ಮಂಥರೆಯ ಮಾಂತ್ರಿಕ

7

ಮಂಥರೆಯ ಮಾಂತ್ರಿಕ

Published:
Updated:

ಅದು ಹಾಸನ ಜಿಲ್ಲೆಯ ಒಂದು ಸಣ್ಣ ಹಳ್ಳಿ. ರಾಮಾಯಣ ನೋಡಿದ ಹಳ್ಳಿಯ ಮಹಿಳೆಯರಿಗೆಲ್ಲ ಮಂಥರೆ ಮೇಲೆ ಅಭಿಮಾನವೇ ಉಕ್ಕಿ ಹರಿಯಿತು. ಮನೆಗೆ ಕರೆದು ಸತ್ಕರಿಸಲು ತುದಿಗಾಲ ಮೇಲೆ ನಿಂತು ಮನೆಗೂ ಆಹ್ವಾನಿಸಿದರು. ನಾಟಕ ಮುಗಿದ ನಂತರ ವೇಷ ಕಳಚಿಟ್ಟು ಮನೆಗೆ ಹೋದರೆ ಮಂಥರೆಯನ್ನು ಮಾತನಾಡಿಸುವವರೇ ಇಲ್ಲ.ಏಳೆಂಟು ನಿಮಿಷ ನಿಂತರೂ ವೇಷ ಕಳಚಿಟ್ಟು ಬಂದಿದ್ದ ಮಂಥರೆಯನ್ನು ಯಾರೂ ಗುರುತಿಸದೇ ಇದ್ದಾಗ ಬೇರೆ ದಾರಿ ಕಾಣದೆ, `ಮಂಥರೆಯ ಪಾತ್ರಧಾರಿ ನಾನೇ; ಮನೆಗೆ ಕರೆದರಲ್ಲ~ ಎಂದಾಗಲೇ ಮಹಿಳೆಯರು ಕ್ಷಣ ತಬ್ಬಿಬ್ಬು!ಹೀಗೆ ನೋಡುಗರನ್ನು ತಬ್ಬಿಬ್ಬುಗೊಳಿಸಿದ ಅನೇಕ ಘಟನೆಗಳು ಕೃಷ್ಣಪ್ಪನವರ ಮನಸ್ಸಿನಲ್ಲಿ ಈಗಲೂ ಅಚ್ಚಳಿಯದೆ ಇವೆ. ಮಂಥರೆಯ ಪಾತ್ರಕ್ಕೆ ಮಾಂತ್ರಿಕತೆ ತಂದುಕೊಟ್ಟ ಕೃಷ್ಣಪ್ಪ ಈಗ `ಮಂಥರೆಯ ಕೃಷ್ಣಪ್ಪ~ ಆಗಿಹೋಗಿದ್ದಾರೆ.ಹೆಂಗಸಿನ ಪಾತ್ರಕ್ಕೆ ಗಂಡಸು ಜೀವ ತುಂಬುವುದು ತುಸು ಕಷ್ಟ ಎಂಬುದನ್ನು ಒಪ್ಪಿಕೊಳ್ಳುವ ಅವರು, ಮೊದಲಿನಿಂದಲೂ ಮಂಥರೆಯ ಪಾತ್ರವೇ ಇಷ್ಟವಾಯಿತು ಎಂಬುದನ್ನು ಹೇಳಲು ಮಾತ್ರ ಮರೆಯುವುದಿಲ್ಲ.ಪೌರಾಣಿಕ ನಾಟಕಗಳಲ್ಲಿ ಮುಖ್ಯಭೂಮಿಕೆಯ ಪಾತ್ರಗಳಿಗಷ್ಟೇ ಹೆಚ್ಚು ಗೌರವ. ಸಣ್ಣಸಣ್ಣ ಪಾತ್ರಗಳಿಗೆ  ಸಿಕ್ಕವರ ಬಳಿ ಮಾಡಿಸಿ ಕೈ ತೊಳೆದುಕೊಳ್ಳುವ ಪರಿಪಾಠವೇ ಹೆಚ್ಚು. ಇಂಥ ಸಣ್ಣ ಪಾತ್ರದಲ್ಲೂ ಮಿಂಚಿದವರು ಕೃಷ್ಣಪ್ಪ.ಕೊರಟಗೆರೆಯ ಎನ್.ಕೃಷ್ಣಪ್ಪ ಅವರೀಗ ತುಮಕೂರಿನಲ್ಲಿ ನೆಲೆಸಿದ್ದಾರೆ. ರಂಗಭೂಮಿ ನಂಟು ಉಳಿಸಿಕೊಂಡೇ ತೋಟಗಾರಿಕಾ ಇಲಾಖೆಯಲ್ಲಿ ಬದುಕು ಅರಳಿಸಿಕೊಂಡಿದ್ದಾರೆ.

ಸಣ್ಣವನಿದ್ದಾಗ ಶಾಲೆಯ ನಾಟಕವೊಂದರಲ್ಲಿ ಮಾಡಿದ ನಾರದನ ಪಾತ್ರ ಅಪ್ಪ,ಅಮ್ಮನಿಗೆ ವಿಪರೀತ ಇಷ್ಟವಾಯಿತು. ಮನೆಯಲ್ಲಿ ಪ್ರೋತ್ಸಾಹವೂ ದೊರೆಯಿತು. ಅಲ್ಲಿಂದ ಅವರ ನಾಟಕ ಯಾನ ಆರಂಭ.ನಾಟಕದಿಂದಲೇ ಬದುಕು ಸಾಧ್ಯವಿಲ್ಲ ಎಂದಾಗ, ಬಸ್ ಕಂಡಕ್ಟರ್ ವೃತ್ತಿ, ಆನಂತರ ತೋಟಗಾರಿಕೆ ಇಲಾಖೆಗೆ ಸೇರಿದರು. ರಾಮಾಯಣದಲ್ಲಿ ಮಂಥರೆಗೆ ಇನ್ನಿಲ್ಲದ ಮಹತ್ವ, ಆದರೂ ನಾಟಕಗಳಲ್ಲಿ ಮಾತ್ರ ಕೈಗೆ ಸಿಕ್ಕವರಿಂದಲೇ ಮಂಥರೆ ಪಾತ್ರ ಮಾಡಿಸುವುದು ಇವತ್ತಿಗೂ ಇದೆ. ಹೀಗೆ `ಜೀವ~ ಇಲ್ಲದೇ ಮರೆಯಾಗುತ್ತಿದ್ದ ಮಂಥರೆಯ ಪಾತ್ರಕ್ಕೆ ಜೀವ ತುಂಬಿದ್ದು ಕೃಷ್ಣಪ್ಪನವರ ಅಗ್ಗಳಿಕೆ.ತುಮಕೂರು, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಹೀಗೆ ಎಲ್ಲೇ ನಾಟಕವಾದರೂ ಮಂಥರೆಯ ಪಾತ್ರಕ್ಕೆ ಮಾತ್ರ ಕೃಷ್ಣಪ್ಪ ಅವರೇ ಬೇಕು. ನಟಿಯರಾದ ಉಮಾಶ್ರೀ, ಗಿರಿಜಾ ಲೋಕೇಶ್‌ಗೂ ಮಂಥರೆಯ ಪಾತ್ರಕ್ಕೆ ಕೃಷ್ಣಪ್ಪ ಇದ್ದರೆ ಚೆನ್ನ ಎನ್ನುವಷ್ಟರ ಮಟ್ಟಿಗೆ ಇವರು ಹೆಸರುವಾಸಿ.ಮಂಥರೆ ಅಷ್ಟೇ ಅಲ್ಲ `ಶುದ್ಧ ಶುಂಠಿ~ಯಲ್ಲಿ ನಾಗವೇಣಿ ಪಾತ್ರಕ್ಕೆ ಅನೇಕ ಸಲ ಬಣ್ಣ ಹಚ್ಚಿದ್ದಾರೆ. `ಸ್ತ್ರೀಪಾತ್ರದ ಕಡೆಗೇ ನನ್ನದು ಹೆಚ್ಚು ಆಸಕ್ತಿ. ಮಂಥರೆಯ ಪಾತ್ರ ಮಾಡಲು ಕೂಡ ಇದೇ ಕಾರಣ. ಗುಬ್ಬಿ ನಾಟಕ ಕಂಪೆನಿಯ ರಾಣಿ ಪಾರ್ಟು ರಂಗಪ್ಪ ಅವರ ಮಂಥರೆ ಪಾತ್ರದ ನಟನೆಯೇ ನನಗೆ ಪ್ರೇರಣೆ~ ಎನ್ನುತ್ತಾರೆ ಕೃಷ್ಣಪ್ಪ.ರಂಗನಟಿಯರಾದ ರೇಖಾದಾಸ್, ಭಾಗ್ಯಶ್ರೀ ಬೆಂಗಳೂರು, ಪ್ರತಿಭಾ, ಪದ್ಮಾವೇಣು, ತುಮಕೂರು ಹೇಮಾ, ಅನುಸೂಯಮ್ಮ, ಲಕ್ಷ್ಮೀ ಶ್ರೀಧರ್, ಮೈಸೂರು ಮಂಜುಳಾ ಅವರ ಜೊತೆಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.ಅಕರಾಕ್ಷ, ಬ್ರಾಹ್ಮಣ, ಮಾರೀಚ, ವಿಭೂಷಣ ಮತ್ತಿತರರ ಪಾತ್ರ  ಮಾಡಿದರೂ ಅವರ ಕೈ ಹಿಡಿದಿರುವುದು ಮಾತ್ರ ಮಂಥರೆ ಪಾತ್ರ. ಹೀಗಾಗಿಯೇ ಮಂಥರೆಗಾಗಿ ಅವರು 150ಕ್ಕೂ ಹೆಚ್ಚು ಸಲ ಬಣ್ಣ ಹಚ್ಚಿದ್ದರೂ ಪಾತ್ರದ ದಾಹ ಮಾತ್ರ ಅವರೊಳಗೆ ಇಂಗಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry