾಗಿದೆ. ದೇಹ, ಮನೆ, ಕಾರ್ಯ, ಆಟ ಮತ್ತು ಸಮುದಾಯ ಈ ಐದು ವಿಷಯಗಳಲ್ಲಿ ಉತ್ಸಾಹಿಗಳು ರೂಪಿಸಿದ ಸಾಧನಗಳು ಇಲ್ಲಿದ್ದು, ಎಚ್‌ಐವಿ, ಕುಡಿವ ನೀರಿನ ಅಭಾವ, ಇಂಗಾಲದ ಹೊರ ಸೂಸುವಿಕೆ ಮುಂತಾದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿವೆ.ಇದು ಯುವ ಜನರಲ್ಲಿ ಅರಿವು ಹೆಚ್ಚಿಸುತ್ತದೆ ಮತ್ತು ಬದುಕಿನ ಗುಣಮಟ್ಟ ಹೆಚ್ಚಿಸುವ ಪರಿಕಲ್ಪನೆಗಳ ಸಂಶೋಧನೆಗೆ ಸ್ಫೂರ್ತಿ ತುಂಬುತ್ತದೆ ಎನ್ನುತ್ತಾರೆ ಮಂತ್ರಿ ಮಾಲ್ ಸಿಇಒ ಜೊನಾಥನ್ ಯಾಚ್. ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಭಾರತದಲ್ಲಿನ ಡೆನ್ಮಾರ್ಕ್ ರಾಯಭಾರಿ ಫ್ರೆಡ್ಡಿ ಸ್ವಾನೆ ಕೂಡ ಇದ್ದರು.ಈ ಬಾರಿಯ ಪ್ರದರ್ಶನದಲ್ಲಿ ಬೆಂಗಳೂರಿನ ಎಸ್.ಆರ್. ಹಿರೇಮಠ ರೂಪಿಸಿದ ಇ ಚರಕಾ ಕೂಡ ಇದೆ. ಇದರಲ್ಲಿ ಚರಕಾಕ್ಕೆ ಪುಟ್ಟ ಜನರೇಟರ್, ಬ್ಯಾಟರಿ ಜೋಡಿಸಲಾಗಿದೆ. ಎರಡು ತಾಸು ಚರಕಾ ತಿರುಗಿಸಿದರೆ ಉತ್ಪಾದನೆಯಾಗುವ ವಿದ್ಯುತ್ತನ್ನು ಬ್ಯಾಟರಿ ಸಂಗ್ರಹಿಸಿ 8 ತಾಸು ಎಲ್‌ಇಡಿ ಬಲ್ಬ್ ಬೆಳಗಿಸುತ್ತದೆ.ಇದಲ್ಲದೆ ನೀರನ್ನು ಸೋಸಿ ಸೂಕ್ಷ್ಮಾಣು ಜೀವಿಗಳಿಲ್ಲದಂತೆ ಮಾಡುವ 10 ಇಂಚಿನ ಪ್ಲಾಸ್ಟಿಕ್ ಲೈಫ್ ಸ್ಟ್ರಾ, ರೋಗಿಗಳಿಗೆ ನಿಗದಿಗಿಂತ ಹೆಚ್ಚು ಔಷಧ ಕೊಡುವುದನ್ನು ತಡೆದು ಆರೋಗ್ಯ ಕಾಪಾಡಬಲ್ಲ ‘ಮೆಡಿಲೇಬಲ್ ಸೇಫ್ಟಿ’, ಶ್ರವಣಮಾಂದ್ಯರಿಗೆ ಆಧುನಿಕ ಸಾಧನಗಳನ್ನೂ ಬಳಸಲು ನೆರವಾಗುವ ಸುಧಾರಿತ ಶ್ರವಣ ಸಾಧನ ‘ಒಟಿಕಾನ್ ಸ್ಟ್ರೀಮರ್’ ಮುಂತಾದವನ್ನು ಇಲ್ಲಿ ಪ್ರದರ್ಶಿಸಲಾಗಿದೆ. g

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.