ಶನಿವಾರ, ನವೆಂಬರ್ 23, 2019
18 °C

ಮಂದಸ್ಮಿತೆಯ ವಯ್ಯಾರ ನೀಳಸುಂದರಿಯ ಬಿರುನಡಿಗೆ

Published:
Updated:

ನೀಳಕಾಯದ ಕೃಷ್ಣ ಸುಂದರಿಯ ಮೈಗೆ ಅಪ್ಪಿಕೊಂಡಿದ್ದ ವಸ್ತ್ರದಲ್ಲಿ ಕಾಮನಬಿಲ್ಲಿನ ಏಳು ಬಣ್ಣಗಳೂ ರಾರಾಜಿಸುತ್ತಿದ್ದವು.ಗಾಢ ಕೆಂಪು, ನೀಲಿ, ಹಳದಿ ಬಣ್ಣದ ಟ್ರೆಂಡಿ ಉಡುಪುಗಳನ್ನು ಧರಿಸಿ ಕ್ಯಾಟ್‌ವಾಕ್ ಮಾಡಿದ ಈ ಬೆಡಗಿ ಧರಿಸಿದ್ದ ಬಟ್ಟೆಗಿಂತ ಎತ್ತರ, ನಡು ಬಳುಕಿಸುವ ರೀತಿ ಹಾಗೂ ವಿಶಿಷ್ಟ `ವೇದಿಕೆ ಧೋರಣೆ'ಯಿಂದ ಎಲ್ಲರ ಗಮನ ಸೆಳೆದರು.ಸಾಮಾನ್ಯ ಜನರ ನಡಿಗೆಗೂ ಈ ರೂಪದರ್ಶಿಯ ನಡಿಗೆಗೂ ತುಂಬಾ ವ್ಯತ್ಯಾಸವಿತ್ತು. ಬೇರೆ ರೂಪದರ್ಶಿಗಳು ಮೂರು ಹೆಜ್ಜೆಯಲ್ಲಿ ಕ್ರಮಿಸುವ ದೂರವನ್ನು ಈಕೆ ಒಂದೇ ಹೆಜ್ಜೆಯಲ್ಲಿ ಕ್ರಮಿಸುತ್ತಿದ್ದರು. ಆಕೆಯ ನಡಿಗೆಯ ವೇಗಕ್ಕೆ ಅವರ ನೀಳ ಕಾಲುಗಳ ಕದಲಿಕೆಗಳೇ ಸಾಕ್ಷಿ.ಅಂದಹಾಗೆ, ಮಿಂಟ್ರಾ.ಕಾಂ ಆಯೋಜಿಸಿದ್ದ `ವಾರ್ಷಿಕ ಬ್ರ್ಯಾಂಡ್ ಮೀಟ್ ಪ್ರಶಸ್ತಿ ಪ್ರದಾನ ಸಮಾರಂಭ'ದ ಕೊನೆಯಲ್ಲಿ ಮನರಂಜನೆಗಾಗಿ ನಡೆದ ಫ್ಯಾಷನ್ ಶೋನಲ್ಲಿ ಕಂಡುಬಂದ ದೃಶ್ಯಗಳಿವು.ಮಿಂಟ್ರಾ.ಕಾಂನಲ್ಲಿ ಲಭ್ಯವಿರುವ ಬ್ರ್ಯಾಂಡೆಡ್ ಉಡುಪುಗಳಿಗೆ ಮೈಯೊಡ್ಡಿದ್ದು ನಗರದ ಖ್ಯಾತ ರೂಪದರ್ಶಿಗಳಾದ ನಿದಾ, ಪಾರ್ಥೋ, ಪ್ರಿಯಾ ನಾಯಕ್ ಮೊದಲಾದವರು.ಚಿಗರೆ ಕಂಗಳ ಹುಡುಗಿ ನಿದಾ ಈ ಫ್ಯಾಷನ್ ಶೋನ ಪ್ರಧಾನ ಆಕರ್ಷಣೆಯಾಗಿದ್ದರು. ತುಟಿಯಂಚಿನಲ್ಲಿ ಸದಾ ಲಾಸ್ಯವಾಡುವ ಮುಗುಳ್ನಗೆಯ ಒಡತಿ ಈಕೆ. ಫ್ಯಾಷನ್ ಶೋನ ಮೊದಲ ಸುತ್ತಿನಲ್ಲಿ ನಿದಾ ಚಮತ್ಕಾರವನ್ನೇ ಸೃಷ್ಟಿಸಿದರು.ಕೈಯಲ್ಲೊಂದು ಕೆಂಪು ವ್ಯಾನಿಟಿ ಬ್ಯಾಗ್ ಹಿಡಿದು, ಭುಜ ತಾಕುವಂಥ ಜುಮುಕಿ ತೊಟ್ಟು, ಕಪ್ಪು ಹೈಹೀಲ್ಡ್ ಧರಿಸಿ ಕ್ಯಾಟ್‌ವಾಕ್ ಮಾಡುತ್ತಾ ಬಂದ ನಿದಾ, ಸಿಂಗಲ್ ಫೀಸ್ ಶಾರ್ಟ್ಸ್ ತೊಟ್ಟಿದ್ದರು. ರ್‍ಯಾಂಪ್ ಮೇಲೆ ನಿಧಾನವಾಗಿ ಬಳುಕುತ್ತಾ ಬಂದು, ಮುಖದ ತುಂಬಾ ಹೈವೋಲ್ಟೇಜ್ ನಗು ತುಂಬಿಕೊಂಡು ಎದೆಯುಬ್ಬಿಸಿ ನಿಂತಾಗ ಎಲ್ಲರೂ ಒಂದು ಕ್ಷಣ ಆಕೆಯ ವಯ್ಯಾರದ ಮಳೆಯಲ್ಲಿ ಮಿಂದರು. ನಿದಾ ನಡಿಗೆಯ ಪ್ರಭಾವಳಿ ಮಂಕಾದಾಗಲೇ ಪ್ರೇಕ್ಷಕರ ಉಸಿರಾಟದ ಏರಿಳಿತ ಸ್ಥಿಮಿತಕ್ಕೆ ಬಂದಿದ್ದು.ಪುರುಷ ರೂಪದರ್ಶಿಗಳ ಜತೆಗೆ ಪಾರ್ಥೋ ಹಾಗೂ ಪ್ರಿಯಾ ನಾಯಕ್ ಕೂಡ ಮೂರು ಸುತ್ತಿನ ಫ್ಯಾಷನ್ ಶೋನಲ್ಲಿ ಬಂದು ಮಿಂಟ್ರಾ.ಕಾಮ್‌ನ ಜನಪ್ರಿಯ ಬ್ರ್ಯಾಂಡ್‌ಗಳ ವಸ್ತ್ರಗಳು, ಕನ್ನಡಕ, ಶೂ, ವ್ಯಾನಿಟಿ ಬ್ಯಾಗ್, ಚಪ್ಪಲಿ, ಬೆಲ್ಟ್ ಮೊದಲಾದವುಗಳನ್ನು ಪ್ರದರ್ಶಿಸಿದರು. ಪ್ರತ್ಯೇಕವಾಗಿ ಬಂದ ಪುರುಷ ರೂಪದರ್ಶಿಗಳು ಬೇಸಿಗೆ ಸಂಗ್ರಹದ ಆಕರ್ಷಕ ಉಡುಪುಗಳನ್ನು ಅನಾವರಣ ಮಾಡಿದರು.ಫ್ಯಾಶನ್ ಶೋಗೂ ಮುನ್ನ ಮಿಂಟ್ರಾ.ಕಾಮ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಮಾತಿನ ಮೆರುಗು ತುಂಬಿದ್ದು ನಟಿ ಮಂದಿರಾ ಬೇಡಿ. ಹಸಿರು ಬಣ್ಣದ ಗೌನ್ ತೊಟ್ಟಿದ್ದ ಮಂದಿರಾ ತಮ್ಮ ಮಾತಿನ ಮೋಡಿಯಿಂದ ಎಲ್ಲರ ಗಮನ ಸೆಳೆದರು. ಪುರುಷರ ಕ್ಯಾಶುವಲ್ ವೇರ್, ಜೀನ್ಸ್, ಶೂ, ಕನ್ನಡಕ, ಬೆಲ್ಟ್, ಹಾಗೆಯೇ ಮಹಿಳೆಯರ ಜೀನ್ಸ್, ಕನ್ನಡಕ, ಚಪ್ಪಲಿ, ಶೂ, ಇನ್ನರ್ ವೇರ್ ಮೊದಲಾದವುಗಳಲ್ಲಿ ಬೆಸ್ಟ್ ಬ್ರ್ಯಾಂಡ್ ಯಾವುದು ಎಂದು ಆಯ್ಕೆ ಮಾಡಲಾಯಿತು.ಪುರುಷರ ಮತ್ತು ಮಹಿಳೆಯರ ಜನಪ್ರಿಯ ಬ್ರ್ಯಾಂಡ್‌ಗಳು ಯಾವುದು ಎಂಬುದನ್ನು ಮತಹಾಕುವ ಮೂಲಕ ಆಯ್ಕೆ ಮಾಡಲಾಯಿತು. ಎಲ್ಲರೂ ಮೆಚ್ಚಿದ ಬ್ರ್ಯಾಂಡ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.ಚಿತ್ರಗಳು: ಎಸ್.ಕೆ.ದಿನೇಶ್

ಪ್ರತಿಕ್ರಿಯಿಸಿ (+)